ಭಾವ ಶಾಂತವೇರಿ ಗೋಪಾಲಗೌಡರು...

ಭಾವ ಶಾಂತವೇರಿ ಗೋಪಾಲಗೌಡರು...

ಸತ್ತವರ ಹೆಸರಿಗಾಗಿ ಬಡಿದಾಡುತ್ತಾ ಬದುಕಿರುವವರ ಸಾವಿಗೆ ಹವಣಿಸುವ ಸೈದ್ಧಾಂತಿಕ ಹೋರಾಟದ ಅಮಲಿನಲ್ಲಿ ಕರ್ನಾಟಕದ ಮತದಾರರು ತೇಲುತ್ತಿರುವಾಗ, ಹೆಣಕ್ಕಾಗಿ ರಣ ಹದ್ದುಗಳಂತೆ ಕಾಯುತ್ತಿರುವ ರಾಜಕೀಯ ಸನ್ನಿವೇಶದಲ್ಲಿ… ಇಡೀ ರಾಜ್ಯದ ರಾಜಕೀಯ - ಸಾಮಾಜಿಕ - ರೈತ ಹೋರಾಟದ ಆದರ್ಶ ವ್ಯಕ್ತಿಯೊಬ್ಬರ ಶತಮಾನೋತ್ಸವ ತಣ್ಣಗೆ ನಡೆದಿದೆ...

ರಾಜಕೀಯದಲ್ಲಿ ಸಾಮಾನ್ಯವಾಗಿ ಅತ್ಯಂತ ಆದರ್ಶ ವ್ಯಕ್ತಿಗಳು ತೀರಾ ಅಪರೂಪ. ಕೆಲವರು ವೈಯಕ್ತಿಕವಾಗಿ ಪ್ರಾಮಾಣಿಕರು, ದಕ್ಷರು, ಸಮಾಜ ಸೇವಕರು, ಹೋರಾಟಗಾರರು, ದೂರ ದೃಷ್ಟಿಯ ಚಿಂತಕರು ಹೀಗೆ ಬಿಡಿಬಿಡಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಇವೆಲ್ಲವನ್ನೂ ಒಟ್ಟಾಗಿ ಸ್ವಲ್ಪ ಮಟ್ಟಿಗೆ ಮೇಳೈಸಿಕೊಂಡು ಕರ್ನಾಟಕ ರಾಜ್ಯದ ರಾಜಕೀಯದಲ್ಲಿ ಇಂದಿಗೂ ತಮ್ಮ ಛಾಪು ಮೂಡಿಸಿ ಸಮಾಜವಾದಿಗಳಲ್ಲಿ ಉತ್ಸಾಹ ಮೂಡಿಸುವ ವ್ಯಕ್ತಿತ್ವ ಶಾಂತವೇರಿ ಗೋಪಾಲಗೌಡರದು… ಅವರ ಹುಟ್ಟು ಸಾವು ಶಾಸಕತ್ವ ಹೋರಾಟ ಒಡನಾಟ ಭಾಷಣ ಎಲ್ಲವೂ ಸಾಕಷ್ಟು ಮಾಹಿತಿ ಪುಸ್ತಕಗಳ ರೂಪದಲ್ಲಿ ಸಿಗುತ್ತವೆ. ಅದನ್ನು ಮೀರಿ ನಾವು ಹೇಗೆ ಅವರನ್ನು ಈಗಿನ ಸಂದರ್ಭದಲ್ಲಿ ಗ್ರಹಿಸಬಹುದು ಎಂದು ಯೋಚಿಸುತ್ತಿದ್ದಾಗ...

ಗೆಳೆಯರೊಬ್ಬರು ಕರೆ ಮಾಡಿ " ಚುನಾವಣಾ ಸಮಯದಲ್ಲಿ ಜಾತಿ ಧರ್ಮ ಹಣ ಹೆಂಡ ಸೀರೆ ಪಂಚೆ ಇನ್ನೇನೋ ಪಡೆದು ಅದರ ಪ್ರಭಾವಕ್ಕೆ ಒಳಗಾಗಿ ತಮ್ಮನ್ನೇ ಮಾರಿಕೊಂಡು ದೇಶಕ್ಕೆ ಸಮಾಜಕ್ಕೆ ಪ್ರಜಾಪ್ರಭುತ್ವಕ್ಕೆ ಮೋಸ ಮಾಡುವವರನ್ನು ವೇಶ್ಯಾ ವೃತ್ತಿಯಲ್ಲಿ ನಿರತರಾದವರು " ಎಂದು ಕರೆಯಬಹುದೇ ಎಂದು ಕೇಳಿದರು.

ಅದನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟವಾಯಿತು. ನೋವು ಕೋಪ ವಿಷಾದದಿಂದ ಆ ರೀತಿ ಭಾವನಾತ್ಮಕವಾಗಿ ವೈಯಕ್ತಿಕ ನೆಲೆಯಲ್ಲಿ ಗೆಳೆಯರ ಬಳಿ ಹೇಳಿಕೊಳ್ಳಬಹುದು. ಆದರೆ ಸಾಮೂಹಿಕ ನೆಲೆಯಲ್ಲಿ ಅದು ಹೆಣ್ಣಿಗೆ ಮಾಡುವ ಅವಮಾನವಾಗುತ್ತದೆ. ಏಕೆಂದರೆ ವೇಶ್ಯಾವಾಟಿಕೆ ಕೇವಲ ಹೆಣ್ಣಿನ ವೃತ್ತಿಯಲ್ಲ. ಅಲ್ಲಿ ವಿಟ ಪುರುಷರು ಸಹ ಅಷ್ಟೇ ಪಾಲುದಾರರು. ಜೊತೆಗೆ ಅದು ತೀರಾ ವೈಯಕ್ತಿಕ ಮತ್ತು ಖಾಸಗಿಯಾದದ್ದು. ಇಲ್ಲಿ ಸಂತೋಷಕ್ಕಿಂತ ಹೆಣ್ಣಿನ ಬದುಕಿನ ಅನಿವಾರ್ಯತೆಯೇ ಮೇಲುಗೈ ಪಡೆಯುತ್ತದೆ. ಇದರಲ್ಲಿ ಭಾಗವಹಿಸುವವರ ಸಂಖ್ಯೆ ಸಹ ತೀರಾ ಕಡಿಮೆ ಮತ್ತು ಸಮಾಜಕ್ಕೆ ಇದರಿಂದ ನೇರವಾಗಿ ಅಂತಹ ದೊಡ್ಡ ಸಮಸ್ಯೆ ಏನೂ ಇಲ್ಲ. ಕೆಲವು ಸಂಪ್ರದಾಯವಾದಿಗಳು ಸ್ವಲ್ಪ ಗೊಣಗಾಡಬಹುದಷ್ಟೇ. ಉದಾರವಾದಿಗಳು ಅದು ಒಂದು ಒಪ್ಪಿತ ಸಹಜ ಪ್ರಾಕೃತಿಕ ಕ್ರಿಯೆ. ಅನೇಕ ದೇಶಗಳಲ್ಲಿ ಸರ್ಕಾರವೇ ಅನುಮತಿ ನೀಡಿದೆ ಮತ್ತು ನಮ್ಮ ‌ದೇಶದಲ್ಲಿ ಅನಾದಿ ಕಾಲದಿಂದಲೂ ಇದು ಅನಧಿಕೃತವಾಗಿ ನಡೆಯುತ್ತಲೇ ಇದೆ ಎಂದು ಹೆಚ್ಚು ತಲೆಕಡಿಸಿಕೊಳ್ಳುವುದಿಲ್ಲ.

ಆದರೆ ಚುನಾವಣಾ ಸಮಯದಲ್ಲಿ ಬಹಳಷ್ಟು ಎಲ್ಲಾ ವರ್ಗದ ಜನ ಒಂದಲ್ಲ ಒಂದು ರೀತಿಯ ಆಮಿಷಕ್ಕೆ ಒಳಗಾಗಿ ತಮ್ಮನ್ನೇ ಮಾರಿಕೊಂಡು ಇಡೀ ವ್ಯವಸ್ಥೆ ಭ್ರಷ್ಟಗೊಂಡು ನಾರುವಂತೆ ಮಾಡಿರುವುದು ಎಲ್ಲಕ್ಕಿಂತ ಹೀನಾಯ ವೃತ್ತಿ ಎಂದು ಕರೆಯಬಹುದಲ್ಲವೇ? ಇದು ಸ್ವಲ್ಪ ಕಠಿಣವಾಯಿತೇ.... ಹೋಗಲಿ ತೀರಾ ಕಡು ಬಡವರಿಗೆ ಊಟ ವಸತಿ ಇಲ್ಲದವರಿಗೆ ಇದರಿಂದ ವಿನಾಯಿತಿ ನೀಡೋಣ. ಏಕೆಂದರೆ ಬದುಕುವುದೇ ಕಷ್ಟವಾಗಿರುವಾಗ ಮೌಲ್ಯಗಳು ಸಹ ಅರ್ಥ ಕಳೆದುಕೊಳ್ಳುತ್ತವೆ. " ಆರ್ಥಿಕ ಸ್ವಾತಂತ್ರ್ಯ ಇಲ್ಲದ ಎಲ್ಲಾ ಸ್ವಾತಂತ್ರ್ಯಗಳು‌ ನಿಷ್ಪ್ರಯೋಜಕ " ಎಂದು ಕಾರ್ಲ್ ಮಾರ್ಕ್ಸ್ ಹೇಳುತ್ತಾರೆ. ಅದು ವಾಸ್ತವ ಸಹ.

ಆದರೆ ಮಧ್ಯಮ ವರ್ಗದವರು, ವಿದ್ಯಾವಂತರು, ಸರ್ಕಾರಿ ಅಧಿಕಾರಿಗಳು, ಶ್ರೀಮಂತರಲ್ಲಿ ಸಹ ಅನೇಕರು ಈ ಚುನಾವಣಾ ಅಕ್ರಮದಲ್ಲಿ ಹಣ ಪಡೆದು ಭಾಗಿಯಾಗುತ್ತಾರಲ್ಲವೇ ಅವರನ್ನು ಏನೆಂದು ಕರೆಯುವುದು. ಜೊತೆಗೆ ಇಲ್ಲಿ ಕೇವಲ ಹಣ ಸ್ವೀಕರಿಸುವವರು ಮಾತ್ರವಲ್ಲ ಹಣ ಕೊಡುವವರು ಅದಕ್ಕಿಂತ ಎರಡು ಪಟ್ಟು ಅಪರಾಧಿಗಳು ಎಂದೇ ಪರಿಗಣಿಸ ಬೇಕಾಗುತ್ತದೆ. ಇದು ಮತ್ತಷ್ಟು ದೊಡ್ಡ ಹೀನಾಯ ವೃತ್ತಿ. ಇಲ್ಲಿನ ವಿಚಿತ್ರವೆಂದರೆ ತೆಗೆದುಕೊಳ್ಳುವವರು ಭಿಕಾರಿಗಳಾದರೆ  ಕೊಡುವವರು ಕೊಟ್ಯಾಧಿಪತಿಗಳಾಗಿ, ಅಧಿಕಾರವನ್ನು ಪಡೆದು ಜನರನ್ನು ವಂಚಿಸಿ ಇಡೀ ಸಮಾಜವನ್ನು ಅಧೋಗತಿಗೆ ತರುತ್ತಾರೆ. ಭ್ರಷ್ಟಾಚಾರ ಸರ್ವವ್ಯಾಪಿಯಾಗಲು ಕಾರಣ ಯಾರು ಯೋಚಿಸಿ....

ಇದು ನೆನಪಾಗಲು ಕಾರಣ ಇದೇ ಶಾಂತವೇರಿ ಗೋಪಾಲಗೌಡರು ಸುಮಾರು ಆರವತ್ತರ ದಶಕದಲ್ಲಿ ಜನರಿಗೆ ಹಣ ಕೊಡುವುದು ಇರಲಿ ಜನರಿಂದಲೇ ಚುನಾವಣಾ ಖರ್ಚಿಗೆ ಹಣ ಪಡೆದು‌ ಶಾಸಕರಾಗಿ ಆಯ್ಕೆಯಾದವರು. ಬಹುಶಃ " ಒಂದು ನೋಟು ಒಂದು ಓಟು " ಎಂಬ ಘೋಷವಾಕ್ಯ ಇರಬೇಕು ಎಂದು ಓದಿದ ನೆನಪು. ರೈತ ಚಳವಳಿಗಾರರಾದ ಶ್ರೀಯುತ ನಂಜುಡಸ್ವಾಮಿ ಅವರು ಸಹ ಅವರ ಚುನಾವಣಾ ಸಮಯದಲ್ಲಿ ಓಟು - ನೋಟು ಪ್ರಚಾರದಲ್ಲಿ ತೊಡಗಿದ್ದರು. ಜನರು ಸಹ ಇದನ್ನು ಬೆಂಬಲಿಸಿದ್ದಾರೆ ಎಂದರೆ ‌ಆಗಿನ ಒಳ್ಳೆಯ ಮನಸ್ಥಿತಿಯ ಬಗ್ಗೆ ಹೆಮ್ಮೆ ಮೂಡುತ್ತದೆ.

ಬಡತನದ ದಿನಗಳಲ್ಲಿಯೇ ಜನ ಪ್ರಾಮಾಣಿಕರನ್ನು‌ ಆರಿಸಿದ ಉದಾಹರಣೆ ಇರುವಾಗ ಈಗ‌ ಬಹುಸಂಖ್ಯಾತ ಜನರ ಬಳಿ ಊಟ ಬಟ್ಟೆ ವಸತಿಗೆ‌ ಅಷ್ಟೋ ಇಷ್ಟೋ‌ ಅನುಕೂಲ ಇರುವಾಗ ತಮ್ಮ ಮತವನ್ನು ಮಾರಿಕೊಳ್ಳುವವರೇ ಹೆಚ್ಚಾಗಿ ಕಾಣುತ್ತಿರುವಾಗ ಏನನ್ನಬೇಕು ಇವರಿಗೆ? ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವ ಒಂದು ಸಂಭ್ರಮ ಮತ್ತು ‌ಸ್ಪೂರ್ತಿಯೂ ಹೌದು. ಹಾಗೆಯೇ ಇಂದಿನ ಚುನಾವಣಾ ರಾಜಕೀಯ ಗಮನಿಸಿದಾಗ ವಿಷಾದನೀಯವೂ ಹೌದು. ಅಷ್ಟೊಂದು ಕಲುಷಿತ ವಾತಾವರಣದಲ್ಲಿ ನಾವಿದ್ದೇವೆ.

ಇದಕ್ಕೆ ನಾವೆಲ್ಲರೂ ನೇರ ಹೊಣೆ. ಆದರೆ ಇದನ್ನು ಸರಿಪಡಿಸಲಾಗದಷ್ಟು ಕೆಟ್ಟಿದೆ ಎಂಬ ನಿರಾಸೆ ಬೇಡ.‌ ಮಧ್ಯ ವಯಸ್ಸಿನ ಜವಾಬ್ದಾರಿಯುತ ನಾಗರಿಕರು ಸ್ವಲ್ಪ ಮಟ್ಟಿಗೆ  ಸಮರ್ಪಣಾ ಮನೋಭಾವದಿಂದ ಪ್ರಯತ್ನಿಸಿದರು ಸಾಕು. ವ್ಯವಸ್ಥೆ ಸಾಕಷ್ಟು ಸುಧಾರಿಸುತ್ತದೆ. ತಾಳ್ಮೆ - ಪ್ರಬುದ್ಧತೆ - ಪ್ರೀತಿ ಮತ್ತು ವಿಶಾಲ ಮನಸ್ಸುಗಳೆಂಬ ಅಸ್ತ್ರಗಳನ್ನು ಉಪಯೋಗಿಸಿ ಇದನ್ನು ‌ಸಾಧಿಸುವ ಎಲ್ಲಾ ಸಾಧ್ಯತೆ ಇದೆ. ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವದ ಸಂದರ್ಭದಲ್ಲಿ ಈ ಬಗ್ಗೆ ಗಂಭೀರವಾಗಿ ಯೋಚಿಸಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸೋಣ. ನೆನಪಿನ ಕಾರ್ಯಕ್ರಮಗಳ ಸಾರ್ಥಕತೆ ಅಡಗಿರುವುದು‌ ತಿಳಿವಳಿಕೆಗಳು ನಡವಳಿಕೆಗಳಾದಾಗ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ