ಭಾರತೀಯ ಯೋಗ: ಬದುಕು ಸಂಪನ್ನಗೊಳಿಸುವ ಅದ್ಭುತ ಪ್ರಾಚೀನ ಮಂತ್ರದಂಡ

ಭಾರತೀಯ ಯೋಗ: ಬದುಕು ಸಂಪನ್ನಗೊಳಿಸುವ ಅದ್ಭುತ ಪ್ರಾಚೀನ ಮಂತ್ರದಂಡ

ಇವತ್ತು ಅಂತರರಾಷ್ಟ್ರೀಯ ಯೋಗ ದಿನ. "ಅಜಾದಿ ಕಾ ಅಮೃತ್ ಮಹೋತ್ಸವ್” ಭಾಗವಾಗಿ ಭಾರತದಾದ್ಯಂತ 75 ಪ್ರಸಿದ್ಧ ಸ್ಥಳಗಳಲ್ಲಿ ಯೋಗ ದಿನದ ಆಚರಣೆ. ಜಗತ್ತಿನ ಹಲವು ದೇಶಗಳಲ್ಲಿಯೂ ಈ ಮಹತ್ವದ ದಿನದ ಆಚರಣೆಯಲ್ಲಿ ಭಾಗಿಯಾಗಿರುವವರು ಲಕ್ಷಗಟ್ಟಲೆ ಜನರು.

ನಮ್ಮ ಕರ್ನಾಟಕದಲ್ಲಿಯೂ ಇವತ್ತು ಸಂಭ್ರಮ. ಯಾಕೆಂದರೆ, ಮೈಸೂರು ಅರಮನೆ ಆವರಣದಲ್ಲಿ ಮುಂಜಾನೆ ಜರಗಿದ ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದರು. ಅಲ್ಲಿ ಪ್ರಧಾನಿಯವರ ಜೊತೆ ಯೋಗಾಸನಗಳನ್ನು ಮಾಡಿದ ಜನರ ಸಂಖ್ಯೆ 15 ಸಾವಿರ. ಅವರಲ್ಲಿ 1,200 ವಿದ್ಯಾರ್ಥಿಗಳು. 45 ನಿಮಿಷಗಳ ಅವಧಿ ನಡೆದ ಕಾರ್ಯಕ್ರಮದಲ್ಲಿ ಪ್ರದರ್ಶಿತವಾದ ಯೋಗಾಸನಗಳು 19. ಅಲ್ಲಿ ಪ್ರಧಾನಿಯವರು ಹೇಳಿದ ಒಂದು ಮಾತು ಯೋಗದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರುತ್ತದೆ: "ಯೋಗ ನಮ್ಮೆಲ್ಲರಿಗೂ ಸಮಸ್ಯಾ ಪರಿಹಾರಕ ಆಗಬಲ್ಲದು.”

ಭಾರತದ ಯೋಗಕ್ಕೆ ಸುಮಾರು 5000 ವರುಷಗಳ ಪರಂಪರೆ. ಇದು ದೇಹ ಮತ್ತು ಮನಸ್ಸಿನ ಸಾಮರಸ್ಯ ಸಾಧಿಸಲು ಅತ್ಯಂತ ಪರಿಣಾಮಕಾರಿ ಆಚರಣೆ. ಆದ್ದರಿಂದಲೇ 11 ಡಿಸೆಂಬರ್ 2014ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಜೂನ್ 21ನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು. ಅದೇ ವರುಷ ಸಪ್ಟಂಬರ್ 27ರಂದು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಭಾಷಣದಲ್ಲಿ ನೀಡಿದ ಸೂಚನೆಯ ಅನುಸಾರ ಈ ಘೋಷಣೆ ಮಾಡಲಾಯಿತು. ಇದರಿಂದಾಗಿ ಭಾರತದ ಯೋಗವು ಮಾನವರೆಲ್ಲರ ಆರೋಗ್ಯ ರಕ್ಷಣೆ ಹಾಗೂ ಯೋಗಕ್ಷೇಮ ಸಾಧನೆಯ ಸೂತ್ರವೆಂದು ಜಾಗತಿಕ ಆಂದೋಲನದ ಸ್ವರೂಪ ಪಡೆಯಿತು. ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡಬೇಕಾದ ಸಂಗತಿ.

ಯೋಗದ ಬಗ್ಗೆ ನಾವು ತಿಳಿದಿರಲೇ ಬೇಕಾದ ಇನ್ನೂ ಹಲವು ಸಂಗತಿಗಳಿವೆ. ಯೋಗ ಎಂದರೇನು? ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಸುಲಭವಲ್ಲ. ಇದು ಸಂಸ್ಕೃತದ “ಯುಜ್" ಎಂಬುದರಿಂದ ಉತ್ಪತ್ತಿಯಾದ ಪದ. ಕೂಡಿಸು ಮತ್ತು ಮನಸ್ಸನ್ನು ನಿರ್ದೇಶಿಸಿ ಕೇಂದ್ರೀಕರಿಸು ಎಂಬ ಅರ್ಥಗಳನ್ನು ಇದು ಹೊಮ್ಮಿಸುತ್ತದೆ. ಜ್ನಾನಯೋಗ, ಭಕ್ತಿಯೋಗ, ಕರ್ಮಯೋಗ ಮತ್ತು ರಾಜಯೋಗ - ಇವು ಯೋಗದ ನಾಲ್ಕು ವಿಧಗಳು.

ಜೀವಾತ್ಮವನ್ನು ಪರಮಾತ್ಮನೆಡೆಗೆ ಒಯ್ಯುತ್ತಾ ಆತ್ಮಸಾಕ್ಷಾತ್ಕಾರಕ್ಕೆ ಸಾಧನವಾಗುವುದೇ ಯೋಗದ ಪ್ರಧಾನ ಉದ್ದೇಶ. ಇದನ್ನೇ ನಮ್ಮ ಹಿರಿಯರು ಸರಳ ಭಾಷೆಯಲ್ಲಿ ಹೀಗೆಂದು ತಿಳಿಸಿದ್ದಾರೆ: ದೇಹದ ಉನ್ನತಿಗಾಗಿ ಯೋಗಾಸನಗಳ ಸಾಧನೆ ಮಾಡು. ಉಸಿರಿನ ಉನ್ನತಿಗಾಗಿ ಪ್ರಾಣಾಯಾಮದ ಸಾಧನೆ ಮಾಡು. ಆತ್ಮದ ಉನ್ನತಿಗಾಗಿ ಧ್ಯಾನದ ಸಾಧನೆ ಮಾಡು. ಆತ್ಮಸಾಕ್ಷಾತ್ಕಾರಕ್ಕಾಗಿ ಪರಮಾತ್ಮನಲ್ಲಿ ಸಮರ್ಪಣಾ ಭಾವದಿಂದ ಪ್ರಾರ್ಥನೆ ಮಾಡು.

ಆದರೆ ನೆನಪಿರಲಿ. ಯೋಗ ಎಂಬುದು ಅತ್ಯಂತ ಗಹನವಾದ ಶಾಸ್ತ್ರ. ಹಲವರು ಯೋಗ ಅಂದರೆ ಕೇವಲ ಯೋಗಾಸನಗಳು ಎಂದು ಭಾವಿಸಿದ್ದಾರೆ. ಯೋಗಸೂತ್ರಗಳನ್ನು ದಾಖಲಿಸಿರುವ ಮಹಾಮುನಿ ಪತಂಜಲಿ ಯೋಗದಲ್ಲಿ ಎಂಟು ಮೆಟ್ಟಲುಗಳಿವೆ ಎಂದು ಸ್ಪಷ್ಟ ಪಡಿಸಿದ್ದಾರೆ. ಅವನ್ನೇ ಒಟ್ಟಾಗಿ "ಅಷ್ಟಾಂಗ ಯೋ"ಗ ಎನ್ನುವುದು.  ಅವು:
ಯಮ, ನಿಯಮ,
ಆಸನ, ಪ್ರಾಣಾಯಾಮ,
ಪ್ರತ್ಯಾಹಾರ, ಧಾರಣ,
ಧ್ಯಾನ ಮತ್ತು ಸಮಾಧಿ.

ಕೆಲವು ತಿಂಗಳು ಕೇವಲ ಯೋಗಾಸನಗಳನ್ನು ಅಭ್ಯಾಸ ಮಾಡಿ, “ಯೋಗ"ದ ಇತರ ಏಳು ಹಂತಗಳನ್ನು ನಿರ್ಲಕ್ಷಿಸಿ, ಕೊನೆಗೆ “ಯೋಗದಿಂದ ಏನೂ ಪ್ರಯೋಜನವಿಲ್ಲ” ಎನ್ನುವವರು "ಯೋಗ" ಎಂದರೇನು? ಎಂಬುದನ್ನೇ ಅರ್ಥ ಮಾಡಿ ಕೊಂಡಿರುವುದಿಲ್ಲ. “ಯೋಗ”ದ ಪ್ರಯೋಜನ ಅನುಭವಕ್ಕೆ ಬರಬೇಕಾದರೆ, ಪ್ರತಿ ದಿನವೂ ಪ್ರತಿ ಕ್ಷಣವೂ ಆ ಎಂಟು ಹಂತಗಳ ಅನುಸಾರವೇ ಬದುಕಬೇಕಾಗುತ್ತದೆ.

“ಯೋಗ"ದ ಎಂಟೂ ಹಂತಗಳ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಹಲವು ವರುಷಗಳ ಅಧ್ಯಯನ ಅಗತ್ಯ. ಉದಾಹರಣೆಗೆ, ಪತಂಜಲಿ ಬರೆದಿರುವ 195 ಯೋಗ ಸೂತ್ರಗಳಲ್ಲಿ ಎರಡನೆಯದು: "ಯೋಗಶ್ಚಿತ್ತವೃತ್ತಿ ನಿರೋಧಃ” ಅಂದರೆ, ನಮ್ಮ ಮನಸ್ಸು ಒಂದಲ್ಲ ಒಂದು ಚಟುವಟಿಕೆಯಲ್ಲಿ (ಚಿತ್ತವೃತ್ತಿ) ಮುಳುಗಿರುತ್ತದೆ. ಹಿಂದೆ ಆದ ಘಟನೆಗಳನ್ನು ನೆನಪು ಮಾಡಿಕೊಳ್ಳುವುದು, ಈಗಿನ ಕೆಲಸಕಾರ್ಯಗಳ ಬಗ್ಗೆ ಚಿಂತಿಸುವುದು, ಮುಂದೆ ಆಗಬಹುದಾದ ಘಟನೆಗಳ ಬಗ್ಗೆ ಯೋಚಿಸುವುದು. ಇವೆಲ್ಲವನ್ನು ನಿವಾರಿಸಲು ಯೋಗದ ಆಚರಣೆಗಳನ್ನು ರೂಪಿಸಲಾಗಿದೆ. ಅಂತೆಯೇ, ಆರನೆಯ ಸೂತ್ರದಲ್ಲಿ ಪತಂಜಲಿ ಗುರುತಿಸಿರುವ ಐದು ಚಿತ್ತವೃತ್ತಿಗಳು: “ಪ್ರಮಾಣ ವಿಪರ್ಯಾಯ ವಿಕಲ್ಪ ನಿದ್ರಾ ಸ್ಮೃತಿ”  ಇದರ ಬಗ್ಗೆ ಒಂದು ವರುಷ ಅಧ್ಯಯನ ನಡೆಸಿದ ನಂತರವೂ “ಇನ್ನಷ್ಟು ತಿಳಿಯಲಿಕ್ಕಿದೆ” ಎಂಬ ಭಾವ ನಿಮಲ್ಲಿ ಬೆಳೆಯುತ್ತದೆ ಹೊರತು ಈ ಸೂತ್ರ ಅರ್ಥವಾಯಿತು ಎನ್ನುವಂತಿಲ್ಲ. ಹಾಗಿದ್ದರೆ 195 ಯೋಗ ಸೂತ್ರಗಳನ್ನು ಅರ್ಥ ಮಾಡಿಕೊಳ್ಳಲು ಎಂತಹ ಪರಿಶ್ರಮ,ತಾಳ್ಮೆ ಹಾಗೂ ಶ್ರದ್ಧೆ ಅಗತ್ಯ ಎಂದು ಚಿಂತಿಸಿ. ಆ ಅಧ್ಯಯನಕ್ಕೆ ಅಗತ್ಯವಾದ ಸಾವಿರಾರು ಪುಸ್ತಕಗಳು ಹಲವು ಭಾಷೆಗಳಲ್ಲಿ ಲಭ್ಯ.

“ಯೋಗಾಸನ"ಗಳ ಬಗ್ಗೆ ಸಮಗ್ರವಾಗಿ ತಿಳಿಯ ಬೇಕೆಂದರೆ, ಪ್ರಸಿದ್ಧ ಯೋಗಗುರು ಬಿ.ಕೆ.ಎಸ್. ಅಯ್ಯಂಗಾರ್ ಬರೆದಿರುವ "ಯೋಗ ದೀಪಿಕಾ" ಪುಸ್ತಕವನ್ನು ಅಧ್ಯಯನ ಮಾಡಬಹುದು. ಮುಖ್ಯ ಆಸನಗಳ ಫೋಟೋಗಳ ಸಹಿತ ಆಸನಗಳನ್ನು ಮಾಡುವ ವಿಧಾನ, ಅದರ ಪ್ರಯೋಜನಗಳು ಎಲ್ಲವನ್ನು ವಿವರವಾಗಿ ತಿಳಿಸುವ ಆ ಪುಸ್ತಕ ಹಲವು ಭಾಷೆಗಳಲ್ಲಿ ಲಭ್ಯ. ಹಾಗೆಯೇ ಯೋಗಾಸನಗಳ ಭಂಗಿಗಳ ಕಲಿಕೆಗಾಗಿ “ಆಯುರ್ ವಿಕಿ” ಎಂಬ ಉಚಿತ ಆಪ್ ಡೌನ್ಲೋಡ್ ಮಾಡಿ, ಅದರಲ್ಲಿರುವ ಯೋಗಾಸನಗಳನ್ನು ಮಾಡುವುದನ್ನು ತೋರಿಸುವ ರೇಖಾಚಿತ್ರಗಳಿಂದ ಮಾಹಿತಿ ಪಡೆಯಬಹುದು.

ಆಸನಗಳ ಬಗ್ಗೆಯೂ ನಾವು ತಿಳಿಯಬೇಕಾದ್ದು ಬಹಳಷ್ಟಿದೆ. ಉದಾಹರಣೆಗೆ ಶವಾಸನ. ಇದು ಅತ್ಯಂತ ಸುಲಭವಾದ ಆಸನ ಅನಿಸುತ್ತದೆ. ಯಾಕೆಂದರೆ ಶವದಂತೆ ಮಲಗಿದರಾಯಿತು. ಆದರೆ, ಶವಾಸನ ಮಾಡುವಾಗ ಕೆಲವರು ತಪ್ಪುಗಳನ್ನು ಮಾಡುತ್ತಾರೆ! ಶವಾಸನದಲ್ಲಿರುವಾಗ, ನಾಲಗೆ ನೇರವಾಗಿ ಇಟ್ಟುಕೊಳ್ಳಬಾರದು; ಬಾಯಿಯೊಳಗೆ ನಾಲಗೆ ಮುದ್ದೆಯಾಗಿ ಬಿದ್ದುಕೊಂಡಿರಬೇಕು. ಶವಾಸನದಲ್ಲಿ ಗಮನಿಸಬೇಕಾದ ಎರಡನೆಯ ಸಂಗತಿ: ಉಸಿರಾಡುವಾಗ ಹೊಟ್ಟೆಯ ಏರುಪೇರು ಇರಬಾರದು. ಕೆಲವೇ ನಿಮಿಷಗಳಲ್ಲಿ ಆ ಏರುಪೇರು ಕೆಲವೇ ಮಿಲಿಮೀಟರುಗಳಿಗೆ ಸೀಮಿತವಾಗಬೇಕು. ಮೂರನೆಯದಾಗಿ, ಶವಾಸನದಲ್ಲಿ ಇರುವಾಗ ಮನಸ್ಸು “ಜಗತ್ತಿನ ಸಂಚಾರ”ಕ್ಕೆ ಹೊರಡಬಾರದು; ಬದಲಾಗಿ, ಶರೀರದ ಪ್ರತಿಯೊಂದು ಅಂಗಕ್ಕೂ “ನಿರಾಳವಾಗಿರು" ಎಂಬ ಸ್ವಸಂದೇಶ ಕೊಟ್ಟ ಬಳಿಕ, ಕೇವಲ ಉಸಿರಾಟ ಗಮನಿಸುತ್ತಾ, ಕ್ಷಣದಿಂದ ಕ್ಷಣಕ್ಕೆ ಇನ್ನಷ್ಟು ನಿರಾಳವಾಗಬೇಕು.

ಯೋಗಾಸನಗಳನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡುವವರು, ತಾವು ಮಾಡಿದ್ದು ಸರಿಯಾಗಿದೇಯೇ ಇಲ್ಲವೇ? ಎಂಬುದನ್ನು ಪರೀಕ್ಷೆ ಮಾಡಲೊಂದು ಸುಲಭದ ವಿಧಾನವಿದೆ: ಯೋಗಾಸನ ಮಾಡಿದ ನಂತರ ದೇಹ ಮತ್ತು ಮನಸ್ಸಿನಲ್ಲಿ ಹೆಚ್ಚಿನ ಚೈತನ್ಯ ಅನುಭವಕ್ಕೆ ಬರುತ್ತಿದೆಯೇ? ಎಂದು ಗಮನಿಸುವುದು. ಹಾಗಾಗಿಲ್ಲ ಎಂದಾದರೆ, ಯೋಗಾಸನಗಳನ್ನು ಮಾಡಿದ್ದು ಸರಿಯಾಗಿಲ್ಲ ಎಂದರ್ಥ. ಅದಕ್ಕಾಗಿಯೇ, ಯೋಗಾಸನಗಳನ್ನು ಗುರುವಿನಿಂದಲೇ ಕಲಿಯಬೇಕೆಂಬ ನಿಯಮ.

ನನಗೆ ಯೋಗಾಸನಗಳನ್ನು 60 ವರುಷಗಳ ಮುಂಚೆ ಬಾಲ್ಯದಲ್ಲಿ ಕಲಿಸಿದವರು ನನ್ನ ಅಮ್ಮ, ಬಿ. ಸುಶೀಲ. ಇಂದು ಅವರಿಲ್ಲವಾದರೂ, ಅವರ ಮಾರ್ಗದರ್ಶನ ನನ್ನೊಂದಿಗಿದೆ. ನಮ್ಮ ಬದುಕು ಸಂಪನ್ನವಾಗಬೇಕಾದರೆ, "ಯೋಗ" ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಲೇ ಬೇಕು. ಅದಕ್ಕಾಗಿ ಅಂತರರಾಷ್ಟ್ರೀಯ ಯೋಗ ದಿನ ನಮಗೆಲ್ಲರಿಗೂ ಸುವರ್ಣ ಅವಕಾಶವೊಂದನ್ನು ಒದಗಿಸಿದೆ, ಅಲ್ಲವೇ?