ಭಾರತ ಮಾತೆಗೆ ಅರ್ಪಣೆ: ಸ್ವಾತಂತ್ರ್ಯ ಹೋರಾಟದ ಎರಡು ಹಾಡುಗಳು

ಭಾರತ ಮಾತೆಗೆ ಅರ್ಪಣೆ: ಸ್ವಾತಂತ್ರ್ಯ ಹೋರಾಟದ ಎರಡು ಹಾಡುಗಳು

ಇವತ್ತು “ಸಂಪದ”ದ ಪುಸ್ತಕ ಸಂಪದ ವಿಭಾಗದಲ್ಲಿ ಡಾ. ಸೂರ್ಯನಾಥ ಕಾಮತರು ಸಂಪಾದಿಸಿದ “ಬಿಡುಗಡೆಯ ಹಾಡುಗಳು” ಪುಸ್ತಕವನ್ನು ಪರಿಚಯಿಸಿದ್ದೇನೆ. ಆ ಅಪರೂಪದ ಪುಸ್ತಕದಿಂದ ಆಯ್ದ ಎರಡು ಹಾಡುಗಳು ಇಲ್ಲಿವೆ:

ಮಾತೃಭೂಮಿ ಜನನಿ

ಮಾತೃಭೂಮಿ ಜನನಿ ನಿನ್ನ ಚರಣ ಸೇವೆ ಮಾಡುವಾ/
ಪರಮ ಹರುಷದಿಂದ ನಿನ್ನ ಸುಖಕೆ ಪ್ರಾಣವೀಯುವಾ //ಪಲ್ಲವಿ//

ತನುಮನಧನದಿಂದ ನಿನ್ನ ಘನತೆಯನ್ನು ಬೆಳೆಸುವಾ/
ದಣಿಯದೆ ಅನುದಿನವು ದುಡಿದು ಗುಣಿಗಳೆನಿಸಿಕೊಳ್ಳುವಾ //೧//

ಬಂದುನಿಂದ ತೊಂದರೆಗಳ ಸಂದಣಿಯನು ಸರಿಸುವಾ/
ಮುಂದೆ ಅಡಿಯನಿಡುತ ಒಂದುಗೂಡಿ ಜಯವ ಪೊಂದುವಾ //೨//

ಹಿಂದುಮಾತೆ ಬಂಧುಭಾವದಿಂದ ನಿನ್ನ ಕಂದರು/
ಒಂದುಗೂಡಿ ಪಾರತಂತ್ರ್ಯ ಬಂಧವ ಹರಿದೊಗೆವೆವು //೩//

ಕೆಟ್ಟ ಕಣ್ಣಿನಿಂದ ನೋಳ್ಪ ದುಷ್ಟಜನರಿಗಂಜದೆ/
ದಿಟ್ಟತನದೊಳೆಲ್ಲರೊಟ್ಟುಗೂಡುತಿಹೆವು ಕಷ್ಟಕೆ //೪//

     -ಲೇಖಕರು: ಕವಿಭೂಷಣ ಬೆಟಗೇರಿ ಕೃಷ್ಣಶರ್ಮ

ಮರೆತೆ ಏತಕಯ್ಯಾ

ಮರೆತೆ ಏತಕಯ್ಯಾ ನಿನ್ನ ಮಾತೃಭೂಮಿಯ //ಪಲ್ಲವಿ//

ನಿರುತ ನಿನ್ನ ಹೊರೆಯ ಹೊತ್ತು ಪೊರೆವ ತಾಯಿಯ
ಮರೆತೆ ಏತಕಯ್ಯಾ //ಅನುಪಲ್ಲವಿ//

ಒಂಭತ್ತು ತಿಂಗಳು ತನ್ನೊಳಿಂಬುಗೊಟ್ಟವಳು ತಾಯಿ/
ತೊಂಬತ್ತು ವರುಷವಾದರು ಪೊರೆವ ಕುಂಭಿನಿ ತಾಯಲ್ಲೋ//
ಮಾತೃಭೂಮಿಯಾ //೧//

ನಡೆನುಡಿ ಬರುವ ತನಕ ಒಡಲಿಗನ್ನ ಕೊಡುವಳು ತಾಯಿ/
ಕಡೆತನಕ ನಿನ್ನೊಡಲಿಗೆ ಅನ್ನ ಕೊಡುವಳು ತಾಯಲ್ಲೊ//
ಮಾತೃಭೂಮಿಯ //೨//

ಗೇಣು ಭೂಮಿಗಾಗಿ ಎನ್ನ ಪ್ರಾಣ ಹೋಗಲಿ ಎಂದೆನ್ನುವಿ/
ಕಾಣ್ದೇನೊ ನಾಡೇ ಪರರಾಧೀನವಾಗಿರುವುದು ಮನುಜಾ//
ಮಾತೃಭೂಮಿಯ//೩//

    -ಲೇಖಕರು: ಮುದವೀಡು ಕೃಷ್ಣರಾಯರು (1920)