ಭಾರತೀಯ ಡಿಎನ್ಎ ಪ್ರೊಫೈಲಿಂಗ್ ಮಸೂದೆಯ ಸೀಳುನೋಟ (೨)
ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ ಎಂಬ ಸಂಸ್ಥೆ ಭಾರತೀಯ ಡಿಎನ್ಎ ಪ್ರೊಫೈಲಿಂಗ್ ಮಸೂದೆಯ ಕುರಿತು ಅಧ್ಯಯನ ನಡೆಸುತ್ತಿದೆ. ಈ ಅಧ್ಯಯನದಲ್ಲಿ ಕಂಡುಬಂದ ಅಂಶಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಕೆಲವು ದಿನಗಳ ಹಿಂದೆ ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ ತಯಾರಿಸಿದ್ದ ಪತ್ರಿಕಾವರದಿಯ ಪ್ರತಿಯ ಎರಡನೇ ಭಾಗ ಸಂಪದ ಓದುಗರಿಗಾಗಿ ಇಲ್ಲಿದೆ. ಸಂಪದದ ಎಲ್ಲ ಓದುಗರಿಗೂ ಇದು ಉಪಯುಕ್ತ ಮಾಹಿತಿಯಾಗಬಹುದೆಂಬ ಆಶಯದಿಂದ ಇದನ್ನು ನಿಮ್ಮ ಮುಂದಿಡುತ್ತಿದ್ದೇವೆ. - ಹರಿ ಪ್ರಸಾದ್ ನಾಡಿಗ್, ಸಂಪದ ತಂಡದ ಪರವಾಗಿ
ಸಿ) ಡಿಎನ್ಎ ಪ್ರೊಫೈಲಿಂಗ್ ಬೋರ್ಡ್
ಭಾರತೀಯ ಡಿಎನ್ಎ ಡಾಟಾಬೇಸ್ (ಮಾಹಿತಿಕೋಶ)ನ ನಿರ್ವಹಣೆ ಮತ್ತು ಮೇಲಿಸ್ತುವಾರಿ "ಡಿಎನ್ಎ ಪ್ರೊಫೈಲಿಂಗ್ ಬೋರ್ಡಿ"ನ ಜವಾಬ್ದಾರಿ - ಸೆಕ್ಷನ್ ೩. ಈ ಬೋರ್ಡಿಗೆ ಹಲವಾರು ಅಧಿಕಾರಗಳನ್ನು ನೀಡಲಾಗಿದೆ. "ಸಂಗ್ರಹಿಸಿದ ಡಿಎನ್ಎ ಸ್ಯಾಂಪಲ್ ಅಥವಾ ಡಿಎನ್ಎ ವಿಶ್ಲೇಷಣೆಗಳನ್ನು ಪಡೆಯುವುದು ಮತ್ತು ಬಳಸುವುದಕ್ಕೆ ಸಂಬಂಧಿಸಿದ ಗೌಪ್ಯತೆ ರಕ್ಷಣಾ ನಿಯಮಗಳು ಮತ್ತು ಪದ್ಧತಿಗಳನ್ನು ಶಿಫಾರಸ್ ಮಾಡುವುದು" ಬೋರ್ಡಿನ ಅಧಿಕಾರ. "ಡಿಎನ್ಎ ಮಾಹಿತಿಯ ಸೂಕ್ತ ಬಳಕೆ ಮತ್ತು ಪ್ರಸಾರಕ್ಕಾಗಿ ನಿರ್ದಿಷ್ಟ ಶಿಫಾರಸ್ ಮಾಡುವುದು ಮತ್ತು ಗೌಪ್ಯತೆ ರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು" -ಇವೂ ಬೋರ್ಡಿನ ಅಧಿಕಾರ - ಸೆಕ್ಷನ್ ೧೩ (೧) (xv) ರಿಂದ (xvi)
ಇದರ ಪೀಠಿಕೆಯಲ್ಲಿ ಹೇಳಿರುವಂತೆ, "ಸಮಾಜದ ಜನರ ರಕ್ಷಣೆ ಮತ್ತು ನ್ಯಾಯವ್ಯವಸ್ಥೆಯ ನಿರ್ವಹಣೆಯನ್ನು ಉತ್ತಮಪಡಿಸುವುದು" ಈ ಮಸೂದೆಯ ಉದ್ದೇಶ. ಇದನ್ನು ಪ್ರತ್ಯೇಕವಾಗಿ ಪರಿಶೀಲಿಸಿದಾಗ, ಇದು ಈ ಕಾಯಿದೆಯನ್ನು ಜಾರಿ ಮಾಡುವುದರಲ್ಲಿ ಸರಕಾರದ ಆಸಕ್ತಿಯನ್ನು ತಿಳಿಸುತ್ತದೆ. ಅಂದರೆ, ಕಾಯಿದೆಯ ವ್ಯಾಪ್ತಿಯನ್ನು ವಿಪರೀತ ವಿಸ್ತರಿಸುವುದಷ್ಟೇ ಸರಕಾರದ ಗುರಿ. ಸರಕಾರದ ಈ ಆಸಕ್ತಿಯನ್ನು ಸರಿದೂಗಿಸಲು ವೈಯುಕ್ತಿಕ ಗೌಪ್ಯತೆಯ ಪರಿಕಲ್ಪನೆ ಆಧಾರಿತ ಕ್ರಮಗಳು ಜಾರಿಯಾಗಬೇಕಾದ್ದು ಅವಶ್ಯ.
ಆದ್ದರಿಂದ, ಸರಕಾರದ ಭದ್ರತೆಯ ಆಸಕ್ತಿಗಳ ಜೊತೆಗೆ, ವೈಯುಕ್ತಿಕ ಗೌಪ್ಯತೆಯ ರಕ್ಷಣೆಯ ತತ್ವಗಳನ್ನು ಸೆಕ್ಷನ್ ೧ರಲ್ಲಿ ಸೇರಿಸಬೇಕಾಗಿದೆ. ಇದನ್ನು ಸೇರಿಸದಿದ್ದರೆ, ಯಾವ್ಯಾವ ವೈಯಕ್ತಿಕ ಗೌಪ್ಯತೆಯ ಕ್ರಮಗಳನ್ನು ಸೇರಿಸಲಾಗಿದೆ (ಅಥವಾ ಸೇರಿಸಲಾಗಿಲ್ಲ್) ಎಂಬುದರ ಬಗ್ಗೆ ಬೋರ್ಡಿಗೆ ಪರಮಾಧಿಕಾರ ದಕ್ಕುತ್ತದೆ.
ಡಿ) ಪ್ರಯೋಗಾಲಯಗಳ ಅನುಮೋದನೆ
ಜೈವಿಕ ದತ್ತಾಂಶಗಳನ್ನು ಅಂತಿಮವಾಗಿ ಡಿಎನ್ಎ ಮಾಹಿತಿಕೋಶದಲ್ಲಿ ಸೇರಿಸಲಿಕ್ಕಾಗಿ, ಅವುಗಳ ಸಂಸ್ಕರಣೆ ಮತ್ತು ವಿಶ್ಲೇಷಣೆ ಮಾಡಲಿಕ್ಕಾಗಿ ಪ್ರಯೋಗಾಲಯಗಳನ್ನು ಅನುಮೋದಿಸುವ ಅಧಿಕಾರವನ್ನು ಮಸೂದೆಯ ಸೆಕ್ಷನ್ ೧೪ರಂದ ೧೮, ಡಿಎನ್ಎ ಪ್ರೊಪೈಲಿಂಗ್ ಬೋರ್ಡಿಗೆ ನೀಡುತ್ತದೆ. ಸೆಕ್ಷನ್ ೧೪ರ ಪ್ರಕಾರ, ಯಾವುದೇ ಜೈವಿಕ ದತ್ತಾಂಶವನ್ನು ಸಂಸ್ಕರಿಸುವ ಅಥವಾ ವಿಶ್ಲೇಷಿಸುವ ಮುನ್ನ ಪ್ರಯೋಗಾಲಯವನ್ನು ಲಿಖಿತವಾಗಿ ಬೋರ್ಡ್ ಅನುಮೋದಿಸತಕ್ಕದ್ದು.
ಆದರೆ, ಇದಕ್ಕೆ ವಿರುದ್ಧವಾದ ಅಂಶ ಸೆಕ್ಷನ್ ೧೫ (೨)ರಲ್ಲಿದೆ. ಇದರ ಅನುಸಾರ, ಈ ಕಾಯಿದೆ ಸಂಸತ್ತಿನಲ್ಲಿ ಅನುಮೋದಿಸಲ್ಪಡುವಾಗ ದೇಶದಲ್ಲಿ ಕಾರ್ಯವೆಸಗುತ್ತಿರುವ ಎಲ್ಲ ಡಿಎನ್ಎ ಪ್ರಯೋಗಾಲಯಗಳು, ಬೋರ್ಡಿನ ಅನುಮೋದನೆ ಪಡೆಯದೆ ಜೈವಿಕ ದತ್ತಾಂಶಗಳನ್ನು ಸಂಸ್ಕರಿಸಲು ಮತ್ತು ವಿಶ್ಲೇಷಿಸಲು ಸೆಕ್ಷನ್ ೧೫ (೨) ಅನುಮತಿ ನೀಡುತ್ತದೆ.
ಇದು, ಈಗಾಗಲೇ ಇರುವ ಪ್ರಯೋಗಾಲಯಗಳನ್ನು ಹೊಸವ್ಯವಸ್ಥೆಯೊಳಗೆ ಸುಲಭವಾಗಿ ತಳ್ಳುತ್ತದೆ. ಇದರಿಂದಾಗಿ ಜೈವಿಕ ದತ್ತಾಂಶದ ದುರ್ಬಳಕೆ ಆದೀತು. ಆದ್ದರಿಂದ, ಸೆಕ್ಷನ್ ೧೫ (೨)ರ ಭಾಷೆಯನ್ನು ಸರಿಪಡಿಸಬೇಕಾಗಿದೆ.
ಇ) ಸ್ತಾಂಡರ್ಡ್ಗಳು ಮತ್ತು ಡಿಎನ್ಎ ಪ್ರಯೋಗಾಲಯಗಳ ಹೊಣೆಗಳು
ಅಧ್ಯಾಯ ೫ರಲ್ಲಿ ಡಿಎನ್ಎ ಪ್ರಯೋಗಾಲಯಗಳ ಹೊಣೆಗಳನ್ನು ಮತ್ತು ಅವು ಅನುಸರಿಸಬೇಕಾದ ಸ್ಟಾಂಡರ್ಡ್ಗಳನ್ನು ತಿಳಿಸಲಾಗಿದೆ. ಆದರೆ, ಅದರಲ್ಲಿ ಸೂಕ್ತ ಆಡಳಿತಾತ್ಮಕ ನಿಬಂಧನೆಗಳಿಲ್ಲ. ಉದಾಹರಣೆಗೆ ಜೈವಿಕ ದತ್ತಾಂಶಗಳು ಮಲಿನವಾಗುವುದನ್ನು ಕನಿಷ್ಠವಾಗಿಸಲಿಕ್ಕಾಗೆ, ಅವುಗಳಿಗೆ ಪ್ರಯೋಗಾಲಯಗಳಿಗೆ ಸಾಕಷ್ಟು ಭದ್ರತೆ ನೀಡಬೇಕು ಎನ್ನುತ್ತದೆ ಸೆಕ್ಷನ್ ೨೨. ಅದರೆ, ಜೈವಿಕ ದತ್ತಾಂಶಗಳು ಮಲಿನವಾದರೆ, ಪ್ರಯೋಗಾಲಯಗಳಿಗೆ ಯಾವುದೇ ಉತ್ತರದಾಯಿತ್ವ (ಅಕೌಂಟೆಬಿಲಿಟಿ) ಇಲ್ಲ. ಡಿಎನ್ಎ ಪ್ರಯೋಗಾಲಯಗಳ ಅಡಿಟ್ ಆಗಬೇಕು ಎನ್ನುತ್ತದೆ ಸೆಕ್ಷನ್ ೨೮. ಆದರೆ, ಡಿಎನ್ಎ ಪ್ರೊಫೈಲಿಂಗ್ ಬೋರ್ಡಿನ ಅಡಿಟ್ ಬಗ್ಗೆ ಪ್ರಸ್ತಾಪವೇ ಇಲ್ಲ.
ಎಫ್) ರಾಷ್ಟ್ರೀಯ ಡಿಎನ್ಎ ಮಾಹಿತಿಕೋಶ
ರಾಷ್ಟೀಯ ಡಿಎನ್ಎ ಮಾಹಿತಿಕೋಶದ ಸ್ಥಾಪನೆಗೆ ಮತ್ತು ವಿವಿಧ ರಾಜ್ಯಗಳಲ್ಲಿ ಆಯಾ ರಾಜ್ಯದ ಡಿಎನ್ಎ ಯ ಮಾಹಿತಿಕೋಶದ ಸ್ಥಾಪನೆಗೆ ಈ ಮಸೂದೆ ಅನುಮತಿ ನೀಡುತ್ತದೆ. ಆದರೆ, ರಾಜ್ಯಗಳ ಮಾಹಿತಿಕೋಶಗಳು ತಮ್ಮ ಮಾಹಿತಿಯ ಯಥಾಪ್ರತಿಯನ್ನು ರಾಷ್ಟ್ರೀಯ ಮಾಹಿತಿಕೋಶಕ್ಕೆ ಕಳಿಸಲೇ ಬೇಕು. - ಸೆಕ್ಸನ್ ೩೩ (೩).
ರಾಷ್ಟ್ರೀಯ ಮಾಹಿತಿಕೋಶದಲ್ಲಿ ಈ ಕೆಳಗಿನ ಉಪಮಾಹಿತಿ ಕೋಶಗಳಿರುತ್ತವೆ:
೧) ಗುರುತಿಸಲಾಗದ ಅಪರಾಧ ಸ್ಥಳದ ಸ್ಯಾಂಪಲುಗಳು
೨) ಸಂಶಯಾಸ್ಪದ ವ್ಯಕ್ತಿಗಳಿಂದ ತೆಗೆದ ಸ್ಯಾಂಪಲುಗಳು
೩) ಶಿಕ್ಷೆಗೊಳಗಾದ ಅಥವಾ ಈಗ ಪ್ರಾಸಿಕ್ಯೂಷನಿಗೆ ಒಳಪಟ್ಟ ವ್ಯಕ್ತಿಗಳಿಂದ ತೆಗೆದ ಸ್ಯಾಂಪಲುಗಳು
೪) ಕಾಣೆಯಾದ ವ್ಯಕ್ತಿಗಳಿಗೆ ಸಂಬಂಧಿಸಿದ ಸ್ಯಾಂಪಲುಗಳು
೫) ಗುರುತಿಸಲಾಗದ ದೇಹಗಳಿಂದ ತೆಗೆದ ಸ್ಯಾಂಪಲುಗಳು
೬) ಸ್ವ-ಇಚ್ಚೆಯ ವ್ಯಕ್ತಿಗಳಿಂದ ತೆಗೆದ ವ್ಯಾಂಪಲುಗಳು
೭) "ನಿಯಮಗಳಲ್ಲಿ ನಿರೂಪಿಸಿದ ಕಾರಣಗಳಿಗಾಗಿ" ತೆಗೆದ ಸ್ಯಾಂಪಲುಗಳು
ಈ ಮೇಲಿನ ಪಟ್ಟಿಯಲ್ಲಿ (೧)ರಿಂದ (೬) ಸ್ಪಷ್ಟವಾಗಿವೆ. ಅವಕ್ಕೆ ಹೋಲಿಸಿದಾಗ " ಎಲ್ಲರನ್ನೂ ವ್ಯಾಪ್ತಿಯೊಳಗೆ ತರುವುದು" (೭)ರ ಉದ್ದೇಶ ಎನಿಸುತ್ತದೆ. ಯಾವ್ಯಾವ ಕಾರಣಗಳನ್ನು ಮುಂದಿನ ವರುಷಗಳಲ್ಲಿ ನಿರೂಪಿಸಲಾಗುತ್ತದೆ? ಇದು ನಿಮ್ಮ ಊಹೆಗೆ ಬಿಟ್ಟ ವಿಷಯ.
ಸೆಕ್ಷನ್ ೩೩(೬)ನ್ನು ಗಮನವಿಟ್ಟು ಓದಿದರೆ ಹೀಗೆಂದು ತಿಳಿಯುತ್ತದೆ: ಫೊರೆನ್ಸಿಕ್ ವಿಶ್ಲೇಷಣೆ ನಡೆಸುವ ಮತ್ತು ಡಿಎನ್ಎ ಮಾಹಿತಿಕೋಶಕ್ಕೆ ದತ್ತಾಂಶ ನೀಡುವ ಏಜೆನ್ಸಿಯು ಅನಂತರ ಡಿಎನ್ಎ ಸ್ಯಾಂಪಲನ್ನು ಉಳಿಸಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದ ಮಸೂದೆಯ ಅಂಶ ಹೀಗಿದೆ:
"ಡಿಎನ್ಎ ಮಾಹಿತಿಕೋಶದಲ್ಲಿ ಈ ಕೆಳಗಿನ ಮಾಹಿತಿ ಇರತಕ್ಕದ್ದು:
(೧) ಆಪಾದಿತರ ಸೂಚಿಯಲ್ಲಿರುವ ಪ್ರೊಫೈಲಿನಲ್ಲಿ, ಯಾವ ವ್ಯಕ್ತಿಯ ದೇಹದ ಅಂಶದಿಂದ ಪ್ರೊಫೈಲ್ ಪಡೆಯಲಾಗಿದೆಯೋ ಅವನ / ಅವಳ ಗುರುತು (ಐಡೆಂಟಿಟಿ)
(೨) ಇತರರ ಪ್ರೊಫೈಲಿನ ಬಗ್ಗೆ, ಆಯಾ ವ್ಯಕ್ತಿಯ ತನಿಖೆಯ ಪ್ರಕರಣದ ನಂಬರ್ - ಸೆಕ್ಷನ್ ೩೩ (೬)"
ಡಿಎನ್ಎ ಪ್ರೊಫೈಲ್ ದತ್ತಾಂಶವನ್ನು ನಿರ್ದಿಷ್ಟ ಆಪಾದಿತ ಅಥವಾ ಪ್ರಕರಣಕ್ಕೆ ಜೋಡಿಸುವ ಬದಲಾಗಿ, "ದೇಹದ ಅಂಶ ಅಥವಾ ಅಂಶಗಳನ್ನು" ನಿರ್ದಿಷ್ಟ ಆಪಾದಿತ ಅಥವಾ ಪ್ರಕರಣಕ್ಕೆ ಜೋಡಿಸುವುದು ಯಾತಕ್ಕೆ? ಇದರಿಂದಾಗಿ, ಕಾಯಿದೆಯಲ್ಲಿ ಅನಗತ್ಯ ಹಾಗೂ ಅಪಾಯಕಾರಿ ಅಸ್ಪಷ್ಟತೆ ತುರುಕಿಸಲಾಗಿದೆ.
ಜಿ) ಗೌಪ್ಯತೆ, ಡಿಎನ್ಎ ಪ್ರೊಫೈಲ್, ಸ್ಯಾಂಪಲ್ ಮತ್ತು ದಾಖಲೆಗಳನ್ನು ಪಡೆಯುವುದು
ಈ ಅಸ್ಪಷ್ಟತೆಯನ್ನು "ಮಾಹಿತಿ ಪಡೆಯುವ" ಬಗೆಗಿನ ಸೆಕ್ಷನ್ ೩೬ ಹೆಚ್ಚಿಸಿದೆ. ಅದರ ಮೂರು ಸಬ್-ಸೆಕ್ಷನುಗಳಲ್ಲಿ ಮಾಹಿತಿಕೋಶದಲ್ಲಿರುವ "ಮಾಹಿತಿ" ಪಡೆಯುವ ಬಗ್ಗೆ ಪ್ರಸ್ತಾಪವಿದೆ. ಆದರೆ, ಮಾಹಿತಿಕೋಶದಲ್ಲಿರುವ "ಡಿಎನ್ಎ ಪ್ರೊಫೈಲ್" ಪಡೆಯುವ ಬಗ್ಗೆ ಪ್ರಸ್ತಾಪವಿಲ್ಲ. - ಸೆಕ್ಷನ್ ೩೬ (೧)
ಇದರ ಸಬ್-ಸೆಕ್ಷನ್ ೨, "ಶಿಕ್ಷೆಗೊಳಗಾದ ವ್ಯಕ್ತಿಗೆ ಸಂಬಂಧಿಸಿದ ಆಪಾದಿತರ ಸೂಚಿಯಲ್ಲಿರುವ ಮಾಹಿತಿ" ಎನ್ನುತ್ತದೆ. ಅಂದರೆ, ಶಿಕ್ಷೆಗೊಳಗಾದ ವ್ಯಕ್ತಿಯ ಡಿಎನ್ಎ ಇಂದ ಪಡೆಯಬಹುದಾದ ಎಲ್ಲ ಮಾಹಿತಿಯನ್ನು ಮಾಹಿತಿಕೋಶದಲ್ಲಿ ಶೇಖರಿಸಬಹುದು ಎಂದರ್ಥ. ಈ ಅರ್ಥ-ವಿಪರೀತಗಳನ್ನು ಸರಿಪಡಿಸುವ ಬಗ್ಗೆ ಮಸೂದೆಯಲ್ಲಿ ಉಲ್ಲೇಖವಿದ್ದರೂ, ಈ ಮಸೂದೆಯು ಇದೇ ಶಬ್ದರೂಪದಲ್ಲಿ ಕಾಯಿದೆ ಆಗುವುದು ಸರಿಯಲ್ಲ.
ಮಸೂದೆಯ ಸೆಕ್ಷನ್ ೩೯ ಮತ್ತು ೪೦ನ್ನು ಎಚ್ಚರದಿಂದ ಪರಿಶೀಲಿಸಬೇಕು. ಇವು, ರಾಷ್ಟ್ರೀಯ ಡಿಎನ್ಎ ಮಾಹಿತಿಕೋಶದಲ್ಲಿರುವ ಎಲ್ಲ ಮಾಹಿತಿಯನ್ನು ನೇರವಾಗಿ ಪಡೆಯಲು ಪೊಲೀಸರಿಗೆ ಅಧಿಕಾರ ನೀಡುತ್ತದೆ. ಆಡಳಿತದ ದೃಷ್ಠಿಯಿಂದ ಇದು ಅಗತ್ಯ ಇರಬಹುದು. ಆದರೆ, ಇದು ಮಾಹಿತಿಯ ದುರ್ಬಳಕೆಗೆ ಅವಕಾಶ ನೀಡುತ್ತದೆ. ಇದಕ್ಕೆ ಪರಿಹಾರವೇನು? ಡಿಎನ್ಎ ಮಾಹಿತಿಕೋಶ ಮತ್ತು ಪೊಲೀಸರ ನಡುವೆ ಬೋರ್ಡ್ ಅಥವಾ ಇನ್ನೊಬ್ಬ ಅಧಿಕಾರಿಯು ಮಾಹಿತಿ ಒದಗಣೆಯನ್ನು ನಿಯಂತ್ರಿಸಬೇಕು. ನಿರ್ದಿಷ್ಟ ಮಾಹಿತಿಗಾಗೆ ಡಿಎನ್ಎ ಮಾಹಿತಿಕೋಶಕ್ಕೆ ವಿನಂತಿ ಮಾಡುವ ವ್ಯವಸ್ಥೆಯೂ ಇರಬೇಕು. ಇದು, ಮಾಹಿತಿಕೋಶದಿಂದ ಅನಿರ್ಬಂಧಿತವಾಗಿ ಮಾಹಿತಿ ಪಡೆಯುವುದರಿಂದ್ ಆಗಬಹುದಾದ ಅಪಾಯಗಳನ್ನು ಕನಿಷ್ಠವಾಗಿಸುತ್ತದೆ.
ಸೆಕ್ಷನ್ ೪೧ರ ಅನುಸಾರ, ಮಾಹಿತಿಕೋಶದ ಮೆನೇಜರ್ "ತನಗೆ ಸೂಕ್ತವೆನೆಸಿದ ಯಾವನೇ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿಗೆ" ಮಾಹಿತಿಕೋಶದಿಂದ ಮಾಹಿತಿ ಪಡೆಯಲು ಅನುಮತಿ ನೀಡಬಹುದು. ಇದಂತೂ ಅಪಾಯಕಾರಿ ಅಂಶ. ಒಬ್ಬ ವ್ಯಕ್ತಿಗೆ ಇಂತಹ ಅಧಿಕಾರ ನೀಡುವುದು ದುರ್ಬಳಕೆಗೆ ಆಹ್ವಾನ. ಇದಕ್ಕೆ ನಿರ್ಬಂಧ ಇರಲೇ ಬೇಕು. ಇವೆಲ್ಲದರಿಂದ ಹೊಮ್ಮುವ ಅರ್ಥವೇನು? ವ್ಯಕ್ತಿಗಳ ಗೌಪ್ಯತೆ ಹಕ್ಕುಗಳಿಗಿಂತ, ಅಪರಾಧಗಳ ತನಿಖೆಯೇ ಸರಕಾರಕ್ಕೆ ಮುಖ್ಯವಾಗಿದೆ.
ಮಸೂದೆಯ ಕುಂದುಕೊರತೆ
ಕಾನೂನುಬಾಹಿರವಾಗಿ ಡಿಎನ್ಎ ಮಾಹಿತಿ ಮತ್ತು ಕಾನೂನುಬಾಹಿರವಾಗಿ ರಾಷ್ಟ್ರೀಯ ಡಿಎನ್ಎ ಮಾಹಿತಿಕೋಶದಲ್ಲಿ ಖಾಸಗಿ ಮಾಹಿತಿ ಶೇಖರಿಸುವುದು - ಇವೆರಡರ ವಿರುದ್ಧ ಪ್ರಜೆಯೊಬ್ಬ ಕಾನೂನಿನ ಮೂಲಕ ಹಕ್ಕುಸಾಧನೆ ಮಾಡುವುದಕ್ಕೆ ಈ ಮಸೂದೆ ಅವಕಾಶ ನೀಡುವುದಿಲ್ಲ. ಮಾಹಿತಿಕೋಶದಲ್ಲಿ ದಾಖಲಾದ ವೈಯುಕ್ತಿಕ ಮಾಹಿತಿಯನ್ನು ಪರಿಶೀಲಿಸುವ ಹಕ್ಕನ್ನೂ ಈ ಮಸೂದೆ ವ್ಯಕ್ತಿಯೊಬ್ಬನಿಗೆ ನೀಡುವುದಿಲ್ಲ. ಇವೆರಡೂ ಹಕ್ಕುಗಳನ್ನು ಈ ಮಸೂದೆಯಲ್ಲಿ ಸೇರಿಸುವುದು ಅತ್ಯಗತ್ಯ.