ಭಾಷಾ ಹೋರಾಟದ ಹಿಂದೊಂದು ನಿವೇದನೆ

ಭಾಷಾ ಹೋರಾಟದ ಹಿಂದೊಂದು ನಿವೇದನೆ

ಕನ್ನಡ ರಾಜ್ಯೋತ್ಸವ ದಿನ ನನ್ನ ಕೆಲವು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಆಶಿಸುತ್ತೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ ನಾನು ತುಳುವ ಎಂದು ಹೇಳಿ ಕೊಳ್ಳುವುದಕ್ಕೆ ತುಂಬಾ ಹೆಮ್ಮೆ ಪಡುತ್ತೇನೆ. ತುಳುವನಾಗಿರುವ ನನಗೆ ಕನ್ನಡ ಯಾವತ್ತೂ ಹೊರಗಿನ ಭಾಷೆಯ ಹಾಗೆ ಅನ್ನಿಸಲಿಲ್ಲ. ಯಾಕೆಂದರೆ ನಾನು ಕಲಿತ ಬಾಷೆ ಅದು. ರಾಜ್ಯದ ಆಡಳಿತ ಭಾಷೆಯದು. ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದದ್ದು ಕನ್ನಡದಲ್ಲೇ. ತುಳುವನಾಗಿ ತುಳು, ಕನ್ನಡ, ಹಿಂದಿ, ಇಂಗ್ಲಿಷ್, ಬ್ಯಾರಿ ಭಾಷೆಗಳಲ್ಲಿ ಮಾತಾಡುವ, ಬರೆಯುವ ನಮಗೆ ಭಾಷೆಗಳ ಮಧ್ಯೆ ಗೋಡೆ ಕಟ್ಟಿ ಕೊಳ್ಳುವುದು ಕಷ್ಟ ಮತ್ತು ನಷ್ಟದ ಸಂಗತಿ. ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಬೇಕು ಎನ್ನುವ ಕೂಗಿಗೆ ನನ್ನ ಬೆಂಬಲವಂತೂ ಇದ್ದೇ ಇದೆ. ಯಾಕೆಂದರೆ ಒಂದು ಅರ್ಹ ಭಾಷೆಗೆ ಸಿಗಬೇಕಾದ ಮನ್ನಣೆ ಮತ್ತು ಸೌಲಭ್ಯಗಳು ಸಿಗಬೇಕಾದರೆ ಅನಿವಾರ್ಯ ಕೂಡಾ.

ತುಳುವರು ತುಂಬಾ ಸಾತ್ವಿಕರು. ನೋಯಿಸಿ ಹೋರಾಟ ಮಾಡುವವರಲ್ಲ. ಎಲ್ಲವನ್ನೂ ಸಹನೆಯಲ್ಲೇ ತಮ್ಮ ಹಕ್ಕುಗಳನ್ನು ಅಪೇಕ್ಷೆ ಪಟ್ಟವರು. ನಾನು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾಗ ನಾನು ಮಂಗಳೂರಿಗ ಮತ್ತು ತುಳುವ ಎಂಬ ಕಾರಣಕ್ಕೆ ಅಪಾರ ಗೌರವ ಪಡೆದು ಕೊಂಡವನು. ಆದರೆ ಈಗ ಪರಿಸ್ಥಿತಿ ಹೋರಾಟದ ಹೆಸರಲ್ಲಿ ಬದಲಾಗುತ್ತಿದೆ. ತುಳುವರು ಮತ್ತು ಕನ್ನಡಿಗರು ಎಂಬ ಬೇಲಿ ನಿರ್ಮಾಣವಾಗಿದೆ. ತುಳು ಭಾಷೆಯನ್ನು ಯಾರೂ ಕಟ್ಟುವ ಅವಶ್ಯಕತೆಯೇ ಇಲ್ಲ ಯಾಕೆಂದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಭಾಷೆಗಳ ನಡುವೆ ಪ್ರೀತಿಯ ಭಾಷೆಯಾಗಿ ಭದ್ರವಾಗಿದೆ.2000 ಕ್ಕೂ ಅಧಿಕ ವರ್ಷಗಳ ಇತಿಹಾಸ ಮತ್ತು ಪರಂಪರೆ ಇರುವ ತುಳು ಭಾಷೆಗೆ ಅದರದೇ ಆದ ತುಳು ಲಿಪಿಗಳಿರುವುದೂ ಹೆಮ್ಮೆಯ ಸಂಗತಿ.

ಕನ್ನಡ ಭಾಷೆ ಎಂದೂ ತುಳುವಿಗೆ ಅಥವಾ ತುಳುವರಿಗೆ ಹೇರಿಕೆಯಾಗಿಲ್ಲ ಅದನ್ನು ಆಡಳಿತ ಭಾಷೆಯಾಗಿ ನಮ್ಮೊಂದಿಗೆ ಬೆರೆತು ಹೋಗಿದೆಯಷ್ಟೇ. ರಾಜಧಾನಿಯಲ್ಲಿ ಹಿಂದಿ ಹೇರಿಕೆಯ ಬಗ್ಗೆ ಮಾತನಾಡುತ್ತಾರೋ ಅಂತಹದೇ ಪರಿಸ್ಥಿತಿ ತುಳುನಾಡಿನ ಅನೇಕರಲ್ಲಿದೆ. ಇಂಗ್ಲಿಷ್ ಒಂದು ಭಾಷೆಯನ್ನು ಬಿಟ್ಟು ಯಾವುದೇ ಭಾಷೆ ಭಾರತದ ಇತರ ಭಾಷೆಗಳ ಮೇಲೆ ಸವಾರಿ ಮಾಡುವ ಶಕ್ತಿಯನ್ನು ಹೊಂದಿಲ್ಲ ಮತ್ತು ಅದು ಸಾಧ್ಯವೂ ಇಲ್ಲ ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು. ಹಾಗಾಗಿ ಕನ್ನಡದ ಮೇಲೆ ಹಿಂದಿಯಾಗಲಿ ತುಳುವಿನ ಮೇಲೆ ಕನ್ನಡವಾಗಲಿ ನಕಾರಾತ್ಮಕ ಪ್ರಭಾವ ಬೀರಲು ಸಾಧ್ಯವಿಲ್ಲ..

ಹಾಗಾದರೆ ತುಳುವಿನ ಹೋರಾಟ ಹೇಗಿರಬೇಕು ಅನ್ನುವುದು ಜಿಲ್ಲೆಯ ಒಂದು ಭಾಗದಲ್ಲಿ ಮಾತ್ರವೇ ಚರ್ಚಿಸಿದರೆ ಸಾಲದು. ತುಳುವನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಿಕೊಳ್ಳಬೇಕಾದರೆ ಏನೆಲ್ಲಾ ಪ್ರಯತ್ನ ಗಳು ಆಗಬೇಕೋ ಅದೆಲ್ಲಾ ಒಂದು ಪ್ರಮಾಣದಲ್ಲಿ ನಡೆದಿದೆ ಮತ್ತು ಅದರ ಹಿಂದೆ ತುಳು ಭಾಷಾ ಹೋರಾಟಗಾರರ, ಭಾಷಾ ಸಂಘಟಕರ ಮತ್ತು ಜಿಲ್ಲೆಯ ಪ್ರಮುಖರ ಪ್ರಯತ್ನಗಳು ಪ್ರಶಂಸಾರ್ಹವೇ ಆಗಿದೆ. ಹಾಗಾದರೆ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಇನ್ನೂ ಸೇರಿಸಿಕೊಳ್ಳದಿರುವುದಕ್ಕೆ ಸಾಧ್ಯವಾಗದಿರುವುದಕ್ಕೆ ಕಾರಣವೇನು. ಇಲ್ಲಿಯ ರಾಜಕೀಯ ನಾಯಕರ ಪ್ರಯತ್ನಗಳು ಸಾಕಾಗಲಿಲ್ಲವೇ, ಅಥವಾ ಎಲ್ಲಿಯಾದರೂ ನಮ್ಮ ಪ್ರಯತ್ನಗಳು ಕಡೆಗಣಿಸಲ್ಪಟ್ಟಿವೆಯೇ..?! ನಮ್ಮ ಕೂಗಿಗೆ ಸಂಬಂಧ ಪಟ್ಟ ಅಧಿಕಾರ ಉಳ್ಳ ಸಮಿತಿ ಯಾವಾಗ ಹಸಿರು ನಿಶಾನೆ ತೋರಿಸಬಹುದು. ನನ್ನ ಪ್ರಕಾರ ಮುಂದಿನ ಆರು ತಿಂಗಳ ಒಳಗೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ತುಳು ಭಾಷೆ ಸೇರಿಸಲ್ಪಡಬೇಕು.

ಹಿಂದೆ ಕನ್ನಡ ಸಮ್ಮೇಳನವೊಂದರಲ್ಲಿ ತುಳು ಭಾಷೆಯನ್ನು ಕನ್ನಡದ ಸೊಸೆಯೆಂದು ಸಮ್ಮೇಳನಾಧ್ಯಕ್ಷರು ಉಲ್ಲೇಖಸಿರುವುದು ಭಾಷೆಗಳ ನಡುವಿನ ಆತ್ಮೀಯತೆಗೆ ಸಾಕ್ಷಿ. ಯಾವುದೇ ಭಾಷೆಯ ಹೋರಾಟಗಳು ಇನ್ನೊಂದು ಭಾಷೆಗೆ ಘಾಸಿಗೊಳಿಸುವ ರೀತಿಯಲ್ಲಿ ಅಥವಾ ಅಪಮಾನ ಮಾಡುವ ರೀತಿಯಲ್ಲಿ ಇರಬಾರದು. ಆಡಳಿತ ಭಾಷೆ ಕನ್ನಡವೇ ಇರುವಾಗ ಅದನ್ನು ಮಾತನಾಡದೇ ಮತ್ತು ಆ  ಭಾಷೆಯಲ್ಲಿ ವ್ಯವಹರಿಸದಿರಲು ಸಾಧ್ಯವಿಲ್ಲ.

ಮೊದಲು ಇಲ್ಲಿಯ ಶಾಸಕರು, ಸಂಸದರು, ವಿರೋಧ ಪಕ್ಷದ ನಾಯಕರು ಕರ್ನಾಟಕ ಸರಕಾರದ ಅಧಿವೇಶನವನ್ನು ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ನಡೆಯುವಂತೆ ಸಕಲ ಪ್ರಯತ್ನಗಳನ್ನು ಮಾಡಬೇಕು. ಬೆಳಗಾವಿಯಲ್ಲಿ ಅಧಿವೇಶನ ಮಾಡಲು ಸಾಧ್ಯವಾದರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯಾಕೆ ಸಾಧ್ಯವಿಲ್ಲ..?!ಕನ್ನಡ, ತುಳು, ಕೊಂಕಣಿ, ಬ್ಯಾರಿ ಹೀಗೆ ಹಲವು ಭಾಷೆಗಳು ಒಡನಾಡಿಗಳು. ಪರಸ್ಪರ ನಾಡಿಮಿಡಿತ ಬಲ್ಲ ಭಾಷೆಗಳು.

ನಮ್ಮ ಹೋರಾಟ ಮತ್ತು ಮನಸ್ಸುಗಳು ಶುದ್ಧವಾಗಿರಬೇಕೇ ಹೊರತು ಯುದ್ಧವಾಗಿರಬಾರದು. ತುಳು ರಾಜ್ಯವಾಗ ಬೇಕಾದರೂ ಆಗ ಕನ್ನಡ ಆಡಳಿತ ಸರಕಾರದ ಬೆಂಬಲವಿಲ್ಲದೆ ಸಾಧ್ಯವಾಗುವುದಿಲ್ಲ ಹಾಗೆಯೇ ತುಳುನಾಡು ರಾಜ್ಯವಾದ ಕೂಡಲೇ ಕೊಡಗಿನಂತಹ ಕೆಲವು ಭಾಷೆ/ಭಾಗಗಳು ತಮ್ಮನ್ನು ಪ್ರತ್ಯೇಕ ರಾಜ್ಯ ಮಾಡಿ ಎಂದು ಹೋರಾಡುವ ಸಾಧ್ಯತೆಗಳೂ ಇವೆ.

ಕವಿ ಕಯ್ಯಾರರ ಹೊರಾಟಗಳೇ ಸರಕಾರದ ನಿರ್ಲಕ್ಷ್ಯದಿಂದ ಅಸಡ್ಡೆಯಿಂದ ಕಡೆಗಣಿಸಲ್ಪಟ್ಟು ಕಾಸರಗೋಡು ಕೇರಳ ರಾಜ್ಯದ ಒಂದು ಜಿಲ್ಲೆಯಾಗಿ ಸೇರಿಕೊಂಡ ಬಳಿಕ ಸರಕಾರಗಳ ಇಚ್ಛಾಶಕ್ತಿಯ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಳ್ಳದಿರದು. ಯಾವುದೇ ಸರಕಾರ 5 ವರ್ಷ ಅಧಿಕಾರ ಬಂದಾಗ ಗಡಿಗಳ ಬಗ್ಗೆ ಗಂಭೀರವಾಗಿ ಪರಿಗಣಿಸುವುದಿಲ್ಲ.. ಅಲ್ಲಿ ಇರುವ ಗಡಿನಾಡಿನ ಕೆಲವು ಸಂಘ ಸಂಸ್ಥೆಗಳಿಗೆ ಕಾರ್ಯಕ್ರಮ ಸಮ್ಮೇಳನ ನಡೆಸುವುದಕ್ಕೆ ಒಂದಷ್ಟು ಒಂದಷ್ಟು ಅನುದಾನ ಕೊಟ್ಟು ಕೈತೊಳೆದುಕೊಳ್ಳುತ್ತವೆ. ಅನುದಾನ ಪಡೆದುಕೊಂಡ ಭಾಷಾ ಪ್ರೇಮಿಗಳು ಅದೇ ಸಾಧನೆಯೆಂದು ಹಾಗೇ ಕಾಲ ಕಳೆದುದರ ಪರಿಣಾಮ ಸರಕಾರಕ್ಕೆ ಬಿಸಿಮುಟ್ಟಿಸುವ ತಾಕತ್ತು ಯಾರಿಗೂ ಇಲ್ಲ. ಗೌರವಕ್ಕಿಂತ ಅನುದಾನ ದೊಡ್ಡದಲ್ಲ. ಭಾಷೆಯ ವಿಷಯದಲ್ಲಿ ಸರಕಾರದ ಬೆವರಿಸುವ ಕೆಲಸ ನಿರಂತರ ನಡೆಯಬೇಕು ಮತ್ತು ಗೊಂದಲಗಳು ಹೆಚ್ಚು ಕಾಲ ಮುಂದುವರಿಯದಂತೆ ಎಚ್ಚರವಹಿಸಬೇಕು.

ಭಾಷಾ ಹೋರಾಟಗಳು ಪ್ರಚಾರದ ಗೀಳಾಗಿ ಉಳಿಯದೆ ಗೆಲುವಿನ ಬಾವುಟ ಹಾರಿಸುವವರೆಗಿನ ನಿರ್ಮಲ ಶ್ರದ್ಧೆಯಾಗಿರಬೇಕು. ಭಾಷೆಯೊಂದು ಇನ್ನೊಂದು ಭಾಷೆಯನ್ನು ಕೊಲ್ಲದೇ ಗೆದ್ದರೆ ಅದೊಂದು ಸಾಧನೆಯಾಗಬಹುದು. ಆದರೆ ನಿಂದಿಸದೆ ಹೋರಾಟಗಳು ನಡೆಯುತ್ತವೆ ಎಂದು ನಡೆಯುತ್ತಿವೆ ಎಂದು ನನಗನಿಸುವುದಿಲ್ಲ.

- ಕಾ. ವೀ. ಕೃಷ್ಣದಾಸ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

Comments

Submitted by Shreerama Diwana Wed, 11/02/2022 - 12:04

ಉತ್ತಮ ಸಕಾರಾತ್ಮಕ ಬರಹ

ಕವಿ ಕಯ್ಯಾರರ ಉಲ್ಲೇಖ ಮಾತ್ರ, ಕಾಸರಗೋಡಿನ ಕನ್ನಡಿಗನಾದ ನನಗೆ ಅಸಮಾಧಾನ ಕೊಟ್ಟಿತು. ಕಾಸರಗೋಡನ್ನು ಕರ್ನಾಟಕದಲ್ಲಿ ಉಳಿಸುವ ಹೋರಾಟದಲ್ಲಿ ಮೊತ್ತ ಮೊದಲು ಉಲ್ಲೇಖಿಸಬೇಕಾದ ಹೆಸರು ಕಳ್ಳಿಗೆ ಮಹಾಬಲ ಭಂಡಾರಿಯವರದೇ ಹೊರತು ಕಯ್ಯಾರರದು ಅಲ್ಲ. ಕಯ್ಯಾರರೂ ಹೋರಾಟದಲ್ಲಿ ತೊಡಗಿಸಿಕೊಂಡ ಪ್ರಮುಖರಲ್ಲಿ ಒಬ್ಬರು. ಕವಿಯಾಗಿ ಕಯ್ಯಾರರು ಕರ್ನಾಟಕದಲ್ಲಿ ಹೆಸರು ಪಡೆದಿದ್ದಾರೆಯಾದರೂ, ಯಾವುದೇ ಸ್ವಾರ್ಥವಿಲ್ಲದೆ ಕಾಸರಗೋಡಿಗಾಗಿ ಶ್ರೀಗಂಧದಂತೆ ತಮ್ಮ ಜೀವನವನ್ನು ತೇಯ್ದವರು ಕಳ್ಳಿಗೆಯವರೇ. ಜೊತೆಗೆ ಬೇವಿಂಜೆ, ಕುಣಿಕುಳ್ಳಾಯ, ಅಗ್ಗಿತ್ತಾಯ, ಬಳ್ಳುಳ್ಳಾಯ ಮುಂತಾದವರು.

-ಶ್ರೀರಾಮ ದಿವಾಣ, ಉಡುಪಿ