ಭಾರತೀಯ ವೈದ್ಯ ವಿದ್ಯೆಯ ಪಿತಾಮಹ ಸುಶ್ರುತ
'ಭಾರತೀಯ ವೈದ್ಯ ವಿದ್ಯೆಯ ಪಿತಾಮಹ ಸುಶ್ರುತ' ಎಂಬ ಸೊಗಸಾದ ಮಾಹಿತಿಪೂರ್ಣ ಪುಸ್ತಕವನ್ನು ಬರೆದಿದ್ದಾರೆ ಬೆಂಗಳೂರಿನ ಮೀರಾ ಬಿ ಕೆ ಇವರು. "ರೋಗಿಗೆ ದ್ರಾಕ್ಷಾ ರಸ ಕುಡಿಸಿ ಪ್ರಜ್ಞೆ ತಪ್ಪಿಸಿ, ಆತನ ಕೆನ್ನೆಯ ಭಾಗವನ್ನೇ ಕೊಯ್ದು ತೆಗೆದು, ಹರಿದ ಮೂಗಿನ ಮೇಲಿಟ್ಟು, ಯಶಸ್ವಿಯಾಗಿ 'ಸುರೂಪ ಶಸ್ತ್ರಚಿಕಿತ್ಸೆ' ಮಾಡಿ, 'ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸೆಯ ಪಿತಾಮಹ' ನೆಂದೇ ಹೆಸರಾದ ಮಹಾವೈದ್ಯ ಸುಶ್ರುತ. ಎರಡುವರೆ ಸಾವಿರ ವರ್ಷಗಳಿಗೆ ಹಿಂದೆಯೇ ವೈದ್ಯಶಾಸ್ತ್ರದ ಇಂತಹ ಅದ್ಭುತವನ್ನು ಮಾಡಿತೋರಿಸಿದ ಈತ ಭಾರತೀಯನೆನ್ನುವುದು ಹೆಮ್ಮೆಯ ವಿಷಯ. ಸುಶ್ರುತನ ಪ್ರಖ್ಯಾತ 'ಸುಶ್ರುತ ಸಂಹಿತೆ' ಯ ಪರಿಚಯದೊಂದಿಗೆ ಆಯುರ್ವೇದದ ಉಗಮ, ವಿಕಾಸಗಳನ್ನೂ ಸಂಕ್ಷಿಪ್ತವಾಗಿ ಈ ಕೃತಿಯಲ್ಲಿ ಪರಿಚಯ ಮಾಡಿಕೊಡಲಾಗಿದೆ. ವಿಜ್ಞಾನ ದೀಪಮಾಲೆ ಮಾಲಿಕೆಯಲ್ಲಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ.
ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಕನ್ನಡ ಪುಸ್ತಕ ಪ್ರಾಧಿಕಾರದ ಅಂದಿನ ಅಧ್ಯಕ್ಷರಾದ ನೆಲಮನೆ ದೇವೇಗೌಡ ಅವರು. ಅವರ ಅಭಿಪ್ರಾಯದಂತೆ " ಸಂಸ್ಕೃತಿ ಮತ್ತು ನಾಗರಿಕತೆಯ ಜೊತೆಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಂದು ಮನುಕುಲದ ಅವಿಭಾಜ್ಯ ಅಂಗವಾಗಿದೆ. ಕಳೆದ ನೂರು ವರ್ಷಗಳಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಆಗಿರುವ ಅದ್ಭುತ ಪ್ರಗತಿ ಮಾನವ ಇತಿಹಾಸದ ಐದು ಸಾವಿರ ವರ್ಷಗಳಲ್ಲಿ ಕಂಪರಿಯದ್ದು; ಕೇಳರಿಯದ್ದು; ಜನಸಮುದಾಯ ಬಳಸಿ ಅನುಭವಿಸುವ ಅನೇಕ ಸೌಲಭ್ಯಗಳ ಹಿಂದೆ ಎಷ್ಟೊಂದು ವಿಜ್ಞಾನಿಗಳ ಎಲೆಮರೆಯ ಸೇವೆ ಹಾಗೂ ತ್ಯಾಗಮಯ ಜೀವನ ಇದೆ ಎನ್ನುವುದು ಬಹಳ ಜನರ ಅರಿವಿಗೆ ಬರುವುದೇ ಇಲ್ಲ.
ವಿಜ್ಞಾನ ದೀಪ ಮಾಲೆಯಲ್ಲಿ ಈಗಾಗಲೇ ಅನೇಕ ಕೃತಿಗಳು ಪ್ರಕಟವಾಗಿವೆ. ಸುಮಾರು ೨೦೦ ಪುಟಗಳನ್ನೊಳಗೊಂಡ ಈ ಕೃತಿಯಲ್ಲಿ ವಿಜ್ಞಾನಿಗಳ ಜೀವನ ಚಿತ್ರಣದ ಜೊತೆಗೆ ಅವರ ವೈಜ್ಞಾನಿಕ ಚಿಂತನೆ ಹಾಗೂ ಕೊಡುಗೆಗಳನ್ನು ಸರಳ ಕನ್ನಡದಲ್ಲಿ ವಿವರಿಸಲಾಗಿದೆ. ಈ ಕೃತಿಗಳು ಜನಸಾಮಾನ್ಯರಿಗಲ್ಲದೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವೂ ಆಗಿದೆ." ಎಂದಿದ್ದಾರೆ.
ಲೇಖಕರಾದ ಮೀರಾ ಬಿ ಕೆ ಅವರು ತಮ್ಮ 'ಅರಿಕೆ' ಯಲ್ಲಿ ಹೇಳುವುದು ಹೀಗೆ..."ಪ್ರಸಕ್ತ ಈ ಕೃತಿಯಲ್ಲಿ ಸುಶ್ರುತನ ಜೀವನ ಹಾಗೂ ಸಾಧನೆಗಳನ್ನು ಹ್ರಸ್ವರೂಪದಲ್ಲಿ ಓದುಗರಿಗೆ ಪರಿಚಯಿಸುವ ಪ್ರಯತ್ನ ಮಾಡಿದ್ದೇನೆ. ಆತನ ಜ್ಞಾನ ಕೇವಲ ವೈದ್ಯ ವಿಜ್ಞಾನಕ್ಕೆ ಸೀಮಿತವಾಗಿರಲಿಲ್ಲ. ಪ್ರಾಣಿ, ಪಕ್ಷಿ, ಸಸ್ಯಗಳು, ರಾಸಾಯನಿಕಗಳು, ಪರಿಸರ ಮುಂತಾದ ಹಲವಾರು ವಿಷಯಗಳನ್ನು ಸುಶ್ರುತ ತನ್ನ ಕೃತಿಯಲ್ಲಿ ನಮೂದಿಸಿದ್ದಾನೆ. ಇವುಗಳನ್ನು ಪರಿಚಯಿಸುವ ಸೌಭಾಗ್ಯ ನನ್ನದು." ಎಂದಿದ್ದಾರೆ.
ಪುಸ್ತಕದಲ್ಲಿ ಆಯುರ್ವೇದದ ಉಗಮ ಮತ್ತು ವಿಕಾಸ, ಇಪ್ಪತ್ತಾರು ಶತಮಾನಗಳ ಹಿಂದೆಯೇ ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸೆ, ಸುಶ್ರುತನ ಜೀವನ ಕಾಲ ಮತ್ತು ಕೃತಿ ಬಗ್ಗೆ, ಸುಶ್ರುತ ಸಂಹಿತೆ, ಪರಿಕಲ್ಪನೆಗಳು ಮತ್ತು ಸಿದ್ಧಾಂತ, ಶಸ್ತ್ರ ವೈದ್ಯ, ವಿಜ್ಞಾನದ ಇತರೇ ಶಾಖೆಗಳು ಇತ್ಯಾದಿ ವಿಷಯಗಳ ಬಗ್ಗೆ ಸವಿವರವಾದ ವರ್ಣನೆಯಿದೆ. ಸುಮಾರು ೨೭೦ ಪುಟಗಳ ಈ ಪುಸ್ತಕವನ್ನು ಲೇಖಕಿ ತಮ್ಮ ತಾಯಿ ವಿಮಲಮ್ಮ ಕೃಷ್ಣ ರಾವ್ ಅವರಿಗೆ ಅರ್ಪಣೆ ಮಾಡಿದ್ದಾರೆ.