ಭಾರತ ಎಂಬುದು ಒಂದು ಪ್ರೀತಿಯ ಮರ...

ಭಾರತ ಎಂಬುದು ಒಂದು ಪ್ರೀತಿಯ ಮರ...

ಕಾರ್ಗಿಲ್ ಯುದ್ಧ- ಮೇ 3 - ಜುಲೈ ‌26 - 1999, ಭಾರತದ ಜಯ - ಪಾಕಿಸ್ತಾನದ ಸೋಲು - ಪಾಕಿಸ್ತಾನದ್ದೇ ಕುತಂತ್ರ… ಆದರೆ ಇದು ವಿಜಯೋತ್ಸವವೇ ಅಥವಾ ಹುತಾತ್ಮ ಜೀವಗಳ ಆಶ್ರುತರ್ಪಣವೇ? ಸತ್ತಿದ್ದು ಮನುಷ್ಯರಾಗಿದ್ದು ಬದುಕಲು ಸೈನಿಕ ಎಂಬ ದೇಶ ಸೇವೆಯ ವೃತ್ತಿ ಆರಿಸಿಕೊಂಡ ಭಾರತ ಮತ್ತು ಪಾಕಿಸ್ತಾನದ ಅಮಾಯಕ ಸೈನಿಕರು ಜೊತೆಗೆ ದಾರಿ ತಪ್ಪಿ ಭಯೋತ್ಪಾದಕರಾದವರೂ ಸೇರಿದ್ದರು.

ಪರ್ವೇಜ್ ಮುಷರಫ್ ಎಂಬ ವ್ಯಕ್ತಿಯ ತೆವಲಿಗೆ ಸಾವಿರಾರು ಜೀವಗಳ ಬಲಿ. ಆಕ್ರಮಣ ಮಾಡಿದವರೂ, ರಕ್ಷಣೆಗೆ ಹೋರಾಡಿದವರು ಇಬ್ಬರೂ ಹತ್ಯೆಗೊಳಗಾದರು. ಗೌರವ ಪೂರ್ವಕವಾಗಿ ಸತ್ತ ಸೈನಿಕರನ್ನು ಹುತಾತ್ಮರು ಎಂದು ಎರಡೂ ದೇಶದ ಜನ ಕರೆಯಬಹುದು. ಆದರೆ ಅವರನ್ನು ಮತ್ತೆ ಮರಳಲಾಗದ ಲೋಕಕ್ಕೆ ನಾವೇ ಕಳುಹಿಸಿದೆವು. ಭಾರತೀಯರು ಇದನ್ನು ಸಂಭ್ರಮದಿಂದ ವಿಜಯೋತ್ಸವ ಆಚರಿಸುತ್ತೇವೆ. ಪಾಕಿಸ್ತಾನಿಯರು ಇದನ್ನು ಮರೆಯಲು ಯತ್ನಿಸುತ್ತಾರೆ. ಆದರೆ ಆ ಘಟನೆಯಲ್ಲಿ ಸತ್ತ ಯೋದರ ತಂದೆ, ತಾಯಿ, ಮಗ, ಮಗಳು, ಅಣ್ಣ, ತಂಗಿ, ತಮ್ಮ, ಗೆಳೆಯ ಮುಂತಾದವರು ನೆನಪಿನ ನೋವಿನಿಂದ ನರಳುತ್ತಾರೆ - ಮುದುಡುತ್ತಾರೆ. 

ಮಹಾಭಾರತದಲ್ಲಿ ವ್ಯಾಸರು ತುಂಬಾ ಸೂಕ್ಷ್ಮವಾಗಿ ಮತ್ತು ಮಾರ್ವಿಕವಾಗಿ ಇದನ್ನು ಚಿತ್ರಿಸಿದ್ದಾರೆ. ಯುದ್ಧವನ್ನು ಸಂಪೂರ್ಣ ಗೆದ್ದ ಪಾಂಡವರು ಅದರ ಸಾವು ನೋವಿನ  ಭೀಕರತೆಗೆ ಮನನೊಂದು ವೈರಾಗ್ಯದಿಂದ ತಮ್ಮ ಉತ್ತರಾಧಿಕಾರಿಗಳಿಗೆ ರಾಜ್ಯವನ್ನು ಒಪ್ಪಿಸಿ ತೀರ್ಥಯಾತ್ರೆಗೆ ( ಸ್ವರ್ಗಕ್ಕೆ ) ಹೊರಡುತ್ತಾರೆ. ಅವರು ಆ ಯುದ್ದದ ವಿಜಯವನ್ನು ಸಂಭ್ರಮಿಸುವುದಿಲ್ಲ. ಏಕೆಂದರೆ....

ಯುದ್ಧ ಒಂದು ಘರ್ಷಣೆ,

ಯುದ್ಧ ಒಂದು ಸಾವಿನ ಆಟ,

ಯುದ್ಧ ಒಂದು ದುರಂತ,

ಯುದ್ಧ ಒಂದು ಅಹಂಕಾರ,

ಯುದ್ಧ ಒಂದು ದುರಾಸೆ,

ಯುದ್ಧ ಒಂದು ಪಾಠ,

ಯುದ್ಧ ಒಂದು ಅನುಭವ,

ಯುದ್ಧ ಒಂದು ರಕ್ಷಣಾ ವ್ಯೂಹ,

ಯುದ್ಧ ಒಂದು ಅನಿವಾರ್ಯ ಕರ್ತವ್ಯ,

ಸಂಭ್ರಮಕ್ಕಿಂತ ಸಹಾನುಭೂತಿಯೇ ಹೆಚ್ಚು ಪರಿಣಾಮಕಾರಿ.

ಯುದ್ಧ ಮಾಡಿದವರು ನಾವಲ್ಲ,

ಯುದ್ಧ ಗೆದ್ದವರು ನಾವಲ್ಲ,

ಅದು ಸೈನಿಕರು.

ನಾವೇನಿದ್ದರೂ ಅದರ ಫಲಾನುಭವಿಗಳು ಮಾತ್ರ. ದುಷ್ಟ ಪರ್ವೇಜ್ ಮುಷರಫ್ ಎಂಬುವವನ ಅಧಿಕಾರ ದಾಹಕ್ಕೆ, ಶಾಶ್ವತ ಗಾಯಗಳಾದ, ಶಾಶ್ವತ ಶವಗಳಾದ ಪಾಕಿಸ್ತಾನ ಮತ್ತು ಭಾರತದ ಸೈನಿಕರನ್ನು, ಅವರ ಪ್ರೀತಿ ಪಾತ್ರರನ್ನು ಮೌನದಿಂದ ನೆನೆಯುತ್ತಾ...

ಸತ್ತವರು ಭೂಮಿಯ ಮೇಲಿನ ಮನುಷ್ಯ ಪ್ರಾಣಿಗಳು...ಉಳಿದದ್ದೆಲ್ಲಾ ಅವನ ಭ್ರಮೆ ಮತ್ತು ಸ್ವಾರ್ಥ...ಮನುಷ್ಯ ಕುಲಂ ತಾನೊಂದು ವಲಂ... ವಿಶ್ವ ಮಾನವ ಪ್ರಜ್ಞೆಯೇ ನಮ್ಮನ್ನು ವಿಶಾಲತೆಯೆಡೆಗೆ - ನೆಮ್ಮದಿಯೆಡೆಗೆ - ಬದುಕಿನ ‌ಸಾರ್ಥಕತೆಯೆಡೆಗೆ ಸಾಗುವಂತೆ ಮಾಡುತ್ತದೆ.

ಹೌದು ಹೇಳಬಹುದು....ಭಾರತ ಗೆದ್ದಿತು, ದುಷ್ಟ ಪಾಕಿಸ್ತಾನ ಸೋತಿತು. ಅದರ ನೆನಪಿನಲ್ಲಿ ಸಂಭ್ರಮ ಆಚರಿಸಿ. ಅದಕ್ಕೆ ಸಾಕಷ್ಟು ಜನರು ಚಪ್ಪಾಳೆ ಹೊಡೆಯಬಹುದು. ಆದರೆ ಈ ದಿನದ ನೆನಪುಗಳು ಸಾರ್ಥಕವಾಗುವುದು  ಮುಂದೆ ಯುದ್ದವಾಗದಂತೆ ತಡೆದು ಸೈನಿಕರು ಸಾಯದಂತೆ ತಡೆಯುವ ಮಾರ್ಗಗಳ ಹುಡುಕಾಟದಲ್ಲಿ ಮಾತ್ರ. 

ದೇಶದ ರಕ್ಷಣೆ ಬಹಳ ಮುಖ್ಯ. ಇದೇ ಬಹುದೊಡ್ಡ ಸತ್ಯ. ಅದಕ್ಕೆ ಬಲಶಾಲಿಗಳಾಗಬೇಕು ನಿಜ.‌ ಆದರೆ ಯಾರು ಬಲಶಾಲಿಗಳು, ಎಷ್ಟು ಬಲಶಾಲಿಗಳು, ಯಾವುದರಲ್ಲಿ ಬಲಶಾಲಿಗಳು, ಆ ಬಲಶಾಲಿಗಳು ಎಷ್ಟು ಶಾಶ್ವತ ಎಂಬ ಕಾಡುವ ಪ್ರಶ್ನೆಗೆ... ಒಂದು ಮರಕ್ಕಿಂತ ಮತ್ತೊಂದು ‌ದೊಡ್ಡ ಮರ ಬೆಳೆಯುತ್ತಲೇ ಇರುತ್ತದೆ. ಪ್ರತಿ ಮರವೂ ತಾನೇ ಬಲಶಾಲಿ ಎಂದು ಕೊಳ್ಳುತ್ತದೆ. ಆದರೆ ದ್ವೇಷದ ಮರ ತನ್ನ ಅಹಂ ನಿಂದಲೇ ನಾಶವಾಗುತ್ತದೆ. ಪ್ರೀತಿಯ ಮರ ಬೆಳೆಯುತ್ತಲೇ ಇರುತ್ತದೆ...ಭಾರತ ಎಂಬುದು ಒಂದು ಪ್ರೀತಿಯ ಮರ......

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ