ಭಾರತ-ಚೀನಾ ಗಡಿಯ ಗಲ್ವಾನ್ ಕಣಿವೆ ಹಾಗೂ ನದಿಗೆ ಆ ಹೆಸರು ಬಂದದ್ದು ಹೇಗೆ?
ಸುಮಾರು ೪ ದಶಕಗಳ ಬಳಿಕ ಭಾರತ-ಚೀನಾ ಗಡಿ ಪ್ರದೇಶ ಪ್ರಕ್ಷುಬ್ಧವಾಗಿದೆ. ಭಾರತದ ೨೦ ವೀರ ಯೋಧರು ಹುತಾತ್ಮರಾಗಿದ್ದಾರೆ. ೧೯೬೨ರಲ್ಲೇ ಭಾರತ-ಚೀನಾ ಯುದ್ಧವಾಗಿತ್ತು. ನಂತರದ ದಿನಗಳಲ್ಲಿ ಬಹುತೇಕ ಶಾಂತಿ ನೆಲೆಸಿದಂತಿದ್ದರೂ ಅಲ್ಲಿನ ಪರಿಸ್ಥಿತಿ ಯಾವಾಗಲೂ ಬೂದಿ ಮುಚ್ಚಿದ ಕೆಂಡದಂತೇ ಇತ್ತು. ಚೀನಾ ಒಳಗೊಳಗೇ ಕುದಿಯುತ್ತಲೇ ಇತ್ತು. ಕೆಲವೊಮ್ಮೆ ಅರುಣಾಚಲ ಪ್ರದೇಶದ ಭೂ ಭಾಗ ತನ್ನದೆನ್ನುತ್ತಿತ್ತು. ಕೆಲವು ಸಲ ಸಿಕ್ಕಿಂ ಬಳಿಯ ಗಡಿಯ ಕ್ಯಾತೆ ತೆಗೆಯುತ್ತಲೇ ಇತ್ತು. ಈಗ ಲಡಾಕ್ ಪ್ರದೇಶದ ಗಲ್ವಾನ್ (Galwan) ಕಣಿವೆಯ ಪ್ರದೇಶಲ್ಲಿರುವ ಭೂಪ್ರದೇಶಗಳು ತನ್ನದೆನ್ನುವ ಮೂರ್ಖವಾದ ಮಾಡುತ್ತಿದೆ. ಭಾರತವು ಚೀನಾ ಜೊತೆಗೆ ಸುಮಾರು ೩೦೦೦ ಕಿ.ಮೀ.ಗೂ ಅಧಿಕ ಗಡಿಯನ್ನು ಹಂಚಿಕೊಂಡಿದೆ.
ಲಡಾಕ್ ನ್ನು ಕೇಂದ್ರಾಡಳಿತ ಪ್ರದೇಶ ಎಂದು ಭಾರತವು ಘೋಷಿಸಿದ ಬಳಿಕ ಅಲ್ಲಿ ತೀವ್ರಗತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕಣಿವೆ ಪ್ರದೇಶಗಳಲ್ಲಿ ರಸ್ತೆಗಳು ನಿರ್ಮಾಣವಾಗುತ್ತಿವೆ. ಇದನ್ನು ನೋಡಲಾರದ ಚೀನಾವು ಈಗ ಈ ಭೂಭಾಗವು ತನ್ನದೆಂದು ಹೇಳಿ ಕೋಳಿ ಜಗಳ ಮಾಡುತ್ತಿದೆ. ಮೊನ್ನೆ ನಡೆದ ಹಲ್ಲೆಗಳು ಬಂದೂಕಿನಿಂದ ಮಾಡಿದವುಗಳಲ್ಲ. ೧೯೯೬ರ ಒಂದು ಒಪ್ಪಂದದಂತೆ ಭಾರತ-ಚೀನಾ ದೇಶಗಳ ಸೈನಿಕರು ಗಡಿಯನ್ನು ಕಾಯುವಾಗ ಬಂದೂಕು ಹಿಡಿಯುವಂತಿಲ್ಲ. ಯಾವುದೇ ದೇಶ ಮೊದಲ ಗುಂಡು ಹಾರಿಸುವಂತಿಲ್ಲ ಎಂದು ಒಪ್ಪಂದವಾಗಿದೆ. ಅದಕ್ಕಾಗಿಯೇ ಚೀನಾ ಸೈನಿಕರು ಬೆಟ್ಟದ ಮೇಲಿನ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತು ದೊಡ್ಡ ದೊಡ್ಡ ಕಲ್ಲು ಹಾಗೂ ಸಿಮೆಂಟ್ ನಿಂದ ಮಾಡಿದ ಸಲಾಖೆಗಳಿಂದ ನಮ್ಮ ಯೋಧರನ್ನು ಅನ್ಯಾಯವಾಗಿ ಕೊಂದರು. ಅಲ್ಲಿಯೇ ಹರಿಯುತ್ತಿದ್ದ ನದಿಗೆ ದೂಡಿ ಹಾಕಿದರು. ಕೊರೆಯುವ ಚಳಿಯಲ್ಲಿ ನಮ್ಮ ಸೈನಿಕರು ತಮ್ಮ ಜೀವವನ್ನು ದೇಶಕ್ಕಾಗಿ ಬಲಿದಾನ ಮಾಡಿದರು. ಇದು ಪೂರ್ವ ನಿಯೋಜಿತ ಕೃತ್ಯವೇ ಆಗಿತ್ತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಈ ಕಣಿವೆ ಹಾಗೂ ಅಲ್ಲಿ ಹರಿಯುತ್ತಿರುವ ನದಿಗಳಿಗೆ ಗಲ್ವಾನ್ ಎಂದು ಹೆಸರು ಯಾಕೆ ಬಂತು? ‘ಗುಲಾಮ್ ರಸೂಲ್ ಗಲ್ವಾನ್' ಎಂಬ ಅಪ್ರತಿಮ ಲಡಾಕಿ ಸಾಹಸಿ ಮತ್ತು ಸಂಶೋಧಕನ ಹೆಸರು ಇಲ್ಲಿಯ ನದಿಗೆ ಮತ್ತು ಕಣಿವೆಗೆ ಇಟ್ಟಿದ್ದಾರೆ. ಇಲ್ಲಿ ಹರಿಯುತ್ತಿರುವ ಈ ಗಲ್ವಾನ್ ನದಿ ಸಿಂಧೂ ನದಿಯ ಉಪನದಿ. ೧೯ನೇ ಶತಮಾನ (ಜನನ: ೧೮೭೮)ದಲ್ಲಿ ಬದುಕಿದ್ದ ಈ ರಸೂಲ್ ಗಲ್ವಾನ್ ಟಿಬೇಟ್ ಮತ್ತಿತರ ಹಲವಾರು ಪ್ರದೇಶಗಳಲ್ಲಿ ನಡೆದ ಶೋಧನೆಗಳ ಹಿಂದಿನ ಶಕ್ತಿ. ಯೂರೋಪ್ ದೇಶಗಳಾದ ಬ್ರಿಟನ್ , ಇಟಲಿ, ಫ್ರಾನ್ಸ್ ನಿಂದ ಬರುತ್ತಿದ್ದ ಹಲವಾರು ಮಂದಿ ಪ್ರವಾಸಿ ಸಂಶೋಧಕರಿಗೆ ಮಾರ್ಗದರ್ಶಕನಾಗಿದ್ದ. ರಸೂಲ್ ಗಲ್ವಾನ್ ರ ಮರಿ ಮೊಮ್ಮಗ ಬರೆದಿರುವಂತೆ ಗಲ್ವಾನ್ ಸಾಹಸವನ್ನು ಎಲ್ಲರೂ ಪ್ರಶಂಸಿಸುತ್ತಿದ್ದರು. ದುರ್ಗಮ ಬೆಟ್ಟಗಳ ಹಾಗೂ ಹರಿಯುತ್ತಿರುವ ನದಿಯ ಬಗ್ಗೆ ಗಲ್ವಾನ್ ಜ್ಞಾನ ಅಪರಿಮಿತವಾಗಿತ್ತು. ಭಾರತ ಮತ್ತು ಚೀನಾದ ಗಡಿ ಭಾಗದಲ್ಲಿ ಸುಮಾರು ೮೦ ಕಿ.,ಮೀ ಹರಿಯುವ ಈ ನದಿಗೆ ಗಲ್ವಾನ್ ಎಂದೂ ಅಲ್ಲಿರುವ ಕಣಿವೆ ಗಲ್ವಾನ್ ಕಣಿವೆ ಎಂದೂ ಹೆಸರಿಡಲಾಗಿದೆ. ಈ ನದಿ ಮುಂದಕ್ಕೆ ಹರಿದು ಸಿಂಧೂ ನದಿಯನ್ನು ಸೇರುತ್ತದೆ. ಈ ಅಪ್ರತಿಮ ಸಾಹಸಿಯು ೪೭ನೇ ವಯಸ್ಸಿನಲ್ಲೇ ಅಕಾಲ ಮರಣಕ್ಕೀಡಾಗುತ್ತಾರೆ. ಆದರೆ ಅವರ ಅಂದಿನ ಮಾರ್ಗದರ್ಶನ ಮತ್ತು ಸಾಹಸದಿಂದಾಗಿ ಈಗಲೂ ಗಲ್ವಾನ್ ಹೆಸರು ಅಜರಾಮರವಾಗಿದೆ.
ಭಾರತ- ಚೀನ ಗಡಿ ಭಾಗವು ಶಾಂತವಾಗಲಿ. ಏಕೆಂದರೆ ವಿಶ್ವದ ಎರಡು ಬಲಿಷ್ಟ ರಾಷ್ಟ್ರಗಳ ನಡುವೆ ಯುದ್ಧವನ್ನು ಮತ್ತು ಅದರ ಘೋರ ಪರಿಣಾಮವನ್ನು ಕಲ್ಪಿಸಲೂ ಅಸಾಧ್ಯ. ಯುದ್ಧದ ಕಾರ್ಮೋಡ ಚದುರಿ ನೆಮ್ಮದಿಯ ದಿನಗಳು ಬೇಗನೇ ಬರಲಿ ಎಂದು ನಾವು ಆಶಿಸೋಣ.
ಚಿತ್ರ ಕೃಪೆ: ಇಕನಾಮಿಕ್ ಟೈಮ್ಸ್