ಭಾರತ ಸ್ವಾಭಿಮಾನ
ಪ್ರಿಯರೇ, ೧೮ ನೇ ಶತಮಾನದ ತನಕ ಭಾರತದಲ್ಲಿ, ಒಬ್ಬ ಭಿಕ್ಷುಕ ಇರಲಿಲ್ಲ; ಒಬ್ಬ ಭೂಮಿಹೀನ ಕೃಷಿಕನಿರಲಿಲ್ಲ; ಒಬ್ಬ ನಿರುದ್ಯೋಗಿ ಇರಲಿಲ್ಲ; ಒಂದು ಗೋಹತ್ಯೆ ನಡೆಯುತ್ತಿರಲಿಲ್ಲ.
ಇಂದಿನ ಸ್ಥಿತಿಯಂತೂ ನಿಮಗೆ ತಿಳಿದೇ ಇದೆ. ಎತ್ತ ನೋಡಿದರೂ ಭ್ರಷ್ಟಾಚಾರ, ಹಿಂಸೆ, ಮೋಸ, ಮಾಲಿನ್ಯ. ನಿತ್ಯ ಉಪಯೋಗಿಸುವ ಅಡುಗೆ ಸಾಮಾನಿನಲ್ಲೂ ಕಲಬೆರಕೆ. ಹಣದುಬ್ಬರ ಕಮ್ಮಿಯಾಗಿದ್ದರೂ, ಬೆಲೆಯೇರಿಕೆ ತಪ್ಪಿಲ್ಲ. ದೇಶದ ಜಿಡಿಪಿ (G D P) ಹೆಚ್ಚುತ್ತಿದ್ದರೂ, ಬಡತನ ಕಮ್ಮಿಯಾಗಿಲ್ಲ. ಒಂದೆಡೆ, ಭಾರತ ಶ್ರೀಮಂತರ ಸಂಖ್ಯೆ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ರೈತರ ಆತ್ಮಹತ್ಯೆಗಳೂ ಹೆಚ್ಚುತ್ತಿವೆ. ಕಲಿಯುಗವೆಂದರೆ, ದುಷ್ಟರ ಕಾಲವೇ? ಸಜ್ಜನರಿಗೆ ಅಧೋಗತಿಯೇ? ಭಾರತ ದೇಶ ಭ್ರಷ್ಟ ರಾಜಕಾರಣಿಗಳ ಕಪಿಮುಷ್ಟಿಯಿಂದ ಪಾರಾಗಲು ಸಾಧ್ಯವಿಲ್ಲವೇ? ಇದಕ್ಕೆಲ್ಲಾ ಪರಿಹಾರವೇ ಇಲ್ಲವೇ?
ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡಲು ಧರೆಗಿಳಿದು ಬಂದ ಮಹಾನುಭಾವ ಒಬ್ಬರಿದ್ದಾರೆ. ಅವರೇ ‘ಬಾಬಾ ಸ್ವಾಮಿ ರಾಮದೇವ್’. ಅವರು ಕಳೆದ ೨೦ ವರ್ಷಗಳಿಂದ ಯೋಗವನ್ನು ಜನಪ್ರಿಯಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಹಾಗೂ ಈಗಾಗಲೇ ಇವರು ಯೋಗದ ಮೂಲಕ ಲಕ್ಷಾಂತರ ಜನರ ಆರೋಗ್ಯ ಸುಧಾರಿಸಿದ್ದಾರೆ. ಯೋಗದ ಮೂಲಕ ಆತ್ಮಜಾಗೃತಿ ಹಾಗೂ ಇದರಿಂದರೇ ರಾಷ್ರ್ಟಜಾಗೃತಿ ಸಾಧ್ಯವೆಂದು ರಾಮದೇವ್ ಅವರ ಖಚಿತ ನುಡಿ.
'ಭಾರತ ಸ್ವಾಭಿಮಾನ' - ಇದು ಬಾಬಾ ಸ್ವಾಮಿ ರಾಮದೇವ್ ಅವರು ಕಳೆದ ಜನೇವರಿ ೫, ೨೦೦೯ ರಂದು ಪ್ರಾರಂಭ ಮಾಡಿದ ಒಂದು ಸಂಸ್ಥೆ. ಇದರ ಗುರಿ ಭಾರತ ದೇಶಕ್ಕೆ ಹೊಸ ಸ್ವಾತಂತ್ಯ ಮತ್ತು ಹೊಸ ವ್ಯವಸ್ಥೆವನ್ನು ತರುವುದು. ಹರಿದ್ವಾರದ ಪತಂಜಲಿ ಯೋಗ ಪೀಠದಲ್ಲಿ ಈಗಾಗಲೇ ಹಲವು ಭಾರತ ಸ್ವಾಭಿಮಾನದ ಶಿಬಿರಗಳು ನಡೆದಿವೆ. ಈ ಶಿಬಿರಗಳಲ್ಲಿ ಹೇಗೆ ಮೊದಲು ಬ್ರಿಟಿಷರು ಹಾಗೂ ಆ ನಂತರದಲ್ಲಿ ‘ಕಪ್ಪು ಬ್ರಿಟಿಷರು’ ಭಾರತವನ್ನು ಲೂಟಿ ಮಾಡಿದರು, ಮುಂದೆ ಭಾರತದ ಬಡತನ, ನಿರುದ್ಯೋಗ ಇತ್ಯಾದಿಗಳನ್ನು ಹೇಗೆ ನಿವಾರಿಸಬಹುದೆಂದು ಸವಿಸ್ತಾರವಾಗಿ ವಿವರಿಸಲಾಗುತ್ತದೆ. ಸುಮಾರು ಹದಿನೆಂಟು ವರ್ಷಗಳಿಂದ ‘ಸ್ವದೇಶಿಯಿಂದ ಸ್ವಾವಲಂಬನೆ’ಎಂಬ ತತ್ವವನ್ನು ದೇಶದಲ್ಲಿ ಪಸರಿಸಿದ, ಬಹುರಾಷ್ಟ್ರಿಯ ಕಂಪನಿಗಳ ವಿರುಧ್ಧ ಹೋರಾಡಿದ ಶ್ರೀ ರಾಜೀವ ದೀಕ್ಷಿತ್ ಅವರು, ಬಾಬಾ ರಾಮದೇವರ ಬೆನ್ನೆಲುಬಾಗಿ ನಿಂತಿದ್ದಾರೆ. ಕಳೆದ ವರ್ಷದ ಕೊನೆಗೆ ಭಾರತ ಸ್ವಾಭಿಮಾನದ ಶಿಬಿರಗಳಲ್ಲಿ ಸುಮಾರು ಎರಡುವರೆ ಲಕ್ಷ ಜನರು ಭಾಗವಹಿಸಿದ್ದಾರೆ. ಂದಿನ ಎರಡು ವರ್ಷಗಳಲ್ಲಿ ಭಾರತದ ೬,೩೮, ೩೬೫ ಹಳ್ಳಿಗಳಲ್ಲಿ ಒಂದೊಂದು ಯೋಗ ತರಬೇತಿ ಕೇಂದ್ರಗಳನ್ನು ಪ್ರಾರಂಭಗೊಳಿಸುವ ಮಹತ್ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಮತದಾನವನ್ನು ಕಡ್ಡಾಯಗೊಳಿಸುವ ಕಾನೂನಿನ ಜಾರಿ, ಸ್ವಿಸ್ ಬ್ಯಾಂಕ್ ಗಳಲ್ಲಿ ಜಮೆ ಇರುವ ಕಪ್ಪು ಹಣದ ವಾಪಸು ಮುಂತಾದ ಮಹತ್ತರ ಉದ್ದೇಶಗಳು ಸ್ವಾಮಿ ರಾಮದೇವ್ ಅವರದು.
ದೇಶದಲ್ಲಿನ ಎಲ್ಲಾ ಸಾತ್ವಿಕ ಶಕ್ತಿಗಳನ್ನು ಒಗ್ಗೂಡಿಸಿ, ಮುಂದಿನ ೫ ವರ್ಷಗಳಲ್ಲಿ ಸುಮಾರು ೫೦ ಕೋಟಿ ಭಾರತೀಯರನ್ನು ‘ಭಾರತ್ ಸ್ವಾಭಿಮಾನ’ದಲ್ಲಿ ಜೋಡಿಸುವುದು ಸ್ವಾಮಿ ರಾಮದೇವ್ ಅವರ ಗುರಿ. ಈ ಮೂಲಕ ೨೦೧೪ ಲೋಕಸಭೆಗೆ ಪ್ರಾಮಾಣಿಕ, ದೇಶಭಕ್ತ, ಸತ್ಚಾರಿತ್ಯವುಳ್ಳ ನಾಯಕರನ್ನು ಕಳುಹಿಸುವುದು, ಇಂದಿನ ರಾಜಕೀಯ ವ್ಯವಸ್ಥೆ, ಕಾನೂನು ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ, ತೆರಿಗೆ ವ್ಯವಸ್ಥೆ, ಆರೋಗ್ಯ ವ್ಯವಸ್ಥೆಗಳನ್ನು ಆಮೂಲಾಗ್ರವಾಗಿ ಬದಲಾಯಿಸುವುದು ಇವು ಈ ಸಂಸ್ಥೆಯ ಉದ್ದೇಶಗಳು. -
ಗುರುದತ್ತ ಮರಾಠೆ.