ಭಾರತ ಯುದ್ಧ ನಿಲ್ಲಿಸುವುದೇ?

ಭಾರತದ ರಾಜತಾಂತ್ರಿಕತೆಯು ಶಾಂತಿ, ಸಹಬಾಳ್ವೆಯ ಬುನಾದಿ ಮೇಲೆ ಕಟ್ಟಿದ ಅಲಿಪ್ತ ನೀತಿಯ ಮೇಲೆ ನಿಂತಿದೆ ಎನ್ನುವುದನ್ನು ಹೊಸದಿಲ್ಲಿ ಪುನಃ ಜಗತ್ತಿಗೆ ಸಮರ್ಥವಾಗಿ ಸಾರಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ೨ ದಿನಗಳ ರಷ್ಯಾ ಭೇಟಿಯು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಿದ್ದು ಮಾತ್ರವಲ್ಲದೆ, ಯುದ್ಧದ ವಿರುದ್ಧ ಮತ್ತು ಶಾಂತಿಯ ಪರವಾಗಿ ಭಾರತದ ಸ್ಪಷ್ಟ ನಿಲುವನ್ನು ಪರಿಣಾಮಕಾರಿಯಾಗಿ ಒತ್ತಿ ಹೇಳುತ್ತಿರುವುದು ಸ್ವಾಗತಾರ್ಹ.
ಉಕ್ರೇನ್ ವಿರುದ್ಧ ರಷ್ಯಾ ಸವಾರಿ ಮಾಡಿದ ದಿನಗಳಿಂದಲೂ ಜಗತ್ತಿನ ಹಲವು ರಾಷ್ಟ್ರಗಳು ಮಾಸ್ಕೋ ಮೇಲೆ ನಾನಾ ನಿರ್ಬಂಧಗಳನ್ನು ಹೇರಿ, ಎಲ್ಲ ರೀತಿಯ ಸಂಬಂಧಗಳನ್ನು ಕಡಿದುಕೊಂಡು, ದೂರು-ಆಕ್ರೋಶ ವ್ಯಕ್ತಪಡಿಸುವುದನ್ನೇ ಕಾರ್ಯವೈಖರಿ ಮಾಡಿಕೊಂಡವು. ಹಾಗಂತ, ಭಾರತವೇನು ತನ್ನ ಮಿತ್ರರಾಷ್ಟ್ರ ರಷ್ಯಾದ ಪರವಾಗಿಯೇ ನಿಲ್ಲುವ ತಪ್ಪೆಸಗಲಿಲ್ಲ. ಉಕ್ರೇನ್ ಗಾದ ಸಾವು-ನೋವುಗಳ ಬಗ್ಗೆ ಅನುಕಂಪ ತೋರುತ್ತಲೇ, ರಷ್ಯಾದ ಯುದ್ಧೋನ್ಮಾದವನ್ನು ಖಂಡಿಸಿತ್ತು. ವಿಶ್ವವೇದಿಕೆಗಳಲ್ಲೂ ಶಾಂತಿತತ್ವವನ್ನೇ ಪ್ರತಿಪಾದಿಸಿತು. ಇದರೊಟ್ಟಿಗೆ, ರಷ್ಯಾದಿಂದ ವಾಣಿಜ್ಯಿಕ ಸಂಬಂಧವನ್ನೂ ಕಾಯ್ದುಕೊಂಡಿತು ಕೂಡ. ಈ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರು ಮಾಸ್ಕೋಗೆ ಭೇಟಿ ನೀಡಿದಾಗ, ಕದನ ಪೀಡಿತ ಉಕ್ರೇನ್ ಕಟುವಾಗಿಯೇ ವಿರೋಧಿಸಿದೆ. ಆದರೆ, ಮೋದಿ ಅವರು ಯುದ್ಧದ ಕುರಿತಾದ ಭಾರತದ ನಿಲುವನ್ನು ರಷ್ಯಾ ಅಧ್ಯಕ್ಷರ ಮುಂದೆಯೇ ತಿಳಿಸಿರುವುದು ನಿಜಕ್ಕೂ ದಿಟ್ಟ ನಡೆ.
ಮಿತ್ರನೊಬ್ಬ ತಪ್ಪು ದಾರಿ ಹಿಡಿದಾಗ ಯಾವ ಶಬ್ಧಗಳಲ್ಲಿ ಬುದ್ದಿ ಹೇಳಬೇಕೋ ಆ ಕರ್ತವ್ಯವನ್ನು ಭಾರತ ಸಮರ್ಥವಾಗಿ ನಿಭಾಯಿಸಿದೆ. ‘ಇದು ಯುದ್ಧ ಮಾಡುವ ಕಾಲವಲ್ಲ. ಯುದ್ಧಭೂಮಿಯಿಂದ ಯಾವ ಸಮಸ್ಯೆಗಳಿಗೂ ಪರಿಹಾರವಿಲ್ಲ.’ ಎಂದು ಪುಟಿನ್ ಜತೆಗಿನ ಮಾತುಕತೆ ವೇಳೆ ಮೋದಿ ಧೈರ್ಯದಿಂದಲೇ ಹೇಳಿದ್ದಾರೆ. ಕಡೇಕ್ಷಣದವರೆಗೂ ಭಾರತ - ರಷ್ಯಾ ಸಂಬಂಧವನ್ನು ಅನುಮಾನದಿಂದ ನೋಡುತ್ತಿದ್ದ ಅಮೇರಿಕವೂ ಈಗ ಹೊಸದಿಲ್ಲಿ ನಾಯಕತ್ವದ ಮೇಲೆ ವಿಶ್ವಾಸ ಮೂಡಿಸಿಕೊಂಡು, “ಮೋದಿ-ಪುಟಿನ್ ನಡುವೆ ಉತ್ತಮ ಸ್ನೇಹವಿದೆ. ರಷ್ಯಾ - ಉಕ್ರೇನ್ ಯುದ್ಧ ನಿಲ್ಲಿಸುವ ಸಾಮರ್ಥ್ಯ ಭಾರತದಿಂದ ಮಾತ್ರ ಸಾಧ್ಯ.” ಎಂದು ಪುನರುಚ್ಚರಿಸಿದೆ.
ಪುಟಿನ್ ಇತ್ತೀಚೆಗಷ್ಟೇ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರನ್ನು ಭೇಟಿಯಾಗಿದ್ದರು. ಅಮೇರಿಕವನ್ನು ಇಕ್ಕಟ್ಟಿಗೆ ಸಿಲುಕಿಸುವ ಉದ್ದೇಶದೊಂದಿಗೆ ಇವರಿಬ್ಬರು ಒಟ್ಟಿಗೆ ಅಪಾಯಕಾರಿ ಹೆಜ್ಜೆ ಇಟ್ಟರೆ ಅದು ವಿಶ್ವಕ್ಕೇ ನಷ್ಜ. ಇಂಥ ಸಂದಿಗ್ಧ ಕಾಲದಲ್ಲಿ ಭಾರತವು ರಷ್ಯಾಕ್ಕೆ ಬುದ್ದಿ ಹೇಳುವ ಕೆಲಸ ಮಾಡಿದೆ ಎಂಬುದೇ ಗಮನಾರ್ಹ. ಭಾರತದ ಮಾತನ್ನು ಪುಟಿನ್ ಕೇಳುತ್ತಾರೋ, ಬಿಡುತ್ತಾರೋ ಎನ್ನುವುದು ಇನ್ನೂ ನಿಗೂಢ. ಹಿಂದಿನ ಅವಧಿಯಲ್ಲಿದ್ದಂಥ ಪುಟಿನ್ ವ್ಯಕ್ತಿತ್ವ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಗಮನಾರ್ಹವಾಗಿ ಬದಲಾಗಿದೆ. ಶೀತಲಸಮರ ಕಾಲಘಟ್ಟದ ರಷ್ಯಾದ ಅಧ್ಯಕ್ಷರ ವರ್ತನೆಗೂ ಮಿಗಿಲಾದ ಹೆಜ್ಜೆಗಳನ್ನು ಪುಟಿನ್ ಇಟ್ಟಿದ್ದಾರೆ. ಈಗಾಗಲೇ ರಷ್ಯಾದೊಳಗೇ ಯುದ್ಧವನ್ನು ನಿಲ್ಲಿಸುವ ಒತ್ತಾಯಗಳೂ ಹೆಚ್ಚುತ್ತಿವೆ. ಇವರೆಲ್ಲರ ಒತ್ತಾಯಗಳಿಗೆ ಮಣಿದು ಪುಟಿನ್ ಪುನಃ ಮನುಷ್ಯರಾಗಲಿ ಎನ್ನುವುದು ಈ ಹೊತ್ತಿನ ಪ್ರಾರ್ಥನೆಯಷ್ಟೇ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೧-೦೭-೨೦೨೪
ಚಿತ್ರ ಕೃಪೆ: ಇಂಟರ್ನೆಟ್ ತಾಣ