ಭಾರತೀಯ ಡಿಎನ್ಎ ಪ್ರೊಫೈಲಿಂಗ್ ಮಸೂದೆಯ ಸೀಳುನೋಟ (೧)
ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ ಎಂಬ ಸಂಸ್ಥೆ ಭಾರತೀಯ ಡಿಎನ್ಎ ಪ್ರೊಫೈಲಿಂಗ್ ಮಸೂದೆಯ ಕುರಿತು ಅಧ್ಯಯನ ನಡೆಸುತ್ತಿದೆ. ಈ ಅಧ್ಯಯನದಲ್ಲಿ ಕಂಡುಬಂದ ಅಂಶಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಕೆಲವು ದಿನಗಳ ಹಿಂದೆ ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ ತಯಾರಿಸಿದ್ದ ಪತ್ರಿಕಾವರದಿಯ ಪ್ರತಿ ಸಂಪದ ಓದುಗರಿಗಾಗಿ ಇಲ್ಲಿದೆ. ಸಂಪದದ ಎಲ್ಲ ಓದುಗರಿಗೂ ಇದು ಉಪಯುಕ್ತ ಮಾಹಿತಿಯಾಗಬಹುದೆಂಬ ಆಶಯದಿಂದ ಇದನ್ನು ನಿಮ್ಮ ಮುಂದಿಡುತ್ತಿದ್ದೇವೆ. - ಹರಿ ಪ್ರಸಾದ್ ನಾಡಿಗ್, ಸಂಪದ ತಂಡದ ಪರವಾಗಿ.
ಭಾರತೀಯ ದಂಡಸಂಹಿತೆಯನ್ನು ೨೦೦೫ರಲ್ಲಿ ತಿದ್ದುಪಡಿ ಮಾಡಲಾಯಿತು. ಇದರ ಉದ್ದೇಶ ಆಪಾದಿತರನ್ನು ಬಂಧಿಸಿದಾಗ ಅವರ ಬಗ್ಗೆ ವಿವಿಧ ವೈದ್ಯಕೀಯ ಮಾಹಿತಿ ಸಂಗ್ರಹಿಸಲು ಕಾನೂನುರೀತ್ಯಾ ಅವಕಾಶ ಕಲ್ಪಿಸುವುದು.
ದಂಡಸಂಹಿತೆಯ ಸೆಕ್ಷನ್ ೫೩ರ ಪ್ರಕಾರ, ಅಪರಾಧವನ್ನು ಸಾಬೀತು ಪಡಿಸಲು ವೈದ್ಯಕೀಯ ಪರೀಕ್ಷೆ ಸಾಕ್ಷ್ಯ ಒದಗಿಸುತ್ತದೆ ಎಂದು “ನಂಬಲು ತಕ್ಕಮಟ್ಟಿನ ಕಾರಣಗಳಿದ್ದರೆ”, ಆಪಾದಿತನನ್ನು ಬಂಧಿಸಿದಾಗ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬಹುದು. ೨೦೦೫ರ ತಿದ್ದುಪಡಿಯ ಮೂಲಕ, ಈ ಪರೀಕ್ಷೆಯ ವ್ಯಾಪ್ತಿಯನ್ನು ಇವೆಲ್ಲವನ್ನು ಸೇರಿಸಿಕೊಳ್ಳಲಿಕ್ಕಾಗಿ ವಿಸ್ತರಿಸಲಾಯಿತು: ರಕ್ತದ, ರಕ್ತಕಲೆಗಳ, ವೀರ್ಯದ ಪರೀಕ್ಷೆ, ಲೈಂಗಿಕ ಅಪರಾಧಗಳಲ್ಲಿ ಸ್ವಾಬ್ಗಳ ಪರೀಕ್ಷೆ, ಉಗುಳು, ಬೆವರು, ಕೂದಲಿನ ಸ್ಯಾಂಪಲ್ ಮತ್ತು ಉಗುರಿನ ತುಂಡುಗಳ ಪರೀಕ್ಷೆ. ನಿರ್ದಿಷ್ಟ ಪ್ರಕರಣದಲ್ಲಿ ಅವಶ್ಯವೆಂದು ನೋಂದಾಯಿತ ವೈದ್ಯರು ಭಾವಿಸುವ ಡಿಎನ್ಎ ಪ್ರೊಫೈಲಿಂಗ್ ಹಾಗೂ ಅಂತಹ ಇತರ ಪರೀಕ್ಷೆಗಳ ಸಹಿತವಾಇ ಆಧುನಿಕ ಮತ್ತು ವೈಜ್ನಾನಿಕ ವಿಧಾನಗಳನ್ನು ಬಳಸಿ ವೈದ್ಯಕೀಯ ಪರೀಕ್ಷೆ ನಡೆಸಬೇಕು.
ಕ್ರಿಮಿನಲ್ ಪ್ರಕರಣದಲ್ಲಿ ಆಪಾದಿತ ಷಾಮೀಲಾಗಿರುವುದನ್ನು ತಿಳಿಯಲಿಕ್ಕಾಗಿ ಡಿಎನ್ಎ ಪರೀಕ್ಷೆಗೆ ಆದೇಶ ನೀಡುವುದರ ಕಾನೂನುಬದ್ಧತೆಯನ್ನು ತೊಗೊರಾಣಿ ಅಲಿಯಾಸ್ ಕೆ. ದಮಯಂತಿ ವರ್ಸಸ್ ಒರಿಸ್ಸಾ ಸ್ಟೇಟ್ ಮತ್ತು ಇತರರು (೨೦೦೪ ಕ್ರಿಮಿನಲ್ ಎಲ್ಜೆ ೪೦೦೩ – ಒರಿಸ್ಸಾ) ಪ್ರಕರಣದಲ್ಲಿ ಒರಿಸ್ಸಾ ಹೈಕೋರ್ಟ್ ಎತ್ತಿ ಹಿಡಿದಿದೆ. ಡಿಎನ್ಎ ಪರೀಕ್ಷೆಗೆ ಆಪಾದಿತ ಸಹಕರಿಸದಿದ್ದರೆ, ಅವನ ಬಗ್ಗೆ ವ್ಯತಿರಿಕ್ತ ಅಭಿಪ್ರಾಯ ಮೂಡುತ್ತದೆ.
ಈ ವಿಷಯದಲ್ಲಿ ವೈಯುಕ್ತಿಕ ಗೌಪ್ಯತೆಯ ಅಂಶಗಳನ್ನು ಪರಿಗಣಿಸಿದ ಬಳಿಕ, ಡಿಎನ್ಎ ಪರೀಕ್ಷೆ ಆದೇಶಿಸುವ ಮುನ್ನ, ಈ ವಿಚಾರಗಳನ್ನು ಪರಿಗಣಿಸಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ: (೧) ಅಪರಾಧ ಎಸಗುವುದರಲ್ಲಿ ಆಪಾದಿತನು ಎಷ್ಟರ ಮಟ್ಟಿಗೆ ಭಾಗವಹಿಸಿರಬಹುದು? (೨) ಅಪರಾಧದ ಗಂಭೀರತೆ ಮತ್ತು ಅಪರಾಧ ಎಸಗಿದ ಸಂದರ್ಭ (೩) ಆಪಾದಿತನ ಪ್ರಾಯ, ದೈಹಿಕ ಮತ್ತು ಮಾನಸಿಕ ಆರೋಗ್ಯ (೪) ಅಪರಾಧದಲ್ಲಿ ಆಪಾದಿತ ಭಾಗವಹಿಸಿದ್ದನ್ನು ಖಚಿತಪಡಿಸುವ ಅಥವಾ ಖುಲಾಸೆ ಮಾಡುವ ಸಾಕ್ಷಾಧಾರಗಳನ್ನು ಸಂಗ್ರಹಿಸುವ ಕಡಿಮೆ ಆತಂಕಕಾರಿಯಾದ ಮತ್ತು ಕಾರ್ಯಸಾಧ್ಯವಾದ ಇತರ ವಿಧಾನಗಳು ಇವೆಯೇ? (೫) ಆಪಾದಿತನು ಡಿಎನ್ಎ ಪರೀಕ್ಷೆಗೆ ಒಪ್ಪಿಗೆ ನಿರಾಕರಿಸಲು ಕಾರಣಗಳೇನು?
ಸಂಸತ್ತಿನ ಅನುಮೋದನೆಗಾಗಿ ಕಾದಿರುವ ೨೦೦೭ರ ಡಿಎನ್ಎ ಪ್ರೊಫೈಲಿಂಗ್ ಮಸೂದೆಯ ಉದ್ದೇಶವನ್ನು ಚುಟುಕಾಗಿ ಹೀಗೆ ಹೇಳಬಹುದು: “ದೇಶದ ಕ್ರಿಮಿನಲ್ ನ್ಯಾಯವ್ಯವಸ್ಥೆಯ ಕಿಂಚಿತ್ ಸಂಪರ್ಕಕ್ಕೆ ಬಂದವರೆಲ್ಲರ ಡಿಎನ್ಎ ವಿವರಗಳನ್ನು ದಾಖಲಿಸುವ “ಕೇಂದ್ರ ಡಿಎನ್ಎ ಮಾಹಿತಿ ಬ್ಯಾಂಕನ್ನು” ರಚಿಸುವ ಮಹತ್ವಾಕಾಂಕ್ಷಿ ಪ್ರಯತ್ನ.” ಅಂದರೆ, ಸಂಶಯಕ್ಕೆ ಒಳಗಾದ ವ್ಯಕ್ತಿಗಳು, ಕಾನೂನು ಮುರಿಯುವವರು, ಕಾಣೆಯಾದ್ವರು ಮತ್ತು ಸ್ವ-ಇಚ್ಚೆಯವರು – ಇವರ ಡಿಎನ್ಎ ವಿವರಗಳ ಡಿಎನ್ಎ ಮಾಹಿತಿ ಬ್ಯಾಂಕ್. ಡಿಎನ್ಎ ದತ್ತಾಂಶ ಸಂಗ್ರಹಿಸಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ (ಗರ್ಭಪಾತ, ಪಿತೃತ್ವ ವಿವಾದ, ದೇಹದ ಭಾಗ ಜೋಡಣೆ – ಇವುಗಳ ಪ್ರಕರಣಗಳ ಸಹಿತ) ವಿವರವಾದ ಪಟ್ಟಿಯನ್ನು ಈ ಮಸೂದೆಯ ಷೆಡ್ಯೂಲಿನಲ್ಲಿ ನೀಡಲಾಗಿದೆ. “ಡಿಎನ್ಎಅ ಮಾಹಿತಿ ಬ್ಯಾಂಕಿನ ಮಾಹಿತಿ ಪಡೆಯುವುದು ಮತ್ತು ಅಲ್ಲಿರುವ ಮಾಹಿತಿಯನ್ನು ಬಳಸುವುದು – ಇವನ್ನು ನಿಯಂತ್ರಿಸುವ ಅಂಶಗಳೂ ಮಸೂದೆಯಲ್ಲಿವೆ. ಆಪಾದಿತನ ಖುಲಾಸೆಯಾದಾಗ ಡಿಎನ್ಎಅ ಮಾಹಿತಿ ಬ್ಯಾಂಕಿನಿಂದ ಆತನ ಮಾಹಿತಿ ಕಿತ್ತು ಹಾಕುವ ಬಗ್ಗೆ ನಿರ್ದೇಶನಗಳೂ ಈ ಮಸೂದೆಯಲ್ಲಿವೆ.
೨೦೦೭ರ ಡಿಎನ್ಎ ಪ್ರೊಫೈಲಿಂಗ್ (ಕರಡು) ಮಸೂದೆ – ಆಕ್ಷೇಪಣಾ ಅಂಶಗಳು
ಎ) ಪೀಠಿಕೆ
ಮಸೂದೆಯ ಸೆಕ್ಷನ್ ೧, ಧೋರಣಾತ್ಮಕ ಉದ್ದೇಶವನ್ನು ಹೀಗೆಂದು ತಿಳಿಸುತ್ತದೆ. “(ಡಿಎನ್ಎ ವಿಶ್ಲೇಷಣೆಯಿಂದ) ಅಪರಾಧಕ್ಕೆ ಸಂಬಂಧಿಸಿದ, ಶರೀರದದ ಒಂದು ಅಂಶ (ಬಾಡಿ ಸಬ್ಸ್ಟೆನ್ಸ್) ಮತ್ತು ಇನ್ನೊಂದು ಅಂಶ ಒಬ್ಬನೇ ವ್ಯಕ್ತಿಯ ಶರೀರದ ಅಂಶಗಳೇ? ಎಂಬುದನ್ನು ನಿರ್ಧರಿಸಲು ಸಾಧ್ಯ; ಅದಲ್ಲದೆ, ಜೀವಿಸಿರುವ ಅಥವಾ ಮೃತರಾದ ಇಬ್ಬರು ವ್ಯಕ್ತಿಗಳ ನಡುವಣ ದೈಹಿಕ ಸಂಬಂಧವನ್ನು ಯಾವುದೇ ಸಂಶಯಕ್ಕೆ ಎಡೆಯಿಲ್ಲದೆ ಸಾಬೀತು ಪಡಿಸುತ್ತದೆ.” ಇದರಿಂದಾಗಿ, ಜೈವಿಕ ವಿಶ್ಲೇಷಣೆಯ ಖಂಡತುಂಡ ಖಚಿತತೆಯನ್ನು ಮಸೂದೆಯು ಒಪ್ಪಿಕೊಳ್ಳುತ್ತದೆ ಎಂಬುದು ಸ್ಪಷ್ಟ.
ಈ ಅಸತ್ಯವು ಮಸೂದೆಯ ಧೋರಣಾತ್ಮಕ ನಿಲುವನ್ನು ಪ್ರಶ್ನಾರ್ಹವಾಗಿಸಿದೆ; ಇದರಿಂದಾಗಿ, ಮಸೂದೆಯ ಪ್ರಧಾನ ಅಂಶಗಳ ಮೇಲೆ ಅದರ ಕರಿನೆರಳು ಚೆಲ್ಲಿದೆ. ಇದು ಏನನ್ನು ಸೂಚಿಸುತ್ತದೆ? ತನಿಖೆ ಮತ್ತು ಶಿಕ್ಷೆ ನಿರ್ಧಾರದ ಸಮಸ್ಯೆಗಳಿಗೆ ಡಿಎನ್ಎ ವಿಶ್ಲೇಷಣೆಯು ವಿಶೇಷ ಪರಿಹಾರವೆಂದು ಮಸೂದೆಯ ಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕೆಂದು ನಮಗೆಲ್ಲರಿಗೂ (ಮುಂದೊಂದು ದಿನ ಕೋರ್ಟ್ಗಳಿಗೂ) ಈ ಮಸೂದೆ ಸೂಚಿಸುತ್ತಿದೆ.
ಬಿ) ವ್ಯಾಖ್ಯಾನಗಳು
ಈ ಮಸೂದೆಯ ಅನೇಕ ವ್ಯಾಖ್ಯಾನಗಳ ವ್ಯಾಪ್ತಿ ವಿಸ್ತಾರ ಬೆಚ್ಚಿ ಬೀಳಿಸುವಂತಿದೆ. “ಅಪರಾಧ ಸೀನ್ ಇಂಡೆಕ್ಸ್” ಇವೆಲ್ಲವನ್ನು ಒಳಗೊಂಡಿದೆ ಎಂದು ವ್ಯಾಖ್ಯಾನಿಸಲಾಗಿದೆ: “ನಿರ್ದಿಷ್ಟ ಅಪರಾಧಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿಯ ದೇಹದ ಮೇಲೆ ಅಥವಾ ಒಳಗೆ, ಯಾವುದೇ ವಸ್ತುವಿನ ಮೇಲೆ, ಯಾವುದೇ ಸ್ಥಳದಲ್ಲಿ ಲಭಿಸಿದ ಫೊರೆನ್ಸಿಕ್ ವಸ್ತುವಿನ ಡಿಎನ್ಎ ಪ್ರೊಫೈಲ್” – ಸೆಕ್ಷನ್ ೨ (೧) (vii)
“ನಿರ್ದಿಷ್ಟ ಅಪರಾಧವನ್ನು ಹೀಗೆ ವ್ಯಾಖ್ಯಾನಿಸಲಾಗಿದೆ: ಯಾವುದೇ ಗಂಭೀರ ಅಪರಾಧ ಅಥವಾ ಷೆಡ್ಯೂಲಿನಲ್ಲಿ ಪಟ್ಟಿ ಮಾಡಲಾದ ಯಾವುದೇ ಅಪರಾಧ” ಮಸೂದೆಯ ಪುತ ೩೪ರಲ್ಲು ಇರುವ ಷೆಡ್ಯೂಲಿನಲ್ಲಿ ಮಾನಭಂಗದಿಂದ ತೊಡಗಿ ವರದಕ್ಷಿಣೆ, ಮಾನನಷ್ಟ ಮತ್ತು ಅಸಹಜ ಸಾವಿನ ತನಕ ವಿವಿಧ ಅಪರಧಗಳನ್ನು ಪಟ್ಟಿ ಮಾಡಲಾಗಿದೆ. ಇದರ ಅರ್ಥ ಏನು? ಕ್ರಿಮಿನಲ್ ಕಾನೂನಿನಲ್ಲಿ ಉಲ್ಲೇಖಿಸಿದ ಸಣ್ಣಪುಟ್ಟ ಅಪರಾಧಗಳಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿಯ ಡಿಎನ್ಎ ಹಾಗೂ ಇತರ ಜೈವಿಕ ಪರೀಕ್ಷೆ ನಡೆಸಲು ಈ ಮಸೂದೆಯು ಸರಕಾರಕ್ಕೆ ಅಧಿಕಾರ ನೀಡುತ್ತದೆ.
“ಅನುಮಾನಾಸ್ಪದ ವ್ಯಕ್ತಿ” ಎಂಬುದನ್ನು “ಅಪರಾಧ ಮಾಡಿರಬಹುದೆಂದು ಅನುಮಾನಿಸಲಾದ ಯಾವನೇ ವ್ಯಕ್ತಿ” ಎಂದು ವ್ಯಾಖ್ಯಾನಿಸಲಾಗಿದೆ – ಸೆಕ್ಷನ್ ೨ (೧) (xxxvi) ಇಲ್ಲಿ “ಸ್ಪೆಸಿಫೈಡ್ ಅಪರಾಧ” ಎಂಬುದನ್ನು ಉದ್ದೇಶಪೂರ್ವಕವಾಗಿ ಬಿಟ್ಟುಬಿಡಲಾಗಿದೆ. ಇದರ ಉದ್ದೇಶ ಸ್ಪಷ್ಟ: ಯಾವುದೇ ಅಪರಾಧದ ಎಲ್ಲ ಆಪಾದಿತರನ್ನೂ ಮಸೂದೆಯ ವ್ಯಾಪ್ತಿಯೊಳಗೆ ತರುವುದು. ಹಾಗಾಗಿ, “ಸಸ್ಪೆಕ್ಟ್ ಇಂಡೆಕ್ಸ್” ಎಂಬುದನ್ನೂ ಅಪಾಯಕಾರಿಯಾಗಿ ವ್ಯಾಖ್ಯಾನಿಸಲಾಗಿದೆ
– ಸೆಕ್ಷನ್ ೨ (೧) (xxxvix) ವೈಯುಕ್ತಿಕ ಗೌಪ್ಯತೆಯ ಮೇಲೆ ಇದರಿಂದ ಆಗಲಿರುವ ಪ್ರಹಾರವನ್ನು ಅನಂತರ ಯಾರಿಂದಲೂ ಸರಿಪಡಿಸಲಾಗದ ಪರಿಸ್ಥಿತಿ ನಿರ್ಮಾಣವಾದೀತು.
Comments
ಭಾರತೀಯ ಡಿಎನ್ಎ ಪ್ರೊಫೈಲಿಂಗ್