ಭಾರತ - ಒಂದು ಮರು ಶೋಧನೆ

ಭಾರತ - ಒಂದು ಮರು ಶೋಧನೆ

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಹಂಜ್
ಪ್ರಕಾಶಕರು
ಶ್ರೀ ರಾಜೇಂದ್ರ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್, ಶಿವರಾಂಪೇಟೆ, ಮೈಸೂರು
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೨

ಭಾರತದ ಚರಿತ್ರೆ ಎಡ-ಬಲಗಳ ಅತಿರೇಕದ ನಡುವೆ ಸಿಕ್ಕು ತತ್ತರಿಸಿದೆ. ನಿರ್ಮಲ ಚಿತ್ತದಿಂದ, ವಸ್ತುನಿಷ್ಟವಾಗಿ, ಕಲೆ, ಸಾಹಿತ್ಯ ಚರಿತ್ರೆಗಳನ್ನೆಲ್ಲ ಪೃಥಕ್ಕರಿಸಿ ಸತ್ಯಶೋಧನೆಗೆ ತೊಡಗಬೇಕೆಂಬ ಆದ್ಯತೆಯನ್ನು ಬಹುತೇಕರು ಮರೆತು, ತಾವು ನಂಬಿದ ಸಿದ್ಧಾಂತಕ್ಕೆ ಆಕರಗಳನ್ನು ಹುಡುಕಿದ್ದಾರೆ ಅಥವಾ ಜೋಡಿಸಿದ್ದಾರೆ. ಭಾರತದಂತ ಬಹುಮುಖಿ ಸಂಸ್ಕೃತಿಯ ದೇಶವನ್ನು ಕುರಿತು ಅಧ್ಯಯನ ಮಾಡುವಾಗ ಎಷ್ಟು ವ್ಯವಧಾನವಿದ್ದರು ಅದು ಅಲ್ಪವೇ. ವ್ಯವಧಾನದ ಜೊತೆಗೆ ಬಹುಜ್ಞಾತ ವ್ಯುತ್ಪತ್ತಿ ಹಾಗೂ ಚಿಕಿತ್ಸ ಬುದ್ಧಿಗಳು ಸಮ್ಮಿಳತಗೊಂಡಾಗ ಮಾತ್ರ ಭಾರತದ ಚರಿತ್ರೆಯನ್ನು ಸರಿಯಾಗಿ ಅರಿಯಬಹುದು. ಇಲ್ಲಿ ಚರಿತ್ರೆಯನ್ನು ಆಧುನಿಕ ಪರಿಕಲ್ಪನೆಯನ್ನು ಶೋಧಿಸುವವನಿಗೆ ಒಂದು ಮರುಭೂಮಿಯಾಗಿ ಕಾಣುತ್ತದೆ. ಇಲ್ಲ ದಟ್ಟ ವಿಪಿನವಾಗಿರುತ್ತದೆ. ಹಾಗೂ ಇಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ವಿಷಯಗಳು ಪುರಾಣೀಕರಣಗೊಂಡಿದೆ. ಧರ್ಮಗ್ರಂಥಗಳು ಆಯಾ ಕಾಲಿನ ನಾಗರಿಕ ಸಂಹಿತೆಗಳನ್ನು ತಿಳಿಸುತ್ತವೆ.

'ಭಾರತ-ಒಂದು ಮರುಶೋಧನೆ' ಕೃತಿ ಸಾವಧಾನದ ಬೆನ್ನನ್ನೇರಿದ ಭೃಂಗದಂತಿದೆ. ಭೃಂಗಕ್ಕೆ ಸುವಾಸನೆಯನ್ನು ಅರಸಿ, ಅರಿಯುವ ಚೈತನ್ಯದ ಜೊತೆಗೆ ಅವಸರವಿಲ್ಲದೆ ಸಾವಧಾನವಾಗಿರುವುದು ಮುಖ್ಯ. ಈ ಕೃತಿಯ ವಿಶೇಷ ಇರುವುದು ಅಂತಹ ಸಾವಧಾನದಲ್ಲಿ . ಶ್ರೀ ರವಿ ಹಂಜ್ ಇತಿಹಾಸವನ್ನು ಅರಿಯುವ ಭಾವಭೃಂಗರು. ಇದನ್ನು ಈ ಕೃತಿಯ ಓದಿನಿಂದ ತಿಳಿಯಬಹುದು. ಭಾರತ ಇತಿಹಾಸವನ್ನು ಸರಿದಿಕ್ಕಿನಿಂದ ಪ್ರವೇಶಿಸಲು ಈ ಕೃತಿ ಒಂದು ತೋಳುಗಂಬ. ಇದೊಂದು ಕೈಪಿಡಿಕೋಶ. ಈ ಕೈಪಿಡಿಯನ್ನು ಇಟ್ಟುಕೊಂಡು ಬೃಹತ್ ಗ್ರಂಥ ರಚಿಸಬಹುದು. ಇದು ಇತಿಹಾಸ ಕೃತಿಯಾದರು ರವಿ ಹಂಜ್ ಅವರ ಬರವಣಿಗೆಯ ಶೈಲಿ ಪುರಾಣ ಕಥನ ಮಾದರಿಯಾಗಿದೆ. ನಿಜಕ್ಕೂ ಈ ಕೃತಿ ಒಂದು ಬೆಳಕಿನ ಕಿಂಡಿ. ಎಲ್ಲಾ ಭಾರತೀಯರೂ ತಮ್ಮ ಮೂಲವನ್ನು ಅರಿಯಲು ಓದಲೇಬೇಕಾದ ಕೃತಿ. ಎಂದು ಸಾಹಿತಿ ಡಾ. ನಂದೀಶ ಹಂಚೆ ಇವರು ಅಭಿಪ್ರಾಯ ಪಟ್ಟಿದ್ದಾರೆ.