ಭಾವಸಿಂಚನ -Orkut ಕವಿತೆಗಳು

ಭಾವಸಿಂಚನ -Orkut ಕವಿತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕರು: 3K ಕನ್ನಡ ಕವಿತೆ ಕವನ
ಪ್ರಕಾಶಕರು
3K ಬಳಗ, kannada3k@gmail.com
ಪುಸ್ತಕದ ಬೆಲೆ
ನಮೂದಿಸಿಲ್ಲ, ಮುದ್ರಣ: ೨೦೧೧

‘ಭಾವಸಿಂಚನ’ ಎಂಬ Orkut ಕವಿತೆಗಳ ಸಂಗ್ರಹವನ್ನು 3K ಬಳಗದವರು ಹೊರತಂದಿದ್ದಾರೆ. ಈ ಪುಸ್ತಕದ ಎಲ್ಲೂ ಈ ಕವಿತೆಗಳನ್ನು ಸಂಪಾದನೆ ಮಾಡಿದವರ ಹೆಸರಿಲ್ಲ. ಅದರ ಬದಲಾಗಿ 3K ಕನ್ನಡ ಕವಿತೆ ಕವನ ಎಂದು ನಮೂದಿಸಿದ್ದಾರೆ. ತಮ್ಮದೇ ಆದ ಆರ್ಕುಟ್ ಬಳಗದಲ್ಲಿನ ಸದಸ್ಯರ ಕವನಗಳನ್ನು ಆಹ್ವಾನಿಸಿ ಉತ್ತಮ ಆಯ್ಕೆಗಾರರಿಂದ ಅವುಗಳನ್ನು ಆರಿಸಿ ಪುಸ್ತಕ ರೂಪದಲ್ಲಿ ಹೊರತಂದಿರುವುದು ಶ್ಲಾಘನೀಯ. ಲಾಭದ ದೃಷ್ಟಿಯಿಂದ ಈ ಕಾರ್ಯವನ್ನು ಮಾಡದೇ ಇರುವುದು ಇನ್ನಷ್ಟು ಅಚ್ಚರಿ ತರುತ್ತದೆ. ಏಕೆಂದರೆ ಇದರ ಬೆಲೆ : ‘ಕನ್ನಡವನ್ನು ಪೋಷಿಸಿ ಬೆಳೆಸಲು ಬಯಸುವವರಿಗೆ 3K ಬಳಗದ ಉಡುಗೊರೆ’ ಎಂದು ಮುದ್ರಿಸಿದ್ದಾರೆ. ಹಾಗೆಯೇ ಈ ಪುಸ್ತಕವನ್ನು ‘ಸಹೃದಯ ಕನ್ನಡಿಗರಿಗೆ’ ಅರ್ಪಿಸಿದ್ದಾರೆ.

ಪುಸ್ತಕದ ಬೆನ್ನುಡಿಯಲ್ಲಿ ಕವಿತೆಗಳ ಆಯ್ಕೆಗಾರರಲ್ಲಿ ಒಬ್ಬರಾದ ರೂಪ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದಾರೆ. “ಖಂಡಿತವಾಗಿಯೂ ಇದೊಂದು ವಿಭಿನ್ನ ಪ್ರಯತ್ನ. ಪ್ರಸಿದ್ಧ ಸಾಮಾಜಿಕ ತಾಣ ಆರ್ಕುಟ್ ‘3K-ಕನ್ನಡ ಕವಿತೆ ಕವನ' ವೆಂಬ ನಮ್ಮದೇ ಕಮ್ಯೂನಿಟಿಯಲ್ಲಿ ಪ್ರಕಟಗೊಂಡ ಕೆಲವು ಆಯ್ದ ಸುಂದರ ಕವಿತೆಗಳ ಮಧುರ ಗುಂಜನ ಈ ‘ಭಾವ ಸಿಂಚನ'.

ಕನ್ನಡ, ಕವಿತೆ, ಕವನ ಅಂತ ಹೇಳಿಕೊಂಡು ಸ್ವಲ್ಪ ಮಟ್ಟಿಗೆ ಅವರಿವರ ಜೊತೆ ಹರಟಿದ್ದುಂಟು. ಈ ಹರಟೆ ಒಂದು ಸಮೂಹವಾಗಿ ಈ ದಿನ ಬೆಳೆದಿದೆ ಎಂದು ಹೇಳಿಕೊಳ್ಳಲು ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ೨೦೦೮ರ ಕೊನೆಯಲ್ಲಿ ಪ್ರಯೋಗಾತ್ಮಕವಾಗಿ - 3Kಯ ಆರಂಭ ! ಈ ದಿನ ೩೦೦ಕ್ಕೂ ಹೆಚ್ಚು ಸದಸ್ಯರು ಹಾಗೂ ೧೫೦೦ ಕ್ಕೂ ಹೆಚ್ಚು ಕವನಗಳಿಂದ ಕೂಡಿದ ಹೆಗ್ಗಳಿಕೆ! ಇದು ಸಾಮಾನ್ಯ ಸಂಗತಿಯಂತೂ ಖಂಡಿತ ಅಲ್ಲ. ಹೇಗೋ ಬರೆಯುತ್ತಿದ್ದ ಬರಹಗಾರರು ಈ ದಿನ ಮುಕ್ತವಾಗಿ, ಇನ್ನಷ್ಟು ಆಳವಾಗಿ, ಗುಣಮಟ್ಟದ ಕವಿತೆಗಳನ್ನು ಬರೆಯುತ್ತಿದ್ದಾರೆ. ಇಲ್ಲಿನ ಕವಿತೆಗಳನ್ನು ಬರೆಯುವವರೆಲ್ಲರೂ professional ಕವಿಗಳಲ್ಲ! ಹವ್ಯಾಸಕ್ಕಾಗಿ ಬರೆದಿರುವವರೇ ಹೆಚ್ಚು. ಆದರೂ ಇವರ ಕವಿತೆಗಳಲ್ಲಿನ ಭಾವ, ಪ್ರೀತಿ-ಪ್ರೇಮ, ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳು, ಹಾಸ್ಯಪ್ರಜ್ಞೆ, ನೋವಿನಾಳ, ದೇಶಪ್ರೇಮ, ಎಲ್ಲವೂ ಸಹ ನಿಮ್ಮನ್ನು ಅರೆಕ್ಷಣ ಮಂತ್ರಮುಗ್ಧರನ್ನಾಗಿಸುತ್ತದೆ. ಈ ಕವನ ಸಂಕಲನದಿಂದ ಅವರಿಗೆಲ್ಲ ಸಾಹಿತ್ಯ ಪ್ರಪಂಚದಲ್ಲಿ ಒಂದು ಒಳ್ಳೆಯ ನೆಲೆ ಸಿಗಲೆಂಬ ಆಸೆ ಹಾಗೂ ನಂಬಿಕೆ ನನ್ನದು" ಎಂದು ಅಭಿಪ್ರಾಯಪಟ್ಟಿದ್ದಾರೆ.

ಖ್ಯಾತ ಕವಿ, ಚಲನ ಚಿತ್ರ ಗೀತೆಗಳ ಸಾಹಿತಿ, ಕವಿರಾಜ್ ಅವರು ಈ ಪುಸ್ತಕಕ್ಕೆ ಪ್ರೀತಿಯಿಂದ ಮುನ್ನುಡಿಯನ್ನು ಬರೆದು, ಕವನಗಳನ್ನು ಪುಟ್ಟದಾಗಿ ವಿಮರ್ಶೆ ಮಾಡಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ “...ಅರುಣ್ ಕುಮಾರರ ‘ಮುನ್ನುಡಿಯಲ್ಲೇ ಮುಗಿದ ಕಥೆ' ಶೀರ್ಷಿಕೆಯಿಂದಲೇ ಭಾವದ ಕೊಳಕ್ಕೆ ಕಲ್ಲೆಸೆಯಿತು! ಇದೇ ಕವಿತೆಯಲ್ಲಿ ‘ನಲ್ಲೆಯಿಲ್ಲದ ಕವಿತೆ ನೀರಿರದ ನದಿಯಂತೆ' ಎಂಬ ಸಾಲು ಪ್ರೀತಿಯಿರದೆ ಬದುಕು ಖಾಲಿ ಎಂಬ ಕವಿತೆಯ ಆಶಯವನ್ನು ತನ್ನ ಸರಳತೆಯಿಂದಲೇ ಸಮರ್ಥವಾಗಿ ಅಭಿವ್ಯಕ್ತಿಸುತ್ತದೆ. ಪ್ರದೀಪರವರ ‘ನದಿ-ದಡ' ಕವಿತೆಯಲ್ಲಿ ಕವಿ ತಾನು ದಡ, ಅವಳು ನದಿ, ತನ್ನನ್ನು ಸೀಳಿ ಹರಿದು ಹೋಗಿ ಅವಳು ಸಾಗರ ಸೇರಿದರೂ ಮುಂದೆಂದೋ ಮಳೆಯಾಗಿ ಮರಳಿ ತನ್ನನ್ನು ಸೇರಬಹುದೆಂಬ ಮೂಲಕ ಕಳೆದ ಪ್ರೇಮವು ಮರಳೊ ನಿರೀಕ್ಷೆಯಲ್ಲಿರುವವರಿಗೆ ಒಂದಿಷ್ಟು ಆಶಾಕಿರಣ ಚಿಮ್ಮಿಸಬಹುದು. ಅನುಪಮಾರವರ ‘ವಿನಿಮಯ' ಕವಿತೆ ಬೇರೆ ಬೇರೆ ಊರುಗಳಲ್ಲಿದ್ದರೂ, ಒಂದೇ ಸಮಯದಲ್ಲಿ ಚಂದಿರನ ನೋಡೋಣ ಎನ್ನುತ್ತಾ ಪ್ರೇಮಿಗಳ ಹಪಾಹಪಿಯನ್ನು ಧ್ವನಿಸುತ್ತದೆ. ..." ಹೀಗೆ ಒಂದೊಂದು ಕವಿತೆಯ ಬಗ್ಗೆ ಮುಕ್ತವಾಗಿ ಹೇಳಿದ್ದಾರೆ ಕವಿರಾಜ್ ಅವರು. 

ಪುಸ್ತಕಕ್ಕೆ ಬಂದ ಹಲವಾರು ಕವಿತೆಗಳಿಂದ ಕೆಲವನ್ನು ಆಯ್ಕೆ ಮಾಡಿದ ಅನುಪಮಾ ಹೆಗಡೆ ಮತ್ತು ಮಂಜುನಾಥ ಕೊಳ್ಳೇಗಾಲ ಇವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ವಿವಿಧ ಬರಹಗಾರರ ಸುಮಾರು ೬೫ ಕವಿತೆಗಳು ಈ ಪುಸ್ತಕದ ಪುಟಗಳನ್ನು ಅಲಂಕರಿಸಿವೆ. ಸುಮಾರು ೧೦೦ ಪುಟಗಳ ಸಮೃದ್ದ ಕವಿತಾ ಸಂಗ್ರಹ ಇದು. ಕವಿಗಳ ಪರಿಚಯ ಮತ್ತು ವಿಳಾಸಗಳನ್ನು ಪುಸ್ತಕದ ಕೊನೆಯ ಪುಟದಲ್ಲಿ ನೀಡಿರುವುದು ಉತ್ತಮ ಸಂಗತಿ.