ಭಾವಾಂಬುಧಿ

ಭಾವಾಂಬುಧಿ

ಪುಸ್ತಕದ ಲೇಖಕ/ಕವಿಯ ಹೆಸರು
ಚನ್ನಕೇಶವ ಜಿ.ಲಾಳನಕಟ್ಟಿ
ಪ್ರಕಾಶಕರು
ಹೆಚ್ ಎಸ್ ಆರ್ ಎ ಪ್ರಕಾಶನ, ಭೈರವೇಶ್ವರ ನಗರ, ಬೆಂಗಳೂರು.
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೪

‘ಭಾವಾಂಬುಧಿ' ಎನ್ನುವ ಅಪರೂಪದ ಷಟ್ಪದಿ ಸಂಕಲನವನ್ನು ರಚಿಸಿದ್ದಾರೆ ಚನ್ನಕೇಶವ ಜಿ ಲಾಳನಕಟ್ಟಿ. ಇವರ ಬಗ್ಗೆ ಹಾಗೂ ಈ ಕೃತಿಯ ಬಗ್ಗೆ ಸೊಗಸಾದ ಬೆನ್ನುಡಿಯನ್ನು ಬರೆದಿದ್ದಾರೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಡಿ. ಮಲ್ಲಾರೆಡ್ಡಿಯವರು. ಇವರು ತಮ್ಮ ಬೆನ್ನುಡಿಯಲ್ಲಿ “ಕನ್ನಡ ಸಾಹಿತ್ಯ ಪರಂಪರೆಗೆ ಸುಮಾರು ೨೦೦೦ ವರ್ಷಗಳ ಸಮೃದ್ಧ ಇತಿಹಾಸವಿದ್ದು, ಕಾವ್ಯ ರಚನೆಯಲ್ಲಿ ಬೇರೆ ಬೇರೆ ಭಾಷೆಗಳಿಗಿಂತ ಉತ್ತಮ ಕಾವ್ಯವನ್ನು ರಚಿಸಿದ ಹೆಮ್ಮೆ ನಮ್ಮದಾಗಿದೆ. ಹಳೆಗನ್ನಡ, ಪೂರ್ವಕನ್ನಡ, ನಡುಗನ್ನಡ ಕಾಲದ ಕವಿ ಶ್ರೇಷ್ಟರಾದ ಪಂಪ, ರನ್ನ, ಪೊನ್ನ, ಜನ್ನ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ...ನಂತಹ ಕವಿ ಶ್ರೇಷ್ಟರು ಹಾಗೂ ಇವರ ಹಿಂದಿನವರು ಛಂದಸ್ಸಿಗನುಗುಣವಾಗಿ ರಚಿಸಿದ್ದ ಕಾವ್ಯಗಳು, ಇಂದೂ ಜನ ಮಾನಸದಲ್ಲಿ ಗಟ್ಟಿಯಾಗಿ ನಿಂತಿದೆ. ಛಂದಸ್ಸಿನ ಒಂದು ಪ್ರಕಾರವಾದ “ಷಟ್ಪದಿ" ಎಂಬ ಕಾವ್ಯದಲ್ಲಿ ಆರು ಪಾದಗಳಿದ್ದು, ಆ ಪಾದಗಳ ರಚನೆಯು ಒಂದು ನಿರ್ದಿಷ್ಟ ನಿಯಮಕ್ಕೊಳಪಟ್ಟಿರುತ್ತವೆ.” ಎಂದಿದ್ದಾರೆ.

ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿಯಾದ ಬಿಟ್ಟೀರ ಚೋಂದಮ್ಮ ಇವರು. ಅವರ ಮುನ್ನುಡಿಯಿಂದ ಆಯ್ದ ಭಾಗಗಳು ನಿಮ್ಮ ಓದಿಗಾಗಿ...

ಚೆನ್ನಕವಿ ತಾನೆದ್ದು
ಮುನ್ನ ತಾ ಸರಸತಿಗೆ
ರನ್ನ ಪಂಪಾದಿ ಪೊನ್ನರಿಗೆ ಮುಗಿದು
ಕಣ್ಣಿನೊಳು ಕಂಡಂತೆ
ಬಣ್ಣಿಪನು ಸೊಗದಲ್ಲಿ
ಚಿನ್ನಸವಿನುಡಿಗಳನು ಷಟ್ಪದಿಯಲಿ.

ಷಟ್ಪದಿಗಳೆಂದರೆ ಲಯ ತಾಳದ ಚೌಕಟ್ಟಿನಲ್ಲಿ, ಲೆಕ್ಕದಲ್ಲಿ ಪಕ್ಕವಾಗಿರುವ, ಹಿಂದಿನ ಕವಿಗಳು ಹುಟ್ಟು ಹಾಕಿ ನಿಯಮವಿಟ್ಟು ಬಳಸಿದ ಕಾವ್ಯ ಪ್ರಕಾರ. ಕ್ರಮಬದ್ಧವಾದ ರಚನಾ ವೈಖರಿ. ದೇಹದಲ್ಲಿ ಉಸಿರಾಟವು ಹೇಗೋ ಹಾಗೆಯೇ, ಮಾನವನ ವಿವಿಧ ಹಂತಗಳಾದ ಹರ್ಷ, ಆಯಾಸ, ಉದ್ರೇಕ, ಶಾಂತ ಸ್ಥಿತಿಗಳಂತೆ ಒಂದೊಂದು ಷಟ್ಪದಿಯ ನಡೆಯೂ ಇರುತ್ತದೆ. ಕೆಲವು ಕವಾಯತಿನಂತೆ ಟಿಕ್ ಟಾಕ್ ಇದ್ದರೆ, ಕೆಲವು ನವತರುಣಿಯಂತೆ ಬಳುಕುವ, ಲಾಲಿತ್ಯದಿಂದ ಕೂಡಿರುತ್ತದೆ. ಮತ್ತೆ ಕೆಲವು ಗಾಂಭೀರ್ಯದಿಂದ ಕೂಡಿದ ನಡೆಯಿರುತ್ತದೆ. ಪದಗಳ ಓಟದ ತೀವ್ರತೆ, ಮಂದ್ರತೆ ಗಾಂಭೀರ್ಯ ಮಾತ್ರಾಗಣಗಳಿಗನುಗುಣವಾಗಿರುತ್ತದೆ. ನಿಯಮಬದ್ಧವಾಗಿ, ಅರ್ಥವತ್ತಾಗಿ, ನವರಸ ಭಾವ ಬೆರೆಸಿ ರಚಿಸುವ ಕಾಯಕ ಕಬ್ಬಿಗನದು.

ಇಂದು ಜಾಲತಾಣಗಳಲ್ಲಿ ಲಂಗು ಲಗಾಮಿಲ್ಲದೆ ಕವನ ಕಾವ್ಯ ಕಟ್ಟಿ ಬಿತ್ತರಿಸುವ ಬಹುಮಂದಿ ಕವಿಗಳಿದ್ದಾರೆ. ಷಟ್ಪದಿಗಳನ್ನೂ ಬರೆಯುವವರಿದ್ದಾರೆ. ಆದರೆ ಅರ್ಥವತ್ತಾದ ರಚನೆ ಕೆಲವೇ ಕೆಲವು ಕವಿಗಳು ರಚಿಸುತ್ತಾರೆ. ಅಂತಹ ಕೆಲವೇ ಮಂದಿಯಲ್ಲಿ ಚನ್ನಕೇಶವ. ಜಿ. ಲಾಳನಕಟ್ಟೆಯವರೂ ಒಬ್ಬರು. ತಮ್ಮ ಭಾವಾಂಬುಧಿ ಷಟ್ಪದಿ ಸಂಕಲನದಲ್ಲಿ ಷಟ್ಪದಿಯ ಬಗ್ಗೆ ತಿಳಿಸುತ್ತಾ, ಪ್ರತಿಯೊಂದು ಪ್ರಕಾರದ ಷಟ್ಪದಿಯ ನಿಯಮಗಳ ಜೊತೆಗೆ, ವಿಭಿನ್ನ ಶೈಲಿಯ ಪದಪುಂಜಗಳಿಂದ, ಎದೆಯಾಳದಿಂದ ಹೊಮ್ಮಿಸಿ, ಆನಂದಿಸಿ, ಉಣಬಡಿಸುತಿದ್ದಾರೆ. ಹಳ್ಳಿಯ ಸೊಗಡನ್ನು ಬೆರೆಸಿ ಹೊಸೆದ ಒಂದೊಂದು ರೀತಿಯ ಷಟ್ಪದಿಗಳೂ ತಮ್ಮ ಸೌರಭವನ್ನು ಓದುಗರ ಎದೆಯಾಳಕಿಳಿಸಿ ಮೈ ನವಿರೇಳಿಸುವಂತಿದೆ. ಇವರು ಪದಗಳನ್ನು ಕುಣಿಸುವ ವೈವಿಧ್ಯತೆಗೆ ಮರುಳಾಗದವರೇ ಇರಲಾರರು. ಯಾವುದೇ ವಸ್ತು ವಿಷಯವಿದ್ದರೂ ಕಣ್ಮುಂದೆ ತಂದು ನಿಲ್ಲಿಸುವ ಜಾಣ್ಮೆ, ಲಾಲಿತ್ಯ ಇವರ ಪದಗಳಿಗಿದೆ.

ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಹಾಗೆ ಲಾಳನಕಟ್ಟೆಯವರ ಷಟ್ಪದಿಗಳಲ್ಲಿ ಇಲ್ಲದ ವಿಷಯವೇ ಇಲ್ಲ. ಹರಿವಜಲ, ಹಾರುವ ಹಕ್ಕಿ, ನೀಲಿಯಾಗಸ, ಭೂರಮೆಯ ಮಡಿಲು, ಗಿಡ ಮರ, ಬಳ್ಳಿ ಹೂ, ಹಣ್ಣು, ಸೂರ್ಯ, ಚಂದ್ರ, ತಾರೆಯರು, ಬದುಕು, ಬವಣೆ. ಪ್ರೀತಿ, ಪ್ರೇಮ, ವಿರಹ ಹೀಗೆ ಒಂದೇ ಎರಡೇ ಕವಿಭಾವಕ್ಕೆ ನಿಲುಕದ ವಿಷಯವೇ ಇಲ್ಲ. ಆದರೆ ಅದನ್ನು ರೋಚಕ, ರಂಜಕ ಪದಗಳಲ್ಲಿ ಹಿಡಿದಿಡುವ ಕಲೆ ಮಾತ್ರ ಎಲ್ಲರಿಗೂ ಸಿದ್ಧಿಸಲಾರದು. ಚೆನ್ನಕೇಶವ ಜಿ ಲಾಳನಕಟ್ಟೆಯವರಿಗೆ ಆ ಕಲೆ ಕರಗತವಾಗಿದೆ.

ಮಡಿಗಟ್ಟಿ ಸಾಲಿನೊಳ್ ಹಿಡಿತುಂಬ ಹೊನ್ನಕಾಳ್ಗಳ ಪಿಡಿದೆರಚಿದೊಲ್, ಭೂರಮೆಯ ಮಡಿಲಿನೊಳ್ ಹಸಿರುಕ್ಕಿದಂತಿಹುದು, ಚೆನ್ನ ಕವಿಯ ಷಟ್ಪದಿಗಳು. ಒಂದೊಂದಾಗಿ ಷಟ್ಪದಿಗಳ ಒಳಹೊಕ್ಕಾಗ ಷಟ್ಪದಿ ಬ್ರಹ್ಮ ರಾಘವಾಂಕನೇ ಈತನ ರೂಪದಲ್ಲಿ ಆವೀರ್ಭವಿಸಿರಬಹುದೇನೋ ಎಂಬ ಶಂಕೆ ಮೂಡುವುದು.

ಅವರ ತಲ ಷಟ್ಪದಿಯೊಂದರಲ್ಲಿ ‍, "ದಿನವರಳಲು/ದಿನವು ಮೂಡಿ/ದಣಿದಿರುವನು ನೇಸರ/ದಿನವು ಕರಗಿ/ ಜನಿಸುತಿಹನು/ಕೊನರಿ ಕೊನರಿ ಚಂದಿರ". ಜಲ ಷಟ್ಪದಿಯೊಂದರಲ್ಲಿ, "ಬಾಳಬಂಡಿಯ ತಾಳುತೆಳೆದರೆ ನಾಳೆಯೊಳಗಿದೆ ಜೀವನ" ಎಂದು ಹಿತನುಡಿಯನ್ನು ಸಾರಿದ್ದಾರೆ. ಹಾಗೆಯೆ, "ಹೆಗಲಿನಲ್ಲಿ ನೇಗಿಲಿಟ್ಟು/ಬಗಲಿನಲ್ಲಿ ಧಾನ್ಯ ಕಟ್ಟು/ನೊಗವನೆತ್ತಿ ಹೊಲದಿ ಕೃಷಿಕ ಸಾಗುತಿರುವನು. ಎಂಬ ಭೋಗ ಷಟ್ಪದಿ. ಹೀಗೆ ಈ ರಚನೆಗಳು ಹಳ್ಳಿಯ ಸೊಗಡಿನಲ್ಲದ್ದಿ ತೆಗೆದ ಹಾಗಿದೆ.

"ನಟ್ಟ ನಡುವೆಯೆ/ಬಿಟ್ಟು ಹೋದೆಯ/ಕೊಟ್ಟು ಪಿರುತಿಯ ಮನಸಲಿ
ಇಟ್ಟು ಹೃದಯವ/ಕಟ್ಟಿ ಹರಣವ/ಮೆಟ್ಟಿ ಮರೆತೆಯ ಮುನಿಸಲಿ". ಎಂದು ಜಲ ಷಟ್ಪದಿಯಲ್ಲಿ ವಿರಹ ವೇದನೆಯನ್ನು ತೋಡಿಕೊಂಡ ರೀತಿ ಹೃದಯಂಗಮವಾಗಿದೆ. ಭೋಗದಲ್ಲರಳಿದ ಪಂಚತಂತ್ರ ಕತೆಯ ಮಂಗ ಮತ್ತು ಮೊಸಳೆ ಕಥೆಯಲ್ಲಿ ಪದವಿಳಿಸಿದ ಚತುರತೆ ಬೆರಗು ಮೂಡಿಸುತ್ತದೆ. ಭಾಮಿನಿಯಲ್ಲಿ ಪಲುಕಿದ ರಾಧಾಕೃಷ್ಣ ಜೋಡಿಯ ಸಮ್ಮಿಲನ "ಚೆಂದದಿಂದಲಿ ಚಂದ್ರನಿಳಿದಿರೆ" ಮತ್ತು ಹನುಮದೇವನ ಕುರಿತ, "ವಾನರೋತ್ತಮ ಕದನ ವೀರನು" ಹಾಗೇ "ಹಸ್ತದೊಳಗಡೆ ನಮಿಸಿ ಹಿಡಿದರೆ/ ಈ ಸಾಲುಗಳನ್ನೋದಲು, ಹೃದಯದಲ್ಲಿ ಭಕ್ತಿ ಸಂಚಲನವಾಗುತ್ತದೆ.

ಚನ್ನಕೇಶವನವರು ತನ್ನ ಮನೆದೇವರನ್ನೂ ಮರೆತಿಲ್ಲ. ಭಕ್ತಿಯಿಂದ ಹೀಗೆ ಬರೆಯುತ್ತಾರೆ. "ಚೆನ್ನಕೇಶವ ಸನ್ನಿಧಾನದಿ/ಮುನ್ನ ನಮಿಸುತ ಬಕುತಿ ಭಾವದಿ/ತನ್ನನೊಪ್ಪಿಸಿಕೊಳ್ಳುತವನಿಗೆ ಶರಣು ಶರಣೆಂಬೆ" ಹಾಗೇ ಮುಂದಿನ ಷಟ್ಪದಿ ಅನ್ನಪೂರ್ಣೆಯ ನೆನೆಯುತ್ತಾ "ಬಿತ್ತಿ ಬೆಳೆಯುವ ಕೃಷಿಕರೆಂದರೆ/ಬತ್ತದಂತಹ ಖುಷಿಯನೆರೆಯುತ/ಬುತ್ತಿಯೂಟವನುಣಿಸಿಯುದರಕೆ ತಣಿಸುತಿರುವವಳು". ಪರಿವರ್ಧಿನಿಯಲ್ಲಿ ಕನ್ನಡಮ್ಮನ ಚರಣಗಳಿಗೆ ಭಕ್ತಿಯಿಂದ ಪದಗಳನ್ನೇ ಹೂವಾಗಿ ಎರೆದಿರುವ ಭಾವ ಅಮೋಘವಾಗಿದೆ. ಅದೇರೀತಿ ಕುವೆಂಪುರವರನ್ನು ಹೊಗಳುತ್ತಾ " ಕನ್ನಡ ನಾಡಿನ ಹೆಮ್ಮೆಯ ಕಬ್ಬಿಗ/ಚಿನ್ನದ ಸಾಲುಗಳಿಳಿಸಿದ ನಾವಿಕ" ಎಂದು ಚೆನ್ನುಡಿಗಳನ್ನಿಳಿಸಿಹನು.

ವಾರ್ಧಕದಲ್ಲಿ ತನ್ನಿನಿಯಳ ನೆನೆಯುತ್ತಾ..." ಬೆಂಗದಿರನಿಳಿಯುತಲಿ ಬಂದಿಯಾಗಿಹನಿಲ್ಲಿ/ತಂಗಿರುವೆ ನಿನ್ನಿರವ ನೆನೆನೆನೆದು ಮನದಲ್ಲಿ" ಮುಂದುವರಿದ ಸಾಲಿನ ಕೊನೆಯಲ್ಲಿ ಕಾಳಜಿಯಿಂದ ಹೀಗೆ ನುಡಿಗಳನ್ನಿಳಿಸುತ್ತಾರೆ." ಕಂಗು ತೆಂಗಿನ ತೋಟ ನೀ ಬರುವ ದಾರಿಯಲಿ ನಡುನಡುವೆ ಸುಳಿದು ಬಾರೆ". ಏನೇ ಬರೆದರೂ ಅದರಲ್ಲಿ ತಾ ಹುಟ್ಟಿ ಬೆಳೆದ ಪರಿಸರದ ಸೊಬಗನ್ನಿಳಿಸದೇ ಬಿಡರು. ಕೊನೆಯದಾಗಿ ಉದ್ಧಂಡ ಷಟ್ಪದಿಯಲ್ಲಿ ರೈತ ಎಂಬ ಶಿರೋನಾಮೆಯಡಿಯಲ್ಲಿ," ಮೆತ್ತಗೆ ಹೆಜ್ಜೆಯನಿಕ್ಕುತಲೆತ್ತಿಗೆ ನೊಗವನು ಹೂಡುತ ಸಡಗರದಲ್ಲಿ" ಎಂದು ಅನ್ನವೀವ ರೈತನನ್ನು ಹಾಡಿ ಹೊಗಳಿದ್ದಾರೆ.

ಷಟ್ಪದಿಯ ಎಲ್ಲಾ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ ಅತಿಸುಂದರ ಪದಗಳಿಂದ ಭಾವವಿಳಿಸುತ ಹೆಣೆದ ಎಪ್ಪತ್ತು ಚಿನ್ನದ ಕುಸುಮಗಳ ಮಾಲೆಯನ್ನು ಓದುಗರಿಗೆ ನೀಡಲಿದ್ದಾರೆ. ಕನ್ನಡಮ್ಮನ ಪದಕಮಲದ ಈ ಕುಸುಮಗಳನ್ನು ಓದುಗರು ಕಂಡಿತಾ ಸ್ವೀಕರಿಸಿ ಮೆಚ್ಚಿಕೊಳ್ಳುತ್ತಾರೆ. ಆ ತಾಯಿ ಭುವನೇಶ್ವರಿ, ಮುಂದೆ ಈ ನಮ್ಮ ಆಧುನಿಕ ರನ್ನನಿಂದ ಕಥನ ಕಾವ್ಯವನ್ನು ಷಟ್ಪದಿಯಲ್ಲಿ ಬರೆಸಿಕೊಳ್ಳುವ ದಿನ ದೂರವಿಲ್ಲ. ಈಗಾಗಲೆ ತಮ್ಮ ಕವನದ ರಸಗವಳವನ್ನು "ಮಡಿಲು" ಮತ್ತು "ಯುಗಾದಿ" ಕವನ ಸಂಕಲನದ ಮುಖಾಂತರ ಜಗದಗಲ ಹರಡಿ, ಖ್ಯಾತಿ ಗಳಿಸಿದ್ದಾರೆ. ಇವರ ಹಲವು ಕವನ ಷಟ್ಪದಿಗಳನ್ನು ಅಭಿಮಾನಿಗಳು ಸುಶ್ರಾವ್ಯವಾಗಿ ಹಾಡಿ ಕಳುಹಿಸುತಿರುತ್ತಾರೆ. ಅಂತೆಯೇ ಈ ಷಟ್ಪದಿ ಸಂಕಲನ ಕೂಡ ಜಗದ್ವಿಖ್ಯಾತಿ ಗಳಿಸಲಿ ಎಂದು ಹರಸಿ ಹಾರೈಸುವೆನು.”