ಭಾರತ- ಪಾಕಿಸ್ತಾನದ ನಡುವೆ ಸಂಬಂಧ ಸುಧಾರಿಸುವುದೇ?
ಸುಮಾರು ಒಂದು ದಶಕದ ಬಳಿಕ ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಇಸ್ಲಾಮಾಬಾದ್ ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್ ಸಿ ಒ) ಶೃಂಗಸಭೆಯಲ್ಲಿ ಎಸ್ ಜೈಶಂಕರ್ ಪಾಲ್ಗೊಂಡಿದ್ದಾರೆ. ಎರಡೂ ದೇಶಗಳು ದ್ವಿಪಕ್ಷೀಯ ಮಾತುಕತೆಯ ಸಾಧ್ಯತೆಯನ್ನಂತೂ ಮೊದಲೇ ತಳ್ಳಿ ಹಾಕಿವೆ. ಎನ್ ಸಿ ಒ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಏಕೈಕ ಉದ್ದೇಶದಿಂದ ತಾವು ಪಾಕಿಸ್ತಾನಕ್ಕೆ ಭೇಟಿ ನೀಡಿರುವುದಾಗಿ ಜೈಶಂಕರ್ ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಸಚಿವ ಇಶಕ್ ದಾರ್ ಕೂಡ ಇದೇ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಪಾಕ್ ಭೇಟಿಯ ಮೊದಲ ದಿನವಾದ ಮಂಗಳವಾರ ರಾತ್ರಿ ಔತಣಕೂಟದಲ್ಲಿ ಆ ರಾಷ್ಟ್ರದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಜೈಶಂಕರ್ ಮುಖಾಮುಖಿಯಾಗಿದ್ದಾರೆ. ಮುಗುಳ್ನಗೆಯೊಂದಿಗೆ ಪರಸ್ಪರ ಕೈಕುಲುಕಿದ್ದಾರೆ.
ಆದರೆ ಎರಡನೇ ದಿನವಾದ ಬುಧವಾರ ಜೈಶಂಕರ್ ತಮ್ಮ ಭಾಷಣದಲ್ಲಿಯೇ ಭಾರತ - ಪಾಕ್ ಸಂಬಂಧದ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಭಯೋತ್ಪಾದನೆಯನ್ನು ಪ್ರಾದೇಶಿಕ ಸಹಕಾರಕ್ಕೆ ಹೇಗೆ ಮುಳ್ಳಾಗಿ ಪರಿಣಮಿಸಿದೆ ಎಂದು ವಿವರಿಸಿದ್ದಾರೆ. ನೆರೆಹೊರೆ ಬಾಂಧವ್ಯ ಚೆನ್ನಾಗಿಲ್ಲದೇ ಇರುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ಪಾಕಿಸ್ತಾನ ಮತ್ತು ಚೀನಾ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಮಾತಿನಲ್ಲೇ ನಯವಾಗಿ ಜೈಶಂಕರ್ ತಿವಿದಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷ, ರಷ್ಯಾ- ಉಕ್ರೇನ್ ನಡುವೆ ನಿಲ್ಲದ ಯುದ್ಧ , ಅವುಗಳಿಂದಾಗ ಜಾಗತಿಕ ಆರ್ಥಿಕತೆ ಎದುರಿಸುತ್ತಿರುವ ಅನಿಶ್ಚಿತತೆ ಈ ಎಲ್ಲ ಋಣಾತ್ಮಕ ಸನ್ನಿವೇಶಗಳ ಮಧ್ಯೆ ಎಸ್ ಸಿ ಒ ಶೃಂಗ ಸಭೆ ಪಾಕಿಸ್ತಾನದಲ್ಲಿ ನಡೆದಿದೆ. ಜಮ್ಮು - ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ಪೂರ್ಣಗೊಂಡು, ೩೭೦ ನೇ ವಿಧಿ ಮುಗಿದ ಅಧ್ಯಾಯ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಸಮಯದಲ್ಲೇ ಜೈಶಂಕರ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಈ ಸನ್ನಿವೇಶದಲ್ಲಿ ಪ್ರತಿಯೊಂದು ಹೇಳಿಕೆ, ಅಭಿಪ್ರಾಯ, ಅಷ್ಟೇ ಏಕೆ, ಭಾವ - ಭಂಗಿ ಕೂಡ ದೊಡ್ಡ ಸಂದೇಶವನ್ನೇ ನೀಡುತ್ತವೆ. ಸಂಬಂಧ ಸುಧಾರಣೆ ಆಗಬಹುದೇ ಎಂಬ ಪ್ರಶ್ನೆಗೆ ಉತ್ತರವನ್ನು ನೀಡುತ್ತವೆ. ಹಾಗಾಗಿ, ಕಾಶ್ಮೀರ ಕುರಿತ ಮಾತುಗಳನ್ನು ನಿಲ್ಲಿಸಿ, ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವುದನ್ನು ಸ್ಥಗಿತಗೊಳಿಸಿ, ಭಾರತದೊಂದಿಗೆ ಅರ್ಥಪೂರ್ಣ ಚರ್ಚೆಯನ್ನು ಪುನರಾರಂಭಿಸುವುದಕ್ಕೆ ಪಾಕಿಸ್ತಾನಕ್ಕೆ ಇದು ಒಂದು ಅಮೂಲ್ಯ ಅವಕಾಶ.
ಪಾಕಿಸ್ತಾನಕ್ಕೆ ಭೇಟಿ ನೀಡುವ ಮೂಲಕ ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಣೆಗೆ ಭಾರತದ ವಿದೇಶಾಂಗ ಸಚಿವರು ಈಗಾಗಲೇ ಮುನ್ನುಡಿ ಬರೆದಿದ್ದಾರೆ. ಭಾರತದ ನೆಲದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನೇ ಉದ್ಯೋಗ ಮಾಡಿಕೊಂಡಿರುವ ಪಾಕಿಸ್ತಾನ, ತನ್ನ ಆರ್ಥಿಕತೆಯನ್ನು ಸುಧಾರಿಸಿಕೊಳ್ಳುವತ್ತ ಗಮನ ಹರಿಸದೆ, ಹಲವು ದಶಕಗಳಿಂದ ವಿದೇಶಿ ನೆಲವನ್ನೇ ನೆಚ್ಚಿಕೊಂಡು ಬದುಕುತ್ತಿದೆ. ಇನ್ನೊಂದೆಡೆ, ಭಾರತ ತನ್ನ ಆರ್ಥಿಕತೆಯನ್ನು ಬಲಪಡಿಸಿಕೊಂಡಿದ್ದು ಮಾತ್ರವಲ್ಲದೆ ಬೇರೆ ದೇಶಗಳಿಗೆ ನೆರವು ನೀಡುವಷ್ಟು ಸಶಕ್ತವಾಗಿದೆ. ತಂತ್ರಜ್ಞಾನ ಬಳಕೆಯ ವಿಷಯದಲ್ಲೂ ಪಾಕಿಸ್ತಾನ ಭಾರತಕ್ಕಿಂತ ನೂರು ವರ್ಷ ಹಿಂದೆ ಉಳಿದಿದೆ. ಪರಿಸ್ಥಿತಿ ಈ ರೀತಿ ಇರುವಾಗ, ಭಾರತದೊಂದಿಗೆ ಇನ್ನಾದರೂ ಉತ್ತಮ ಸಂಬಂಧ ಹೊಂದಲು ಪಾಕಿಸ್ತಾನ ಮುಂದಾಗುವುದು ಅದರ ಹಿತದೃಷ್ಟಿಯಿಂದಲೇ ಒಳ್ಳೆಯದು.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೭-೧೦-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ