ಭಾಷೆಯಲ್ಲಿ ಸರಿ ಮತ್ತು ತಪ್ಪು

ಭಾಷೆಯಲ್ಲಿ ಸರಿ ಮತ್ತು ತಪ್ಪು

ಬರಹ

ಕೆಲವು ದಿನಗಳಿಂದ ಇಸ್ಮಾಯಿಲ್ ಅವರ ಬರಹಕ್ಕೆ ಪ್ರತಿಕ್ರಿಯೆಯಾಗಿ ಕುತೂಹಲಕರ ಚರ್ಚೆ ಬೆಳೆದಿರುವುದು ಗಮನಿಸಿದ್ದೇನೆ. ತುಳು ಮತ್ತು ಕನ್ನಡ ಸಂಬಂಧ ಕುರಿತು, ಲ ಳಗಳ ಬಳಕೆ ಕುರಿತು, ಅ ಹ ಗಳನ್ನು ಕುರಿತು, ಮತ್ತು ಕೆಲವು ರೂಪಗಳು ಬೇಡಾದ ಇತ್ಯಾದಿ ರೂಪುಗೊಂದಿರುವ ಕುರಿತು ಚರ್ಚೆ ನಡೆದಿದೆ. ನಾವೆಲ್ಲ ಗಮನಿಸಬೇಕಾದ ಕೆಲವು ಮೂಲ ಸಂಗತಿಗಳನ್ನು ಗಮನಿಸಬೇಕು ಅನ್ನಿಸಿದೆ. ೧. ಕನ್ನಡ ಒಂದೇ ಅಲ್ಲ ಅಸಂಖ್ಯಾತ ಕನ್ನಡಗಳಿವೆ: ಕನ್ನಡದ ಮೊದಲ ಕೃತಿ ಕವಿರಾಜ ಮಾರ್ಗದಲ್ಲಿ ಒಂದು ಮಾತಿದೆ. ಅಲ್ಲಿ ಕೃತಿಕಾರ "ಕನ್ನಡಂಗಳ್" ಕನ್ನಡಗಳು ಎಂದು ಬಹುವಚನವನ್ನು ಬಳಸಿದ್ದಾನೆ. ಭಾಷೆ ಅಸ್ತಿತ್ವಕ್ಕೆ ಬರುವುದು ಯಾರಾದರೂ ಅದನ್ನು ಬಳಸಿದಾಗ ಮಾತ್ರವೇ. ಭೌಗೋಳಿಕವಾಗಿ ಬೇರೆ ಬೇರೆ ಪ್ರದೇಶದ ಜನರ ಮಾತಿನಲ್ಲಿ ಭಿನ್ನತೆಗಳು ಕಾಣುತ್ತವೆ. ಉಚ್ಚಾರದಲ್ಲಿ ಸ್ವರಗಳ ವ್ಯತ್ಯಾಸವೇ ಎದ್ದು ಕಾಣುವುದು. ನಂತರ ಆಸ್ಪಿರೇಟೆಡ್ ಧ್ವನಿಗಳದು: ಲ-ಳ, ಇತ್ಯಾದಿ. ವ್ಯಂಜನಗಳ ಉಚ್ಚಾರದಲ್ಲಿ ಅಂಥ ವ್ಯತ್ಯಾಸ ಕಾಣುವುದಿಲ್ಲ. ಇಂಥ ವ್ಯತ್ಯಾಸಗಳು ಸರಿಯೂ ಅಲ್ಲ, ತಪ್ಪೂ ಅಲ್ಲ. ಹಾಗೆ ಒಂದು ಪ್ರದೇಶದ ಎಲ್ಲ ಜನರೂ ಬಿಡಿ ಎಲ್ಲ ವ್ಯಕ್ತಿಗಳೂ ಒಂದೇ ಥರ ಉಚ್ಚರಿಸುವುದೂ ಸಾಧ್ಯವೇ ಇಲ್ಲ. ಉಚ್ಚಾರದ ಮೂಲಕ ಗಮನಕ್ಕೆ ಬರುವ ವ್ಯತ್ಯಾಸಗಳನ್ನೆಲ್ಲ ಪಟ್ಟಿ ಮಾಡಿ ವಿವರಿಸುವುದೆಂದರೆ ಸಾವಿರ ನಾಲಗೆಯ ಆದಿಶೇಷನಿಗೂ ಅಸಾಧ್ಯವಾದ ಬೇಸರ ಹುಟ್ಟಿಸುವ ಕೆಲಸ ಅನ್ನುತ್ತದೆ ಕವಿರಾಜಮಾರ್ಗ. ಇಂಥ ಉಚ್ಚಾರ ವ್ಯತ್ಯಾಸ ಎಲ್ಲ, ಅಂದರೆ ಜಗತ್ತಿನ ಎಲ್ಲ ಭಾಷೆಗಳಲ್ಲೂ ಇದ್ದದ್ದೇ. ಇವುಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಅನ್ನುವ ಪ್ರಶ್ನೆಯೇ ತಪ್ಪು. ಪರಿಸರ ವೈವಿಧ್ಯ ಹೇಗೆ ಅಗತ್ಯವೋ ಹಾಗೆಯೇ ಭಾಷೆಯೊಂದು ಜೀವಂತ ಉಳಿದು ಬೆಳೆಯಲು ಒಂದೇ ಭಾಷೆಯೊಳಗಿನ ವೈವಿಧ್ಯವೂ ಹಾಗೆಯೇ ಅಗತ್ಯ.

ಶಿಷ್ಟಭಾಷೆ: ಇಡೀ ಭಾಷಿಕ ಸಮುದಾಯವು ಒಂದು ಬಗೆಯ ಭಾಷಾಬಳಕೆಯನ್ನು ಶಿಷ್ಟವೆಂದು ಗ್ರಹಿಸುತ್ತದೆ. ಹಾಗೆಯೇ ಅದನ್ನು ವ್ಯಾಪಕವಾಗಿ ಬಳಸತೊಡಗುತ್ತದೆ. ಭಾಷೆಯೊಂದರ ಒಂದು ಪ್ರಭೇದ ಶಿಷ್ಟವೆಂದು ಎಣಿಕೆಗೊಳ್ಳಲು ಚಾರಿತ್ರಿಕ ಮತ್ತು ರಾಜಕೀಯ ಕಾರಣಗಳಿರುತ್ತವೆ. ಶಿಷ್ಟ ಭಾಷೆ ವ್ಯಾಪಕವಾಗಿ ಬಳಕೆಗೆ ಬಂದು ಅಂಗೀಕೃತವಾಗುವುದಕ್ಕೆ ಶಿಕ್ಷಣದ ವ್ಯಾಪ್ತಿಯೂ ಕಾರಣವಾಗುತ್ತದೆ. ಮೈಸೂರು ಸಂಸ್ಥಾನದ (ಅದೇ ಹಳೇ ಮೈಸೂರು) ಕನ್ನಡ ಶಿಷ್ಟವೆಂದು ಎಣಿಕೆಗೊಳ್ಳಲು ಆ ಭಾಗದ ಆರ್ಥಿಕ ಸಮೃದ್ಧಿ, ರಾಜಕೀಯ ಶಕ್ತಿ, ಶಿಕ್ಷಣದ ವ್ಯಾಪ್ತಿ ಇವೇ ಕಾರಣ. ಶಿಷ್ಟ ಭಾಷೆ ರೂಪುಗೊಳ್ಳುತ್ತ ನಡೆದಂತೆ ಪ್ರಾದೇಶಿಕ ವೈಶಿಷಟ್ಯಗಳು ನಿಧಾನವಾಗಿ ಕಣ್ಮರೆಯಾಗುತ್ತವೆ. ಕನ್ನಡ ಪಠ್ಯ ಪುಸ್ತಕಗಳಲ್ಲಿ ಕನ್ನಡದ ಭಾಷಾ ಪ್ರಭೈದಗಳು ಎಲ್ಲಿಯಾದರೂ ತಪ್ಪಿಯೂ ಕಾಣುವುದಿಲ್ಲ. ಶಿಷ್ಟಭಾಷೆ ಸುಶಿಕ್ಷಿತರ ನುಡಿಯಾಗಿ ಉಳಿದ ರೂಪಗಳೆಲ್ಲ ಹಾಸ್ಯಕ್ಕೆ ಎಡೆ ಮಾಡುತ್ತವೆ. ಉತ್ತಮ ಉದಾಹರಣೆಯೆಂದರೆ ನಮ್ಮ ಕನ್ನಡ ಸಿನಿಮಗಳಲ್ಲಿ ಪ್ರಾದೇಶಿಕ ಭಾಷೆ ೯೫% ಹಾಸ್ಯಕ್ಕಾಗಿಯೇ ಬಳಕೆಯಾಗುತ್ತದೆ. ಆಡುನುಡಿಯ ವೈವಿಧ್ಯ (ಅಪ) ಹಾಸ್ಯ ಕೀಳರಿಮೆಗಳಿಂದ ಕೊನೆಯುಸಿರು ಎಳೆಯುತ್ತದೆ. ಕನ್ನಡವು ಹಿಂದೆ ಸಂಸ್ಕೃತದ ಇಂಗ್ಲಿಷಿನ ಯಜಮಾನಿಕೆಗೆ ಒಳಗಾಗಿದ್ದಂತೆಯೇ ಕನ್ನಡದ ಶಿಷ್ಟ ರೂಪವು ಕೊಡಗ, ತುಲು, ಎರವ, ಕೊಂಕಣಿ, ಬದಗ ಇತ್ಯಾದಿ ಭಾಷೆಗಳ ಮೇಲೂ ಯಜಮಾನಿಕೆ ತೋರಿದೆ. ಅದರಲ್ಲಿ ಸಂಶಯವೇ ಬೇಡ. ಶಕ್ತರು ಮಾತ್ರ ಬದುಕಿ ಉಳಿಯವರೆಂಬ ಡಾರ್ವಿನ್ ವಾದದ ಇನ್ನೊಂದು ನಿದರ್ಶನ ಶಕ್ತರು ಬಳಸುವ ಭಾಷೆ ಬದುಕಿ ಉಳಿಯುತ್ತದೆ ಅನ್ನುವುದು. ರಾಜಕೀಯ ಆರ್ಥಿಕ ಶಕ್ತಿಗಳು ಭಾಷೆಗೆ ಶಕ್ತಿ ತುಂಬುತ್ತವೆ. ಇಂಗ್ಲಿಷು ಜಗತ್ತಿನಲ್ಲಿ ವ್ಯಾಪಿಸಿದ್ದು ಇಂಗ್ಲಿಷು ಭಾಷೆಯ ಜನರ ಆರ್ಥಿಕ ರಾಜಕೀಯ ಶಕ್ತಿಗಳ ಕಾರಣದಿಂದಲೇ ಅಲ್ಲವೇ? ದುರಂತವೆಂದರೆ ಕನ್ನಡದ ರಾಜಕೀಯ ಮತ್ತು ಆರ್ಥಿಕತೆ ಕನ್ನಡವನ್ನು ಬಿಟ್ಟುಕೊಡುವ ಮೂಲಕ ಶಕ್ತಿಪಡೆಯಲು ಹವಣಿಸುತ್ತಿರುವುದು.

ಕನ್ನಡ ದಪದಗಳ ರೂಪ ನಿಷ್ಪತ್ತಿಯನ್ನು ಕುರಿತು:

ಕನ್ನಡದ ವ್ಯಾಕರಣ ಹಾಗೆ ಕನ್ನಡದ ಎಲ್ಲ ಪದಗಳ, ಎಲ್ಲ ರೂಪಗಳ ವಿವರಣೆಯನ್ನು ನೀಡುವಷ್ಟು ಶಕ್ತವಾಗಿ ಬೆಳೆದೇ ಇಲ್ಲ. ಆಗಬೇಕಾದ ಕೆಲಸ ಬೇಕಾದಷ್ಟಿದೆ. ಗಮನಿಸಬೇಕಾದ ಮಾತೆಂದರೆ ಕನ್ನಡವನ್ನು ಆಡುಮಾತಾಗಿ ಉಳ್ಳ ಜನ ವ್ಯಾಕರಣವನ್ನು ಕಲಿಯದೆಯೂ ತಪ್ಪಿಲ್ಲದೆ ಭಾಷೆ ಬಳಸಬಲ್ಲರು. ವ್ಯಾಕರಣವೆಂದರೆ ಅರ್ಥವಂತಿಕೆಯ ನಿಯಮಗಳು. ಬುದ್ಧಿ ತಿಳಿಯುವ ಮುನ್ನವೇ ಅಪ್ರಜ್ಞಾಪೂರ್ವಕವಾಗಿ ಕನ್ನಡದ ವಾಕ್ಯರಚನೆಯ ನಿಯಮಗಳನ್ನು ನಾವೆಲ್ಲ ಕಲಿತುಬಿಡುತ್ತೇವೆ. ನಾನು ಕಲ್ಲು ಕುಡಿದೆ, ನಾಳೆ ಬಂದೆ ಎಂದು ಯಾರೂ ಹೇಳುವುದಿಲ್ಲವಷ್ಟೆ. ಕನ್ನಡ ವ್ಯಾಕರಣವೆಂದರೆ ಕನ್ನಡದ ಮೂಲಕ ನಾವು ಹೇಗೆ ಅರ್ಥಪೂರ್ಣವಾಗಿ ಮಾತಾಡಬಹುದು ಎಂಬ ನಿಯಮಗಳ ಮೊತ್ತ ಅಷ್ಟೆ. ಶಾಲೆಯಲ್ಲಿ ಕಲಿಯುವ, ವಿದ್ವಾಂಸರು ಬರೆಯುವ ವ್ಯಾಕರಣಗಳೆಲ್ಲ ಈ ಅಪ್ರಜ್ಞಾಪೂರ್ವಕ ನಿಯಮಗಳನ್ನು ತರ್ಕಬದ್ಧವಾಗಿ ನಿರೂಪಿಸುವುದಷ್ಟೆ. ಪ್ರಾದೇಶಿಕ ವೈವಿಧ್ಯ ಶಬ್ದಗಳಲ್ಲಿ, ನಾಮ ಪದಗಳಲ್ಲಿ, ಉಚ್ಚಾರಣೆಗಳಲ್ಲಿ ಕಂಡರೂ ವಾಕ್ಯ ರಚನೆಯ ನಿಯಮಗಳು ಮಾತ್ರ ಎಲ್ಲ ಅಸಂಖ್ಯ ಕನ್ನಡಗಳಿಗೂ ಸಮಾನವಾಗಿಯೇ ಇರುತ್ತವೆ. ಅದರಿಂದಲೇ ಒಂದು ಪ್ರದೇಶದವರ ಕನ್ನಡ ಇನ್ನೊಂದು ಪ್ರದೇಶದವರಿಗೆ ತಿಳಿಯುತ್ತದೆ.

ವ್ಯಾಕರಣಾಸಕ್ತರಿಗೆ ಒಂದು ಸ್ವಾರಸ್ಯದ ಪ್ರಶ್ನೆ. ನಿನ್ನೆಯ ದಿನ ಧಾರವಾಡದಲ್ಲಿ ಗೆಳೆಯ ಕೆವಿ ನಾರಾಯಣರೊಡನೆ ಮಾತನಾಡುವಾಗ ಈ ಪ್ರಶ್ನೆ ಹುಟ್ಟಿತು. "ಕಳಿಸು" ಎಂಬುದು ತೀರ ಸಾಮಾನ್ಯವಾಗಿ ನಾವು ಬಳಸುವ ಪದ. ಅದು ಹೇಗೆ ರೂಪುಗೊಂಡಿರಬಹುದು. "ಮಾಡು" ಎಂಬ ಮೂಲ ರೂಪಕ್ಕೆ "ಇಸು" ಸೇರಿಸಿ, "ತಿನ್ನು" ಗೆ "ಇಸು" ಸೇರಿಸಿ, ಹೀಗೆಲ್ಲ ಮಾಡಿಸು, ತಿನ್ನಿಸು ಅನ್ನುವ ರೂಪ ಹುಟ್ಟಿಸಿಕೊಂಡಿದ್ದೇವೆ. ಕಳಿಸು ಅನ್ನುವುದರಲ್ಲೂ ಇಸು ಇದೆ. ಹಾಗಾದರೆ ಅದರ ಮೂಲ ರೂಪ ಏನಿರಬಹುದು? ಬಾಲಂಗೋಚಿ: ಇಂಗ್ಲಿಷಿನಜನ ಇರುವ ಪ್ರದೇಶದ ದಕ್ಷಿಣ ಭಾಗದ ನುಡಿ ವೈವಿಧ್ಯ ಕಿಂಗ್ಸ್ ಇಂಗ್ಲಿಷ್ ಆಗಿ ಶಿಷ್ಟ ಇಂಗ್ಲಿಷ್ ಎಂದು ಕರೆಸಿಕೊಂಡಿತು. ಈಗ ಜಗತ್ತಿನ ಅತಿ ಶಕ್ತ ಅಮೆರಿಕದ ಇಂಗ್ಲಿಷ್ ಶಿಷ್ಟ ಇಂಗ್ಲಿಷ್ ಅನ್ನಿಸಿಕೊಳ್ಳುತ್ತಿದೆ. ಕನ್ನಡದಂತೆಯೇ ಇಂಗ್ಲೆಂಡಿನ ಬೇರೆ ಬೇರೆ ಪ್ರದೇಶಗಳ ಜನರ ಇಂಗ್ಲಿಷೂ ವೈವಿಧ್ಯಮಯ. ಅವೂ ಕನ್ನಡದ ಪ್ರಾದೇಶಿಕ ಭೇದಗಳಂತೆಯೇ ಹಾಸ್ಯಕ್ಕೂ ಗುರಿಯಾಗುತ್ತವೆ. ಅಮೆರಿಕದ ಬೇರೆ ಬೇರೆ ಪ್ರದೇಶಗಳ ಇಂಗ್ಲಿಶೂ ಅಷ್ಟೆ. ಭಾಷೆಗಳ ಲೋಕದ ವೈವಿಧ್ಯಕ್ಕೆ ಕೊನೆಯೇ ಇಲ್ಲ.

 

(Update - 9th August, 2006)
ಓದಿ:
ಕನ್ನಡಂಗಳ್: ಪದ್ಯ ಹೀಗಿದೆ

Sampada admin team.