ಭಾಷೆ ಮತ್ತು ಸಾಮಾಜಿಕ ವಾಸ್ತವ

ಭಾಷೆ ಮತ್ತು ಸಾಮಾಜಿಕ ವಾಸ್ತವ

ಬರಹ

ಭಾಷೆ ಚಲನಶೀಲವಾಗಿದ್ದರಷ್ಟೇ ಉಳಿದುಕೊಳ್ಳುತ್ತದೆ. ಕನ್ನಡ ಉಳಿದು ಬೆಳೆಯಬೇಕಾದರೆ ಅದು ಚಲನಶೀಲವಾಗಿರಲೇ ಬೇಕಾಗುತ್ತದೆ. ಎಲ್ಲ ಜೀವಂತ ಭಾಷೆಗಳೂ ಹೀಗೆ ಸದಾ ಬದಲಾಗುತ್ತಿರುತ್ತವೆ. ಎಷ್ಟೋ ಪದಗಳು ಬಳಕೆಯಾಗದೆ ಕಾಣೆಯಾಗುವಂತೆಯೇ ಹೊಸ ಪದಗಳೂ ಸೇರಿಕೊಳ್ಳುತ್ತಿರುತ್ತವೆ. ಕೆಲವು ಪದಗಳು ಅರ್ಥವನ್ನೇ ಬದಲಾಯಿಸಿಕೊಂಡು ಉಳಿದುಕೊಂಡಿರುತ್ತವೆ. ಈ ಬದಲಾವಣೆಯನ್ನು ಪ್ರಜ್ಞಾಪೂರ್ವಕವಾಗಿ ತಡೆಯುಲು ಸಾಧ್ಯವೇ?

ಓಎಲ್ಎನ್ ಅವರು ಬರೆದ ಭಾಷೆಯಲ್ಲಿ ಸರಿ ಮತ್ತು ತಪ್ಪು ಲೇಖನದ ಸುತ್ತ ನಡೆಯುತ್ತಿರುವ ಚರ್ಚೆ ಭಾಷೆಯ ಸಹಜ ವಿಕಾಸಕ್ಕೆ ತಡೆಯೊಡ್ಡಬೇಕು ಎಂದು ಪ್ರತಿಪಾದಿಸುತ್ತಿದೆಯೇ ಎಂಬ ಅನುಮಾನ ನನ್ನದು.

ಓಎಲ್ಎನ್ ತಮ್ಮ ಲೇಖನದಲ್ಲಿ ಭಾಷೆಯೊಂದರ ವಿಕಾಸ ಮತ್ತು ಪದಗಳ ಪ್ರಮಾಣೀಕರಣಗಳ ವೇಳೆ ಪ್ರಭಾವ ಬೀರುವ ಚಾರಿತ್ರಿಕ, ಸಾಮಾಜಿಕ, ರಾಜಕೀಯ ಕಾರಣಗಳ ಬಗ್ಗೆ ಹೇಳಿದ್ದಾರೆ. ಈ ಅಂಶಗಳ ಬಗ್ಗೆ ಯೋಚಿಸಿದಯೇ ಇಡೀ ಚರ್ಚೆ ನಡೆಯುತ್ತಿರುವಂತೆ ಕಾಣಿಸುತ್ತದೆ. ಕನ್ನಡದಲ್ಲಿ ಅನ್ಯದೇಶ್ಯ ಶಬ್ದಗಳು ಇರಬೇಕೇ ಬೇಡವೇ ಎಂಬ ಚರ್ಚೆಯೇ ಈಗ ಅಪ್ರಸ್ತುತ. ಏಕೆಂದರೆ ಇವೆಲ್ಲವೂ ಭಾಷೆಯೊಂದರ ವಿಕಾಸದ ವಿವಿಧ ಹಂತದಲ್ಲಿ ವಿವಿಧ ಕಾರಣಗಳಿಂದ ಸೇರಿಕೊಂಡಿವೆ. ಇದಕ್ಕೆ ಯಾರ ಮೇಲಾದರೂ ಆರೋಪ ಹೊರಿಸುವುದರಿಂದ ಯಾವ ಪ್ರಯೋಜನವೂ ಇಲ್ಲ.

ಭಾಷೆಯನ್ನು ಬಳಸುವವರು ಪದಗಳ ಚರಿತ್ರೆಯನ್ನೋ, ವ್ಯುತ್ಪತ್ತಿಯನ್ನೋ ಗಮನಿಸಲು ಹೋಗುವುದಿಲ್ಲ. ತಾವು ಬಳಸುವ ಪದಗಳು ತಾವು ಉದ್ದೇಶಿಸಿದನ್ನು ಹೇಳುತ್ತವೆಯೋ ಇಲ್ಲವೋ ಎಂಬುದಷ್ಟೇ ಅವರ ಕಾಳಜಿ. ಸಂವಹನವಷ್ಟೇ ಅವರ ಗುರಿ. ಇದು ಬರೆಹ ಮತ್ತು ಆಡು ಮಾತುಗಳೆರಡರ ಸಂದರ್ಭದಲ್ಲಿಯೂ ನಿಜ. ಬರೆಹದ ಸಂದರ್ಭಕ್ಕೆ ಬಂದರೆ ಇಲ್ಲಿ ಔಪಚಾರಿಕತೆ ಸ್ವಲ್ಪ ಹೆಚ್ಚು. ಇದಕ್ಕೆ ಅನುಗುಣವಾದ ಒಂದು ಭಾಷೆ ರೂಪುಗೊಳ್ಳುತ್ತಾ ಹೋಗುತ್ತದೆ. ಬರೆಹದ ಸಂದರ್ಭದಲ್ಲಿ prosodyಗೆ ಅವಕಾಶವಿರುವುದಿಲ್ಲ. ಆದ್ದರಿಂದ ಇಲ್ಲಿ ಒಂದು ಮಟ್ಟದ ಔಪಚಾರಿಕತೆ ಅನಿವಾರ್ಯವೂ ಹೌದು.

ಅನ್ಯ ದೇಶ್ಯ ಅಥವಾ ಭಾಷಾ ಶಬ್ದಗಳು ಒಂದು ಭಾಷೆಯೊಳಗೆ ಸೇರುವುದಕ್ಕೆ ಇರುವ ಸಾಮಾನ್ಯ ಕಾರಣ ಹೊಸ ಪರಿಕಲ್ಪನೆಗಳು. ಉದಾಹರಣೆಗೆ ಸಾಫ್ಟ್ ವೇರ್ ಎಂಬ ಪದವನ್ನೇ ಗಮನಿಸಿ. ಈ ಪದದ ಮೂಲ ಭಾಷೆಯಲ್ಲಿ ಇದಕ್ಕೆ ಇರುವ ನಿಜವಾದ ಅರ್ಥಕ್ಕೂ ಅದು ಈಗ ಬಳಕೆಯಾಗುತ್ತಿರುವ ಅರ್ಥಕ್ಕೂ ವ್ಯತ್ಯಾಸವಿದೆ. ಕಂಪ್ಯೂಟರ್ ಯುಗದ ಹಿಂದೆ ಸಾಫ್ಟ್ ವೇರ್ ಗೆ ಈಗ ಇರುವ ಅರ್ಥವನ್ನು ಆರೋಪಿಸಲು ಸಾಧ್ಯವೇ ಇರಲಿಲ್ಲ. ಇದಕ್ಕೆ ಕನ್ನಡಿಗರು ಬಳಸಲು ಸಾಧ್ಯವಿರುವ ಒಂದು ಸರಿಯಾದ ಪದ ಹುಟ್ಟಿಕೊಳ್ಳುವುದಕ್ಕೆ ಹಲವು ವರ್ಷಗಳೇ ಬೇಕಾಯಿತು. 'ಲಘು ವರ' ಎಂಬಂಥ ಹಾಸ್ಯಾಸ್ಪದ ಪದಗಳ ಸೃಷ್ಟಿಯಾದವು. ಕೊನೆಗೊಮ್ಮೆ 'ತಂತ್ರಾಂಶ' ಎಂಬ ಪದ ದೊರೆಯಿತು.

ಹೀಗೆ ಹೊಸ ಪರಿಕಲ್ಪನೆಗಳನ್ನು ಒಂದು ಭಾಷಿಕ ಸಂಸ್ಕೃತಿ ಅರಗಿಸಿಕೊಂಡು ತನ್ನದೇ ಆದ ಪದಗಳನ್ನು ಸೃಷ್ಟಿಸಿಕೊಳ್ಳುತ್ತದೆ. ಈ ಸೃಷ್ಟಿಸಿಕೊಳ್ಳುವ ಕ್ರಿಯೆಗೆ ತನಗೆ ಸಾಧ್ಯವಿರುವ, ತನಗೆ ಹತ್ತಿರವಾಗಿರುವ ಸಂಸ್ಕೃತಿಗಳಿಂದ ಧ್ವನಿ ಸಂಜ್ಞೆಗಳನ್ನು ಎರವಲು ಪಡೆಯುತ್ತದೆ. ಇದು ಸಾಮುದಾಯಿಕ ಪ್ರಜ್ಞೆಯೊಳಗೆ ಸುಪ್ತವಾಗಿ ನಡೆಯುವ ಕ್ರಿಯೆ.

ಸಂಸ್ಕೃತ ಭಾರತೀಯ ಭಾಷೆಗಳಿಗೆಲ್ಲಾ ಮೂಲ ಎಂಬುದು ನಿಜವಲ್ಲ ಎಂಬುದನ್ನು ರೆವರೆಂಡ್ ಕಾಲ್ಡ್ ವೆಲ್ ಬಹಳ ಹಿಂದೆಯೇ ಸಾಬೀತು ಮಾಡಿದ್ದಾರೆ. ಸಂಸ್ಕೃತ ಪ್ರತಿನಿಧಿಸುವ ಭಾಷಾ ಕುಟುಂಬವೇ ಬೇರೆ. ಕನ್ನಡದಂಥ ಭಾಷೆಗಳಿರುವ ಭಾಷಾ ಕುಟುಂಬವೇ ಬೇರೆ. ಹಾಗೆಂದು ಕನ್ನಡ ಸಂಸ್ಕೃತದಿಂದ ಏನನ್ನೂ ಪಡೆದಿಲ್ಲ ಎಂದರ್ಥವಲ್ಲ. ಕನ್ನಡ ಸಂಸ್ಕೃತದಿಂದ ಪಡೆದುಕೊಂಡಂತೆಯೇ ಫಾರ್ಸಿ, ಅರಬಿ, ಪೋರ್ಚುಗಲ್, ಇಂಗ್ಲಿಷ್ ಭಾಷೆಗಳಿಂದಲೂ ಸಾಕಷ್ಟನ್ನು ಪಡೆದುಕೊಂಡಿದೆ. ಆಡಳಿತ ಸಂಬಂಧೀ ವಿಷಯಗಳಲ್ಲಿ ಬಳಕೆಯಾಗುವ ಹೆಚ್ಚಿನ ಪದಗಳು ಈ ಭಾಷೆಗಳಿಂದ ಬಂದಿವೆ ಎಂಬುದನ್ನಿಲ್ಲಿ ನೆನಪಿಸಬಹುದು. ಕಚೇರಿ, ಟಪಾಲು, ಎಕರೆ, ಗುಂಟೆ, ಹೆಕ್ಟೇರ್, ಸೆಂಟ್ಸ್, ಬಗೈರ್ ಹುಕುಂ, ಕುಮ್ಕಿ, ಖುಷ್ಕಿ, ಕರಾಬ್, ಜಮಾಬಂದಿ ಹೀಗೆ ಇಂಥ ಪದಗಳ ಪಟ್ಟಿಯನ್ನು ಬೆಳಸುತ್ತಾ ಹೋಗಬಹುದು.

ನಮ್ಮನ್ನು ಆಳಿದ ಬೇರೆ ಬೇರೆ ಸಂಸ್ಕೃತಿಯ ಜನರಿಂದ ದೊರೆತ ಪದಗಳು ಇವು. ಈಗ ಎಕರೆ, ಗುಂಟೆ, ಕಚೇರಿ, ಟಪಾಲಿನಂಥ ಪದಗಳು ನಮ್ಮವೇ ಆಗಿಬಿಟ್ಟಿವೆಯಲ್ಲ. ಈ ಪದಗಳ ಮೂಲ ಹುಡುಕುವುದು ಭಾಷಾಶಾಸ್ತ್ರಜ್ಞನೊಬ್ಬನಿಗೆ ಕುತೂಹಲ ಹುಟ್ಟಿಸುವು ಸಂಶೋಧನೆಯಾಗುತ್ತದೆ. ಆದರೆ ಭಾಷೆಯ ಸಾಮಾನ್ಯ ಬಳಕೆದಾರನಿಗೆ ಈ ಬಗೆಯ ಆಸಕ್ತಿಗಳಿರಬೇಕೆಂದೇನೂ ಇಲ್ಲ. ಅವನಿಗೆ/ಅವಳಿಗೆ ಬೇಕಿರುವುದು ತನ್ನ ಆ ಕ್ಷಣದ ಅಭಿವ್ಯಕ್ತಿಗೆ ಬೇಕಾದ ಪದಗಳು ಮಾತ್ರ.

ಇಂಗ್ಲಿಷ್ ಸೇರಿಸಿಕೊಂಡು ಮಾತನಾಡುವುದು, ಬರೆಯುವುದು ಮುಂತಾದುವುಗಳನ್ನೆಲ್ಲಾ ವರ್ತಮಾನದ ಸಾಮಾಜಿಕ ಸಂಬಂಧಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು ಎನಿಸುತ್ತದೆ. ಮಧ್ಯಮ ವರ್ಗಕ್ಕೆ ಇಂಗ್ಲಿಷ್ ನ ಬಗ್ಗೆ ಇರುವ ಅತೀವ ಮೋಹವನ್ನು ಬದಿಗಿಟ್ಟು ಕನ್ನಡ ಮಾತನಾಡುವಾಗ ಅಥವಾ ಬರೆಯುವಾಗ ಇಂಗ್ಲಿಷ್ ಸೇರಿಸುವುದನ್ನು ವಿಶ್ಲೇಷಿಸಲು ಸಾಧ್ಯವೇ? ಈ ಮಧ್ಯಮ ವರ್ಗಕ್ಕೆ ಇಂಗ್ಲಿಷ್ ನತ್ತ ಇರುವ ಸೆಳೆತಕ್ಕೂ ವರ್ತಮಾನದ ಉದ್ಯೋಗ ಮಾರುಕಟ್ಟೆಗೂ ಇರುವ ಸಂಬಂಧವನ್ನು ನಿರಾಕರಿಸಲು ಸಾಧ್ಯವೇ? ಸಾಮಾಜಿಕ ವಾಸ್ತವಗಳನ್ನು ಮರೆತು ಭಾಷೆಯ ಶುದ್ಧಾಶುದ್ಧಿಯ ಚರ್ಚೆ ಸಾಧ್ಯವೇ?