ಭಾವನೆಯ ಕೊಲೆಗಾರ...

ಭಾವನೆಯ ಕೊಲೆಗಾರ...

ಭಾವನೆಗಳ ಕೊಲೆಗಾರ
ಅಮೂರ್ತದಿಂದ ಶುರುವಾದ ಪರಿಪಕ್ವವಲ್ಲದ ಅನುರಾಗದ ಅಲೆ ನಮ್ಮಿಬ್ಬರ ಮನದಲ್ಲಿ ಕಂಪಿಸಲು ಆರಂಭಿಸಿದಾಗ ನಮಗೆ ಗೊತ್ತಿಲ್ಲದೆ ಹೊಸ ಲೋಕದೊಳಗೆ ನಾವು ಕಾಲಿಟ್ಟು ಬಿಟ್ಟಿದ್ದೆವು. ದಿನ ದಿನವೂ ಹೊಸ ಉಲ್ಲಾಸ ,ಹೊಸ ಉತ್ಸಾಹ , ಕಾಲೇಜ್ ಅಂದರೆ ಕೇವಲ ವಿದ್ಯಾರ್ಜನೆಗೋಸ್ಕರ ಇರುವ ಒಂದು ಕಟ್ಟಡ ಎಂದೇ ಭಾವಿಸಿದ್ದ ನಾನು ಅವಳ ಜೊತೆಗಿನ ಗೆಳೆತನ ಶುರುವಾಗಿನಿಂದ ಅದು ಕೇವಲ ಕಟ್ಟಡವಲ್ಲ ಅದೊಂದು ಪ್ರೀತಿ ಎಂಬ ಎಂದೂ ಬಾಡದಂತಹ ಹಚ್ಚ ಹಸಿರಿನ ತೋಪಿನಿಂದ ಆವರಿಸಿಕೊಂಡಿರುವ ಒಂದು ಪ್ರೇಮಸೌಧವಾಗಿ ಮಾರ್ಪಟ್ಟಿತು. ಒಂದು ಮೊಬೈಲ್ ಸಂದೇಶದಿಂದ ಇಬ್ಬರ ನಡುವೆ ಇದ್ದ ಅಪರಿಚತೆ ದೂರವಾಗಿ ಸುಂದರ ಗೆಳೆತನದ ನವವಸಂತ ಶುರುವಾಯಿತು. ದಿನಕ್ಕೆ ಮೂರು ಅಥವಾ ನಾಲ್ಕು ಸಾರಿ ಆಗುತ್ತಿದ್ದ ಮೊಬೈಲ್ ಸಂದೇಶಗಳ ವಿನಿಮಯ ದಿನಗಳೆದಂತೆ ಮಿತಿಗೆ ಸಿಲುಕದಷ್ಟು ಹೆಚ್ಚಾಯಿತು. ಕೇವಲ ಸಂದೇಶಗಳಲ್ಲೆ ನಮ್ಮ ಮಾತುಗಳು ಸೀಮಿತವಾಗಿರದೆ ದೂರವಾಣಿ ಸಂಭಾಷಣೆ ಆರಂಭವಾಗುವುದಕ್ಕೆ ಹೆಚ್ಚು ದಿನಗಳು ಹಿಡಿಯಲಿಲ್ಲ, ನಾನು ಎಂದೂ ಊಹಿಸದ ನವೀನ ಲೋಕದ ಒಡಲೊಳಗೆ ಅವಳ ಆ ಸುಂದರ ಒಲವಿನ ಚೆಲುವು ದೂಡಿತ್ತು. ಸೂರ್ಯೋದಯದ ಬೆಳ್ಳಂಬೆಳಗ್ಗಿನ ಬೆಳಕು ಚೆಲ್ಲುವ ಅವಳ ಮೊಬೈಲ್ ಮೇಘ ಸಂದೇಶ ನನ್ನ ಇಡೀ ದಿನದ ಸಂತೋಷದ ಸೂಚನೆಯಾಗಿತ್ತು.. ನಮ್ಮ ಅನುರಾಗದ ಈ ಹೂವು ಅರಳಲು ನಾನಾಗಲಿ ಅಥವಾ ಅವಳಾಗಲಿ ಪ್ರೇಮ ನಿವೇದನೆ ಎಂಬ ನೀರು ಹಾಕಲಿಲ್ಲ, ಗೊಬ್ಬರವೂ ಹಾಕಲಿಲ್ಲ ಆದರೂ ಇಬ್ಬರ ನಡುವೆ ಪ್ರೀತಿ ಎಂಬ ಗಿಡ ಮರವಾಗಲು ಶುರುವಾಯಿತು. ದಿನಗಳು ಉರುಳಿದಂತೆ ಇಬ್ಬರ ನಡುವೆ ಬಂಧ ಬದ್ಧತೆಯನ್ನು ಮರೆಸುವಷ್ಟು ಬಲ ಈ ನಮ್ಮ ಹೆಸರಿಡದ ಹೊಸ ಅನುಬಂಧ ನೀಡಿತ್ತು. ಅವಳ ನಯನಗಳಲಿ ಏನೋ ಕೋಲ್ಮಿಂಚು ಇತ್ತು , ಒಮ್ಮೆ ನೋಡಿದರೆ ಬೇರೆ ಕಡೆ ಗಮನ ಹರೆಯದಂತೆ ತನ್ನತ್ತ ಸೆಳೆಯುವಂತೆ ಮಾಡುವ ಅನನ್ಯ ಬಲ ಅವಳ ಮೊಗದಲ್ಲಿ ಅಡಗಿತ್ತು.
ಅಂದು ಎಂದಿನಂತೆ ಕಾಲೇಜಿನ ತರಗತಿ ಪ್ರಾರ್ಥನೆಯೊಂದಿಗೆ ಆರಂಭವಾಯಿತು, ಇದರಲ್ಲೇನು ವಿಶೇಷವಿರಲಿಲ್ಲ, ಅವಳು ತೊಟ್ಟಿದ್ದ ಸೀರೆನೇ ತುಂಬಾ ವಿಶೇಷವಾದ ವಿಷಯ ಇಲ್ಲಿ. ಅದು ಸಾಮಾನ್ಯವಾದ ಸೀರೆಯಾಗಿರಲಿಲ್ಲ , ಕಡು ಕಂದು ಬಣ್ಣದ ಸೀರೆಯ ಸೇರಗಿಗೆ ಇದ್ದ ಆ ಹೊಂಬಣ್ಣದ ಗೆರೆಗಳು ಬಹಳ ಮೆರಗನ್ನು ತಂದುಕೊಟ್ಟಿದ್ದವು. ಗೋಧಿ ಬಣ್ಣ ಸಾಧಾರಣ ಮೈಕಟ್ಟಿನ ಅವಳಿಗೆ ಆ ಸೀರೆ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು ಎಂದರೂ ಅತಿಶಯೋಕ್ತಿಯಲ್ಲ.
ಬೆಳಗ್ಗೆ ಹತ್ತಾದರೂ ಬಿಡದ ಚುಮು ಚುಮು ಚಳಿ ಒಂದುಕಡೆಯಾದರೆ ನೋಡಿದರೆ ಮತ್ತೆ ಮತ್ತೆ ನೋಡುವಂತೆ ಮಾಡುವ ಆ ಸೀರೆ ಸುಂದರಿ ಇನ್ನೊಂದು ಕಡೆ. ಯಾವುದೋ ಕಾರಣವಿಲ್ಲದ ಹುಸಿ ಮುನಿಸಿನಿಂದ ನಾನು ಅವಳ ಕಡೆ ಗಮನ ಹರಿಸದೇ ಹೋದಂತೆ ನನ್ನ ಮನಸಿನಲ್ಲಿ ನಿಚ್ಚಳವಾದ ನೀಲಿ ಆಗಸದಲ್ಲಿ ಕಾರ್ಮೋಡ ಕವಿದಂತೆ ದುಃಖದ ಭಾವ ಆವರಿಸಿತು. ಅವಳು ನನ್ನನ್ನು ಹಿಂತಿರುಗಿ ನೋಡದೆ ಇರುವಾಗ ನಾನು ಕದ್ದು ಮುಚ್ಚಿ ನೋಡಿದಾಗ ಅವಳ ಮುಖವೆಲ್ಲಾ ಬಾಡಿದ ಹೂವಿನಂತೆ ಆಗಿತ್ತು. ಪಾಠ ಕೇಳುವಂತೆ ನಟಿಸಿ ದುಃಖವೆಲ್ಲ ಮರೆಯುವ ಅವಳ ಪ್ರಯತ್ನವನ್ನು ನೋಡಿ ನನಗೆ ತುಂಬಾ ನೋವಾದರೂ ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಸಮಾಧಾನ ಮಾಡುವ ಗೋಜಿಗೆ ಹೋಗದಿರುವದನ್ನು ಕಂಡು ಅವಳು ಮತ್ತಷ್ಟು ಕೊರಗಿ ಕಣ್ಣೀರು ಹಾಕುವಂತೆ ಮಾಡಿದ ನಾನು ನಿಜಕ್ಕೂ ಅವಳ ಭಾವನೆಗಳ ಕೊಲೆಗಾರ ಅಲ್ಲದೆ ಬೇರೇನೂ ಅಲ್ಲ.
ಶಿವರಾಜ್ ಬಿ.ಎಲ್
ಪಿ ಕೆ ಜಿ ಬ್ಯಾಂಕ್ ಉದ್ಯೋಗಿ
ದೇವದುರ್ಗ