ಭಾವತರಂಗ

ಭಾವತರಂಗ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಡಿಗೆರೆ ಎಂ.ಎಸ್. ನಾಗರಾಜ್
ಪ್ರಕಾಶಕರು
ಅಭಿನವ ಪ್ರಕಾಶನ, ಮಾರ್ಕೆಟ್ ರಸ್ತೆ, ಮೂಡಿಗೆರೆ- 577132, ಚಿಕ್ಕಮಗಳೂರು ಜಿಲ್ಲೆ
ಪುಸ್ತಕದ ಬೆಲೆ
ರೂ.70.00, ಮುದ್ರಣ: 2017

*ಮೂಡಿಗೆರೆ ಎಂ. ಎಸ್. ನಾಗರಾಜರ "ಭಾವತರಂಗ"* 

"ಭಾವತರಂಗ" , ಎಂ. ಎಸ್. ನಾಗರಾಜ್, ಮೂಡಿಗೆರೆ ಇವರ 2017ರಲ್ಲಿ ಪ್ರಕಟವಾದ ಹನಿಗವನ ಸಂಕಲನ. 60 ಪುಟಗಳ, 70 ರೂಪಾಯಿ ಬೆಲೆಯ ಸಂಕಲನವನ್ನು ಕವಿ ನಾಗರಾಜ್ ಅವರೇ ತಮ್ಮ ಅಭಿನವ ಪ್ರಕಾಶನ, ಮಾರ್ಕೆಟ್ ರಸ್ತೆ, ಮೂಡಿಗೆರೆ- 577132, ಚಿಕ್ಕಮಗಳೂರು ಜಿಲ್ಲೆ ಮೂಲಕ  ಪ್ರಕಟಿಸಿದ್ದಾರೆ.

ಸಂಕಲನಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಕಳಸಾಪುರ ಇಲ್ಲಿನ ಪ್ರಾಚಾರ್ಯರಾದ ಎಚ್. ಎಂ. ನಾಗರಾಜ ರಾವ್ ಕಲ್ಕಟ್ಟೆ ಅವರ ಮುನ್ನುಡಿ ಮತ್ತು ಸಾಹಿತಿ ಮೂಡಿಗೆರೆಯ ಹಳೇಕೋಟೆ ಎನ್. ರಮೇಶ್ ಅವರ ಬೆನ್ನುಡಿ ಇದೆ. ಕವಿ ನಾಗರಾಜ್ ಅವರ "ಅಂತರಾಳ..."ವೂ ಇದೆ.

"ಭಾವತರಂಗ" , ಎಂ. ಎಸ್. ನಾಗರಾಜ್ ಅವರ ಮೂರನೇ ಸಂಕಲನ. ಇವರ "ಅಂತರಾಳ" 2008ರಲ್ಲಿ ಮತ್ತು "ಹೊಂಗಿರಣ" 2012ರಲ್ಲಿ ಪ್ರಕಟಗೊಂಡಿತ್ತು. ಭಾವತರಂಗದಲ್ಲಿ ಒಂದೆರಡು ಕವನ, ಮೂರ್ನಾಲ್ಕು ಚುಟುಕುಗಳ ಸಹಿತ ಒಟ್ಟು 98 ಹನಿಗವನಗಳಿವೆ.

ಕವಿಗಿರುವ ಸ್ವಾಧ್ಯಯನ, ಸ್ವಾನುಭವ ಮತ್ತು ಸಾಮಾಜಿಕ ಚಿಂತನಗಳೇ ಸಂಕಲನದಲ್ಲಿರುವ ಕವಿತ್ವದ ಶಕ್ತಿಯಾಗಿದೆ ಎಂದು ಗುರುತಿಸಿರುವ ಮುನ್ನುಡಿಕಾರರು, "ಹನಿಗವನಗಳನ್ನು ಕೇವಲ ಬರೆಯುವ ಹುಚ್ಚಿಗಾಗಿ ಬರೆಯದೆ, ಕಾಳಜಿಯಿಂದ, ಸಹನೆಯಿಂದ ನಾಗರಾಜ್ ಬರೆದಿದ್ದಾರೆ" ಎಂಬುದನ್ನು ಗುರುತಿಸಿದ್ದಾರೆ.

ಮನೆಯೊಡತಿಯರಾದ ಗೃಹಿಣಿಯರು ಟಿವಿ ಧಾರಾವಾಹಿಗಳ ದಾಸರಾದರೆ...

*ನನ್ನವಳ

ಫೇವರೇಟು ಧಾರವಾಹಿಗಳ

ಪಟ್ಟಿ ಬೆಳೆಯುತ್ತಲೆ

ಸಾಗುತ್ತಿದೆ ಚಾನಲ್ಲುಗಳಾಚೆಗೆ

ಅಡುಗೆ ಮನೆಯಲ್ಲೀಗ ಮೌನ

ಊಟಕ್ಕೆ ಬರೀಯ ಅನ್ನ

ಉಪ್ಪಿನೊಂದಿಗೆ ಮಜ್ಜಿಗೆ.

ಯೇ ಗತಿ ಎಂಬ ಪರಿಸ್ಥಿತಿಗೆ ತಲುಪುತ್ತದೆ ಎಂಬುದನ್ನು 

"ಮೌನ" ಹನಿಗವನ ಅನಾವರಣಗೊಳಿಸುತ್ತದೆ.

ಎಂ. ಎಸ್. ನಾಗರಾಜ್, ಕರ್ನಾಟಕದ ಕಾಶ್ಮೀರ ಮಲೆನಾಡಿನ ಕವಿ. ಹಳ್ಳಿ ಎಂಬ ಸ್ವರ್ಗದ ಬದುಕು ಬದುಕುತ್ತಿರುವ ಕವಿ ಕಂಡ ಹಳ್ಳಿ ಯನ್ನು ಓದುಗರೂ ನೋಡಬಹುದು "ಹಳ್ಳಿಗಾಡು" ಕವನದಲ್ಲಿ.

ತಿಳಿನೀಲಿ ಆಕಾಶದ

ಉದ್ದಗಲಕ್ಕೂ

ಚದುರಿದ್ದ ಮೋಡಗಳ ಚೆಂಡು

ಅಲ್ಲಲ್ಲಿ ತುಂಡು - ತುಂಡು

ಮೆಲ್ಲನೆ ಭೂಮಿಗಿಳಿದು

ಸರಸರನೆ ಬಾನಿಗೇರುವ

ಮಂಜಿನ ಹೊಗೆಯ ದಂಡು

ಹಗಲಲ್ಲೂ ಕತ್ತಲು

ಸೂರ್ಯನಿಗೂ ಅಡ್ಡಲು

ತಂಪು ಇಂಪಿನ ಸೊಗಡು

ಕಣ್ಣು ಹಾಯುವ ದೂರಕ್ಕೂ

ಹಚ್ಚ ಹಸಿರಿನ ತುಂಬೆಲ್ಲಾ

ಬೆಳ್ಳಿ ಮಂಜನ್ನು ಹೊದ್ದ ಹಳ್ಳಿಗಾಡು.

ಭ್ರಷ್ಟ  ವ್ಯವಸ್ಥೆಯ ವಿರುದ್ಧವೂ ಕವಿಗೆ ಆಕ್ರೋಶವಿದೆ. ಈ ಆಕ್ರೋಶದ ಒಂದು ಮಾದರಿ "ಅಧಿಕಾರ" ಎಂಬ ಹನಿಯಲ್ಲಿ ಅಭಿವ್ಯಕ್ತಿಗೊಂಡಿದೆ.

ಗುಂಡಿ - ಗೊಟರುಗಳೆ

ತುಂಬಿಹೋಗಿ

ಕಳೆದುಹೋಗಿದೆ

ಗುರುತು ಸಿಗದೆ ಟಾರುದಾರಿ

ಬಂದ ಹಣಗಳ

ತಿಂದು ತೇಗಿ

ಸುಖದಿ ಬಿದ್ದುಕೊಂಡಿದೆ

ಸಮಸ್ಯೆಗಳೇ ಇಲ್ಲವೆಂಬಂತೆ

ಅಧಿಕಾರ ಶಾಹಿ.

ಸ್ವಾರ್ಥದ ಪರಾಕಾಷ್ಟೆ ಮನುಷ್ಯನಿಗೊಂದು ಕಪ್ಪು ಚುಕ್ಕೆ. ಇದನ್ನು ಎಷ್ಟೊಂದು ಸಮರ್ಥವಾಗಿ ಇಲ್ಲಿ ಕವಿ ಪಡಿಮೂಡಿಸಿದ್ದಾರೆ ನೋಡಿ.

*ಮುಗಿದಿಲ್ಲ*

ಎಲ್ಲವೂ ಮುಗಿದು ಹೋಯ್ತೇ

ಚಿತೆಗೆ ಅಗ್ನಿಸ್ಪರ್ಶ ಆದಾಕ್ಷಣ

ಇಲ್ಲ ಮುಗಿದಿಲ್ಲ

ಇನ್ನೂ ಚಿತೆಯ ಬೆಂಕಿ

ಆರಿಯೇ ಇಲ್ಲ

ಹೋದವರು

ಉಳಿಸಿ ಹೋಗಿರುವ

ಚರಾ - ಸ್ಥಿರಾಸ್ತಿಗಳ

ಪಾಲುದಾರಿಕೆಗೆ

ಈಗ ಬೆಂಕಿ ಹೊತ್ತಿಕೊಂಡಿದೆ

ಸಂಬಂಧಿಕರ

ಮನೆ - ಮನೆಗಳೀಗಾ ಮಸಣ.

ಪ್ರೀತಿಯ ವಿವಿಧ ಮುಖಗಳನ್ನೂ, ಭಾವಗಳನ್ನೂ ಕವಿ ಸಂಕಲನದಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ."ಪ್ರೀತಿಗೆ" ಎಂಬ ಒಂದು ಕವನ ಹೀಗಿದೆ:

ನಿನ್ನ - ನನ್ನ

ನಡುವೆ

ಬಂದು ಹೋಗುವ

ಬಯಕೆ

ಒಲವಿಗೆ

ಮನಸ್ಸು

ಭಾವನೆಯ

ನಡುವೆ

ಜಾತಿ ಬೇಲಿಗಳ

ಹೊದಿಕೆ ಪ್ರೀತಿಗೆ.

ಪ್ರಾಸ ಹೊಂದಿಸಲು ಬರೆದ ಒಂದೆರಡು ಮತ್ತು ಮೂರ್ನಾಲ್ಕು ರಾಜಕೀಯ ಒಲವು - ನಿಲುವಿನ ಹನಿಗವನಗಳನ್ನು ಹೊರತುಪಡಿಸಿದರೆ, ಉಳಿದಂತೆ ಹೆಚ್ಚಿನೆಲ್ಲಾ ಕವನಗಳು ಪ್ರತೀ ಓದುಗನಿಗೂ ಇಷ್ಟವಾಗುವಂಥದ್ದೇ ಆಗಿದೆ. ಸಾಮಾಜಕ್ಕೆ ಉತ್ತಮ ಸಂದೇಶ ನೀಡುವ, ಜನಜಾಗೃತಿ ಮೂಡಿಸುವ, ತಪ್ಪು ದಾರಿಯಲ್ಲಿ ನಡೆಯುವವರನ್ನು ಎಚ್ಚರಿಸುವ ಕವನಗಳು ಸಂಕಲನದಲ್ಲಿದೆ.

ಅತ್ಯುತ್ತಮ ಹನಿಗವನಗಳನ್ನು ಸಾಹಿತ್ಯ ಲೋಕಕ್ಕೆ ನೋಡಿದ ಕವಿ ಎಂ. ಎಸ್. ನಾಗರಾಜ್ ಅವರು ಈ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಕೊಂಡರೆ ಬೆಳೆಯುವುದರಲ್ಲಿ ಸಂಶಯವಿಲ್ಲ. ಕವಿಗೆ ಅಭಿನಂದನೆಗಳು.

~ *ಶ್ರೀರಾಮ ದಿವಾಣ*