ಭಾಷಾಭಿಮಾನ, ರಾಷ್ಟ್ರೀಯತೆ, ಸಾಮಾಜಿಕ ಬದ್ಧತೆ ಇತ್ಯಾದಿ...

ಭಾಷಾಭಿಮಾನ, ರಾಷ್ಟ್ರೀಯತೆ, ಸಾಮಾಜಿಕ ಬದ್ಧತೆ ಇತ್ಯಾದಿ...

ಬರಹ

ಭಾಷಾಭಿಮಾನ, ರಾಷ್ಟ್ರೀಯತೆ, ಸಾಮಾಜಿಕ ಬದ್ಧತೆ ಇತ್ಯಾದಿ...

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಪ್ರಕಟವಾಗುತ್ತಿದ್ದಂತೆ ಕನ್ನಡ ರಾಜ್ಯೋತ್ಸವದ ಸಂಭ್ರಮ ರಾಜ್ಯಾದ್ಯಂತ ಮುಗಿಲು ಮುಟ್ಟಿದೆಯೆಂದು ಕನ್ನಡ ಟಿ.ವಿ. ವಾಹಿನಿಗಳು ವರದಿ ಮಾಡಿವೆ. ಈ ಕನ್ನಡ ಟಿ.ವಿ. ವಾಹಿನಿಗಳು ಭಾಷೆಯನ್ನು ಕಳೆದುಕೊಂಡು ಬಹಳ ದಿನಗಳೇ ಆಗಿರುವುದರಿಂದ, ಅವು ಮುಗಿಲು ಮುಟ್ಟಿದೆ ಎಂದರೂ ಒಂದೇ, ನೆಲ ಕಚ್ಚಿದೆ ಎಂದರೂ ಒಂದೇ ಅರ್ಥ ಎಂಬಂತಾಗಿದೆ! ಇದು, ಕನ್ನಡಿಗರು ಕನ್ನಡದ ಬಗ್ಗೆ ಬೆಳೆಸಿಕೊಂಡು ಬಂದಿರುವ ಹುಸಿ ಅಭಿಮಾನದ ಸಂಕೇತವೂ ಆಗಿದೆ ಎಂದರೆ ತಪ್ಪಾಗಲಾರದು. ಕನ್ನಡ ಸೇನಾನಿಗಳು ಪಟಾಕಿ ಹಚ್ಚಿ ಅದರ ಸುತ್ತಾ ಕನ್ನಡ ಬಾವುಟವಾಡಿಸುತ್ತಾ ಕುಣಿದಿದ್ದೇನು, ನಮ್ಮ ಮುಖ್ಯಮಂತ್ರಿಗಳು ಟಿ.ವಿ. ಕ್ಯಾಮರಾಗಳ ಮುಂದೆಯೇ ಬಾಯಿ ಇಷ್ಟಗಲ ಮಾಡಿಕೊಂಡು ಈ ಬಾರಿ ರಾಜ್ಯೋತ್ಸವ ಸಂಭ್ರಮವನ್ನು ರಾಜ್ಯಾದ್ಯಂತ ವಿಶೇಷವಾಗಿ (ಶಾಸ್ತ್ರೀಯ ಸ್ಥಾನಮಾನಕ್ಕೆ ತಕ್ಕಂತೆ?) ಆಚರಿಸುವಂತೆ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚಿಸಿದ್ದೇನು! ಆಹಾ, ಇದೇ ಅಲ್ಲವೇ ಕನ್ನಡಾಭಿಮಾನವೆಂದರೆ? ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕುವಂತೆ ಮಾಡಲು ಹೋರಾಡಿದವರಿಗೆ ಸನ್ಮಾನ ಮಾಡುವುದಾಗಿಯೂ ಯಡಿಯೂರಪ್ಪನವರು ಈ ಸಂದರ್ಭದಲ್ಲಿ ಪ್ರಕಟಿಸಿದ್ದಾರೆ.

ಆದರೆ ಯಾವ ಹೋರಾಟ? ಹಲವು ಬಾರಿ ಒಂದು ದಿನದ ಅಮರಣಾಂತ ಉಪವಾಸ ಗೈದಿದ್ದೆ? ಹಣೆ ತುಂಬ ತಿಲಕ ಹಚ್ಚಿಕೊಂಡು ಊರೂರುಗಳಲ್ಲಿ ಬೀದಿ ತುಂಬಾ ಕೂಗುತ್ತಾ ಮೆರವಣಿಗೆ ತೆಗೆದದ್ದೆ? ಇವುಗಳಿಂದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆಯೆಂದು ಇವರು ನಂಬಿದ್ದರೆ ಅದಕ್ಕಿಂತ ದೊಡ್ಡ ಭ್ರಮೆ ಇನ್ನೊಂದಿರಲಾರದು! ಏಕೆಂದರೆ ತೆಲುಗಿನವರು ಯಾವ ಉಪವಾಸವನ್ನೂ ಮಾಡದೆ, ಯಾವ ಬೀದಿ ಮೆರವಣಿಗೆಯನ್ನೂ ತೆಗೆಯದೆ ತಮ್ಮ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಗಿಟ್ಟಿಸಿಕೊಂಡಿದ್ದಾರೆ! ಇದು ಹೇಗೆ ಸಾಧ್ಯವಾಯಿತು? ತೆಲುಗಿನವರು ಸ್ವಾಭಿಮಾನಿಗಳಂತೆ ವರ್ತಿಸಿ ಮಾಡಬೇಕಾದ ರೀತಿಯಲ್ಲಿ ಭಾಷಾ ರಾಜಕಾರಣ ಮಾಡಿ ತಮಗೆ ಬೇಕಾದುದನ್ನು ಘನತೆಯಿಂದ ಪಡೆದಿದ್ದಾರೆ. ಆದರೆ ಕನ್ನಡಿಗರು? ಕೂಗಾಡಿ, ಬೈದು, ರಚ್ಚೆ ಮಾಡಿ, ಬೆದರಿಕೆ ಹಾಕಿ, ಅವುಗಳಿಂದಲೇ ಪಡೆಯಬೇಕಾದುದನ್ನೆಲ್ಲ ಪಡೆದುಕೊಂಡಂತೆ, ಈಗ ಸನ್ಮಾನಕ್ಕೆ ಬೇರೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ! ಇನ್ನು ಯಾರಾರನ್ನೆಲ್ಲ ಸನ್ಮಾನಿಸಬಹುದೆಂದು ನಮ್ಮ ರಾಷ್ಟ್ರ ಕವಿಗಳು ಪರೋಕ್ಷವಾಗಿ ಸೂಚಿಸಿಯೂ ಬಿಟ್ಟಿದ್ದಾರೆ. ಇವರು ಶಿಫಾರ್ಸ್ ಮಾಡಿರುವ ಹೋರಾಟಗಾರರನ್ನೊಮ್ಮೆ ನೋಡಿದರೆ, ಕನ್ನಡದ ಭವಿಷ್ಯ ನಿಜವಾಗಿಯೂ ಆತಂಕದಲ್ಲಿದೆ ಎಂದೇ ಹೇಳಬೇಕು!

ಈ ಮುಗಿಲು ಮುಟ್ಟಿದ ಸಂಭ್ರಮದ ರಾಜ್ಯೋತ್ಸವದ ಎರಡು ದಿನಗಳ ಹಿಂದಷ್ಟೆ ನಮ್ಮ ಉಚ್ಛ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಕರ್ನಾಟಕದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡುವಂತೆ ಆದೇಶಿಸುತ್ತಾ, ಈ ಆದೇಶದೊಂದಿಗೆ ಮಕ್ಕಳಿಗೆ ಇಂಗ್ಲಿಷ್ ಕಲಿಸುವುದು ತಂದೆ ತಾಯಿಗಳ ಹಕ್ಕಷ್ಟೇ ಅಲ್ಲ, ಕರ್ತವ್ಯವೂ ಎಂಬಂತೆ ಪ್ರವಚನ ನೀಡಿದ್ದಾರೆ ಎಂಬುದನ್ನೂ ನಾವು ಗಮನಿಸಬೇಕು. ನಮ್ಮ ನ್ಯಾಯಾಧೀಶರುಗಳು ನ್ಯಾಯ ನೀಡುವ ಅಧಿಕಾರವನ್ನಷ್ಟೇ ಅಲ್ಲ, ಹೊಸ ಕಾಲದ ಪ್ರವಾದಿತ್ವವನ್ನೂ ತಮ್ಮ ಮೇಲೆ ಆರೋಪಿಸಿಕೊಂಡಂತಿದೆ! ಆದರೆ ಅವರು ಸಂವಿಧಾನವನ್ನು ಸೂಕ್ತವಾಗಿ ಅರ್ಥೈಸುವುದರ ಹೊರತಾಗಿ ಮತ್ತಾವ ಕೆಲಸಕ್ಕೂ ಅಧಿಕಾರಸ್ಥರೂ ಅಲ್ಲ, ಅರ್ಹರೂ ಅಲ್ಲ ಎಂಬುದು ಅನೇಕ ವೇಳೆ ಅನೇಕರಿಂದ ವಿಷದೀಕರಿಸಲ್ಪಟ್ಟಿದೆ, ಆದರೂ, ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಈ ಅಧಿಕಾರ-ಅರ್ಹತೆಗಳನ್ನೂ ಮೀರಿ ತಮ್ಮ ತೀರ್ಪಿನ ಜೊತೆಯಲ್ಲಿ ಸಾರ್ವಜನಿಕ ಮಹತ್ವದ ವಿಷಯಗಳ ಬಗ್ಗೆ ನಿರ್ಣಯಾತ್ಮಕ ರೂಪದ ಹೇಳಿಕೆಗಳನ್ನು ನೀಡುವುದು, ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸಾಮಾನ್ಯವಾಗಿ ಹೋಗಿರುವುದನ್ನು ನಮ್ಮ ಅನೇಕ ಕಾನೂನು ಪಂಡಿತರು ವಿಷಾದದಿಂದ ಗಮನಿಸಿದ್ದಾರೆ. ಅದಕ್ಕೆ ಕಾರಣ ಹೊಸ ಆರ್ಥಿಕತೆಯ ಗಾಳಿಗೆ ಅವರೂ ತಮ್ಮ ಮೈಮನಗಳನ್ನು ತೆರೆದುಕೊಂಡಿರುವುದೇ ಆಗಿದೆ. ಅದರ ದುಷ್ಪರಿಣಾಮಗಳನ್ನು ನಾವು ನ್ಯಾಯಾಂಗದ ಇತ್ತೀಚಿನ ಹಲವಾರು ಭ್ರಷ್ಟಾಚಾರದ ಪ್ರಕರಣಗಳ ವರದಿಗಳಲ್ಲಿ ನೋಡಬಹುದಾಗಿದೆ. ಸದರಿ ನ್ಯಾಯಾಧೀಶರ ತೀರ್ಪನ್ನು ಕುರಿತ ಪತ್ರಿಕಾ ವರದಿಗಳನ್ನೇ ಆಧರಿಸಿ ಹೇಳುವುದಾದರೆ, ಈ ನ್ಯಾಯಾಧೀಶರಿಗೆ ಶಿಕ್ಷಣದ ಮಾಧ್ಯಮದ ಪ್ರಶ್ನೆಯೇ ಬೇರೆ, ಇಂಗ್ಲಿಷ್ ಕಲಿಕೆಯ ಅಗತ್ಯದ ಪ್ರಶ್ನೆಯೇ ಬೇರೆ ಎಂಬುದು ಅರ್ಥವಾದಂತಿಲ್ಲ ಎಂದು ವಿಷಾದದಿಂದ ಹೇಳಬೇಕಾಗಿದೆ.

ಆದರೆ ಇದಕ್ಕಿಂತ ಹೆಚ್ಚಿನ ವಿಷಾದದ ಸಂಗತಿಯೆಂದರೆ, ಶಾಸ್ತ್ರೀಯ ಭಾಷಾ ಸ್ಥಾನಮಾನದ ಬಗ್ಗೆ ಸಂಭ್ರಮ ಪಡುತ್ತಿರುವ ವೀರ ಕನ್ನಡಿಗರಾರೂ ಸಾರ್ವಜನಿಕವಾಗಿ ಕನ್ನಡ ಎದುರಿಸುತ್ತಿರುವ ಈ ಮುಜುಗರದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವುದು. ಕನ್ನಡದ ತಂದೆ ತಾಯಿಗಳೇ ತಮ್ಮ ಮಕ್ಕಳಿಗೆ ಕನ್ನಡದಲ್ಲಿ ಶಾಲಾ ಶಿಕ್ಷಣವೂ ಬೇಡವೆಂದು ಘಂಟಾಘೋಷವಾಗಿ ಹೇಳಿಕೊಂಡು, ಅದಕ್ಕೆ ನಮ್ಮ ನ್ಯಾಯಾಲಯಗಳ ಮನ್ನಣೆಯನ್ನೂ ಪಡೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಕನ್ನಡ ರಾಜ್ಯೋತ್ಸವ ಮುಗಿಲು ಮುಟ್ಟಿದೆ ಎಂದರೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆಯೆಂದು ಕನ್ನಡಿಗರು ಬೀದಿ ಬೀದಿಗಳಲ್ಲಿ ಹುಚ್ಚೆದ್ದು ಕುಣಿಯಲಾರಂಭಿಸಿದ್ದಾರೆ ಎಂದರೆ; ಕನ್ನಡಾಭಿಮಾನವೆಂಬುದು ಈಗ ಎಷ್ಟು ವಿಕ್ಷಿಪ್ತವಾಗಿ ಹೋಗಿರಬೇಕು ಎಂದು ಯೋಚಿಸಿ! ಒಂದು ಭಾಷೆ ಉಳಿಯುವುದು, ಬೆಳೆಯುವುದು ಅದರ ಸಾರ್ವಜನಿಕ ಬಳಕೆದಾರಿಕೆಯ ವೈವಿಧ್ಯದಲ್ಲಿ. ಹಾಗಾಗಿ, ಕನ್ನಡದ ಮಕ್ಕಳು ಪ್ರಾಥಮಿಕ ಶಿಕ್ಷಣವನ್ನೂ ಕನ್ನಡದ ಮೂಲಕ ಕಲಿಯುವುದು ಅವರ ಭವಿಷ್ಯದ ದೃಷ್ಟಿಯಿಂದ ಆತಂಕಕಾರಿ ಎಂಬ ಸಾಮಾಜಿಕ ಸಂದರ್ಭವನ್ನುಂಟುಮಾಡಿರುವ ನಮ್ಮ ಸಾಮಾಜಿಕ ನಾಯಕರಿಗೆ ಮತ್ತು ಸರ್ಕಾರಕ್ಕೆ ರಾಜ್ಯೋತ್ಸವ ಆಚರಿಸುವ ಯಾವ ನೈತಿಕ ಹಕ್ಕೂ ಇಲ್ಲ ಎಂದು ಹೇಳಬೇಕಾಗಿದೆ. ಕನ್ನಡದ ಮಕ್ಕಳು ಕನ್ನಡದಲ್ಲಿ ಶಿಕ್ಷಣ ಪಡೆಯುವುದು ಅವರ ಧರ್ಮ ಮತ್ತು ಹಾಗಾಗಿ ಅವರ ಹಕ್ಕು ಎಂಬ ಪ್ರಜಾಸತ್ತಾತ್ಮಕ ಸಾರ್ವಜನಿಕ ಸಮ್ಮತಿಯನ್ನು ಸಂಘಟಿಸಲಾಗದ ಯಾವುದೇ ಸರ್ಕಾರ, ಕನ್ನಡಕ್ಕೆ ತನ್ನ ಬದ್ಧತೆಯನ್ನು ಮತ್ತು ಕನ್ನಡ ಭಾಷಾಭಿವೃದ್ಧಿಗಾಗಿ ಕೋಟ್ಯಾಂತರ ರೂಪಾಯಿಗಳ ಅನುದಾನ ಘೋಷಿಸಿವುದು ದೊಡ್ಡ ಆತ್ಮವಂಚನೆಯಲ್ಲದೆ ಮತ್ತೇನಲ್ಲ. ಹಾಗೇ ಅಂತಹ ಸರ್ಕಾರದಿಂದ ಸನ್ಮಾನಕ್ಕೆ ಸಿದ್ಧರಾಗುತ್ತಿರುವವರ ಕೃತಾರ್ಥತೆ ಕೂಡಾ ಇದಕ್ಕೆ ಹೊರತಲ್ಲ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದ್ದರಿಂದಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಸಂಶೋಧನಾ ಯೋಜನೆಗಳು ಮಂಜೂರಾಗುವುವಂತೆ. ತಮಿಳು ಶಾಸ್ತ್ರೀಯ ಭಾಷಾ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ಅನುಭವಿಗಳೊಬ್ಬರ ಮಾತನ್ನೇ ನಂಬುವುದಾದರೆ, ಅವರಿಗೆ ಈ ಯೋಜನೆಗಳನ್ನು ನಿರ್ವಹಿಸಬಲ್ಲ ವಿದ್ವಾಂಸರೇ ಸಿಗುತ್ತಿಲ್ಲವಂತೆ. ಇನ್ನು ಇವೊತ್ತು ಕನ್ನಡದಲ್ಲಿ ನಡೆಯುತ್ತಿರುವ ಸಂಶೋಧನೆಗಳ ಗುಣಮಟ್ಟವನ್ನು ನೋಡಿದರೆ, ಈ ಹೊಸ ಯೋಜನೆಗಳಿಂದ ಈ ಮಟ್ಟ ಇನ್ನಷ್ಟು ಕುಸಿದು, ಕನ್ನಡ ಪಾಂಡಿತ್ಯ ಕ್ಷೇತ್ರವೆಂಬುದು ಸಂಶೋಧನೆಯ ಹೆಸರಿನಲ್ಲಿ ಹಣ ಲಪಾಟಿಯಿಸುವ ದುಷ್ಟರ ಮತ್ತು ಭ್ರಷ್ಟರ ದೊಡ್ಡ ಜಾಲವಾಗಿ ಪರಿವರ್ತಿತವಾದರೆ ಆಶ್ಚರ್ಯವೇನಿಲ್ಲ. ಕನ್ನಡವನ್ನು ಬಳಸುವ ಮತ್ತು ಬೆಳಸುವ ಕೆಲಸಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಅದರ ಪ್ರಾಚೀನ ವೈಭವವನ್ನಷ್ಟೇ ಆಚರಿಸಲೆಣಿಸುವವರ ಈ ಪ್ರಯತ್ನ ಆತ್ಮಘಾತುಕವೇ ಆಗಿದೆ ಎಂದರೆ ತಪ್ಪಾಗಲಾರದು.

ಒಂದು ಕಡೆ ಈ ವಿಪರ್ಯಾಸವಿದ್ದರೆ, ಇನ್ನೊಂದು ಕಡೆ ಒಂದು ಭಾಷೆ ಮತ್ತು ಆ ಭಾಷೆಯನ್ನಾಡುವ ಜನರ ಹಿತದ ಬಗ್ಗೆ ಮಾತನಾಡುವುದೇ ಸಂಕುಚಿತತೆ ಎನ್ನಿಸಿಕೊಳ್ಳಲಾರಂಭಿಸಿರುವುದು ಇನ್ನೊಂದು ವಿಪರ್ಯಾಸ. ಮಹರಾಷ್ಟ್ರ ನವನಿರ್ಮಾಣ ಸೇನೆಯ ರಾಜ್ ಠಾಕ್ರೆಯ ಭಾಷಾಭಿಮಾನ ಪ್ರಕಟಣೆಯ ಮಾರ್ಗಗಳು ಯಾರೂ ಒಪ್ಪಲಾಗದಂತಹವು, ನಿಜ. ಹಾಗಾಗಿಯೇ ಈ ಹಿಂಸಾ ಮಾರ್ಗಗಳಿಗೆ ಬಲಿಯಾದ ಭಾಷಾ ರಾಜ್ಯಗಳ ಜನರೂ ಪ್ರತಿಹಿಂಸೆಗೆ ಇಳಿದಿದ್ದಾರೆ. ಭಾರತ ಒಂದು ರಾಷ್ಟ್ರವಾಗಿ ಭಾರತೀಯರೆನ್ನಿಸಿಕೊಂಡವರು ಯಾವುದೇ ಪ್ರದೇಶದಲ್ಲಿ ಉದ್ಯೋಗ ಮಾಡುವ, ನೆಲಸುವ ಹಕ್ಕನ್ನು ಪಡೆದಿದ್ದಾರೆ ಎಂಬುದೂ ನಿಜ. ಆದರೆ ಈ ಹಕ್ಕು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಎಷ್ಟು ದುರುಪಯೋಗವಾಗಿದೆ ಎಂದರೆ, ನಮ್ಮ ರಾಷ್ಟ್ರ ನಿರ್ಮಾಪಕರು ಭಾಷಾ ರಾಷ್ಟ್ರೀಯತೆಗಳ ವಾಸ್ತವವನ್ನು ಮನಗಂಡು ರಚಿಸಿದ ಭಾಷಾಧಾರಿತ ರಾಜ್ಯಗಳ ಒಕ್ಕೂಟದ ಪರಿಕಲ್ಪನೆಯೇ ಇದರಿಂದ ಘಾಸಿಗೊಳ್ಳಲಾರಂಭಿಸಿದೆ. ಇದು ಸಮುದಾಯ ವಿಶಿಷ್ಟತೆಯನ್ನು ನಾಶ ಮಾಡುತ್ತಾ, ಭಾರತವೆಂಬುದನ್ನು ರಾಜಕೀಯ ಬಲ ಸಂಘಟಿಸಿಕೊಳ್ಳಬಲ್ಲ ಸಮುದಾಯಗಳ 'ಸಾಮ್ರಾಜ್ಯಶಾಹಿ' ಪ್ರವೃತ್ತಿಗಳ ಆಡೊಂಬಲವನ್ನಾಗಿ ಪರಿವರ್ತಿಸುತ್ತಿದೆ. ಭಾರತ ಒಂದು ರಾಷ್ಟ್ರವಾಗಿ ಉಳಿಯುವುದು ಮತ್ತು ಉಳಿಯಬೇಕಾದದ್ದು, ತನ್ನ ವೈವಿಧ್ಯತೆ ಬಲಗೊಳ್ಳುವ ಏಕತೆಯಲ್ಲಿ; ಏಕತೆಯ ಒತ್ತಡದಲ್ಲಿ ನಲುಗುವ ವೈವಿಧ್ಯತೆಯಲ್ಲಲ್ಲ. ಭಾರತದ ಒಕ್ಕೂಟವನ್ನು ಬಲಪಡಿಸುವುದೆಂದರೆ, ಆ ಒಕ್ಕೂಟ ಯಾವುದರಿಂದ ನಿರ್ಮಿತವಾಗಿದೆಯೋ ಆ ರಾಜ್ಯಗಳ ಆಧಾರಗಳನ್ನು ಬಲಪಡಿಸುವುದು. ಅಂದರೆ ಆಯಾ ಭಾಷಾ ಸಮುದಾಯಗಳ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಅಸ್ತಿವಾರಗಳನ್ನು ಬಲಗೊಳಿಸುವುದು. ಆದರೆ ಈಗ ಆಗುತ್ತಿರುವುದಾದರೂ ಏನು?

ಉದಾಹರಣೆಗೆ, ಈ ಮೊದಲು ಕರ್ನಾಟಕದಲ್ಲಿ ಮತ್ತು ಈಗ ಮಹಾರಾಷ್ಟ್ರದಲ್ಲಿ ಗಲಾಟೆಗೆ ಕಾರಣವಾಗಿರುವ ರೈಲ್ವೇ ನೇಮಕಾತಿಗಳ ವಿಷಯವನ್ನೇ ತೆಗೆದುಕೊಳ್ಳಿ. ಈ ನೇಮಕಾತಿಯ ಪ್ರಕ್ರಿಯೆಯನ್ನು ರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ, ಕೇಂದ್ರಗಳಲ್ಲಿ ನಡೆಸುವ ಉದ್ದೇಶವಾದರೂ ಏನು? ಎಲ್ಲ ಪ್ರದೇಶಗಳ ಜನ ರೈಲ್ವೇ ಎಂಬ ರಾಷ್ಟ್ರೀಯ ವ್ಯವಸ್ಥೆಯಲ್ಲಿ ಪಾಲ್ಗೊಳ್ಳವಂತಾಗಬೇಕೆಂದು ತಾನೆ? ಆದರೆ ಬೆಂಗಳೂರಿನಲ್ಲಿಯೋ, ಮುಂಬೈನಲ್ಲಿಯೋ ನಡೆಯುವ ನೇಮಕಾತಿ ಪ್ರಕ್ರಿಯೆಯಲ್ಲಿ ದೂರದ ಉತ್ತರ ಪ್ರದೇಶ, ಬಿಹಾರ, ಬಂಗಾಳ, ಅಸ್ಸಾಂಗಳ ಜನರೂ ಪಾಲ್ಗೊಳ್ಳಬಹುದೆಂದರೆ, ಇಂತಹ ನೇಮಕಾತಿ ಪ್ರಕ್ರಿಯೆಯ ಹಿಂದಿನ ಈ ರಾಷ್ಟ್ರೀಯ ಉದ್ದೇಶವೇ ವಿಫಲವಾದಂತಲ್ಲವೆ? ಕಳೆದೆರಡು ದಶಕಗಳಿಂದ ರೈಲ್ವೇ ಮಂತ್ರಿಗಳಾಗಿರುವವರ ರಾಜ್ಯವಾದ ಬಿಹಾರದಿಂದಲೇ ಅಭ್ಯರ್ಥಿಗಳು ಪ್ರವಾಹದೋಪಾದಿಯಲ್ಲಿ ರಾಷ್ಟ್ರದ ಬೇರೆ ಬೇರೆ ಕೇಂದ್ರಗಳಲ್ಲಿ ನಡೆಯುವ ನೇಮಕಾತಿಗಳಿಗೆ ಬರಲಾರಂಭಿಸಿದ್ದಾರೆ ಎಂದರೆ, ಇದರಲ್ಲಿ ಅರಾಷ್ಟ್ರೀಯವಾದದ್ದೇನೋ ನಡೆಯುತ್ತಿದೆ ಎಂದೇ ಅಲ್ಲವೆ? ಒಂದು ಕೇಂದ್ರದಲ್ಲಿ ನೇಮಕಾತಿ ಎಂದರೆ, ಆ ಕೇಂದ್ರದ ನೆರೆಹೊರೆಯ ಜನ-ಅವರು ಯಾವುದೇ ಭಾಷೆಯ ಸಮುದಾಯದವರಾಗಿರಲಿ-ಅದರಲ್ಲಿ ಭಾಗವಹಿಸಿ ಉದ್ಯೋಗ ಪಡೆಯುವ ಅವಕಾಶ ಹೊಂದಿರಬೇಕು ಎಂಬುದು ಅದರ ಆಶಯವಾಗಿರುತ್ತದೆ. ಆದರೆ ಇಂದು ಈ ಆಶಯವನ್ನು ರಾಷ್ಟ್ರೀಯತೆಯ ಹೆಸರಿನಲ್ಲಿ ಭಂಗಗೊಳಿಸಲಾಗುತ್ತಿದೆ. ಇದು ತಲೆಕೆಳಗಾದ ರಾಷ್ಟ್ರೀಯತೆಯಲ್ಲದೆ ಮತ್ತೇನಲ್ಲ.

ಇದನ್ನು ಸಹಜವಾಗಿಯೇ ಇಂದು ಹಲವು ಕಡೆ ಪ್ರಶ್ನಿಸಲಾಗುತ್ತಿದೆ. ಆದರೆ ಇದನ್ನು ಒರಟೊರಟಾಗಿ ಮಾಡುತ್ತಿರುವ ರಾಜ್ ಠಾಕ್ರೆಯನ್ನು ರಾಷ್ಟ್ರ ವಿರೋಧಿ ಎಂದು ಕರೆಯಲಾಗುತ್ತಿದೆ. ಅಷ್ಟೇ ಅಲ್ಲ, ಆತನ ಪ್ರತಿಭಟನೆಯನ್ನು 'ಗೂಂಡಾರಾಜ್' ಎಂದೂ ಇಂಗ್ಲಿಷ್ ಟಿ.ವಿ. ವಾಹಿನಿಗಳು ಕರೆಯುತ್ತಿವೆ. ಆದರೆ ಆಳವಾಗಿ ನೋಡಿದಾಗ, ಈ ಗೂಂಡಾರಾಜ್‌ನ ಮೂಲಕರ್ತೃ ಆತನಲ್ಲ. ಬದಲಿಗೆ, ಭಾರತದ ಭಾಷಾ ಸಮುದಾಯಗಳ ಸಾಂಸ್ಕೃತಿಕ ಅಸ್ಮಿತೆಯನ್ನಷ್ಟೇ ಅಲ್ಲ, ಅವುಗಳ ಸಾಮಾಜಿಕ ಭದ್ರತೆಯನ್ನೂ; ತಮ್ಮ ತಲೆಕೆಳಗಾದ ರಾಷ್ಟ್ರೀಯತೆಯನ್ನು ಅವುಗಳ ಮೇಲೆ ಹೇರಲಾರಂಭಿಸಿ ಆತಂಕಕ್ಕೀಡು ಮಾಡತೊಡಗಿರುವವರೇ ಆಗಿದ್ದಾರೆ ಎಂಬುದು ಗೊತ್ತಾಗುತ್ತದೆ. ಯಾವುದೇ ತೆರೆನ ಸ್ಥಳೀಯತೆಯ ಅಡೆತಡೆಯಿಲ್ಲದೆ ರಾಷ್ಟದುದ್ದಗಲಕ್ಕೂ ತಮ್ಮ ವ್ಯಾಪಾರೋದ್ಯಮಗಳ ಜಾಲ ವಿಸ್ತರಿಸಿಕೊಳ್ಳಬಯಸುವ ಎಲ್ಲ ಆಸೆಬುರುಕ ವಣಿಜರೂ, ಅವರ ಗುಲಾಮರಾಗಿರುವ ನಮ್ಮ ರಾಜಕಾರಣಿಗಳೂ ಕಟ್ಟತೊಡಗಿರುವ ಹೊಸ ರೀತಿಯ-ತಲೆಕೆಳಗಾದ-ರಾಷ್ಟ್ರೀಯತೆ ಇದು.

ಈ ಪ್ರವೃತ್ತಿಯ ವಿರುದ್ಧ ಪ್ರತಿಭಟಿಸುವುದೇ ಇಂದು ನಿಜವಾದ ರಾಷ್ಟ್ರೀಯತೆ ಎನ್ನಿಸಿಕೊಳ್ಳಬೇಕು. ಆದರೆ ಇಂತಹ ಪ್ರತಿಭಟನೆಯನ್ನು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆಗಳಂತಹ ಪ್ರಾದೇಶಿಕ ಸಂಘಟನೆಗಳು ಗಲಭೆ ಮತ್ತು ಹಿಂಸೆಯ ಮೂಲಕ ಕೈಗೊಂಡು ಅದರ ವಿಶ್ವಾಸಾರ್ಹತೆಯನ್ನೇ ಹಾಳುಗೆಡಹಿವೆ. ಅವು ಸಾಮೂಹಿಕ ಸತ್ಯಾಗ್ರಹ ಮಾರ್ಗವನ್ನು ತಮ್ಮ ಪ್ರತಿಭಟನೆಯ ಮಾರ್ಗವಾಗಿ ಆಯ್ದುಕೊಳ್ಳುವುದಾದರೆ, ಅವಕ್ಕೆ ಇಡೀ ರಾಜ್ಯದ-ಅವರು ಯಾವುದೇ ಭಾಷೆ ಮಾತನಾಡುವವರಾಗಿರಲಿ-ಜನತೆಯ ಸಹಾನುಭೂತಿ, ಬೆಂಬಲ ದೊರಕುತ್ತದೆ ಮತ್ತು ದೀರ್ಘಕಾಲಿಕ ರಾಜಕೀಯ ಪರಿಣಾಮಗಳಿಗೆ ಕಾರಣವಾಗುತ್ತದೆ. ಆದರೆ ಇದು ಸಾಧ್ಯವಾಗುವುದು ಅಲ್ಪಕಾಲಿಕ ರಾಜಕೀಯ ಲಾಭವನ್ನು ಮೀರಿದ ಉದ್ದೇಶಗಳಿಂದ ಈ ಚಳುವಳಿಗಳ ನಾಯಕತ್ವ ರೂಪುಗೊಂಡಾಗ ಮಾತ್ರ. ಕರವೇ ಮತ್ತು ಮನಸೇಗಳಿಗೆ ಈ ದೀರ್ಘಕಾಲಿಕ ಮತ್ತು ಘನ ಉದ್ದೇಶಗಳಿದ್ದಂತಿಲ್ಲ ಎಂಬುದೇ ಅವುಗಳ ದೊಡ್ಡ ಮತ್ತು ಮುಖ್ಯ ಕೊರತೆಯಾಗಿದೆ.

ಅದೇನೇ ಇರಲಿ, ದಿನೇ ದಿನೇ ಹೆಚ್ಚುತ್ತಿರುವ ಇಂತಹ ಸಾಮಾಜಿಕ ಗಲಭೆ-ಗೊಂದಲಗಳಿಂದಾಗಿ ನಮ್ಮ ಸೂಕ್ಷ್ಮ ಮನಸ್ಸಿನ ಬುದ್ಧಿಜೀವಿಗಳ ಖಿನ್ನತೆ ಹೆಚ್ಚುತ್ತಾ ಹೋಗುತ್ತದೆಂದು ಕಾಣುತ್ತದೆ. ಈ ಖಿನ್ನತೆಯ ಪರಿಣಾಮವೆಂದರೆ, ನಮ್ಮ ದೃಷ್ಟಿದೂರ ಸಂಕುಚಿತವಾಗುತ್ತಾ ಹೋಗುವುದು! ವಿಕ್ರಾಂತ ಕರ್ನಾಟಕದ ಅಕ್ಟೋಬರ್ 17ರ ಸಂಚಿಕೆಯ 'ಹನಿ ಕಷಾಯ' ಪುಟದಲ್ಲಿ ನಮ್ಮ ಕ್ರಾಂತಿಕಾರಿ ಉಪ ಸಂಪಾದಕಾರಾದ ಮಲ್ಲನಗೌಡರು ಆಯ್ದು ಪ್ರಕಟಿಸಿರುವ ಜಿ.ರಾಜಶೇಖರರ ಮಾತುಗಳು ಇದಕ್ಕೊಂದು ಉದಾಹರಣೆಯಂತಿದೆ. ಜಿ.ವಿ.ಆನಂದಮೂರ್ತಿಯವರ ಕವನ ಸಂಕಲನವೊಂದಕ್ಕೆ ಅವರು ಬರೆದಿರುವ ಮುನ್ನುಡಿಯಿಂದ ಆಯ್ದ ಈ ಮಾತುಗಳನ್ನು ಮಲ್ಲನಗೌಡರು ಸದ್ಯದ ಕನ್ನಡ ಸಾಹಿತಿಗಳ, ನಿರ್ದಿಷ್ಟವಾಗಿ ಕವಿಗಳ ಸಾಮಾಜಿಕ ಬದ್ಧತೆಯ ದಿವಾಳಿತನವನ್ನು ಎತ್ತಿ ತೋರಿಸಿ ತಮ್ಮ ಸಂತೋಷವನ್ನೋ, ದುಃಖವನ್ನೋ ಪ್ರದರ್ಶಿಸಲು ಪ್ರಕಟಿಸಿದಂತಿದೆ! ನಮ್ಮ ಮಲ್ಲನಗೌಡರಿಗೇನೋ ಸಾಹಿತ್ಯ-ಗೀಹಿತ್ಯವೆಲ್ಲ ಕ್ರಾಂತಿಗೆ ಬೇಕಾದ ಬಂದೂಕು-ಮದ್ದು ಗುಂಡುಗಳೆಂಬ ಕಲ್ಪನೆ ಇರಬಹುದು. ಆದರೆ ನಮ್ಮ ನಡುವಿನ ಬಹುಸೂಕ್ಷ್ಮ ಚಿಂತಕರೆನಿಸಿದ ರಾಜಶೇಖರರಿಗೆ?

ಕನ್ನಡದ ಇಂದಿನ ಬಹಳಷ್ಟು ಕವಿಗಳು ಮರುಕಕ್ಕೆ ಮಾತ್ರ ಅರ್ಹರಿರಬಹುದು. ಅದರೆ ಅದಕ್ಕೆ ಬೆಂಬಲವಾಗಿ ಅವರನ್ನು ಕುರಿತು ರಾಜಶೇಖರರು ಆಡಿರುವ ಮಾತುಗಳೂ ಅಷ್ಟೇ ಮರುಕಕ್ಕೆ ಅರ್ಹವಾಗಿವೆ. ಏಕೆಂದರೆ, ಸಾಹಿತ್ಯ ಯಾರದೇ ನಿರೀಕ್ಷೆಗಳಿಗೆ, ಆದೇಶಗಳಿಗೆ, ನಿರ್ದೇಶನಗಳಿಗೆ ತಕ್ಕಂತೆ ನಿರ್ಮಾಣವಾಗಲಾರದು. ಅದು ಅದರ ತತ್ಕಾಲೀನ ಸಾಮಾಜಿಕ ಸಂದರ್ಭವನ್ನು ಮೀರಿದ ಶಕ್ತಿಗಳಿಂದ ನಿರ್ಮಾಣವಾಗುವ ಸಮಷ್ಠಿಯ ನೆಲೆಯಲ್ಲಿ ಉಕ್ಕುವಂತಹುದು. ಇವೊತ್ತಿನ ಕಾವ್ಯದಲ್ಲಿ ಸಮಕಾಲೀನ ಸಂದರ್ಭದ ಒತ್ತಡಗಳು ಪ್ರತಿಬಿಂಬಿತವಾಗಿಲ್ಲವೆಂದರೆ, ಆ ಒತ್ತಡಗಳು ಕಾವ್ಯಾಭಿವ್ಯಕ್ತಿಗೆ ಸೂಕ್ತವಾದ ಸಮಷ್ಠಿಯನ್ನು ಇನ್ನೂ ನಿರ್ಮಾಣ ಮಾಡಿಲ್ಲವೆಂದೇ ಅರ್ಥ. ಹೀಗೆ ಸಮಷ್ಠಿ ನಿರ್ಮಾಣದ ಭಾಗವಾಗಿ ವ್ಯಕ್ತವಾಗದ ಅದೆಷ್ಟೋ ಕಾವ್ಯಾಭಿವ್ಯಕ್ತಿಯನ್ನು ಕನ್ನಡ ಕಂಡಿದೆ, ನಿಜ. ಆದರೆ ಅದೆಂದೂ ಊರ್ಜಿತವಾಗದ ಕೆಟ್ಟ ಕಾವ್ಯ ಮಾತ್ರವಾಗಿದೆ. ಹಾಗೇ, ಈ ಹಿಂದೆ ಸಂದರ್ಭೋಚಿತವಾಗಿ ಊರ್ಜಿತವಾದಂತೆ ತೋರಿದ ಕಾವ್ಯವೂ ಬದಲಾದ ಇಂದಿನ ಸಾಮಾಜಿಕ ಸಂದರ್ಭದಲ್ಲಿ ಸಂಶಯಾಸ್ಪದವಾಗಿ ತೋರತೊಡಗಿರುವುದನ್ನೂ ರಾಜಶೇಖರರು ಗಮನಿಸಬೇಕು. ಇಂತಹ ವಿದ್ಯಮಾನಗಳಿಂದ ಕನ್ನಡ ಕಾವ್ಯ ಪರಂಪರೆಗೆ ಆಗುವ ಆಘಾತ ಕಡಿಮೆ ಪ್ರಮಾಣದ್ದಲ್ಲ. (ಕರಾವಳಿಯ) ಕೋಮು ಹಿಂಸಾಚಾರಗಳಿಂದ ತಲ್ಲಣಗೊಂಡ ಕಾವ್ಯವೇಕೆ ಇಂದು ಬರುತ್ತಿಲ್ಲ ಎಂದು ವ್ಯಗ್ರರಾಗಿ ಕೇಳುತ್ತಿರುವಂತೆ ತೋರುವ ಜಿ.ರಾಜಶೇಖರರ ಮಾತುಗಳಲ್ಲಿ ನನಗೆ ಇಂತಹ ಆಘಾತವನ್ನು ಆಹ್ವಾನಿಸುತ್ತಿರುವ ಸೂಚನೆ ಕಾಣುತ್ತದೆ.

ಇನ್ನು ಪ್ರಕೃತಿಯೊಳಗಿನ ವಿಸ್ಮಯವನ್ನು ಅಭಿವ್ಯಕ್ತಿಸುವ ಕವಿಗಳ ಮೇಲೆ ರಾಜಶೇಖರರು ಹರಿಹಾಯ್ದಿರುವ ರೀತಿಯಂತೂ ಅತ್ಯಂತ ಅಸಾಹಿತ್ಯಕವೂ, ಅಸಾಮಾಜಿಕವೂ ಆಗಿದೆ. ಏಕೆಂದರೆ, ಪ್ರಕೃತಿಯನ್ನು ಕುರಿತ ಮನುಷ್ಯನ ವಿಸ್ಮಯಕ್ಕೆ ಒಂದು ಕೊನೆಯಿದೆ, ಕೊನೆಯಿರಬೇಕು ಎಂದು ಇವರು ಭಾವಿಸಿದಂತಿದೆ. ಅನಂತದ ಭಾವನೆಯ ಭಾಗವಾಗಿಯೇ ಸದ್ಯದ ಭಾವನೆಯ ತೀವ್ರತೆಯೂ ಸೃಷ್ಟಿಯಾಗುವುದು ಎಂಬುದನ್ನು ಅವರು ಮರೆತಂತಿದೆ. ಈ ಸಂಬಂಧವಾಗಿ, ಈ ಹಿಂದೆ ತುರ್ತು ಪರಿಸ್ಥಿತಿಯ ರಾಜಕೀಯ ನೆಲೆಗಳಿಗೆ ಬಂಧಿತರಾಗಿ ಡಿ.ಆರ್. ನಾಗರಾಜ್ ಚಂಪಾ ಅವರ ಕವನ ಸಂಕಲನವೊಂದಕ್ಕೆ ಬರೆದ ಬೆನ್ನುಡಿಯ ಕೆಲವು ಮಾತುಗಳಿಗೆ ಯಶವಂತ ಚಿತ್ತಾಲರು ಬರೆದ ಪ್ರತಿಕ್ರಿಯೆ ನೆನಪಾಗುತ್ತಿದೆ. ನೆರೂಡಾನಿಂದ ಮೇಲ್ಮೈಯಲ್ಲಿ ಸ್ಫೂರ್ತಿಗೊಂಡಂತೆ ಡಿ.ಆರ್., ಬೀದಿಯಲ್ಲಿ ರಕ್ತ ಚೆಲ್ಲುತ್ತಿರುವಾಗ ಗುಲಾಬಿಯ ಸೌಂದರ್ಯದಲ್ಲಿ ಮಗ್ನರಾಗಿದ್ದಾರೆ ಎಂದು ಕೆಲವು ಕವಿಗಳನ್ನು ಟೀಕಿಸಿದ್ದರು. ಅದಕ್ಕೆ ಚಿತ್ತಾಲರ ಪ್ರತಿಕ್ರಿಯೆ: ಗುಲಾಬಿಯ ಸೌಂದರ್ಯದಲ್ಲಿ ಮಗ್ನವಾಗಬಲ್ಲ್ಲ ಮನಸ್ಸು ಮಾತ್ರ ಬೀದಿಯಲ್ಲಿ ರಕ್ತ ಕಂಡು ತಲ್ಲಣಿಸಬಲ್ಲುದು. ಕಾವ್ಯ ಮನಸ್ಸು ಅಖಂಡವಾದದ್ದು. ಜಿ.ರಾಜಶೇಖರ್ ತಮ್ಮದೇ ಆದ ಸಾಮಾಜಿಕ ಅವಸರದಲ್ಲಿ ಅದನ್ನು ಒಡೆಯ ಹೊರಟಂತಿದೆ.