ಭಾರತ ದೇಶದ ಹೆಮ್ಮೆಯ ಹರಿಕಾರ : ಬಾಬಾ ಸಾಹೇಬ್
ಭಾರತ ದೇಶದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ತನ್ನ ಛಾಪನ್ನು ಒತ್ತಿದ ಮಹನೀಯರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಇವರನ್ನು ಮನದಾಳದಲ್ಲಿ ಅಚ್ಚಳಿಯದ ಧ್ರುವತಾರೆ ಎಂದರೂ ತಪ್ಪಾಗಲಾರದು. ಬಡವರ, ದೀನದಲಿತರ ಕಷ್ಟಕ್ಕೆ, ನೋವಿಗೆ ಧ್ವನಿಯಾದವರು. ಅಸ್ಪೃಶ್ಯತೆ ಹೋಗಲಾಡಿಸಲು ಬಹಳಷ್ಟು ಶ್ರಮಿಸಿದವರು. ಅವರ ಚಿಂತನೆಗಳ ಆಳ ಅಗಲ ಅರಿಯಲು ಅವರಿಗೆ ಮಾತ್ರ ಸಾಧ್ಯ ಎನ್ನಬಹುದು, ಅಂಥ ಮಹಾನ್ ಚಿಂತಕ, ಮುತ್ಸದ್ದಿ.
ಸಾಮಾಜಿಕ ನ್ಯಾಯದ ಪ್ರತಿಪಾದಕ. “ನಮ್ಮ ಪ್ರಗತಿ ನಮ್ಮ ಮನೆಯಿಂದಲೇ ಆರಂಭವಾಗಬೇಕು, ಆಗಬೇಕಾದರೆ ವಿದ್ಯೆ ಬೇಕೆಂದು ಸಾರಿದವರು” ಬಡವರ ದರಿದ್ರತನವು ಶ್ರೀಮಂತರ ಶ್ರೀಮಂತಿಕೆಯಲ್ಲಿ ಅಡಗಿದೆ, ಅದನ್ನು ಹೊರಗೆಳೆದರೆ ಮಾತ್ರ ಬಡತನದ ನಿರ್ಮೂಲನೆ ಆಗಬಹುದೆಂದರು. ಅಸಮಾನತೆ ದೂರವಾಗಬೇಕು. ಮಾನವ ಜನಾಂಗದ ಶೋಷಣೆ ತಪ್ಪಬೇಕು. ಸ್ವಾತಂತ್ರ್ಯ ಸಮಾನತೆ ಸಂರಕ್ಷಣೆ ಕಾನೂನಿನ ಚೌಕಟ್ಟಿನಲ್ಲಿ ಆದಾಗ ಎಲ್ಲವೂ ಸಾಧ್ಯ. ನಮ್ಮ ಸಂವಿಧಾನ ಅವರಿತ್ತ ಬೃಹತ್ ಆಲದಮರ. ಬಡತನದಲ್ಲಿ ಹುಟ್ಟಿ ಸಾಕಷ್ಟು ಶೋಷಣೆಗೆ ಒಳಗಾದವರು. ಸ್ವ ಅನುಭವ ಅವರನ್ನು ಎತ್ತರದ ಸ್ಥಾನಕ್ಕೇರಿಸಿತು.
ಆರ್ಥಿಕತೆ, ಕೃಷಿ, ಶೈಕ್ಷಣಿಕ ಕ್ಷೇತ್ರ ಪ್ರಗತಿಯನ್ನು ಸಾಧಿಸಬೇಕೆಂದು ಆ ನಿಟ್ಟಿನಲ್ಲಿ ಶ್ರಮಿಸಿದರು. ಭೂಮಿಯ ಒಡೆತನದ ಹಕ್ಕು ಅವರವರಿಗೆ ಸಿಗಲು ಹೋರಾಡಿದರು. ಸಾಮಾಜಿಕ ನ್ಯಾಯದ ಪರಿಕಲ್ಪನೆ ಸಂವಿಧಾನದಲ್ಲಿ ಇದ್ದರೂ, ಇಂದಿಗೂ ನೂರಕ್ಕೆ ನೂರು ಸಾಧಿಸಿಲ್ಲ. ಎಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು, ಮಹತ್ವ ನೀಡುವರೋ ಅಲ್ಲಿ ಪ್ರಗತಿ ಸಾಧ್ಯ ಎಂದವರು. ಬಡವರ, ದೀನರ ಅಭ್ಯುದಯಕ್ಕಾಗಿ ಸದಾ ಹೋರಾಡಿದ ಮಹಾಚಿಂತಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ದೇಶದ ಅನರ್ಘ್ಯ ರತ್ನ ರಾಷ್ಟ್ರೀಯ ನಾಯಕ.
ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ, ತನ್ನೊಂದಿಗೆ ರಾಜಕೀಯ ನಾಯಕರ ಗಡಣದ ಅಭಿಪ್ರಾಯಗಳ ಚಿಂತನ-ಮಂಥನ ನಡೆಸಿ ತಯಾರಿಸಿದ ಲಿಖಿತ ಸಂವಿಧಾನ ನಮ್ಮದಾಗಿದೆ. ತಾನು ಬೆಳೆದ ಪರಿಸರದ ಅನುಭವಗಳು, ಅವರನ್ನು ಎತ್ತರಕ್ಕೇರಿಸಿತು. ಭಾರತದ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ವ್ಯವಸ್ಥೆಯ ಅಸಮಾನತೆಗೆ ನೊಂದವರು. ಪ್ರತಿಭಾವಂತ, ನಿಷ್ಠಾವಂತ ಬಾಲಕನಾಗಿದ್ದ ಇವರು ಶ್ರದ್ಧೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಅನ್ಯಾಯಗಳನ್ನು ಖಂಡಿಸಿದರು. ಅಗಾಧ ಜ್ಞಾನವನ್ನು ಪಡೆದರು. ಸ್ವಾತಂತ್ರ್ಯ ಮತ್ತು ಸಮಾನತೆಯ ಬಗ್ಗೆ ಚೆನ್ನಾಗಿ ಅರ್ಥೈಸಿಕೊಂಡವರು.
ಭಾರತದ ಹೆಣ್ಣುಮಕ್ಕಳ ಸ್ಥಿತಿಗತಿಗಳನ್ನು ಅವಲೋಕಿಸಿ, ಸೂಕ್ತ ನಿರ್ಧಾರಕ್ಕೆ ಬಂದರು. ಹೆಣ್ಣು ಮಕ್ಕಳ ವಿದ್ಯೆ, ಗೌರವ, ಸ್ವಾಭಿಮಾನಕ್ಕೆ ಧಕ್ಕೆ ತರುವುದನ್ನು ನೇರನೇರ ಖಂಡಿಸಿದರು. ಮಾತನಾಡುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಬೇಕು, ಅದು ದೇವನ ಕೊಡುಗೆ. ಸಂವಿಧಾನದಲ್ಲಿ ಮಾತಿನ ಮತ್ತು ಪತ್ರಿಕಾ ಸ್ವಾತಂತ್ರ್ಯ ಕಲ್ಪಿಸಿದ ಮಹಾನುಭಾವರಿವರು. ಇವರ ಆದರ್ಶಗಳು ಕಿರಿಯರಿಗೆ ಮಾರ್ಗದರ್ಶನ, ಆದರೆ ಹರಿಯುತಿರುವ ದಿಕ್ಕನ್ನು ಅವಲೋಕಿಸಿದಾಗ, ನಮ್ಮ ಮುಖವನ್ನು ನಾವೇ ಕನ್ನಡಿಯಲ್ಲಿ ನೋಡುವಂತಾಗಿದೆ.
ಪ್ರಜಾಪ್ರಭುತ್ವ ಎಂಬುದು ಒಂದು ದೊಡ್ಡ ಸಾಗರ, ಅದರ ಉಳಿವು ಅಳಿವು ನಮ್ಮ ಕೈಯಲ್ಲಿಯೇ ಅಡಗಿದೆ. ಸರಿಯಾದ ದಾರಿಯಲ್ಲಿ ಕೊಂಡೊಯ್ಯಬೇಕು. ಸಂವಿಧಾನದ ನಿರ್ಮಾತೃ,ದೂರದೃಷ್ಟಿಯ ಹರಿಕಾರ, ರಾಜಕೀಯ ಚೇತನ ಡಾ.ಬಿ. ಆರ್.ಅಂಬೇಡ್ಕರ್ ಅವರನ್ನು ಜನ್ಮದಿನದ ಶುಭ ಸಮಯದಲ್ಲಿ ಶುಭಾಶಯಗಳೊಂದಿಗೆ ನೆನೆಯೋಣ.
(ವಿವಿಧ ಮೂಲಗಳಿಂದ ಸಂಗ್ರಹ)
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ