ಭಾಷೆ ಶುದ್ಧತೆಗೂ ಲಕ್ಷ್ಯ ಇರಲಿ !
ಪದವಿ ಹಾಗೂ ಸ್ನಾತಕೋತ್ತರ ಪದವಿ ಹಂತದ ವಿದ್ಯಾರ್ಥಿಗಳು ಯಾವುದೇ ವಿಷಯದ ಪರೀಕ್ಷೆಯನ್ನು ಕನ್ನಡ ಮತ್ತು ಇಂಗ್ಲಿಷ್ ಎರಡನ್ನೂ ಬೆರೆಸಿ ಬರೆಯಲು ಅವಕಾಶ ನೀಡುವುದಕ್ಕೆ ಸರ್ಕಾರ ಮುಂದಾಗಿದೆ. ಈಗಾಗಲೇ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಎರಡೂ ಭಾಷೆಯಲ್ಲೂ ಪರೀಕ್ಷೆ ಬರೆಯುವ ಅವಕಾಶ ನೀಡಲಾಗಿದೆ. ಅದನ್ನು ಈಗ ಪದವಿಗಳಿಗೂ ವಿಸ್ತರಿಸಲು ಉನ್ನತ ಶಿಕ್ಷಣ ಪರಿಷತ್ ಸಭೆ ತೀರ್ಮಾನ ಕೈಗೊಂಡಿದೆ. ವಿದ್ಯಾರ್ಥಿಗಳು ವಿಷಯವನ್ನು ಗ್ರಹಿಸಿದ್ದರೂ ಪರೀಕ್ಷೆ ಸಂದರ್ಭದಲ್ಲಿ ಅದನ್ನು ವ್ಯಕ್ತಪಡಿಸಲು ಭಾಷಾ ಸಮಸ್ಯೆ ಎದುರಾಗುತ್ತದೆ ಎಂಬುದು ತುಂಬಾ ಹಳೆಯ ದೂರು. ಗ್ರಾಮೀಣ ಪ್ರದೇಶದ ಮಕ್ಕಳು ಈ ಭಾಷಾ ಸಮಸ್ಯೆಯಿಂದಾಗಿ ಉನ್ನತ ಶಿಕ್ಷಣದಿಂದ ಹಾಗೂ ಉದ್ಯೋಗಿಕ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ವಿಫಲರಾಗುತ್ತಿದ್ದಾರೆ ಎಂಬ ಮಾತು ಆಗಿಂದಾಗ್ಗೆ ಕೇಳಿಬರುತ್ತಲೇ ಇರುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಸರ್ಕಾರದ ಈ ನಡೆಯಿಂದ ಪ್ರಯೋಜನವಾಗಬಹುದು. ಪರೀಕ್ಷೆ ಮೊದಲಿಗಿಂತ ಸುಲಭವಾಗಬಹುದು. ಪರೀಕ್ಷೆಯ ಸಂದರ್ಭದಲ್ಲಿ ತಮಗೆ ಗೊತ್ತಿರುವ ವಿಷಯವನ್ನು ಕನ್ನಡ ಅಥವಾ ಇಂಗ್ಲಿಷ್ ಎರಡರಲ್ಲೂ ವ್ಯಕ್ತಪಡಿಸಿ, ಒಟ್ಟಾರೆ ಅಂಕಗಳಿಸಿ ತೇರ್ಗಡೆ ಹೊಂದಲು ಇದು ಸಹಕಾರಿ. ಆದರೆ ಇದರಿಂದ ವಿದ್ಯಾರ್ಥಿಗಳಲ್ಲಿ ಭಾಷಾ ಶುದ್ಧತೆಯೇ ಮಾಯವಾಗಿ ಬಿಡಬಹುದು.
ನಗರೀಕರಣ ಹಾಗೂ ಇಂಗ್ಲಿಷ್ ವ್ಯಾಮೋಹದಿಂದಾಗಿ ಕನ್ನಡ ಮಿಶ್ರಿತ ಇಂಗ್ಲಿಷ್ ಅಥವಾ ಕಂಗ್ಲಿಷ್ ವ್ಯಾಪಕವಾಗಿ ಬಿಟ್ಟಿದೆ. ಶಾಲಾ ಮಕ್ಕಳಿಂದ ವಯಸ್ಕರವರೆಗೂ ಅಸಂಖ್ಯಾತ ಮಂದ್ಯ ಕನ್ನಡ ಕಂಗ್ಲಿಷ್ ಮಯವಾಗಿದೆ ಎಂಬುದಕ್ಕೆ ದೈನಂದಿನ ಜೀವನದಲ್ಲಿ ಸಾಕಷ್ಟು ಪುರಾವೆಗಳು ಮುಂದೆಯೇ ಇದೆ. ಇದೀಗ ಸರ್ಕಾರವೇ ಪರೀಕ್ಷೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಬೆರೆಸಿ ಬಳಸಲು ಅನುಮತಿ ನೀಡಿರುವುದರಿಂದ ಆ ವಿದ್ಯಾರ್ಥಿಗಳ ಭಾಷಾ ಶುದ್ಧತೆ, ಓದುವ ಶೈಲಿ ಮತ್ತಷ್ಟು ಕುಸಿಯುವ ಆತಂಕವಿದೆ. ಹೀಗಾಗಿ ಸರ್ಕಾರ ಈ ವಿಚಾರದಲ್ಲಿ ಇನ್ನಷ್ಟು ಶಿಕ್ಷಣತಜ್ಞರ ಜೊತೆ ಸಮಾಲೋಚಿಸುವುದು ಸೂಕ್ತವಾಗಿದೆ. ಪದವಿ ಎಂಬುದು ಒಬ್ಬ ವಿದ್ಯಾರ್ಥಿ ನಿರ್ದಿಷ್ಟ ವಿಷಯಗಳ ವ್ಯಾಸಂಗ ಮುಗಿಸಿದ್ದಾನೆ ಎಂಬುದರ ದ್ಯೋತಕ. ಆತನಿಗೆ ತನ್ನ ಜ್ಞಾನವನ್ನು ಪರೀಕ್ಷೆಯಲ್ಲಿ ಎರಡು ಭಾಷೆಗಳಲ್ಲಿ ವ್ಯಕ್ತಪಡಿಸಲು ಅವಕಾಶ ನೀಡಿರುವುದು ಸರಿ. ಇದೇ ವೇಳೆ ಕನ್ನಡದಲ್ಲಿ ಇಂಗ್ಲಿಷ್ ಬೆರೆಸದೆ ಕನ್ನಡದಲ್ಲಿ ಪರಿಶುದ್ಧ ಪದಗಳನ್ನು ಬಳಸಲು ಉತ್ತೇಜಿಸಬೇಕು. ಇದಕ್ಕೆ ಪೂರಕವಾಗಿ ತಾಂತ್ರಿಕ ವಿಷಯದ ಪಠ್ಯಗಳನ್ನು ಸಮರ್ಥ ಭಾಷಾತಜ್ಞರ ನೆರವಿನಿಂದ ತರ್ಜುಮೆ ಮಾಡಿಸಲು ಯತ್ನಿಸಬೇಕು. ಹಾಗಾದರೆ ಮಾತ್ರ ಕನ್ನಡ ಭಾಷೆ ಸಾಧ್ಯವಾಗುತ್ತದೆ.
ಕೃಪೆ: ಕನ್ನಡಪ್ರಭ, ಸಂಪಾದಕೀಯ, ದಿ: ೧೬-೧೨-೧೨-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ