ಭಾವೈಕ್ಯತೆಯ ಹರಿಕಾರ - ಇಬ್ರಾಹಿಂ ಸುತಾರ

ಭಾವೈಕ್ಯತೆಯ ಹರಿಕಾರ - ಇಬ್ರಾಹಿಂ ಸುತಾರ

ಇಬ್ರಾಹಿಂ ಸುತಾರ ಇನ್ನಿಲ್ಲ ಎಂಬ ಸುದ್ದಿ ಕೇಳುತ್ತಲೇ ಅತೀವ ದುಃಖವಾಯಿತು. ಜಾತಿ-ಮತಗಳೆಂದು ಜನರು ಹೊಡೆದಾಡುಕೊಳ್ಳುತ್ತಿರುವ ಸಮಯದಲ್ಲಿ ಸದಾಕಾಲ ಭಾವೈಕ್ಯತೆಯ ಮಂತ್ರವನ್ನು ಪಠಿಸುತ್ತಿದ್ದ ಆಧುನಿಕ ‘ಕಬೀರ' ಎಂದೇ ಖ್ಯಾತರಾಗಿದ್ದ ಇಬ್ರಾಹಿಂ ಸುತಾರ ಅವರು ಹಿಂದಿರುಗಿ ಬಾರದ ಲೋಕಕ್ಕೆ ಪಯಣಿಸಿದ್ದು ನಿಜಕ್ಕೂ ನೋವಿನ ಸಂಗತಿಯೇ. ಆದರೂ ಅವರು ನಮ್ಮ ನಡುವೆ ಬಿಟ್ಟು ಹೋಗಿರುವ ಭಜನೆ, ಪ್ರವಚನ, ಸಂವಾದ, ಸೂಫಿ ತತ್ವಗಳು, ನಾವೆಲ್ಲರೂ ಒಂದೇ ಭಾರತೀಯರು ಎಂಬ ಮನೋಧರ್ಮ ಇವೆಲ್ಲವನ್ನೂ ಉಳಿಸಿ ಬೆಳೆಸಬೇಕಾಗಿದೆ. ಅವರ ಕನಸಾದ ಭಾವೈಕ್ಯತೆಯನ್ನು ಉಳಿಸಿಕೊಳ್ಳಬೇಕು ಎಂದು ನಾವೆಲ್ಲಾ ಮಾಡುವ ತೀರ್ಮಾನವೇ ನಾವು ಅವರಿಗೆ ಕೋರಬಹುದಾದ ಅತ್ಯುತ್ತಮ ಶ್ರದ್ಧಾಂಜಲಿ.

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಎಂಬ ಊರಿನಲ್ಲಿ ಮೇ ೧೦, ೧೯೪೦ರಲ್ಲಿ ನಬೀಸಾಬ ಮತ್ತು ಅಮಿನಾಬಿ ದಂಪತಿಗಳ ಸುಪುತ್ರರಾಗಿ ಜನಿಸಿದವರೇ ಇಬ್ರಾಹಿಂ. ಕಲಿತದ್ದು ಮೂರನೇ ತರಗತಿಯವರೆಗೆ ಮಾತ್ರವಾದರೂ ಅವರು ಗಳಿಸಿಕೊಂಡ ಜ್ಞಾನ ಮೂರೂ ಲೋಕಕ್ಕೆ ಸಾಕಾಗುವಷ್ಟು. ವೃತ್ತಿಯಲ್ಲಿ ನೇಕಾರರಾಗಿದ್ದರೂ ಭಜನೆ-ಪ್ರವಚನಗಳನ್ನು ತಾವು ಸಾಗಿದ ದಾರಿಯುದ್ದಕ್ಕೂ ಹರಡುತ್ತಾ ಸಾಗಿದರು.

ಹುಟ್ಟಿದ್ದು ಮುಸ್ಲಿಂ ಮನೆತನದಲ್ಲಾದರೂ ಬೆಳೆದದ್ದು, ಕಲಿತದ್ದೆಲ್ಲಾ ಹಿಂದೂ ಪುರುಷರ ಗರಡಿಯಲ್ಲಿ. ಮಹಾಲಿಂಗಪುರದ ಬಸವಾನಂದರು, ಕುಬಸದ ಬಸಪ್ಪಜ್ಜನವರ ಮಾರ್ಗದರ್ಶನದಲ್ಲಿ ಇವರು ಆಧ್ಯಾತ್ಮಿಕ ಅಧ್ಯಯನ ನಡೆಸಿದರು. ಇವರ ಜೊತೆ ಸಹಜಾನಂದ ಸ್ವಾಮೀಜಿ, ಕಟಗಿ ಮಲ್ಲಪ್ಪ ದಿ. ಮಲ್ಲಪ್ಪ ಶಿರೋಳ ಶರಣರ ಸಾನಿಧ್ಯವೂ ಇವರಿಗೆ ಲಭಿಸಿತು. ೧೯೭೦ರಲ್ಲಿ ಇವರು ಭಾವೈಕ್ಯ ಜಾನಪದ ಸಂಗೀತ ಮೇಳವನ್ನು ಪ್ರಾರಂಭಿಸಿ, ಊರೂರು ತಿರುಗಾಡಿದರು. ಬೀದರ ಶಿವಕುಮಾರ ಸ್ವಾಮೀಜಿ, ಇಂಚಲ ಶಿವಾನಂದ ಭಾರತಿ ಸ್ವಾಮೀಜಿ ಇವರ ಒಡನಾಟದಿಂದ ಬಹಳಷ್ಟು ವಿಷಯಗಳನ್ನು ಅರಿತುಕೊಂಡು ಆಧ್ಯಾತ್ಮಿಕತೆಯ ಚಿಂತನೆಯನ್ನು ತಮ್ಮ ಬಾಳಿನಲ್ಲಿ ಅಳವಡಿಸಿಕೊಂಡು ನೀತಿ ಭೋಧನೆ ಮಾಡುತ್ತಿದ್ದರು. ಶರಣರ ವಚನಗಳನ್ನು ತಮ್ಮ ಪ್ರವಚನದಲ್ಲಿ ಹೇಳಲು ಪ್ರಾರಂಭಿಸಿದರು. ಇವರು ಜನ ಕಟ್ಟಿಕೊಂಡು ತಿರುಗಾಡುತ್ತಿದ್ದ ತಂಡದ ಸಂವಾದ ನಾಡಿನ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. 

ನಿಜಕ್ಕೂ ಇಬ್ರಾಹಿಂ ಸುತಾರ ಅವರು ಭಾವೈಕ್ಯತೆಯ ಕೊಂಡಿಯಾಗಿದ್ದರು. ಶ್ರೀ ನಿಜಗುಣ ಶಿವಯೋಗಿಗಳ ಶಾಸ್ತ್ರ ಸಿದ್ಧಾರೂಢ ಚರಿತ್ರೆ, ಶಿವ ಶರಣರ ವಚನಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದರು. ಜಾತಿ-ಧರ್ಮಗಳ ನಡುವಿನ ಬೇಧ ಭಾವವನ್ನು ಹೋಗಲಾಡಿಸಲು ಬಹಳ ಪ್ರಯತ್ನ ಪಟ್ಟರು. ತಮ್ಮ ಪ್ರತೀ ಪ್ರವಚನದಲ್ಲಿ ಈ ಬಗ್ಗೆ ಒಂದಲ್ಲಾ ಒಂದು ರೀತಿಯ ಕತೆಗಳನ್ನು ಹೇಳಿ ಬೇಧ ಭಾವ ದೂರ ಮಾಡಲು ಪ್ರಯತ್ನಿಸುತ್ತಿದ್ದರು. 

ಇವರ ಹಲವಾರು ಧ್ವನಿ ಸುರಳಿಗಳು ಹೊರ ಬಂದಿವೆ. ಈಗಲೂ ಅಂತರ್ಜಾಲ ತಾಣದಲ್ಲಿ ಇವರು ನೀಡಿದ ಪ್ರವಚನಗಳ ವಿಡಿಯೋ ನೋಡಲು ಸಿಗುತ್ತವೆ. ಕಂಚಿನಂಥ ಕಂಠದಿಂದ ಹೊರಹೊಮ್ಮುವ ಆ ಮಾತುಗಳನ್ನು ಕೇಳುವುದೇ ಚೆಂದ. ಸೌಡಿಲ್ಲದ ಸಾವುಕಾರ, ದೇವರು ಕಾಡುವುದಿಲ್ಲ, ಯಾರು ಜಾಣರು?, ಹಣ ಹೆಚ್ಚೋ? ಗುಣ ಹೆಚ್ಚೋ?, ಮೊದಲು ಮಾನವನಾಗು, ಭಾವೈಕ್ಯತೆ ಎಂದರೇನು? ಮೊದಲಾದ ಸುಮಾರು ೨೦ಕ್ಕೂ ಅಧಿಕ ಆಧ್ಯಾತ್ಮಿಕ ಧ್ವನಿ ಸುರಳಿಗಳನ್ನು ಹೊರತಂದಿದ್ದರು. 

ಸುತಾರರು ಕೇವಲ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿ, ಗೋವಾ ಮೊದಲಾದ ರಾಜ್ಯಗಳಲ್ಲೂ ತಮ್ಮ ಪ್ರವಚನಗಳನ್ನು ನೀಡಿದ್ದಾರೆ. ೧೯೭೦ರಿಂದ ನಿರಂತರವಾಗಿ ಇತ್ತೀಚಿನವರೆಗೆ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಪ್ರವಚನಗಳನ್ನು ಕೊಟ್ಟಿದ್ದಾರೆ. ಆಳ್ವಾಸ್ ನುಡಿಸಿರಿ, ದಸರಾ ಉತ್ಸವ, ಧರ್ಮಸ್ಥಳದ ಸರ್ವ ಧರ್ಮ ಸಮ್ಮೇಳನ, ವಿಶ್ವ ಕನ್ನಡ ಸಮ್ಮೇಳನ, ಚಾಲುಕ್ಯ ಉತ್ಸವ ಮೊದಲಾದ ಕಡೆಗಳಿಗೆ ತೆರಳಿ ತಮ್ಮ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರ ಕಾರ್ಯಕ್ರಮಗಳೆಂದರೆ ಜನರಿಗೇನೂ ಜ್ಞಾನದ ಕೊರತೆಯಿರುತ್ತಿರಲಿಲ್ಲ. 

೧೯೮೦ರಲ್ಲಿ ಇವರ ಅಭಿಮಾನಿಗಳು ಸೇರಿ ಅವರಿಗೊಂದು ಮನೆಯನ್ನು ಕಟ್ಟಿಸಿಕೊಟ್ಟಿದ್ದರು. ಆ ಮನೆಗೆ ಸುತಾರ ಅವರು ‘ಭಾವೈಕ್ಯ' ಎಂದೇ ಹೆಸರು ನೀಡಿದ್ದರು. ಸುತಾರ ಅವರಿಗೆ ೨೦೧೬ರಲ್ಲಿ ೭೫ ವರ್ಷ ತುಂಬಿದಾಗ ಮಹಾಲಿಂಗಪುರದಲ್ಲಿ ಇವರ ಅಭಿಮಾನಿಗಳು ಅಮೃತ ಮಹೋತ್ಸವ ಸಮಾರಂಭವನ್ನು ಏರ್ಪಡಿಸಿ ‘ಭಾವೈಕ್ಯ ದರ್ಶನ' ಎಂಬ ಅಭಿನಂದನಾ ಗ್ರಂಥವನ್ನು ಅರ್ಪಣೆ ಮಾಡಿದ್ದರು.  

ಭಾವೈಕ್ಯತೆಯ ಹರಿಕಾರ ಇಬ್ರಾಹಿಂ ಸುತಾರರನ್ನು ಹುಡುಕಿಕೊಂಡು ಬಂದ ಪ್ರಶಸ್ತಿಗಳು ಅಪಾರ. ಭಾರತ ಸರಕಾರವು ಇವರ ಸೇವೆಯನ್ನು ಗುರುತಿಸಿ ೨೦೧೮ರಲ್ಲಿ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ. ೧೯೯೫ರಲ್ಲಿ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಭಜನಾಮೃತ ಸಿಂಧು ಪುರಸ್ಕಾರ, ಗಡಿನಾಡು ಚೇತನ, ಕರ್ನಾಟಕ ಕಲಾಶ್ರೀ ಪ್ರಶಸ್ತಿ (೨೦೦೯-೧೦) ಮೊದಲಾದ ಹಲವಾರು ಪ್ರಶಸ್ತಿಗಳು ಇವರ ಮುಡಿಯನ್ನು ಅಲಂಕರಿಸಿವೆ. 

ಇಂತಹ ಭಾವೈಕ್ಯತೆಯ ಹರಿಕಾರ, ಸೌಜನ್ಯತೆಯ ಸಾಕಾರ ಮೂರ್ತಿಯಾದ ಇಬ್ರಾಹಿಂ ಸುತಾರ ಅವರು ಜಾತಿ ಮತ ಧರ್ಮಗಳನ್ನು ಮೀರಿದವರು. ಇವರು ಫೆಬ್ರವರಿ ೫, ೨೦೨೨ರಂದು ನಮ್ಮನ್ನು ಅಗಲಿದರೂ ಅವರು ಬಿಟ್ಟು ಹೋದ ಭಾವೈಕ್ಯತೆಯ ಅರಿವು ಸದಾ ಕಾಲ ನಮ್ಮಲ್ಲಿರುವುದು. ಉತ್ತಮ ಮನುಷ್ಯನಾಗಲು ಯಾವುದೇ ಜಾತಿ ಧರ್ಮದ ಅಗತ್ಯವಿಲ್ಲ ಎಂಬುದು ಅವರ ಮೂಲ ಮಂತ್ರವಾಗಿತ್ತು ಮತ್ತು ಜೀವನ ಪರ್ಯಂತ ಅದೇ ಮಂತ್ರವನ್ನು ಪಠಿಸುತ್ತಾ ಇದ್ದುದ್ದೇ ಅವರ ಹಿರಿಮೆ.

(ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹ) 

ಚಿತ್ರ ಕೃಪೆ: ಅಂತರ್ಜಾಲ ತಾಣ