ಭಾವ ಬೆರಗು !

ಭಾವ ಬೆರಗು !

ಕವನ

ಜಗವೆ ಸುಂದರ ಭಾವ ಬಂಧುರ

ಖಗ ಮಿಗದಿ ತುಂಬಿದ ಮಂದಿರ|

ಮಳೆಯ ರಾಗಕೆ ತೆನೆಯ ಮೇಳಕೆ

ಇಳೆಗಿಳಿದು ಬಂದಿಹ ಚಂದಿರ||ಪ||

 

ಹರಿವ ತೊರೆಯಲಿ ಕೊರೆವ ಚಳಿಯಲಿ

ಬೆರೆತೆದ್ದು ಜಿಗಿದಿದೆ ಚೇತನ|

ಬಿರಿವ ಕಮಲದಿ ಮಿರುಗೊ ಹನಿಯಲಿ

ಬೆರಗಾಗೊ ಬಯಕೆಯು ನೂತನ||೧||

 

ಬೆಟ್ಟ ಮುಕುಟದ ನೆಟ್ಟ ಕಿರಣಕೆ

ಸುತ್ತೆಲ್ಲ ಕಲರವ ಮೆರೆದಿದೆ|

ಪುಟ್ಟ ತರುವಲಿ ಬಿಟ್ಟ ಮೊಗ್ಗಲಿ

ಚೈತನ್ಯದಾ ಪುಟ ತೆರೆದಿದೆ||೨||

 

ಹಾಲು ಚೆಲ್ಲುವ ಅಲೆಯ ಮೋಹಕೆ

ಕರಗಿ ಹೋಗಿದೆ ನನ್ನೀ ಮನ|

ಹಾರೊ ಹಕ್ಕಿಯ ಮೀರಿ ನಿಂತಿದೆ

ಕೆಂಪಾಗಿಹಾ ಆ ಪಡುವಣ||೩||

 

ಸೃಷ್ಟಿ ನಲಿವಿಗೆ ಪುಷ್ಟಿ ನೀಡಿಹ

ಪ್ರಕೃತಿ ಸ್ವರ್ಗದ ಕಂದ ನಾ|

ನಿಷ್ಠವಾಗಿರೆ ಕಷ್ಟ ನೀಗುವ

ನಿಸರ್ಗಕೆ ಶರಣೆಂಬೆ ನಾ||೪||

-ಜನಾರ್ದನ ದುರ್ಗ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್