ಭಾರತೀಯ ಚಿತ್ರಕಲೆ - ಭಾಗ 5

ಭಾರತೀಯ ಚಿತ್ರಕಲೆ - ಭಾಗ 5

ಮುರಾಲ್ ಚಿತ್ರಕಲೆ
ಇವು ಗೋಡೆಚಿತ್ರಗಳು. ಈ ಚಿತ್ರಕಲೆಯ ಮೂಲ ರಾಜಸ್ಥಾನದ ಷೆಖಾವತಿ ಪ್ರದೇಶ. ರಜಪೂತ ದಳಪತಿ ರಾವ್ ಷೇಖಾನಿಂದಾಗಿ ಅಲ್ಲಿಗೆ ಈ ಹೆಸರು. ಅಲ್ಲಿನ ಶ್ರೀಮಂತ ಸಮುದಾಯದ ಜನರು ಅಲಂಕಾರಕ್ಕಾಗಿ ತಮ್ಮ ಮನೆಗಳ ಗೋಡೆಗಳಲ್ಲಿ ಚಿತ್ರ ಬರೆಸಲು ಶುರು ಮಾಡಿದರು. ಇದು ಹಲವಾರು ಪಟ್ಟಣಗಳಲ್ಲಿ ಈ ಚಿತ್ರ ರಚನೆಗೆ ನಾಂದಿ.

ಗೋಡೆಗಳು, ಚಾವಣಿಗಳು, ಕಂಬಗಳು ಮತ್ತು ಕಿಟಕಿಗಳ ಕಮಾನುಗಳಲ್ಲಿಯೂ ಕಲಾಕಾರರು ಚಿತ್ರ ಬಿಡಿಸಿದರು. ಹೂಗಳ ವಿನ್ಯಾಸ, ಪ್ರಾಣಿಗಳು, ಪಕ್ಷಿಗಳು, ಧಾರ್ಮಿಕ ಸಂಗತಿಗಳು ಮತ್ತು ಮಹಾಕಾವ್ಯಗಳ ದೃಶ್ಯಗಳು - ಇವನ್ನು ಚಿತ್ರಿಸಿದರು. ಆರಂಭದಲ್ಲಿ ಕಲಾಕಾರರು ಸ್ಥಳೀಯ ಬಣ್ಣಗಳನ್ನೇ ಬಳಸಿದರು. ಕ್ರಮೇಣ ಕೆಂಪು, ನೀಲಿ ಇಂತಹ ಬೆಳಗುವ ಕೃತಕ ಬಣ್ಣಗಳಿಂದ ಚಿತ್ರಿಸಿದರು.

ಕಂಪೆನಿ ಸ್ಕೂಲ್ ಚಿತ್ರಕಲೆ
ಬ್ರಿಟಿಷರು ಭಾರತದಲ್ಲಿ ಅಧಿಕಾರ ಸೂತ್ರ ಹಿಡಿದ ನಂತರ ಮಾಡಿದ ಕೆಲಸಗಳಲ್ಲೊಂದು: ಭಾರತದ ಚಿತ್ರಕಾರರ ಮೂಲಕ ಇಲ್ಲಿನ ಸಸ್ಯಗಳು, ಪ್ರಾಣಿಪಕ್ಷಿಗಳು, ವಾಸ್ತು ರಚನೆಗಳು, ಜನರು ಮತ್ತು ಆಚರಣೆಗಳ ಚಿತ್ರಗಳನ್ನು ಬರೆಯಿಸಿ, ಅವನ್ನು ಇಂಗ್ಲೆಂಡಿನ ತಮ್ಮ ಬಂಧುಬಳಗದವರಿಗೂ, ಸ್ನೇಹಿತ ಬಳಗದವರಿಗೂ ಕಳಿಸಿಕೊಡುವುದು. ಈ ಚಿತ್ರಗಳು ಭಾರತದ ಚಿತ್ರಕಲಾವಿದರು ಬ್ರಿಟಿಷರಿಗಾಗಿ ಚಿತ್ರಿಸಿದವುಗಳು.

ಈ ರೀತಿಯಲ್ಲಿ ಮೊದಲಾಗಿ ಚಿತ್ರ ಬರೆಯಿಸಿದ್ದು “ಈಸ್ಟ್ ಇಂಡಿಯಾ ಟ್ರೇಡಿಂಗ್ ಕಂಪೆನಿ." ಆದ್ದರಿಂದ ಈ ಶೈಲಿಗೆ "ಕಂಪೆನಿ ಸ್ಕೂಲ್” ಎಂದು ಹೆಸರಾಯಿತು.

ಇದು ಭಾರತೀಯ ಮತ್ತು ಯುರೋಪಿಯನ್ ಚಿತ್ರಶೈಲಿಗಳ ಮಿಶ್ರಶೈಲಿ. ಆ ವರೆಗೆ ಪ್ರಚಲಿತವಿದ್ದ ಮೊಘಲ್ ಶೈಲಿಯನ್ನು ಬದಿಗೊತ್ತಿ, ಹೊಸ ಶೈಲಿಗೆ ಬ್ರಿಟಿಷ್ ಆಡಳಿತಗಾರರು ಪ್ರೋತ್ಸಾಹ ನೀಡಿದರು. ಬ್ರಿಟಿಷರು ಭಾರತದಲ್ಲಿ ಸಸ್ಯೋದ್ಯಾನಗಳನ್ನು ಬೆಳೆಸಿದರು ಮತ್ತು ಪ್ರಾಣಿಗಳನ್ನು ಬಂಧನದಲ್ಲಿಟ್ಟು ಸಾಕುತ್ತಿದ್ದರು; ಇದರ ಒಂದು ಉದ್ದೇಶ ಅವುಗಳನ್ನು ಅಧ್ಯಯನ ಮಾಡಿ, ಚಿತ್ರಗಳಲ್ಲಿ ದಾಖಲಿಸುವುದು.

ಚಿತ್ರ ಕೃಪೆ: ಗೀತಿಕಾ ಜೈನ್ ಅವರ “ಬರ್ಡ್ಸ್ ಆಂಡ್ ಆನಿಮಲ್ಸ್ ಇನ್ ಇಂಡಿಯನ್ ಆರ್ಟ್” ಪುಸ್ತಕ