ಭಾವನೆಗಳು ........ಒಂದಷ್ಟು ಹರಟೆ.
ಶಂಕರರು ಹೇಳುತ್ತಾರೆ "ಜಗತ್ತು ಮಾಯೆ , ಇಲ್ಲಿ ಯಾವುದು ಶಾಶ್ವತವಲ್ಲ. ಪ್ರಪಂಚಿಕವಾದುದನ್ನು ಬಿಟ್ಟು ಸತ್ಯದೆಡೆಗೆ ಮನಸ್ಸು ಮಾಡಿದರೆ ಆಗ ಜೀವನದ ಪರಮಗುರಿ ಸಿಕ್ಕಬಹುದು.ಇದು ಜೀವನದ ಸಾರ್ಥಕತೆ." ಈ ಸತ್ಯವನ್ನೇ ಶಂಕರರು "ಅಹಂ ಬ್ರಹ್ಮಾಸ್ಮಿ" ಎಂದು ಕರೆದರು. ಪ್ರಯತ್ನ ಪ್ರಾಮಾಣಿಕ ಹಾಗು ನಿರಂತರ ಆದಾಗ ಜೀವನದ ನಿತ್ಯ ಸತ್ಯವನ್ನು ಎಲ್ಲರು ಸಾಧಿಸಬಹುದು ಎಂದು ತಮ್ಮ ಭಜ ಗೋವಿಂದಂ ಪದ್ಯದಲ್ಲಿ ಸಾರಿದ್ದಾರೆ. ಶುಷ್ಕವಾದ ವೇದಾನ್ತದಿಂದ ಬದುಕನ್ನು ವ್ಯರ್ಥ ಮಾಡದೆ ಸತ್ಯವನ್ನು ಅರ್ಥಮಾಡಿ ನಡೆಯಿರಿ ಎಂದು ಸಾರಿ ಸಾರಿ ಹೇಳಿದರು.
"ಆಸೆಯಿಂದ ದುಃಖ ಜನಿಸುತ್ತದೆ, ಆಸೆರಹಿತವಾದ ಜೀವನ ಮೋಕ್ಷಕ್ಕೆ ದಾರಿತೊರಿಸುತ್ತದೆ" ಎಂಬುದು ಬುದ್ದನ ವಾದ. "ಯಾರಿಗೂ ಹಿಂಸೆಯನ್ನು ಮಾಡದೆ ಬದುಕು ನಡೆಸುವುದೇ ಪರಮ ಧರ್ಮ,ಇದೇ ಮೋಕ್ಷಕ್ಕೆ ಸರಿಯಾದ ಮಾರ್ಗ" ಎಂಬುದು ಜೈನ ಸಿದ್ದಾಂತ. ಇನ್ನು ಹಲವಾರು ಭಕ್ತಿ ಮಾರ್ಗಗಳು ಭಕ್ತನಿಗೆ, ವ್ಯೆರಾಗ್ಯದ ಮಾರ್ಗ ವಿರಾಗಿಗೆ ಸರಿಯೆನಿಸುತ್ತದೆ. ಇದಕ್ಕೆ ವಿಪರೀತವಾಗಿ ಉಮರ್ ಖಯಾಮನು "ನಾಳೆಗಾಗಿ ಚಿಂತಿಸುವುದು ಮೂರ್ಖತನ, ನಾಳೆ ಬರುವಷ್ಟರಲ್ಲಿ ಇಂದು ಮುಗಿದಿರುತ್ತದೆ,ಜೊತೆಗೆ ನಿನ್ನೆಯ ಜೊತೆಗೆ ಇಂದು ಕೂಡ ಸೇರಿರುತ್ತದೆ. ನಾವು ಮಾತ್ರ ಹಾಗೆ ಇರುತ್ತೇವೆ. ಸತ್ಯ ಅಸತ್ಯ ಎಂದೆಲ್ಲ ತಲೆ ಕೆಡಿಸಿಕೊಳ್ಳುವುದರ ಬದಲು ಇಂದು ನಮ್ಮ ಬಳಿಯೇನು ಇರುತ್ತದೋ ಅದನ್ನು ಆರಾಮವಾಗಿ ಅನುಭವಿಸಬೇಕು. ಜೀವನದ ಸಮಸ್ತ ಅನುಭವಗಳು ಈ ಬದುಕಿಗೆ, ಈ ಭೂಮಿಗೆ ಸೇರಿರುವ ಕಾರಣ, ಇದನ್ನು ಬಿಟ್ಟು ಬದುಕುವುದು ಹಾಸ್ಯಾಸ್ಪದ." ಎನ್ನುತ್ತಾನೆ.
ಹೀಗೆ, ಪ್ರತಿಯೊಬ್ಬರೂ ಕೂಡ ತಮ್ಮ ತಮ್ಮ ಅನುಭವಗಳೇ ಸರಿ ಎಂದು ನಂಬಿ ಜಗತ್ತಿಗೆ ಸಾರಿದ್ದಾರೆ. ಆನೆಯನ್ನು ಕುರುಡ ನೋಡಿದಂತೆ. ತಾನು ನೋಡಿದ್ದೇ ಸತ್ಯ ಎಂದು ವಾದಿಸುವುದು ಕೂಡಾ ಲೋಕದ ರೂಡಿ . ಹೀಗಾಗಿ ಪ್ರತಿಯೊಬ್ಬರೂ ಇಲ್ಲಿ ಭಿನ್ನ ಭಿನ್ನವಾಗಿಯೇ ಸಮರ್ಥನೆ ಮಾಡಿದ್ದಾರೆ. ಇನ್ನು ಲೌಕಿಕದಲ್ಲಿ, ಕಾಶಿಗೆ ಹೋಗಿ ಗಂಗಾ ಸ್ನಾನಮಾಡಿದರೆ ಸ್ವರ್ಗ ಸಿಗುತ್ತದೆ ಎಂದು ಕೆಲವರು ಭಾವಿಸಿದರೆ, ಶುದ್ದವಾದ ನೀರಿನಿಂದ ಎಲ್ಲಿ ಸ್ನಾನ ಮಾಡಿದರು ಸ್ವರ್ಗವೇ ಎನ್ನುತ್ತಾರೆ ಮತ್ತೊಬ್ಬರು. ಸ್ನಾನವೆಂಬುದು ದೈಹಿಕ ಆಚರಣೆಯೇ ಹೊರತು ಇದಕ್ಕೇನು ಮಹತ್ವ ಇಲ್ಲ ಎನ್ನುತ್ತಾರೆ ಮತ್ತೆ ಕೆಲವರು. ದೇಹ ಶುದ್ದ ಮಾಡಿಕೊಂಡು, ಮನಸ್ಸೇ ಶುದ್ದ ಇಲ್ಲದ್ದಿದ್ದರೆ ಏನು ಬಂತು? ಎಂದು ಪ್ರಶ್ನಿಸುತ್ತಾರೆ.
ಹೀಗೆ ಭಾವನೆಗಳು ಪ್ರತಿಯೊಬ್ಬರಲ್ಲೂ ಬೇರೆಯೇ ಆಗಿದೆ. ಇದೆ ರೀತಿ ಪೂಜೆ ಪುನಸ್ಕಾರಗಳಲ್ಲು ಅವರವರದೇ ಆದ ವಿಭಿನ್ನ ಅಭಿಪ್ರಾಯಗಳು ಇವೆ. ಇಲ್ಲಿ ಯಾವುದು ತಪ್ಪು, ಯಾವುದು ಸರಿ ಎಂಬ ವಾದಕ್ಕಿಂತ ನಮಗೇನು ಸರಿ ಎಂಬುವುದೇ ಪ್ರಸ್ತುತ ಆಗುತ್ತದೆ. ನಮ್ಮನಮ್ಮ ಭಾವನೆಗಳು, ನಂಬಿಕೆಗಳು, ಆಚಾರ ವಿಚಾರಗಳು ಯಾರ ವ್ಯಯಕ್ತಿಕ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡದೆ ಇದ್ದರೆ, ಇದು ನಮ್ಮ ನೆಮ್ಮದಿಯ ಜೀವನಕ್ಕೆ ಒಂದು ದಿಕ್ಕು ಸಿಗುತ್ತದೆ . ಬೇಡದ ವಿಚಾರಕ್ಕೆ ತಲೆ ಕೆಡಿಸಿಕೊಳ್ಳುವುದರ ಬದಲಿಗೆ ನಮ್ಮನ್ನು ನಾವು ಸರಿ ದಾರಿಯಲ್ಲಿ ನಡೆಸಿಕೊಂಡು ಹೋದರೆ, ನಮ್ಮಿಂದ ಯಾರಿಗೂ ತೊಂದರೆಯಂತೂ ಇಲ್ಲ, ಸಹಾಯ ಆಗದಿದ್ದರೂ ಪರವಾಗಿಲ್ಲ.
ಇದಕ್ಕೆ ನೀವೇನು ಅಂತೀರಾ?.................
Comments
ಉ: ಭಾವನೆಗಳು ............ಒಂದಷ್ಟು ಹರಟೆ.
In reply to ಉ: ಭಾವನೆಗಳು ............ಒಂದಷ್ಟು ಹರಟೆ. by makara
ಉ: ಭಾವನೆಗಳು ............ಒಂದಷ್ಟು ಹರಟೆ.