ಭಾರತೀಯ ಚಿತ್ರಕಲೆ ಭಾಗ೬: ಹಸೆ ಚಿತ್ತಾರಗಳು
ನಮ್ಮ ಗ್ರಾಮೀಣ ಜನರ ಜೀವನಪ್ರೀತಿ ದೊಡ್ಡದು. ಪ್ರಕೃತಿಯನ್ನು ಗಮನಿಸುತ್ತಲೇ ಅವರು ಬದುಕಿದರು. ಪ್ರಕೃತಿಯ ಆಗುಹೋಗುಗಳಿಗೆ ಸ್ಪಂದಿಸುತ್ತ ಚಿತ್ರ ಬರೆದರು; ತಮ್ಮ ನೋವುನಲಿವುಗಳನ್ನು ಹಾಡುಗಳನ್ನಾಗಿಸಿದರು. ಅವರು ಬರೆದ ಚಿತ್ರಗಳು ಅವರ ಮನಸ್ಸಿನ ಭಾವನೆಗಳಿಗೆ ಆಕೃತಿ ಕೊಡುವ ಪ್ರಯತ್ನಗಳು.
ಕರ್ನಾಟಕದ ಮಲೆನಾಡಿನ ಹಳ್ಳಿಗಳಲ್ಲಿ ಹೀಗೆ ಅರಳಿದ ಒಂದು ಕಲೆಯೇ ಹಸೆ ಚಿತ್ತಾರಗಳು. ನೆಲದಲ್ಲಿ ಚಿತ್ರಿಸಿದಾಗ ರಂಗೋಲಿ, ಮನುಷ್ಯರ ಮೈಯಲ್ಲಿ ಮೂಡಿಸಿದಾಗ ಹಚ್ಚೆ, ಗೋಡೆ ಮತ್ತು ಬಾಗಿಲು/ ಕಿಟಕಿಗಳ ಚೌಕಟ್ಟುಗಳ ಅಂಚಿನಲ್ಲಿ ಬಿಡಿಸಿದಾಗ ಚಿತ್ತಾರ ಎಂದು ಈ ವಿನ್ಯಾಸಗಳನ್ನು ಕರೆಯಲಾಯಿತು. ಇವು ಮೂರು ನಮೂನೆಗಳಲ್ಲಿ ಇರುವ ಮೂಲ ವಿನ್ಯಾಸಗಳು ಒಂದೇ ಎಂಬುದು ಗಮನಾರ್ಹ. ಉದಾಹರಣೆಗೆ, ಸೂರ್ಯ, ಚಂದ್ರ, ತೊಂಡೆ ಚಪ್ಪರ, ಗೌರಿ ಮುಡಿ, ಜೋಗಿ ಜಡೆ, ಮುತ್ತಿನ ಆರತಿ, ಮುತ್ತಿನ ಬಟ್ಟು ವಿನ್ಯಾಸಗಳು.
ಕರ್ನಾಟಕದಲ್ಲಿ ರಂಗೋಲಿಯನ್ನು ಹಸೆ ಎಂದೂ ಕರೆಯುತ್ತಾರೆ. ಮನೆಯಲ್ಲಿ ದೇವತಾ ಕಾರ್ಯ, ಮದುವೆ, ಹುಟ್ಟಿದ ಹಬ್ಬ ಇವನ್ನೆಲ್ಲ ಮಾಡುವ ಜಾಗವೇ ಹಸೆ. ಅಲ್ಲಿ ವಿವಿಧ ರೇಖಾ ವಿನ್ಯಾಸಗಳಿರುವ ರಂಗೋಲಿಗಳನ್ನು ಬರೆದು, ಅದರ ಮೇಲೆ ಮರದ ಹಲಗೆಯ ಮಣೆ ಇಟ್ಟು, ಅದರಲ್ಲಿ ದೇವತಾಕಾರ್ಯ ಮಾಡುವುದು ವಾಡಿಕೆ. ಈ ಮಣೆಯೇ ಹಸೆ ಮಣೆ.
ಉತ್ತರಕನ್ನಡ ಜಿಲ್ಲೆಯ ಹಾಲಕ್ಕಿ, ಕುಣಬಿ, ನಾಮಧಾರಿ, ಗೊಂಡ, ಮೊಗವೀರ ಜನಾಂಗದವರು ಮದುವೆಯ ಸಂದರ್ಭದಲ್ಲಿ ಗೋಡೆಯಲ್ಲಿ ಚಿತ್ರಗಳನ್ನು ಬರೆಯುವುದು ವಾಡಿಕೆ. ಇವೇ ಭಿತ್ತಿ ಚಿತ್ರಗಳು.
ಕೆಮ್ಮಣ್ಣು ಬಳಿದ ಗೋಡೆಯಲ್ಲಿ ಅಕ್ಕಿಹಿಟ್ಟಿನ ಮಿಶ್ರಣದಿಂದ (ಬಿಳಿ ಬಣ್ಣದ) ಹಸೆ ಚಿತ್ತಾರಗಳನ್ನು ಬಿಡಿಸಿದಾಗ ಎದ್ದು ಕಾಣುತ್ತದೆ. ಮನೆಯ ಕೇಂದ್ರ ಭಾಗದ ವಿಶಾಲವಾದ ಕೋಣೆಯೇ ಎಲ್ಲ ಚಟುವಟಿಕೆಗಳ ನೆಲೆ. ಈ ಕೋಣೆಯ ಪ್ರಧಾನ ಗೋಡೆಯನ್ನು ಹಸೆಗೋಡೆ ಎಂದು ಕರೆಯುತ್ತಾರೆ. ಈ ಗೋಡೆಯ ಬುಡದಲ್ಲಿ ಹಾಕುವ ಈಚಲು ಹುಲ್ಲನ್ನು ಹೆಣೆದು ಮಾಡಿದ ಚಾಪೆಯೇ ಹಸೆ. ಮದುವೆಯ ಎಲ್ಲ ಕಾರ್ಯಗಳು ನಡೆಯುವುದು ಈ ಹಸೆಯಲ್ಲಿ. ಹಾಗೆಯೇ, ಗೌರಿ ಹಬ್ಬದಲ್ಲಿ ಗೌರಿಯನ್ನು ಮಂಟಪದಲ್ಲಿರಿಸಿ, ಮಹಿಳೆಯರೆಲ್ಲ ಒಟ್ಟಾಗಿ ಹಾಡು ಹೇಳುತ್ತಾ ಗೌರಿ ಪೂಜೆ ಮಾಡುವುದು ಹಸೆಗೋಡೆಯ ಎದುರು. ಮಕ್ಕಳ ಚೌಳ, ಹೊಸ ವಧೂವರರಿಗೆ ಊಟ ಉಣಿಸುವುದಕ್ಕೂ ಇದುವೇ ಪ್ರಶಸ್ತ ಜಾಗ.
ಹಸೆ ಚಿತ್ತಾರವೆಂದರೆ ರಂಗೋಲಿಯ ಅನುಕರಣೆಯಲ್ಲ. ಇವೆರಡರಲ್ಲಿ ಕೆಲವು ವಿನ್ಯಾಸಗಳು ಸಮಾನವಾಗಿವೆ, ಅಷ್ಟೇ. ಮಲೆನಾಡಿನ ಗ್ರಾಮೀಣ ಮಹಿಳೆಯರು ಚಿತ್ರಿಸುವ ಹಸೆ ಗೋಡೆ ಚಿತ್ತಾರಗಳು ಮದುವೆಯ ಸಡಗರವನ್ನು ಪ್ರತಿಬಿಂಬಿಸುವ ಭಿತ್ತಿ ಚಿತ್ರಗಳು. ಹಸೆಗೋಡೆಯಲ್ಲಿ ಎರಡು ಕಂಬಗಳನ್ನು ಎಡ-ಬಲದಲ್ಲಿ ಬರೆದು, ಈ ಉದ್ದಕಂಬಗಳನ್ನು ಅಡ್ಡಕಂಬಗಳಿಂದ ಜೋಡಿಸುತ್ತಾರೆ. ನಡುವಿನ ಜಾಗದಲ್ಲಿ ಹಲವು ವಿನ್ಯಾಸಗಳನ್ನು ಅವರು ಚಿತ್ರಿಸುತ್ತಾರೆ: ಕಂಬಗಳಲ್ಲಿ ಚೆಂಡುಹೂ ಮಾಲೆ ತೂಗಿದಂತೆ ಚಿತ್ರಿಸುವುದು ಸಾಮಾನ್ಯ.
ಈ ಎರಡು ಉದ್ದಕಂಬಗಳ ಮೇಲ್ಭಾಗದಲ್ಲಿ ಒಂದು, ಮೂರು ಅಥವಾ ಐದು ಗೋಪುರಗಳನ್ನು ಬರೆಯುತ್ತಾರೆ. ಇವುಗಳಲ್ಲಿ ಕುಂಭಗಳ ಸಾಲುಗಳು, ಹುಲ್ಲಿನ ಮೆದೆಗಳನ್ನು ಚಿತ್ರಿಸುತ್ತಾರೆ. ಇವೆಲ್ಲವೂ ಚಂದ ಕಾಣಬೇಕೆಂಬುದು ಅವರ ಹಂಬಲ. ಅದಕ್ಕಾಗಿ ಕುಂಭಗಳಲ್ಲಿ ಮಾವಿನ ಚಿಗುರು, ಮೆದೆಗಳಲ್ಲಿ ಹಕ್ಕಿಗೂಡುಗಳನ್ನೂ ಮೂಡಿಸುತ್ತಾರೆ. ಇವಲ್ಲದೆ, ಈ ಗ್ರಾಮೀಣ ಕಲಾವಿದೆಯರು ಹಸೆಗೋಡೆ ಚಿತ್ತಾರಗಳನ್ನು ಸುಂದರವಾಗಿಸಲು ತಮ್ಮ ಸೃಜನಶೀಲತೆಯನ್ನೆಲ್ಲ ಧಾರೆ ಎರೆಯುತ್ತಾರೆ. ಚೆಂಡು ಹೂ, ಸೀತೆ ಮುಡಿ, ಜೋಗಿ ಜಡೆ, ತೊಂಡೆ ಚಪ್ಪರ, ಬಸವನ ಪಾದ, ಗೋಧಿ ಮಣೆ ಇತ್ಯಾದಿಗಳನ್ನು ರೂಪಿಸುತ್ತಾರೆ.
ಜನಮನದಿಂದ ಹಸೆ ಚಿತ್ತಾರಗಳು ಮರೆಯಾಗುತ್ತಿವೆ ಎನ್ನುವಾಗ, ಇಪ್ಪತ್ತು ವರುಷಗಳಿಂದೀಚೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನ “ಚರಕ" ಗ್ರಾಮೋದ್ಯೋಗ ಸಂಸ್ಥೆ ಅವುಗಳ ಪ್ರಚಾರಕ್ಕೆ ಕೈಹಾಕಿತು. ಅಲ್ಲಿನ ಅಂಗನವಾಡಿಗಳ ಗೋಡೆಗಳಲ್ಲಿ ಚಿತ್ತಾರಗಳನ್ನು ಬರೆಯಿಸಿತು. ಇದರಿಂದಾಗಿ ಗ್ರಾಮೀಣ ಮನೆಗಳ ಒಳಗೆ ಮಾತ್ರವಿದ್ದ ಹಸೆ ಚಿತ್ತಾರಗಳು ಸಾರ್ವಜನಿಕವಾಗಿ ಕಾಣಿಸಿಕೊಂಡು ಜನಸಮುದಾಯವನ್ನು ಆಕರ್ಷಿಸಿದವು. ಜೊತೆಗೆ, “ಚರಕ" ಸಂಸ್ಥೆ ಪ್ರಚುರ ಪಡಿಸಿದ ಫೈಲುಗಳಲ್ಲಿ, ಶುಭಾಶಯ ಸಂದೇಶ ಪತ್ರಗಳಲ್ಲಿ ಈ ಚಿತ್ತಾರಗಳು ಕಂಗೊಳಿಸಿ ಜನಪ್ರಿಯವಾದವು. ಈಗ ನಗರಗಳು ಹಾಗೂ ಮಹಾನಗರಗಳ ಸಾವಯವ ಕೃಷಿ ಉತ್ಪನ್ನಗಳ ಮಳಿಗೆಗಳಲ್ಲಿ, ಹೋಟೆಲುಗಳ ಗೋಡೆಗಳಲ್ಲಿ ಹಸೆ ಚಿತ್ತಾರಗಳು ಗಮನ ಸೆಳೆಯುತ್ತಿವೆ. ಹಸೆ ಚಿತ್ತಾರಗಳಲ್ಲಿ ಕಂಡು ಬರುವ ಜೀವಂತಿಕೆ ಮತ್ತು ಗ್ರಾಮೀಣ ಸೊಗಡು ನಗರವಾಸಿಗಳ ಮನಗೆದ್ದಿದೆ.
ಚಿತ್ರಗಳು: ಒಂದು ಗೋಪುರದ ಹಸೆ ಚಿತ್ತಾರ ಮತ್ತು ತೇರಿನ ಹಸೆ ಚಿತ್ತಾರ