ಭಾರತ ನಮ್ಮಿಂದ ನಿಧಾನವಾಗಿ ದೂರವಾದೀತು. ಎಚ್ಚರ…!
ಪ್ರೇಮಿಗಳ ದಿನ ಭಾರತದಲ್ಲಿ ಹಿಂದೂ ಮುಸ್ಲಿಂ ಪ್ರೀತಿಯ ದಿನವಾಗುವ ಸಾಧ್ಯತೆಗಳ ಬಗ್ಗೆ ಯೋಚಿಸುತ್ತಾ, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಜೀವನಶೈಲಿಯಲ್ಲಿ, ಭಾವೈಕ್ಯತೆ - ಸಾಮರಸ್ಯ ಎಂಬುದು ಮಾತುಗಳನ್ನು ಮೀರಿ ಕೃತಿಯಲ್ಲಿ ಬರಬೇಕಾದರೆ ಸಾಮಾನ್ಯರಾದ ನಾವು ಮಾಡಬಹುದಾದದ್ದು ಏನು? ಇವುಗಳ ನಡುವಿನ ಘರ್ಷಣೆಗೆ ಕಾರಣ ಏನು ? ಈ ಹಿಂಸೆ ನಿಲ್ಲಬಹುದೆ? ಮೂಲಭೂತವಾಗಿ ಇದು ಜನರ ಮಾನಸಿಕ ಸ್ಥಿತಿಗೆ ಸಂಬಂಧಿಸಿದ್ದು...
ಇದು ಧರ್ಮಗಳ ನಡುವಿನ ಯುದ್ಧ,
ಇದು ಮತಗಳ ನಡುವಿನ ಯುದ್ಧ,
ಇದು ಜನಾಂಗಗಳ ನಡುವಿನ ಯುದ್ಧ,
ಇದು ದೇವರುಗಳ ನಡುವಿನ ಯುದ್ಧ,
ಇದು ಧರ್ಮ ಗ್ರಂಥಗಳ ನಡುವಿನ ಯುದ್ಧ,
ಇದು ಪಕ್ಷಗಳ ನಡುವಿನ ಯುದ್ಧ,
ಇದು ಪ್ರದೇಶಗಳ ನಡುವಿನ ಯುದ್ಧ,
ಇದು ಅಧಿಕಾರ ಹಂಚಿಕೆಯ ನಡುವಿನ ಯುದ್ಧ,
ಇದು ಅಜ್ಞಾನದ - ಅನಾಗರಿಕತೆಯ ಯುದ್ಧ....
ಇದು ನಿಲ್ಲುವುದಾದರೂ ಹೇಗೆ?
ಕೆಲವರಲ್ಲಿ ಒಂದು ಅಭಿಪ್ರಾಯವಿದೆ. ನಮ್ಮ ವಿರೋಧಿಗಳಿಗೆ ಎರಡು ಭಾರಿಸಿದರೆ ಅವರು ಹೆದರಿ ಓಡಿ ಹೋಗುವರು ಎಂದು. ಅದು ಇಲ್ಲಿ ನಡೆಯುವುದಿಲ್ಲ. ಇದು ಮಕ್ಕಳ ಆಟವಲ್ಲ. ಧರ್ಮವೆಂಬ ಅಫೀಮಿನ ಜೊತೆ ಚೆಲ್ಲಾಟ. ಸಂಖ್ಯೆಗಳ ಆಧಾರದ ಮೇಲೆ ಇಲ್ಲಿ ಸೋಲು ಗೆಲುವು ನಿರ್ಧಾರವಾಗುವುದಿಲ್ಲ. ಕೆಲವೇ ಸಂಖ್ಯೆಯ ನಕ್ಸಲರನ್ನು ನಿರ್ನಾಮ ಮಾಡಲು ಸಾಧ್ಯವಾಗಿಲ್ಲ, ಅತ್ಯಾಚಾರಿಗಳನ್ನು ಕೊಲ್ಲಲು ಆಗಿಲ್ಲ, ಕಳ್ಳತನ ದರೋಡೆ ತಡೆಯಲು ಆಗಿಲ್ಲ, ಭ್ರಷ್ಟಾಚಾರ ನಿಲ್ಲಿಸಲು ಆಗಿಲ್ಲ, ಭಯೋತ್ಪಾದಕರ ನಾಶ ಸಾಧ್ಯವಾಗಿಲ್ಲ. ಕೆಲವೇ ಸಂಖ್ಯೆಯ ಬ್ರಿಟೀಷರು ಬೃಹತ್ ಭಾರತವನ್ನೇ ಆಕ್ರಮಿಸಿ ಹಲವಾರು ವರ್ಷ ಆಡಳಿತ ನಡೆಸಿದರು.
ಇಸ್ರೇಲ್ - ಶ್ರೀಲಂಕಾ ಮುಂತಾದ ಸಣ್ಣ ದೇಶಗಳ ಉದಾಹರಣೆ ಅಥವಾ ರಷ್ಯಾ ಚೀನಾದಂತ ಕಮ್ಯುನಿಸ್ಟ್ ದೇಶಗಳ ಉದಾಹರಣೆ ಈ ವಿಷಯದಲ್ಲಿ ಭಾರತಕ್ಕೆ ಖಂಡಿತ ಅನ್ವಯಿಸುವುದಿಲ್ಲ. ಭಾರತ ವಿಶಿಷ್ಟ ವೈವಿಧ್ಯತೆಗಳ ಅಗರ. ಈ ಕ್ಷಣದಲ್ಲಿ ಭಿನ್ನತೆಯಲ್ಲೂ ಏಕತೆ ಇಲ್ಲಿನ ವೈಶಿಷ್ಟ್ಯ. ಹಾಗಾದರೆ ಶಾಂತಿಗಾಗಿ ಮಾಡುವುದಾದರೂ ಏನು. ಕೈ ಚೆಲ್ಲಿ ಕೂರಬೇಕೆ ? ಬಂದದ್ದು ಅನುಭವಿಸಬೇಕೆ ? ನಾವು ಅಸಹಾಯಕರೇ ? ನೆನಪಿಡಿ, ಇದು ಬುದ್ದರ ನಾಡು, ಚಾಣಕ್ಯರ ನಾಡು, ಬಸವಣ್ಣರ ನಾಡು, ವಿವೇಕಾನಂದರ ನಾಡು, ಗಾಂಧಿಯವರ ನಾಡು, ಅಂಬೇಡ್ಕರ್ ಅವರ ನಾಡು, ಸುಭಾಷ್, ನೆಹರು, ಪಟೇಲ್, ಶಾಸ್ತ್ರೀ, ಇಂದಿರಾ, ವಾಜಪೇಯಿ, ಅಬ್ದುಲ್ ಕಲಾಮ್ ನಾಡು, ರಾಮ ಕೃಷ್ಣ ಎಂಬ ಅತ್ಯದ್ಭುತ ಪಾತ್ರಗಳನ್ನು ಸೃಷ್ಟಿಸಿದ ನಾಡು.
ಇಲ್ಲಿ ಎಲ್ಲದಕ್ಕೂ ಪರಿಹಾರವಿದೆ. ತ್ಯಾಗವಿದೆ, ಪ್ರೀತಿಯಿದೆ, ಸತ್ಯವಿದೆ, ಧೈರ್ಯವಿದೆ, ಶಕ್ತಿಯಿದೆ, ತಂತ್ರವಿದೆ, ಬುದ್ದಿವಂತಿಕೆಯಿದೆ, ಸಹಿಷ್ಣುತೆಯೂ ಇದೆ. ಅದನ್ನು ಅರಿತು ತಾಳ್ಮೆಯಿಂದ ಕುಳಿತು ಯೋಚಿಸಿದರೆ ಖಂಡಿತ ಈ ಹಿಂಸೆಗೆ ಪರಿಹಾರವಿದೆ. ಶುದ್ದತೆಗೆ, ಪ್ರಾಮಾಣಿಕತೆಗೆ ತನ್ನದೇ ಶಕ್ತಿಯಿದೆ. ಅದರ ಮುಂದೆ ಎಲ್ಲರೂ ತಲೆಬಾಗಲೇ ಬೇಕು. ದ್ವೇಷದಿಂದ, ಅಸೂಯೆಯಿಂದ, ಮುಖವಾಡದ ಮರೆಯಲ್ಲಿ, ಒಳಗೊಂದು ಹೊರಗೊಂದು ಮಾಡಿ ಲಾಲಿ ಪಾಪ್ ನೀಡಿದರೆ ಈ ಆಧುನಿಕ ಕಾಲದಲ್ಲಿ ಜನರಿಗೆ ಅರ್ಥವಾಗುವುದಿಲ್ಲವೇ ?
ಕದ್ದು ಮುಚ್ಚಿ ಹಾಲು ಕುಡಿಯುವ ಬೆಕ್ಕಿನಂತಿರಬಾರದು ಆಡಳಿತ. ನೇರಾ ನೇರಾ ಶುದ್ದ ಆಡಳಿತ ಮಾಡಿದರೆ ಅದನ್ನು ತಡೆಯಲು ಯಾವ ದೇವರಿಗೂ, ಯಾವ ಧರ್ಮದವರಿಗೂ ಸಾಧ್ಯವಿಲ್ಲ. ಹಿಂಸೆಯನ್ನು ದೇಶದ ಯಾರೇ ಮಾಡಲಿ. ರಕ್ಷಣೆಗಾಗಿ ಅವರ ಎದೆಯೊಳಗೆ ಗುಂಡು ಹೊಡೆಯುವುದು ಸರ್ಕಾರದ ಕರ್ತವ್ಯ ಮತ್ತು ಮೊದಲ ಆದ್ಯತೆ. ಹಾಗೆಯೇ ಯಾರೇ ಆಗಿರಲಿ ಭಾರತೀಯ ಪ್ರಜೆಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಸಹ ಸರ್ಕಾರದ ಜವಾಬ್ದಾರಿ. ನ್ಯಾಯ ಮತ್ತು ಸತ್ಯದ ಮುಂದೆ ಯಾವ ಧರ್ಮವೇ ಆಗಲಿ ತಲೆ ಬಾಗಲೇ ಬೇಕು. ಇಲ್ಲದಿದ್ದರೆ ಅವುಗಳನ್ನು ಧರ್ಮ ಎನ್ನಲು ಸಾಧ್ಯವಿಲ್ಲ. ಹಿಂಸೆ, ಆಕ್ರಮಣ, ದೌರ್ಜನ್ಯ ಮಾಡುವವರಿಗೆ ಧರ್ಮವೇ ಇಲ್ಲ. ಅವರು ಕೇವಲ ಕ್ರಿಮಿನಲ್ ಗಳು ಮಾತ್ರ.
ಚಾಣಕ್ಯನಿಗಿಂತ, ಮಹಾತ್ಮ ಗಾಂಧಿಗಿಂತ, ಅಂಬೇಡ್ಕರ್ ಗಿಂತ, ಕೃಷ್ಣನಿಗಿಂತ ಬುದ್ದಿವಂತರು ಬೇಕೆ. ಅವರಲ್ಲಿ ಇದಕ್ಕೆ ತಕ್ಕ ಉತ್ತರವಿದೆ. ಅದನ್ನು ಆಡಳಿತ ನಡೆಸುವವರು ಅರ್ಥಮಾಡಿಕೊಳ್ಳಬೇಕು. ವಿಷಯವನ್ನು ಭಾರತದ ಸಮಗ್ರ ದೃಷ್ಟಿಕೋನದಿಂದ ಪರಿಶೀಲಿಸಬೇಕು. ಮುಂದಿನ ಚುನಾವಣೆ ಗೆಲ್ಲುವುದು, ಅಧಿಕಾರ ಉಳಿಸಿಕೊಳ್ಳುವುದು, ವಿರೋಧಿಗಳನ್ನು ಸದೆಬಡಿಯುವುದು ನಿಮ್ಮ ಉದ್ದೇಶವಾದರೆ ಶಾಂತಿ ಅಭಿವೃದ್ಧಿ ಎಂಬುದು ಗಗನ ಕುಸುಮ ಮಾತ್ರ. ಕೊನೆಯದಾಗಿ ನೆನಪಿಡಿ. ಸಂವಿಧಾನದ ರಕ್ಷಣೆ. ದೇವರು ಧರ್ಮ ಮಾಡದ ಕೆಲಸವನ್ನು ಸತ್ಯ ನ್ಯಾಯ ಪ್ರಾಮಾಣಿಕತೆ ಶುದ್ದತೆ ಮಾಡುತ್ತದೆ. ಅದೆಲ್ಲವೂ ನಮ್ಮ ಸಂವಿಧಾನದಲ್ಲಿ ಅಡಕವಾಗಿದೆ. ಅದನ್ನು ಅದರ ಮೂಲ ಆಶಯದಂತೆ ಉಳಿಸಿದರೆ ಅದೇ ನಿಜವಾದ ಭಾರತ.
ಆ ಭಾರತದಲ್ಲಿ ಮನುಷ್ಯರು ಮತ್ತು ಭಾರತೀಯರು ಮಾತ್ರ ಇರುತ್ತಾರೆ. ಅಲ್ಲಿ ದಲಿತರು, ಬ್ರಾಹ್ಮಣರು, ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಬೌದ್ದರು, ಜೈನರು, ಸಿಖ್ಖರು, ಪಾರ್ಸಿಗಳು ಕೇವಲ ಮನುಷ್ಯ ಪ್ರಾಣಿಗಳು ಮಾತ್ರ. ಗಾಂಧಿಯ ಆತ್ಮ ಶಕ್ತಿ. ಗಾಂಧಿಯನ್ನು ಭಾರತ ದೂರ ಸರಿಸಿದಷ್ಟು ಭಾರತವೂ ಭಾರತೀಯರಿಂದ ದೂರ ದೂರ ವಿನಾಶದ ಕಡೆ ಸಾಗುತ್ತದೆ. ಭಾರತದ ನಿಜವಾದ ಆತ್ಮ - ಗಾಂಧಿ. ಅಲ್ಲಾಹೂ ಅಲ್ಲ, ಯೇಸು ಅಲ್ಲ, ರಾಮನೂ ಅಲ್ಲ. ಇದನ್ನು ದಯವಿಟ್ಟು ಯುವಕರೇ ಅರ್ಥಮಾಡಿಕೊಳ್ಳಿ. ಇಲ್ಲದಿದ್ದರೆ ಭಾರತ ನಮ್ಮಿಂದ ನಿಧಾನವಾಗಿ ದೂರ ಸರಿಯಬಹುದು. ಎಚ್ಚರ...
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ