ಭಾಷೆ ಆಧಾರದ ಮೇಲೆ ಭಾರತದ ಛಿದ್ರತೆ -ಇನ್ನಾದರೂ ನಿಲ್ಲಬಾರದೇಕೆ?

ಭಾಷೆ ಆಧಾರದ ಮೇಲೆ ಭಾರತದ ಛಿದ್ರತೆ -ಇನ್ನಾದರೂ ನಿಲ್ಲಬಾರದೇಕೆ?

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ವಿ.ಬಿ.ಕಾಮತ್, ಅನುವಾದ: ಎಂ ಎಸ್ ವೆಂಕಟರಾಮಯ್ಯ
ಪ್ರಕಾಶಕರು
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು - ೫೬೦೦೫೬
ಪುಸ್ತಕದ ಬೆಲೆ
ರೂ. ೧೦.೦೦, ಮುದ್ರಣ : ೨೦೧೦

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು ಮತ್ತು ಭಾರತೀಯ ವಿದ್ಯಾಭವನ, ಮೈಸೂರು ಕೇಂದ್ರದ ಸಹಯೋಗದೊಂದಿಗೆ ಹೊರತಂದಿರುವ ಜ್ಞಾನ ಭರಿತ ಪುಸ್ತಕ ‘ಭಾಷೆ ಆಧಾರದ ಮೇಲೆ ಭಾರತದ ಛಿದ್ರತೆ -ಇನ್ನಾದರೂ ನಿಲ್ಲಬಾರದೇಕೆ?' ಈ ಪುಸ್ತಕ ಮಾಲೆಯ ಪ್ರಧಾನ ಸಂಪಾದಕರು ಡಾ. ಪ್ರಧಾನ್ ಗುರುದತ್ತ ಹಾಗೂ ಸಂಪಾದಕರು ಡಾ ಎ ವಿ ನರಸಿಂಹಮೂರ್ತಿ. ಪ್ರಧಾನ ಸಂಪಾದಕರಾದ ಪ್ರಧಾನ್ ಗುರುದತ್ತ ಇವರು ತಮ್ಮ ಬೆನ್ನುಡಿಯ ಬರಹದಲ್ಲಿ ಈ ಕೃತಿಗಳನ್ನು ಹೊರತಂದ ಆಶಯದ ಬಗ್ಗೆ ಮಾಹಿತಿ ನೀಡಿದ್ದಾರೆ. “ಭುವನ್ಸ್ ಬುಕ್ ಯೂನಿವರ್ಸಿಟಿ" ಮಾಲೆಯಲ್ಲಿ ಶ್ರೀಸಾಮಾನ್ಯರಿಗೆ ಮಾತ್ರವಲ್ಲದೆ, ಸಾಹಿತ್ಯ ಸಂಸ್ಕೃತಿ ಇತಿಹಾಸಗಳ ಬಗ್ಗೆ ಆಸಕ್ತರಾಗಿರುವ ಎಲ್ಲರಿಗೂ ಬೋಧಪ್ರದವಾಗಿರುವಂಥ ಕಿರುಹೊತ್ತಗೆಗಳನ್ನು ಹೊರತರಲಾಗಿದೆ. ಆಕಾರದಲ್ಲಿ ಕಿರಿದಾದರೂ ಮಹತ್ವದಲ್ಲಿ ಏನೂ ಕಡಿಮೆ ಇಲ್ಲದ ಈ ಪುಸ್ತಕಗಳನ್ನು ಕನ್ನಡದಲ್ಲೂ ಹೊರತರುವ ಯೋಜನೆಯಲ್ಲಿ ಭಾಗಿಯಾಗುವುದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಹೆಮ್ಮೆಯ ವಿಷಯವಾಗಿದೆ. ಅರುವತ್ತರ ದಶಕದಲ್ಲಿ ಈ ಮಾಲೆಯನ್ನು ಆರಂಭಿಸಿದಾಗ ಇದನ್ನು ‘ಒಂದು ರೂಪಾಯಿ ಮಾಲೆ' ಎಂದೇ ಕರೆಯಲಾಗಿತ್ತು. ಈಗಲೂ ಜನಸಾಮಾನ್ಯರಿಗೆ ಸುಲಭ ದರದಲ್ಲಿ ಈ ಪುಸ್ತಕಗಳನ್ನು ತಲುಪಿಸುವ ಉದ್ದೇಶದಿಂದ ಈ ಮಾಲೆಯ ಎಲ್ಲ ಪುಸ್ತಕಗಳಿಗೂ ಹತ್ತು ರೂ. ಗಳ ಸಾಂಕೇತಿಕ ದರವನ್ನೇ ಗೊತ್ತುಪಡಿಸಲಾಗಿದೆ. ಎನ್ನುವುದು ಪ್ರಧಾನ್ ಗುರುದತ್ತ ಅವರ ಮಾತು.

ಮೂಲ ಲೇಖಕರಾದ ವಾಸುದೇವ ಬಿ ಕಾಮತ್ ಅವರು ತಮ್ಮ ಪ್ರಸ್ತಾವನೆಯಲ್ಲಿ “ ಭಾಷಾ ಸಮಸ್ಯೆಯನ್ನು ಸಮಗ್ರವಾಗಿ ಹಾಗೂ ಸಂಪೂರ್ಣವಾಗಿ ಈ ಕೃತಿಯ ಇತಿಮಿತಿಯಲ್ಲಿ ಪ್ರಸ್ತುತಪಡಿಸಲು ನಾನು ಸಾಧ್ಯವಾದಷ್ಟು ಮಟ್ಟಿಗೆ, ಕೆಲವು ಮುಖ್ಯ ಆಯೋಗಗಳ ವರದಿಗಳನ್ನು, ಧರ್ ಸಮಿತಿ, ಜಿವಿಪಿ, ಎಸ್ ಆರ್ ಸಿ, ಎಲ್ಲ ಪಕ್ಷಗಳ ಹಾಗೂ ಗಾಂಧೀಜಿ, ನೆಹರು, ಅಂಬೇಡ್ಕರ್ ಮುಂತಾದ ನೇತಾರರ ಅಭಿಪ್ರಾಯಗಳ ಜೊತೆಜೊತೆಗೆ ನನ್ನ ಅಭಿಪ್ರಾಯಗಳನ್ನು ಯಾವುದೇ ಭಯ ಅಥವಾ ದಾಕ್ಷಿಣ್ಯವಿಲ್ಲದೆ ಉದಹರಿಸಿರುತ್ತೇನೆ. ಪೂರ್ಣ ಸ್ವರಾಜ್ ಗಾಗಿ ನಾವು ಐಕಮತ್ಯದಿಂದ ನಡೆಸಿದ ಹೋರಾಟದಂತಹ ಜನಪ್ರಿಯ ಆಂದೋಲನವೊಂದು ರಾಷ್ಟ್ರದ ಅಖಂಡತೆಗಾಗಿ ಅಷ್ಟೇ ಮಟ್ಟದ ತೀವ್ರತೆಯಲ್ಲಿ ಹುಟ್ಟು ಹಾಕಲ್ಪಡುವ ಅಗತ್ಯವಿದೆ ಎಂದು ನಾನು ನಂಬುತ್ತೇನೆ. ಏಕೆಂದರೆ ನಾವುಗಳೆಲ್ಲರೂ ಜಾತಿ ಅಥವಾ ಮತಭೇದವಿಲ್ಲದೆ, ಧರ್ಮ ಅಥವಾ ಪ್ರಾಂತಭೇದವಿಲ್ಲದೆ, ಭಾಷೆ ಅಥವಾ ಸಂಸ್ಕೃತಿಭೇದವಿಲ್ಲದೆ, ಲಿಂಗ ಅಥವಾ ಅಂತಸ್ತಿನ ಭೇದವಿಲ್ಲದೆ, ನಾವು ಮೊದಲು ಭಾರತೀಯರು, ಕೊನೆಯವರೆಗೂ ಭಾರತೀಯರು ಎಂದು ಅರಿತು, ಈ ಬೃಹತ್ ಹಾಗೂ ಹಿರಿಮೆಯ ನಾಡಿನ ನಾಗರಿಕರೆಂಬ ಭಾವನೆಯಿಂದ ಕೂಡಿ ಅದು ಎಂದಿಗೂ ಮತ್ತೆ ಮತ್ತೆ ವಿಭಜನೆಯಾಗಲು ಬಿಡಬಾರದೆಂದು ನಿಶ್ಚಯಿಸಿಕೊಂಡಲ್ಲಿ ಮಾತ್ರವೇ ಭಾರತವು ಒಂದಾಗಿ ಉಳಿದೀತು.

ಈಗ ‘ಭಾಷೆ ಆಧಾರದ ಮೇಲೆ ಭಾರತದ ಛಿದ್ರತೆ -ಇನ್ನಾದರೂ ನಿಲ್ಲಬಾರದೇಕೆ?’ ಕೃತಿ ನಿಮ್ಮ ಕೈಯಲ್ಲಿದೆ. ಅದು ನಿಮ್ಮ ಬೌದ್ಧಿಕ ಆಸಕ್ತಿಯನ್ನು ತಣಿಸಬಹುದು ಮತ್ತು ಇಂತಹ ಛಿದ್ರತೆಯನ್ನು ನಿಲ್ಲಿಸಲು ನಿಮ್ಮ ಕೈಲಾದುದನ್ನು ಮಾಡಲು ನಿಮಗೆ ಪ್ರೇರಣೆ ನೀಡಬಹುದು. ಅತ್ಯಂತ ಮಹತ್ತರವಾದ ರಾಷ್ಟ್ರೀಯ ಗುರಿ ಸಾಧಿಸಲು ನಿಮ್ಮ ಸಲಹೆಗಳನ್ನು ಕಾತುರದಿಂದ ಕಾಯುತ್ತಿದ್ದೇನೆ" ಎಂದು ಹೇಳಿಕೊಂಡಿದ್ದಾರೆ.

ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಎಂ ಎಸ್ ವೆಂಕಟರಾಮಯ್ಯನವರು. ಪುಸ್ತಕದ ಪರಿವಿಡಿಯಲ್ಲಿ ೩೦ ಪುಟ್ಟ ಪುಟ್ಟ ಅಧ್ಯಾಯಗಳಿವೆ. ಅದರಲ್ಲಿ ರಾಜ್ಯಗಳ ಏಕೀಕರಣ, ಸರ್ವಪಕ್ಷ ಸಮ್ಮೇಳನ, ಗಾಂಧೀಜಿಯವರ ಅಭಿಪ್ರಾಯ, ಧರ್ ಆಯೋಗ, ಗಡಿ ಸಮಸ್ಯೆ, ದ್ವಿಭಾಷಾ ರಾಜ್ಯಗಳು, ಪಂಜಾಬ್ ವಿಭಜನೆಯೇಕೆ? ಎಂಬ ಪ್ರಮುಖ ಅಧ್ಯಾಯಗಳಿವೆ. ಸುಮಾರು ೫೪ ಪುಟಗಳ ಈ ಪುಟ್ಟ ಪುಸ್ತಕ ಬಹಳಷ್ಟು ಸಂಗತಿಗಳನ್ನು ಸರಳವಾಗಿ ಹೇಳಹೊರಟಿದೆ ಎನ್ನಬಹುದಾಗಿದೆ.