ಭಾರತ ಸಂವಿಧಾನದ ನಿರ್ಮಾತೃಗಳು

ಭಾರತ ಸಂವಿಧಾನದ ನಿರ್ಮಾತೃಗಳು

 

     ಭಾರತದ ಜನತೆ ಪ್ರಾಂತೀಯ ಸಭೆಗಳ ಸದಸ್ಯರನ್ನು ಆರಿಸಿ, ಆ ಸಭೆಗಳು ಸಂವಿಧಾನರಚನಾ ಸಭೆಯ ಸದಸ್ಯರನ್ನು ಆರಿಸಿದರು. ಸಂವಿಧಾನ ರಚನಾಸಭೆಯಲ್ಲಿ ಭಾರತದ ವಿವಿಧ ಪ್ರದೇಶಗಳಿಗೆ ಹಾಗೂ ಸಮುದಾಯಗಳಿಗೆ ಸೇರಿದ ಸದಸ್ಯರು ಇದ್ದರು. ಬೇರೆ ಬೇರೆ ರಾಜಕೀಯ ವಿಚಾರಧಾರೆಗಳನ್ನು ಪ್ರತಿನಿಧಿಸುವ ಸದಸ್ಯರೂ ಅಲ್ಲಿ ಇದ್ದರು. ಜವಾಹರ್‍ಲಾಲ್ ನೆಹರೂ, ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್, ಮೌಲಾನಾಅಬುಲ್ ಕಲಂ ಆಝಾದ್ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಇವರುಗಳು ಸಭೆಯ ಚರ್ಚೆಗಳಲ್ಲಿ ಭಾಗವಹಿಸಿದ ಕೆಲವು ಪ್ರಮುಖ ವ್ಯಕ್ತಿಗಳಾಗಿದ್ದರು. ಪರಿಶಿಷ್ಟ ವರ್ಗಗಳಿಗೆ ಸೇರಿದ ಮೂವತ್ತಕ್ಕೂ ಹೆಚ್ಚು ಸದಸ್ಯರಿದ್ದರು ಆಂಗ್ಲೋ-ಇಂಡಿಯನ್ ಸಮುದಾಯವನ್ನು ಫ್ರಾಂಕ್ ಆಂಟನಿ ಅವರೂ ಪಾರ್ಸಿ ಜನರನ್ನು ಎಚ್.ಪಿ. ಮೋದಿ ಅವರೂ ಪ್ರತಿನಿಧಿಸಿದ್ದರು. ಆಂಗ್ಲೊ-ಇಂಡಿಯನ್ನರ ಹೊರತಾದ ಎಲ್ಲ ಕ್ರೈಸ್ತರನ್ನು ಪ್ರತಿನಿಧಿಸಿದ ಖ್ಯಾತ ಕ್ರೈಸ್ತರಾದ ಹರೇಂದ್ರ ಕುಮಾರ್ ಮುಖರ್ಜಿಯವರು ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಾಗಿ ಇದ್ದರು. ಸಂವಿಧಾನ ತಜ್ಞರಾದ ಅಲ್ಲಾಡಿ ಕೃಷ್ಣಸ್ವಾಮಿ, ಬಿ.ಆರ್.ಅಂಬೇಡ್ಕರ್ , ಬಿ.ಎನ್. ರಾಜು ಮತ್ತು ಕೆ.ಎಂ. ಮುನ್ಶಿಯವರೂ ಸಭೆಯ ಸದಸ್ಯರಾಗಿದ್ದರು. ಸರೋಜಿನಿ ನಾಯ್ಡು ಮತ್ತು ವಿಜಯಲಕ್ಷ್ಮಿ ಪಂಡಿತ್ ಪ್ರಮುಖ ಮಹಿಳಾ ಸದಸ್ಯರಾಗಿದ್ದರು. ಡಾ. ಸಚ್ಚಿದಾನಂದ ಸಿನ್ಹಾರವರು ಸಂವಿಧಾನರಚನಾಸಭೆಯ ತಾತ್ಕಾಲಿಕ ಅಧ್ಯಕ್ಷರಾಗಿದ್ದರು. ನಂತರ, ಡಾ.ರಾಜೇಂದ್ರ ಪ್ರಸಾದ್ ಅವರು ಅಧ್ಯಕ್ಷರಾಗಿಯೂ ಬಿ.ಆರ್.ಅಂಬೇಡ್ಕರ್ ಅವರು ಕರಡು ಸಮಿತಿ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಸಂವಿಧಾನರಚನಾಸಭೆಯು ಎರಡು ವರ್ಷ 11 ತಿಂಗಳು 18 ದಿನಗಳ ಕಾಲದ ಅವಧಿಯಲ್ಲಿ 166 ದಿನಗಳು ಸಮಾವೇಶಗೊಂಡಿತು.