ಭಾವ ಬಯಲಿನ‌ ಅಕ್ಕ…!

ಭಾವ ಬಯಲಿನ‌ ಅಕ್ಕ…!

ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು.

ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು.

ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು.

ಶಯನಕ್ಕೆ ಹಾಳು ದೇಗುಲಗಳುಂಟು.

ಚೆನ್ನಮಲ್ಲಿಕಾರ್ಜುನಯ್ಯಾ, ಆತ್ಮಸಂಗಾತಕ್ಕೆ ನೀನೆನಗುಂಟು…

 

ಓದಿ ಓದಿ ವೇದ ವಾದಕ್ಕಿಕ್ಕಿತ್ತು.

ಕೇಳಿ ಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತ್ತು.

ಅರಿದೆಹೆ ಅರಿದೆಹೆನೆಂದು ಆಗಮ ಅರೆಯಾಗಿ ಹೋಯಿತ್ತು.

ಪೂರೈಸಿಹೆ ಪೂರೈಸಿಹೆನೆಂದು

ಪುರಾಣ ಪೂರ್ವದ ಬಟ್ಟೆಗೆ ಹೋಯಿತ್ತು.

ನಾನೆತ್ತ ತಾನೆತ್ತ ? ಬೊಮ್ಮ ಬಟ್ಟಬಯಲು ಚೆನ್ನಮಲ್ಲಿಕಾರ್ಜುನಾ...

ಸ್ಥಿತ ಪ್ರಜ್ಞೆಗೆ ಮತ್ತೊಂದು ಹೆಸರಾದ ಹನ್ನೆರಡನೆಯ ಶತಮಾನದ ವಚನಗಾರ್ತಿ ಅಕ್ಕಮಹಾದೇವಿಯವರ ವಚನಗಳ ಸಾಲುಗಳಿವು. ಏಪ್ರಿಲ್ 6 ಅಕ್ಕಮಹಾದೇವಿಯವರ ಜಯಂತಿ ಎಂದು ಅಧೀಕೃತಗೊಳಿಸಲಾಗಿದೆ. ನನ್ನ ಸಂಪರ್ಕದ ಒಂದಷ್ಟು ಯುವಕರನ್ನು ಸ್ಥಿತ ಪ್ರಜ್ಞತೆ ಎಂದರೇನು ಎಂಬ ಪ್ರಶ್ನೆ ಕೇಳಿದೆ. ಬಹಳಷ್ಟು ಯುವಕರಿಗೆ ಅದರ ಸರಿಯಾದ ಅರ್ಥ ತಿಳಿದಿರಲಿಲ್ಲ. ಅದು ಭಾಷಾ ಸಮಸ್ಯೆ ಮಾತ್ರವಾಗಿರಲಿಲ್ಲ. ಭಾವ ಸಮಸ್ಯೆಯೂ ಅವರನ್ನು ಕಾಡಿತ್ತು.

ಬಹಳಷ್ಟು ಜನರ ದೇಹ ಮನಸ್ಸು ಕುಟುಂಬ ಉದ್ಯೋಗ ಬದುಕು ಯಾವುದೂ ಅವರ ನಿಯಂತ್ರಣದಲ್ಲಿ ಇಲ್ಲ. ಆಂಗ್ಲ ಭಾಷೆಯ Restless ಮನಸ್ಥಿತಿ ಅವರದಾಗಿದೆ. ಸ್ಥಿತಪ್ರಜ್ಞೆತೆಯ ಅರ್ಥ ಮತ್ತು ಅನುಭವ ಎರಡೂ ಅವರಿಗೆ ನಿಲುಕುತ್ತಿಲ್ಲ. ನಿಜವಾದ ಸಮಸ್ಯೆಯ ಪ್ರಾರಂಭವೇ ಇದು. ಬದುಕು ವೇಗವಾದಷ್ಟು ಅದರ ಸ್ವಾರಸ್ಯವೇ ಉಳಿಯದೇ ಎಲ್ಲವೂ ನಿಯಂತ್ರಣ ಮೀರಿ ಯಾಂತ್ರೀಕೃತವಾಗಿರುವಾಗ ಸ್ಥಿತಪ್ರಜ್ಞೆತೆ ಎಂಬ ಅತ್ಯಮೂಲ್ಯ ಅನುಭವದ ಅರಿವಿನ ಹತ್ತಿರವೂ ಸುಳಿಯಲು ಮನಸ್ಸುಗಳಿಗೆ ಸಾಧ್ಯವಾಗುತ್ತಿಲ್ಲ.

ಮೂವತ್ತರ ಆಸುಪಾಸಿಗೇ ಬಿಪಿ, ಶುಗರ್, ಅಸಿಡಿಟಿ, ಥೈರಾಯ್ಡ್, ನಿದ್ರಾಹೀನತೆ, ದೃಷ್ಟಿಹೀನತೆ ಮುಂತಾದ ರೋಗಗಳು ಭಾದಿಸಲು ಮನಸ್ಸಿನ ಮೇಲಿನ ನಿಯಂತ್ರಣ ಕಳೆದುಕೊಂಡಿರುವುದೇ ಬಹುದೊಡ್ಡ ಕಾರಣ. ಈಗಿನ ನಮ್ಮ ಬಾಲ್ಯ ಮತ್ತು ಯೌವ್ವನದ ದಿನಗಳಲ್ಲಿ ನಮ್ಮ ಅರಿವಿನ ಮೂಲಗಳು ಸಾಮಾನ್ಯವಾಗಿ ಸಿನಿಮಾ, ಟಿವಿ, ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು. ಅವುಗಳೇ ಬಹುತೇಕ ಮಾಹಿತಿಯ ಕಣಜಗಳು. ಅದರಾಚೆ ಒಂದಷ್ಟು ಶಾಲಾ ಶಿಕ್ಷಣ. ಅದೂ ಸಹ ಅಂಕಗಳ ಪ್ರೇರಿತ ಮತ್ತು ಕೇಂದ್ರಿತ. ಇದು ಯುವಕ ಯುವತಿಯರ ವ್ಯಕ್ತಿತ್ವವನ್ನೇ ಆಪೋಷನ ತೆಗೆದುಕೊಂಡು ಅವರನ್ನು ನಿರ್ವೀಯಗೊಳಿಸಿ ಅವರ ಕ್ರಿಯಾತ್ಮಕ ಚಿಂತನೆಯನ್ನೇ ನಾಶ ಮಾಡಿದೆ. ಅದರ ಪರಿಣಾಮವಾಗಿ ಮನಸ್ಸುಗಳು ನಿಯಂತ್ರಣದಲ್ಲಿ ಇಲ್ಲ.

ನಿಜಕ್ಕೂ ಜ್ಞಾನದ ಕಣಜವಾಗಬೇಕಾಗಿದ್ದ ಪೋಷಕರು, ಬಂಧು ಬಳಗದವರು, ಸ್ನೇಹಿತರು, ಶಿಕ್ಷಕರು, ಮಾಧ್ಯಮಗಳು, ಧಾರ್ಮಿಕ ಮುಖಂಡರು ಮುಂತಾದ ಎಲ್ಲರೂ ಮೌಲ್ಯಗಳನ್ನು ಮರೆತು ವೇಗದ ಬದುಕಿಗೆ ಶರಣಾದ ಕಾರಣ ಗ್ರಂಥಾಲಯಗಳ ಜಾಗದಲ್ಲಿ ಬಾರುಗಳು, ಕ್ರೀಡಾಂಗಣದ ಜಾಗದಲ್ಲಿ ಡಾಬಾಗಳು, ಕಾಡುಗಳ ಜಾಗದಲ್ಲಿ ಲಾಡ್ಜುಗಳು, ಕೆರೆಗಳ ಜಾಗದಲ್ಲಿ ಮಾಲುಗಳು ಸೃಷ್ಟಿಯಾಗಿ ಇಡೀ ಬದುಕೇ ವ್ಯಾಪಾರವಾಗಿ ಸ್ಥಿತಪ್ರಜ್ಞತೆಯ ಮನಸ್ಥಿತಿ ಮಾಯವಾಗಿ ಅರೆ ಹುಚ್ಚ ಮನಸ್ಥಿತಿ ಎಲ್ಲರಲ್ಲೂ ಮನೆ ಮಾಡಿದೆ.

ಫಲಿತಾಂಶ ಮತ್ತು ಪರಿಣಾಮಗಳು ಮುಂದಿನ ದಿನಗಳಲ್ಲಿ ಏನಾಗುತ್ತದೆಯೋ ಗೊತ್ತಿಲ್ಲ. ಆದರೆ  ಕನಿಷ್ಠ ಮಟ್ಟದ ಪ್ರೀತಿ ವಿಶ್ವಾಸ ಕರುಣೆ ಕ್ಷಮಾಗುಣ ಸಹಕಾರ ಸಭ್ಯತೆ ಸಂಯಮ ತಾಳ್ಮೆ ಸಂಬಂಧಗಳೆಂಬ ಮಾನವೀಯ ಮೌಲ್ಯಗಳನ್ನು ನಮ್ಮ ಸಂಪರ್ಕಕ್ಕೆ ಬಂದ ಎಲ್ಲರಿಗೂ ನೆನಪಿಸಿ ಅವರ ಮನಸ್ಸುಗಳೊಳಗೆ ಅದನ್ನು ಸಣ್ಣ ಪ್ರಮಾಣದಲ್ಲಿ ಬಿತ್ತುವ ಮನಸ್ಸುಗಳ ಅಂತರಂಗದ ಚಳವಳಿ ಬಹಿರಂಗವಾಗಿ ಮತ್ತು ನೇರವಾಗಿ ಪ್ರಾರಂಭವಾಗಬೇಕಿದೆ.

ಈ ಮೌಲ್ಯಗಳು ಈಗಾಗಲೇ ಜನರಲ್ಲಿ ಇವೆ. ಆದರೆ ಸ್ಪರ್ಧೆ, ಆಧುನಿಕತೆ, ವೇಗ, ವ್ಯವಸ್ಥೆಯ ಅಸಮಾನತೆ ಮತ್ತು ಭ್ರಷ್ಟತೆ ಆ ಭಾವನೆಗಳನ್ನು ಮಸುಕಾಗಿಸಿದೆ. ಬಹುತೇಕ ಜೀವನದ ಎಲ್ಲಾ  ರೀತಿಯ ಸಂಪರ್ಕಕ್ಕೆ ಬರುವ ಮತ್ತು ಅವಶ್ಯಕತೆ ಇರುವ ಕ್ಷೇತ್ರಗಳು ವಾಣಿಜ್ಯೀಕರಣಗೊಂಡಿರುವಾಗ ಅಂತಃಕರಣದ ಅಡಗಿರುವ ಮನುಷ್ಯರ ಮೂಲ ಗುಣವನ್ನು ಅವರಿಗೆ ಮತ್ತೊಮ್ಮೆ ನೆನಪಿಸುವ ಕೆಲಸ ಮಾಡಬೇಕಾಗಿದೆ.

ಯಾರಾದರು ಯಾರಿಗಾದರು ಏನಾದರು ಹಿತವಚನ ಹೇಳುವಾಗ ರಾಜಕೀಯದ ಅನುಕೂಲಕ್ಕಾಗಿ, ಧರ್ಮದ ಪ್ರಚಾರಕ್ಕಾಗಿ, ಆರ್ಥಿಕ ಲಾಭಕ್ಕಾಗಿ, ಜನಪ್ರಿಯತೆಯ ಆಸೆಗಾಗಿಯೇ ಹೇಳುತ್ತಾರೆ ಎಂಬ ಮನೋಭಾವ ನಮ್ಮ ಜನರಲ್ಲಿ ಬಲವಾಗಿ ಬೇರು ಬಿಟ್ಟಿದೆ. ಅಲ್ಲದೇ ಈ ಸಮಾಜ ಯಾರಿಂದಲೂ ಸರಿಪಡಿಸಲಾಗದಷ್ಟು ಹದಗೆಟ್ಟಿದೆ, ಬಹುಶಃ ಸುನಾಮಿಯಂತ ಬಹುದೊಡ್ಡ ಪ್ರಾಕೃತಿಕ ವಿಕೋಪ ಮಾತ್ರ ಇಡೀ ಪ್ರದೇಶಗಳನ್ನು ಸಂಪೂರ್ಣ ನಾಶಪಡಿಸಿದರೆ ಮಾತ್ರ ಹೊಸ ರೀತಿಯ ಹೊಸ ಜನ ಸುಧಾರಿಸಬಹುದು ಎಂಬ ಸಿನಿಕತನ ಬೆಳೆದು ಬಿಟ್ಟಿದೆ. 

ಸಂಕೀರ್ಣ ಮತ್ತು ಅನಿವಾರ್ಯವಾಗಿರುವ ಬದುಕಿನ ಅವಶ್ಯಕತೆಗಳು ಅದರಿಂದಾಚೆ ಯೋಚಿಸಲು ನಮ್ಮನ್ನು ಬಿಡುತ್ತಿಲ್ಲ. ಹೋಗಲಿ ಈಗಿರುವ ಪರಿಸ್ಥಿತಿ ನಮಗೆ ತೃಪ್ತಿ ನೀಡಿದೆಯೇ ಎಂದರೆ ಬಹುತೇಕ ಬಡ ಮತ್ತು ಮಾಧ್ಯಮ ವರ್ಗದ ಜನರ ಅತೃಪ್ತಿಯ ಗೊಣಗಾಟ ಬಹಿರಂಗ ಸತ್ಯ. ಇಂತಹ ಸನ್ನಿವೇಶದಲ್ಲಿ, ಒಂದು ಪ್ರಯತ್ನವಾಗಿ‌ ಕೆಲವರಾದರು ನಿರ್ದಿಷ್ಟ ಪ್ರದೇಶದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಸವೆಯುವುದಕ್ಕಿಂತ ಅಕ್ಕಮಹಾದೇವಿಯವರಂತೆ ಹೊರಗೆ ಜನರ ನಡುವೆ ನಡೆಯುತ್ತಾ, ಬರೆಯುತ್ತಾ, ಬೆರೆಯುತ್ತಾ, ಬೆವರುತ್ತಾ ಸಾಗುವುದು ಉತ್ತಮ.

ಇಡೀ ಸಮಾಜದಲ್ಲಿ ಮಾಧ್ಯಮಗಳು ಮತ್ತು ಬಹುತೇಕ ಸಾಮಾನ್ಯ ಜನರು ಸಾಧನೆ ಎಂದರೆ ಸಿನಿಮಾ ಕ್ಷೇತ್ರದ ಜನರು, ಉದ್ಯಮಿಗಳು, ರಾಜಕಾರಣಿಗಳು ಮಾತ್ರ ಎಂದು ಪರಿಗಣಿಸಿ ಯುವ ಸಮೂಹದ ದಾರಿ ತಪ್ಪಿಸುತ್ತಿರುವಾಗ ನಾವುಗಳು ನಿಜ ದಾರ್ಶನಿಕರ ಪರಿಚಯವನ್ನು ಜನರಿಗೆ ಕನಿಷ್ಠ ನೆನಪಿಸಬೇಕಿದೆ. ಇದೊಂದು ಹುಚ್ಚುತನ ಎನಿಸಿದರು‌ ವ್ಯಕ್ತಿ ಮತ್ತು ಸಮಾಜದ ಮಾನಸಿಕ ಸ್ವಾಸ್ಥ್ಯಕ್ಕಾಗಿ ನಾವು ಹುಚ್ಚರೆನೆಸಿಕೊಳ್ಳಲು ಸಿದ್ದರಾಗಬೇಕಿದೆ.

ಅಕ್ಕಮಹಾದೇವಿಯವರ ಜಯಂತಿಯ ಸಂದರ್ಭದಲ್ಲಿ ನಮ್ಮ ನಮ್ಮ ಮಾನಸಿಕ ಗುಣಮಟ್ಟವನ್ನು ಪರೀಕ್ಷಿಸಿಕೊಳ್ಳುವ ಆತ್ಮಾವಲೋಕನ ನಡೆಯಲಿ ಎಂದು ಆಶಿಸುತ್ತಾ....ಸ್ವಲ್ಪ ಮಾಧ್ಯಮ ಪ್ರೇರಿತ ಚುನಾವಣಾ ಹುಚ್ಚಿನಿಂದ ಹೊರ ಬನ್ನಿ ಎಂದು ಮನವಿ ಮಾಡಿಕೊಳ್ಳುತ್ತಾ...

-ವಿವೇಕಾನಂದ ಎಚ್ ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ