ಭಾರತೀಯ ನೌಕಾಪಡೆಯ ದಿನ

ಭಾರತೀಯ ನೌಕಾಪಡೆಯ ದಿನ

ಡಿಸೆಂಬರ್ ೪ ಭಾರತೀಯ ನೌಕಾ ಪಡೆಯ ದಿನ ( Indian Navy Day) ಮತ್ತು ಡಿಸೆಂಬರ್ ೫ ವಿಶ್ವ ಮಣ್ಣು ದಿನ (World Soil Day). ಈ ಎರಡೂ ದಿನಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.

ಭಾರತವು ವಿಶ್ವದಲ್ಲೇ ಬಲಿಷ್ಟವಾದ ಮೂರೂ ಪ್ರಕಾರಗಳ ಸೇನಾ ವಿಭಾಗಗಳನ್ನು ಹೊಂದಿದೆ. ಭೂಸೇನೆ, ನೌಕಾ ಸೇನೆ ಹಾಗೂ ವಾಯು ಸೇನೆ. ಡಿಸೆಂಬರ್ ೪ ನಮ್ಮ ಭಾರತದ ನೌಕಾ ಪಡೆಗಳ ದಿನ ಎಂದು ಆಚರಿಸಲಾಗುತ್ತದೆ. ಈ ದಿನದ ಮೂಲಕವಾಗಿ ನಾವು ನಮ್ಮನ್ನು ಇಡೀ ವರ್ಷ ನಮ್ಮ ಗಡಿಯನ್ನು ಶತ್ರುಗಳಿಂದ ಕಾಪಾಡುವ ನೌಕಾ ಪಡೆಯವ ಹೆಮ್ಮೆಯ ಸೈನಿಕರನ್ನು ಸ್ಮರಿಸಿ ಕೃತಜ್ಞತೆಯನ್ನು ಸಲ್ಲಿಸಲೇಬೇಕು. ನಾವು ಮತ್ತು ನಮ್ಮ ಕುಟುಂಬದವರು ನೆಮ್ಮದಿಯಲ್ಲಿರಬೇಕು ಎಂದು ನೌಕಾ ಪಡೆಯ ಸೈನಿಕರು ಮಾಡಿದ ತ್ಯಾಗ ಮತ್ತು ಬಲಿದಾನವನ್ನು ಈ ದಿನದಂದು ನಾವಿಂದು ಸ್ಮರಿಸಲೇ ಬೇಕು. 

ಬ್ರಿಟೀಷರು ೧೬೧೨ರಲ್ಲಿ ನೌಕಾ ಪಡೆಯನ್ನು ರಚಿಸಿದರು. ತಮ್ಮ ಹಡಗುಗಳನ್ನು ಶತ್ರು ಪಡೆಗಳಿಂದ ರಕ್ಷಿಸಲು ಅವರು ಈ ನೌಕಾ ಪಡೆಯನ್ನು ಸ್ಥಾಪಿಸಿದರು. ಆ ಸಮಯದಲ್ಲಿ ಇದಕ್ಕೆ ‘ರಾಯಲ್ ಇಂಡಿಯನ್ ನೇವಿ’ ಎಂದು ಹೆಸರು ಇಡಲಾಗಿತ್ತು. ನಂತರ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ೧೯೫೦ರಲ್ಲಿ ಭಾರತೀಯ ನೌಕಾ ಪಡೆ ಎಂದು ಮರುನಾಮಕರಣ ಮಾಡಲಾಯಿತು. 

ನಮ್ಮ ಭಾರತದ ನೌಕಾ ಪಡೆಯು ವಿಶ್ವದ ಐದನೇ ದೊಡ್ಡ ನೌಕಾ ಪಡೆ. ಅತ್ಯಂತ ಆಧುನಿಕ ಶಸ್ತ್ರಾಸ್ತ್ರ ಹಾಗೂ ವಾಯು ಪಡೆಯ ವಿಮಾನಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ನಮ್ಮ ನೌಕೆಗಳಿಗೆ ಇವೆ. ಭಾರತದಲ್ಲಿ ಸುಮಾರು ೧೩೫ ದೊಡ್ಡ ಯುದ್ಧ ನೌಕೆಗಳೂ, ೧೫ ಚಿಕ್ಕ ಯುದ್ಧ ನೌಕೆಗಳೂ ಇವೆ. ಒಂದು ಲಕ್ಷಕ್ಕೂ ಅಧಿಕ ಪೂರ್ಣ ಹಾಗೂ ಅರೆಕಾಲಿಕ ಸಿಬ್ಬಂದಿಗಳು ಭಾರತೀಯ ನೌಕಾ ಪಡೆಯಲ್ಲಿ ಇದ್ದಾರೆ. ೨೩ ಜಲಾಂತರ್ಗಾಮಿಗಳೂ ಇವೆ. ಕ್ಷಿಪಣಿಯನ್ನು ಸಾಗಿಸುವ, ಟ್ಯಾಂಕರ್ ಗಳನ್ನು ಸಾಗಿಸುವ ಹಲವಾರು ರೀತಿಯ ನೌಕೆಗಳು ಭಾರತೀಯ ನೌಕಾ ಪಡೆಯ ಬತ್ತಳಿಕೆಯಲ್ಲಿವೆ. ೨೦೩೦ರ ಸುಮಾರಿಗೆ ಭಾರತೀಯ ನೌಕಾ ಪಡೆಯನ್ನು ವಿಶ್ವದ ಮೂರನೇ ದೊಡ್ಡ ನೌಕಾ ಪಡೆ ಮಾಡುವ ಗುರಿಯನ್ನು ಸೇನೆ ಹೊಂದಿದೆ.

ಡಿಸೆಂಬರ್ ೪ ನ್ನು ಯಾಕೆ ನೌಕಾ ಪಡೆಯ ದಿನವೆಂದು ಕರೆಯುತ್ತಾರೆ? ಎಂಬ ಕುತೂಹಲ ನಿಮಗೆ ಇರಬೇಕಲ್ಲವೇ? ಈ ದಿನ ನಮ್ಮ ದೇಶದ ಇತಿಹಾಸದಲ್ಲಿ ಮರೆಯಲಾಗದ ದಿನ. ೧೯೭೧ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ನೌಕಾ ಪಡೆಗಳು ಮೊದಲ ಬಾರಿಗೆ ಹಡಗು ನಿಗ್ರಹ ಕ್ಷಿಪಣಿಗಳನ್ನು ಬಳಸಿ ಪಾಕಿಸ್ತಾನದ ಸಮರ ನೌಕೆಗಳನ್ನು ಹೊಡೆದುರುಳಿಸಿದ್ದವು. ಈ ಮೂಲಕ ಪಾಕಿಸ್ತಾನದ ಮೇಲೆ ವಿಜಯ ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ನೌಕಾ ಪಡೆಗಳು ಯಶಸ್ವಿಯಾಗಿದ್ದವು. ಆ ವಿಜಯೋತ್ಸವದ ಸ್ಮರಣೆಗಾಗಿ ಆ ದಿನವನ್ನು (ಡಿಸೆಂಬರ್ ೪) ಭಾರತೀಯ ನೌಕಾ ಪಡೆಗಳ ದಿನ ಎಂದು ಆಚರಿಸಲಾಗುತ್ತದೆ. 

ಪ್ರಸ್ತುತ ನಮ್ಮ ಸೇನೆಯಲ್ಲಿ ಹಲವಾರು ಹೊಸ ತಂತ್ರಜ್ಞಾನದ ನೌಕೆಗಳು ಸೇರ್ಪಡೆಯಾಗಿವೆ. ಐ ಎನ್ ಎಸ್ ಕವರಟ್ಟಿ, ವಿಕ್ರಮಾದಿತ್ಯ ಮೊದಲಾದ ನೌಕೆಗಳು ಭಾರತ ದೇಶದ ರಕ್ಷಣೆಗೆ ಕಟಿಬದ್ಧವಾಗಿವೆ. ದೇಶಕ್ಕಾಗಿ ಪ್ರಾಣವನ್ನೂ ಕೊಡಬಲ್ಲ ವೀರಯೋಧರ ಪಡೆಯೂ ನಮ್ಮ ನೌಕಾ ಸೇನೆಯಲ್ಲಿದೆ. ಇವರಿಗೊಂದು ನಿಮ್ಮ ಸೆಲ್ಯೂಟ್ ಇರಲಿ.

ಚಿತ್ರ ಕೃಪೆ: ಮುಂಬೈ ಲೈವ್ ಜಾಲ ತಾಣ