ಭಾವಲೋಕ

ಭಾವಲೋಕ

ಪುಸ್ತಕದ ಲೇಖಕ/ಕವಿಯ ಹೆಸರು
ಪಿ.ಶ್ರೀಧರ್ ನಾಯಕ್
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೨೦.೦೦, ಮುದ್ರಣ: ೨೦೨೨

ಪತ್ರಕರ್ತರಾದ ಪಿ.ಶ್ರೀಧರ್ ನಾಯಕ್ ಅವರ ಪ್ರಬಂಧ ಮತ್ತು ಲೇಖನಗಳ ಸಂಕಲನವೇ ‘ಭಾವಲೋಕ'. ಈ ಪುಸ್ತಕಕ್ಕೆ ಸೊಗಸಾದ ಮುನ್ನುಡಿ ಬರೆದಿದ್ದಾರೆ ಲೇಖಕ, ಶಿಕ್ಷಣ ತಜ್ಞರಾದ ಡಾ. ಮಹಾಬಲೇಶ್ವರ ರಾವ್. ಅವರು ಹೀಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾರೆ. “ನವುರಾದ ಹಾಸ್ಯ, ಸರಸ ನಿರೂಪಣೆ, ಸುಂದರ ವರ್ಣನೆ ಸಹಿತವಾದ ‘ತುಂಟಿ ರೂಬಿಯ ದಶಾವತಾರ' ಪ್ರಬಂಧ ಉತ್ತಮ ಲಲಿತ ಪ್ರಬಂಧಗಳ ಸಾಲಿನಲ್ಲಿ ನಿಲ್ಲುವಂತದ್ದು. ಈ ಪ್ರಬಂಧವನ್ನು ಓದುವಾಗ ನನಗೆ ಕೆ.ಎಸ್. ನ. ಅವರ ‘ತುಂಗಭದ್ರೆ', ಡಾ. ಹಾ. ಮ. ನಾಯಕರ ‘ನಮ್ಮ ಮನೆಯ ದೀಪ', ಡಾ. ಎ ಎನ್ ಮೂರ್ತಿರಾಯರ, ವಿ.ಸೀ. ಅವರ ಮತ್ತು ಇತ್ತೀಚಿನ ಎಂ. ಆರ್. ಕಮಲಾ ಅವರ ಪ್ರಬಂಧಗಳು ನೆನಪಿಗೆ ಬಂದವು. ಈ ಪ್ರಬಂಧವನ್ನು, ರೆಕ್ಕೆ, ಬಾಲಗಳ ಲೋಕ' ಹಾಗೂ ಗುಬ್ಬಚ್ಚಿಗಳ ಶೋಕ ಪ್ರಸಂಗ' ಪ್ರಬಂಧಗಳನ್ನು ಓದುವಾಗ, ಪಿ. ಶ್ರೀಧರ್ ನಾಯಕ್ ಅವರಲ್ಲಿ ಓರ್ವ ಪ್ರಾಣಿ ಮನೋವಿಜ್ಞಾನಿ ಇದ್ದಾನೆ ಅನ್ನಿಸಿತು. 

ಲೇಖಕರು ವರದಿಗಾರರಾಗಿ ದುಡಿದ ಅಪಾರ ಅನುಭವದಿಂದಾಗಿ ಇಲ್ಲಿನ ಪ್ರಬಂಧಗಳ ಭಾಷೆ ನೇರವೂ ಸರಳವೂ ಹೃದ್ಯವೂ ಆಗಿದೆ. ಈ ಸಂಕಲನದ ಪ್ರಬಂಧಗಳು ನಮಗೆ ಆಪ್ತವಾಗುತ್ತವೆ. ನಮ್ಮ ಎದೆಯ ಕದ ಬಡಿಯುತ್ತವೆ. ಮಾನವೀಯ ಅಂತಃಕರಣವನ್ನು ಬೆಳಗುತ್ತವೆ. ಪಶುಪಕ್ಷಿಗಳ ಸಂಬಂಧದಲ್ಲಿನ ನಮ್ಮ ವ್ಯವಹಾರಗಳನ್ನು ಆತ್ಮಾವಲೋಕನ ಮಾಡಿಕೊಳ್ಳಲು ಆಹ್ವಾನಿಸುತ್ತವೆ. ಶ್ರೀಧರ್ ನಾಯಕ್ ರಿಂದ ನಾವು ಈ ಬಗೆಯ ಇನ್ನಷ್ಟು ವೈವಿಧ್ಯಮಯ ಪ್ರಬಂಧಗಳನ್ನು ನಿರೀಕ್ಷಿಸಬಹುದು ಎಂಬ ಆಸೆ ಹುಟ್ಟುತ್ತದೆ."

‘ಮಯೂರ’ ಮಾಸಿಕದ ಮುಖ್ಯ ಉಪ ಸಂಪಾದಕರಾಗಿರುವ ಸಂದೀಪ ನಾಯಕ ಇವರು ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ. ಅವರು “ ಲೋಕದ ಹಲವು ವಿಷಯಗಳಲ್ಲಿ ಸದಾ ಮುಳುಗಿರುವ ಪತ್ರಕರ್ತ ಪಿ.ಶ್ರೀಧರ್ ನಾಯಕ್ ಅವರ ಲೇಖನ ಸಂಕಲನ ‘ಭಾವಲೋಕ' ಹಲವು ಅಂಶಗಳಿಂದಾಗಿ ವಿಶಿಷ್ಟವಾಗಿದೆ. ಈ ಪುಸ್ತಕದ ಲೇಖನಗಳು ಪತ್ರಕರ್ತನಿಗೆ ಅನಿವಾರ್ಯವಾದ ಅವಸರದಿಂದ ಹುಟ್ಟಿದವುಗಳಲ್ಲ. ಭಾವವನ್ನು ತಾಕಿದ, ಬುದ್ಧಿಯನ್ನು ಕೆಣಕಿದ ವಸ್ತುಗಳಷ್ಟೆ ಇಲ್ಲಿ ಲೇಖನಗಳಾಗಿ ಮೂಡಿವೆ.

ಈ ಭಾವಲೋಕದಲ್ಲಿ ಅವರ ಮುದ್ದು ನಾಯಿ ರೂಬಿ ಇದ್ದಾಳೆ, ಬೆಕ್ಕು, ಬೀದಿ ನಾಯಿ, ಮನೆಯಲ್ಲಿ ಗೂಡು ಕಟ್ಟಿದ ಗುಬ್ಬಚ್ಚಿಗಳ ಸಂಸಾರವಿದೆ. ಬಾಲ್ಯದಲ್ಲಿ ಸಾಕಿದ ಗಿಳಿಗಳಿದ್ದಾವೆ. ಈ ಪ್ರಾಣಿ ಸಂಕಲನ ಒಂಡೆಡೆಯಾದರೆ, ಇನ್ನೊಂದೆಡೆ ಮನುಷ್ಯ ಸಂಕುಲದ ಕತೆಗಳಿವೆ. ಮನುಷ್ಯನ ವಂಚನೆಯ, ಗಂಡು ಹೆಣ್ಣಾಗುವ, ಹೆಣ್ಣು ಗಂಡಾಗುವ ದ್ವಂದ್ವದ ಮತ್ತು ಪ್ರಸಿದ್ಧ ಬೇಹುಗಾರ್ತಿಯವರ ಕುರಿತ ಕುತೂಹಲಕರ ಲೇಖನಗಳು ಒಂದು ತುದಿಯಲ್ಲಿದ್ದರೆ, ಇನ್ನೊಂದು ತುದಿಯಲ್ಲಿ ದೆವ್ವದ ಕುರಿತ ಲೇಖನವಿದೆ. ಇಲ್ಲೆಲ್ಲ ಪತ್ರಕರ್ತನಿಗೆ ಇರಬೇಕಾದ ಚಿಕಿತ್ಸಕ ದೃಷ್ಟಿಕೋನ, ಓದುಗರಿಗೆ ಹೊಸ ವಿಷಯವನ್ನು ಕೊಡಬೇಕು ಎಂಬ ಉತ್ಸಾಹ ಕೆಲಸ ಮಾಡಿದೆ. ಅವು ಅವರ ಬರಹಕ್ಕೆ ವೇಗವನ್ನು, ತುರ್ತನ್ನು ಕೊಟ್ಟಿವೆ. ನಾಯಕ್ ಅವರ ಬರಹದ ಸಂಗ್ರಹ ಗುಣ, ವ್ಯಂಗ್ಯ, ಸರಳ ನಿರೂಪಣೆ, ವಿಷಯದ ಆಳಕ್ಕಿಳಿಯುವ ಅವರ ಪರಿಣಿತಿ ಇಲ್ಲಿ ಉಲ್ಲೇಖಾರ್ಹ “ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.