ಭಾವೈಕ್ಯತೆ ಭಾವ ಬಿಂದು
ಕವನ
ಭಾವೈಕ್ಯತೆ ಭಾವ ಬಿಂದು
ಸಂಧಿಸಲಿ ಮನಗಳನು
ಒಡೆದು ನೂರು ಚೂರಾದ
ಭಿನ್ನಭಿನ್ನ ಕುಲಗಳನು ॥
ಮನುಕುಲದ ಜನ್ಮ ಒಂದೇ
ಮನಕಲಕುವ ದ್ವೇಷವೇಕೆ?
ಹೆಗಲಿಗೆಗಲು ಕೊಟ್ಟು ಇಂದೇ
ಬಾಳಿದರೆ ಸ್ವರ್ಗವೇಕೆ?॥
ಭರತ ಮಾತೆ ಮಕ್ಕಳಲ್ಲಿ
ಉಚ್ಛ ನೀಚ ಭೇಧ ಬೇಕೇ?
ಒಂದೇ ಒಡಲ ಗುಡಿಗಳಲ್ಲಿ
ಕುಲಮತಗಳು ಕಾಡಬೇಕೇ? ॥
ಹೆತ್ತವಳಿಗೆ ಜಾತಿ ಇಲ್ಲ
ಹೊತ್ತವಳಿಗೆ ಧರ್ಮವಿಲ್ಲ
ಅವಳ ಮಕ್ಕಳಾದ ನಮಗೆ
ಹತ್ತು ಹಲವು ಗೋಡೆ ಏಕೆ? ॥
ಊರು ಕೇರಿ ಬೇರೆ ಬೇರೆ
ಗಾಳಿ ನೀರು ಒಂದೇ ತಾನೇ
ಮೈಯ್ಯ ಬಣ್ಣ ಕಪ್ಪು ಬಿಳುಪು
ಹರಿವ ರಕ್ತ ಕೆಂಪಲ್ಲವೇ?
ಎದೆಯ ಬಡಿತ ದೇಶಕಾಗಿ
ಹೃದಯ ತುಡಿಯ ಸೇವೆಗಾಗಿ
ಮನಮನಗಳು ಐಕ್ಯವಾಗಿ
ಭಾವೈಕ್ಯತೆ ಮೆರೆಯಲಿ ॥
-ರೂಪಾ ಹೊಸದುರ್ಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್