ಭಾರತ್ ಜೋಡೋ - ಭಾರತ್ ತೋಡೋ...ಪಾದಯಾತ್ರೆ…!

ಭಾರತ್ ಜೋಡೋ - ಭಾರತ್ ತೋಡೋ...ಪಾದಯಾತ್ರೆ…!

ಸಮರ್ಥನೆ - ಆಪಾದನೆಗಳ ನಡುವೆ ಭಾರತದ ರಾಜಕೀಯ ಹಿತಾಸಕ್ತಿಗಳು ಮತ್ತು ಶ್ರೀ ಸಾಮಾನ್ಯರ ಕರ್ತವ್ಯಗಳು. ಸ್ವಾತಂತ್ರ್ಯದ 75 ವರ್ಷಗಳ ಅಮೃತ ಮಹೋತ್ಸವದ ಸಂದರ್ಭದಲ್ಲಿ ಒಂದು ಪ್ರಮುಖ ರಾಜಕೀಯ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿಯವರಿಂದ ಈ‌ ಪಾದಯಾತ್ರೆ ನಡೆಯುತ್ತಿದೆ.

ಭಾರತ್ ತೊಡೋ ಔರ್ ಜೊಡೋ ಪಿರ್ ಜೊಡೋ ಔರ್ ತೊಡೋ ಅಬ್ ಜೊಡೋ.. ಭಾರತದ ಸಾಮಾಜಿಕ ರಚನೆಯೇ ( Social structure ) ಭಿನ್ನ ಭಿನ್ನ ಕಲ್ಲು ಮಣ್ಣು ಇಟ್ಟಿಗೆಗಳಿಂದ ಕಟ್ಟಲಾಗಿದೆ. ಜಾತಿ ಧರ್ಮ ಭಾಷೆ ಆಹಾರ ವಸ್ತ್ರ ಸಂಸ್ಕೃತಿ ಆಚಾರ ವಿಚಾರ ಎಲ್ಲವೂ ವೈವಿಧ್ಯಮಯ. ಅದೆಲ್ಲದರ ಒಟ್ಟು ರಚನೆಯ ಭೂ ಪ್ರದೇಶವೇ ಭಾರತ ಎಂಬ ಸಾರ್ವಭೌಮ ಪ್ರಜಾಪ್ರಭುತ್ವ ರಾಷ್ಟ್ರ.

ಹಾಗಾದರೆ ಏನಿದು ಜೊಡೋ.....ಅದರ ಅವಶ್ಯಕತೆ ಇದೆಯೇ…? ಎಂದಿನಂತೆ ಕಾಂಗ್ರೇಸ್ ಬಿಜೆಪಿಗಳ ನಡುವೆ ಜೋಡೋ ತೋಡೋ ಸಮರ್ಥನೆ ಮತ್ತು ಆರೋಪಗಳು ಪ್ರತಿನಿತ್ಯ ನಡೆಯುತ್ತಲೇ ಇದೆ. ಕಾಂಗ್ರೇಸ್ ನ‌ ಸಿದ್ದಾಂತಗಳು ಅವರ ಅತಿಯಾದ ಮುಸ್ಲಿಂ ತುಷ್ಟೀಕರಣ ಭಾರತವನ್ನು ಮತ್ತೊಮ್ಮೆ ವಿಭಜಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ಮತ್ತು ಸಂಘ ಪರಿವಾರದವರು ಆರೋಪಿಸುತ್ತಾರೆ ಮತ್ತು ಅವರನ್ನು ದ್ವೇಷಿಸುತ್ತಾರೆ.

ಹಾಗೆಯೇ ಬಿಜೆಪಿಯ ಹಿಂದುತ್ವವಾದ ಮತ್ತು ಮುಸ್ಲಿಂ ದ್ವೇಷ ಈ ದೇಶವನ್ನು ಮತ್ತೊಮ್ಮೆ ವಿಭಜಿಸುವುದು ನಿಶ್ಚಿತ ಎಂದು ಕಾಂಗ್ರೇಸ್ ಮತ್ತು ಜಾತ್ಯಾತೀತ ಶಕ್ತಿಗಳು ‌ಬಿಜೆಪಿಯನ್ನು ಸಂಘ ಪರಿವಾರವನ್ನು ವಿರೋಧಿಸುತ್ತಾರೆ ಮತ್ತು ದ್ವೇಷಿಸುತ್ತಾರೆ. ಅಂದರೆ ಎರಡೂ ವರ್ಗಗಳ ಮೂಲ ಆಶಯ ಭಾರತದ ಐಕ್ಯತೆ ಎಂದಾಯಿತು. ಅದನ್ನು ಮತ್ತೊಮ್ಮೆ ವಿಭಜಿಸುವ ಆಸಕ್ತಿ ಇಬ್ಬರಿಗೂ ಇಲ್ಲ. ಆದರೆ ಅದನ್ನು ಸಾಧಿಸುವ ಮಾರ್ಗಗಳ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳು ಇವೆ. ಅಂದರೆ ಭಾರತ್ ಜೋಡೋ ಒಂದು ಉತ್ತಮ ಪರಿಕಲ್ಪನೆ ಮತ್ತು ಆಶಯ. ಆದರೆ ಅದರ ಕಾರ್ಯರೂಪದ ಬಗ್ಗೆ ಮಾತ್ರ ಕೆಲವರಿಂದ ರಾಜಕೀಯ ವಿರೋಧ....

ಸರಳವಾಗಿ ಹೇಳುವುದಾದರೆ ಈ ಭಾರತ್ ಜೋಡೋ ಎರಡು ಸಿದ್ದಾಂತಗಳ, ಎರಡು ಧರ್ಮಗಳ ಎರಡು ಪಕ್ಷಗಳ ರಾಜಕೀಯ ಮತ್ತು ಅಧಿಕಾರ ಸಂಘರ್ಷದ ಪರಿಣಾಮ ಮೂಡಿದ ಪರಿಕಲ್ಪನೆ. ಆದರೆ ಯಾರೇ ಮಾಡಿದರು ಇದು ಸಾಮಾನ್ಯ ಜನರು ಬೆಂಬಲಿಸಬಹುದಾದ ಅಭಿಯಾನ. ಬದ್ದ ದ್ವೇಷದ ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು ಹೊರತುಪಡಿಸಿ ಸಾಮಾನ್ಯ ಜನ ತಮ್ಮ ಮತ ಚಲಾವಣೆಯ ಸ್ವಾತಂತ್ರ್ಯ ಉಳಿಸಿಕೊಂಡು ನಮ್ಮದೇ ದೇಶದ ಒಬ್ಬ ವ್ಯಕ್ತಿ ಇಡೀ ಭಾರತವನ್ನು ಸಾಮಾಜಿಕವಾಗಿ ಒಂದು ಮಾಡುವ ಪ್ರಯತ್ನ ಮಾಡುವಾಗ ಅದನ್ನು ಪಕ್ಷಾತೀತವಾಗಿ ಬೆಂಬಲಿಸಿದರೆ ನಾವು ರಾಜಕೀಯ ಪಕ್ಷದ ಒಂದು ಭಾಗವಾಗಬಹುದು ಎಂಬ ಅನುಮಾನ ಕಾಡುತ್ತದೆಯೇ ? ಎಲ್ಲಾ ವಿಷಯಗಳನ್ನು ರಾಜಕೀಯ ಎಂಬ ಕಾರಣದಿಂದ ನಾವು ತಟಸ್ಥವಾಗಿ ಉಳಿದರೆ ವ್ಯವಸ್ಥೆ ದುಷ್ಟರ ಆಟದ ಮೈದಾನವಾಗಿ ಮತ್ತಷ್ಟು ಹದಗೆಡುವುದಿಲ್ಲವೇ ?

ಚುನಾವಣಾ ಸಂದರ್ಭದ ನಮ್ಮ ಮತ ಚಲಾಯಿಸುವ ಹಕ್ಕು ಮತ್ತು ಸ್ವಾತಂತ್ರ್ಯ ಉಳಿಸಿಕೊಂಡು ಈ ಒಂದು ಪರಿಕಲ್ಪನೆಗೆ ನೇರವಾಗಿ ಅಥವಾ ನೈತಿಕವಾಗಿ ಬೆಂಬಲಿಸುವ ಮುಖಾಂತರ ಈಗಿನ ಭಾರತೀಯ ಸಮಾಜದ ಪ್ರಕ್ಷುಬ್ಧ ಸಾಮಾಜಿಕ ವಾತಾವರಣ ಸ್ವಲ್ಪ ತಿಳಿಯಾಗಲು ನಾವು ಸಹ ಸಣ್ಣ ಕೊಡುಗೆ ಕೊಡುವ ಅವಕಾಶ ಉಪಯೋಗಿಸಿಕೊಳ್ಳಬಹುದೇ ಎಂಬುದನ್ನು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ವಿವೇಚನೆಯನ್ನು ನಿಮಗೇ ಬಿಡುತ್ತಾ....

ಈ ರೀತಿಯ ಒಳ್ಳೆಯ ಪರಿಕಲ್ಪನೆಗಳು ಸಾರ್ವಜನಿಕವಾಗಿ ಕಾಂಗ್ರೇಸ್ ಬಿಜೆಪಿ ಕಮ್ಯುನಿಸ್ಟ್ ಬಿಎಸ್ಸಿ ಎಎಪಿ ಮುಂತಾದ ಯಾರೇ ಮಾಡಿದರೂ ಕರ್ನಾಟಕದ ಪ್ರಬುದ್ಧ ಮನಸ್ಸುಗಳ ಅಧಿಕಾರ ಪ್ರಶಸ್ತಿ ಸನ್ಮಾನಗಳ ಸ್ವಾರ್ಥವಿಲ್ಲದೇ ಬೆಂಬಲಿಸಬಹುದು. ಏಕೆಂದರೆ ಭಾರತವನ್ನು ಒಂದು ಬಲಿಷ್ಠ ಪ್ರಜಾಪ್ರಭುತ್ವ ದೇಶವಾಗಿ ಮಾಡಬೇಕಾದರೆ ಅದು ಯಾವುದೋ ಒಂದು ಪಕ್ಷ ಸಂಘ ಸಿದ್ಧಾಂತಗಳಿಂದ ಸಾಧ್ಯವಿಲ್ಲ. ಎಲ್ಲರೂ ತಮ್ಮ ಅಧಿಕಾರದಾಹದ ಚುನಾವಣಾ ಸಂದರ್ಭದ ದ್ವೇಷ ಅಸೂಯೆಯ ಜಿದ್ದಾಜಿದ್ದಿ ಹೋರಾಟಗಳನ್ನು ಕೇವಲ ಚುನಾವಣಾ ಕಾಲದ ಒಂದು ತಿಂಗಳಿಗೆ ಸೀಮಿತಗೊಳಿಸಿ ಉಳಿದ ಎಲ್ಲಾ ಸಮಯದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಭಾರತ್ ಜೊಡೋ ಕಾರ್ಯಕ್ರಮಕ್ಕೆ ಅರ್ಥವಿರುತ್ತದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಭಾರತ್ ತೊಡೋ ನಿಶ್ಚಿತ. ಎಚ್ಚರಿಕೆ...

ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗಿನ ಈ ಭಾರತ್ ಜೋಡೋ ಪಾದಯಾತ್ರೆಯ ಪರಿಕಲ್ಪನೆ  ಸಾಮಾಜಿಕವಾಗಿ ಒಂದು ಒಳ್ಳೆಯ ಪರಿಣಾಮ ಬೀರುತ್ತದೆ. ಹಾಗೆಯೇ ವ್ಯಕ್ತಿಗತವಾಗಿ ಸುಮಾರು ‌3500 ಕಿಲೋಮೀಟರ್ ಗಳ ಸುಮಾರು 150 ದಿನಗಳ ಪಾದಯಾತ್ರೆ ರಾಹುಲ್ ಗಾಂಧಿ ಮತ್ತು ತಂಡದವರ ದೈಹಿಕ ಸಾಮರ್ಥ್ಯ, ಮಾನಸಿಕ ಸ್ಥಿಮಿತತೆ, ತಾಳ್ಮೆ, ಭೌಗೋಳಿಕ ತಿಳಿವಳಿಕೆ, ದೇಹ ಮತ್ತು ಮನಸ್ಸುಗಳ ದಂಡನೆಯಿಂದ ಸಿಗಬಹುದಾದ ಪ್ರಯೋಜನ, ಜನರ ಒಡನಾಟದಿಂದ ದೊರೆಯಬಹುದಾದ ಸಮಸ್ಯೆಗಳ ಅರಿವು, ಸ್ವಲ್ಪ ಮಟ್ಟಿಗೆ ನಿರ್ಲಿಪ್ತತೆ, ಸಾಧನೆಯ ತೃಪ್ತಿ ಎಲ್ಲವೂ ಸಿಗುತ್ತದೆ. ಮುಂದೊಮ್ಮೆ ಭಾರತದ ಪ್ರಧಾನ ಮಂತ್ರಿಯಾಗುವ ಸಾಧ್ಯತೆ ಇರುವ ಮತ್ತು ಆ ಸ್ಪರ್ಧೆಯಲ್ಲಿ ಈ ಕ್ಷಣದಲ್ಲಿ ಎರಡನೇ ಸ್ಥಾನದಲ್ಲಿರು ವ್ಯಕ್ತಿಯೊಬ್ಬರು ಭಾರತವನ್ನು ನೆಲಮಟ್ಟದಿಂದ ಅರಿಯುವ ಪ್ರಯತ್ನವಾಗಿ ಸಹ  ಸ್ವಾಗತಾರ್ಹ. ರಾಜಕೀಯವಾಗಿ ಅವರ ಮೇಲಿರುವ ಇನ್ನೂ ಅಪ್ರಬುದ್ದ ಎಂಬ ಆರೋಪಕ್ಕೆ ಉತ್ತರವಾಗಿ ಪ್ರಬುದ್ಧತೆ ಹೊಂದಲು ಸಹ ಈ ಯಾತ್ರೆ ಉಪಯೋಗವಾಗಬಹುದು. ಏನೇ ಆಗಲಿ ಅಂತಿಮವಾಗಿ ಈ ಯಾತ್ರೆಯನ್ನು ಬೆಂಬಲಿಸುವ ಅಥವಾ ನಿರ್ಲಕ್ಷಿಸುವ ಅಥವಾ ತಿರಸ್ಕರಿಸುವ‌ ಅಥವಾ ವಿರೋಧಿಸುವ ನಿಮ್ಮ ಎಲ್ಲಾ ಸ್ವಾತಂತ್ರ್ಯ ಗೌರವಿಸುತ್ತಾ… 

ರಾಷ್ಟ್ರದ ಭವಿಷ್ಯದ ಹಿತಾಸಕ್ತಿಯಿಂದ ತುಂಬಾ ಆಳವಾಗಿ ವಿವೇಚನೆಯಿಂದ ಯೋಚಿಸಿ ನಿಮ್ಮ ನಿರ್ಧಾರ ಕೈಗೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತಾ....ಭಾರತದ ಎಲ್ಲರೂ ರಾಗ ದ್ವೇಷ ಅಸೂಯೆಗಳನ್ನು ಮೀರಿ ಪ್ರೀತಿ ಸ್ನೇಹ ಸಂಯಮ ಸೌಹಾರ್ದ ಸಹಕಾರ ಮನೋಭಾವದಿಂದ ಆತ್ಮಸಾಕ್ಷಿಯಾಗಿ ವರ್ತಿಸಲಿ ಎಂದು ಆಶಿಸುತ್ತಾ.......

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ