ಭಿಕ್ಷೆ

ಭಿಕ್ಷೆ

ಭಿಕ್ಷುಕರು ಮನೆ ಮನೆಗೆ ಬರುತ್ತಾರೆ. ದೇವಸ್ಥಾನ, ಮಂದಿರ, ಮಸೀದಿ, ಚರ್ಚು, ಜೈನಾಲಯ, ಚೈತ್ಯಾಲಯ, ಗುರುದ್ವಾರ ಹೀಗೆ ಎಲ್ಲ ಪ್ರಾರ್ಥನಾಲಯಗಳ ಆಸು ಪಾಸಿನಲ್ಲಿ ಭಿಕ್ಷೆ ಬೇಡುವವರು ಸಾಮಾನ್ಯವಾಗಿ ಇರುವುದಿದೆ. ಉಗಿಬಂಡಿಯನ್ನು ಹತ್ತಿದರೆ ಅಲ್ಲಿಯೂ ಬೇಡುವವರನ್ನು ಕಾಣುತ್ತಿದ್ದೆವು. ಆದರೆ ಬಸ್, ಬಸ್ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಭಿಕ್ಷಾ ಕಾಯಕವನ್ನು ನಿರ್ಬಂಧಿಸಲಾಗಿದೆ. ವಾರದ ಒಂದು ನಿರ್ದಿಷ್ಠ ದಿನ ಅಂಗಡಿ ಮತ್ತು ಇತರ ವ್ಯಾಪಾರ ಕೇಂದ್ರಗಳಲ್ಲೂ ಭಿಕ್ಷಕರು ಲಿಂಗ ಬೇಧವಿಲ್ಲದೆ ಬೇಡುತ್ತಿರುತ್ತಾರೆ.

ಭಿಕ್ಷುಕರನ್ನು ಕಂಡೊಡನೆಯೇ ನಾವು ಅವರ ದೇಹವನ್ನು ಸಂಪೂರ್ಣವಾಗಿ ಅವಲೋಕಿಸುತ್ತೇವೆ. ಅಂಗನ್ಯೂನತೆ, ಮುಪ್ಪು, ಅನಾರೋಗ್ಯ, ಅಶಕ್ತತೆ ಮೊದಲಾದ ಸಮಸ್ಯೆಯಿರುವವರಿಗೆ ಭಿಕ್ಷೆ ನೀಡುತ್ತೇವೆ.  ಸರ್ವಾಂಗ ಸರಿಯಿರುವ ಯುವಕರಿಗೆ, ದುಡಿಯುವ ಶಕ್ತಿಯುಳ್ಳವರಿಗೆ ಭಿಕ್ಷೆ ಹಾಕಲು ಮನಸ್ಸು ಹಿಂದೋಡುತ್ತದೆ. ಅವರನ್ನು ಸ್ವಲ್ಪ ಗದರಿ ಕಳುಹಿಸುವುದೂ ಇದೆ. ಭಿಕ್ಷುಕರು ಶಾಲಾ ಪ್ರಾಯದ ಮಕ್ಕಳನ್ನೂ ಭಿಕ್ಷೆಯೆತ್ತಲು  ತೊಡಗಿಸುತ್ತಿರುವುದು ದುರ್ದೈವ. ಬಾಲ ಭಿಕ್ಷುಕರಿಗೆ ಶಾಲೆಗೆ ಹೋಗಿ ಕಲಿಯುವಂತೆ  ಹಿರಿಯರು ಸೂಚನೆಗಳನ್ನು ಕೊಡುವುದೂ ಇದೆ. ಈ ಗದರುವ ಪ್ರವೃತ್ತಿಯನ್ನು ಭಿಕ್ಷಯೆತ್ತಲು ಬಂದವರು ಸಹಿಸುವುದಿಲ್ಲ. ಅವರು ಮನೆಯವರನ್ನು ದುರುಗುಟ್ಟಿ ನೋಡುತ್ತಾ ಹೋಗುತ್ತಾರೆ.

ಭಿಕ್ಷಕರು ಕೈಚಾಚಿ ಬೇಡುತ್ತಾರೆ. ಬಹಳಷ್ಟು ಆಳವಾಗಿ ಯೋಚಿಸಿದರೆ ಭಿಕ್ಷೆ ಬೇಡದವರು ಪ್ರಪಂಚದಲ್ಲಿ ಯಾರೂ ಇಲ್ಲವೇನೋ ಎನಿಸುತ್ತದೆ. ನಮಗೆ ಬೇರೆ ಬೇರೆ ಸಂದರ್ಭಗಳಲ್ಲಿ ಭಗವಂತನನ್ನು ಬೇಡುವ ಅಗತ್ಯಗಳಿರುತ್ತವೆ. ನಮ್ಮ ಆಸೆ ಆಕಾಂಕ್ಷೆಗಳನ್ನು ಸಫಲಗೊಳಿಸಲು ದೇವರ ಮೊರೆ ಹೋಗುವುದಿದೆ. ಅನುಗ್ರಹ ಬಯಸುವುದೂ ಭಿಕ್ಷೆಯಲ್ಲವೆನ್ನಲಾಗದು. ಭಿಕ್ಷುಕನಾದವನು ದೈಹಿಕ ನ್ಯೂನತೆ ಅಥವಾ ಅನಾರೋಗ್ಯದ ಕಾರಣದಿಂದ ತನಗೆ ಅಗತ್ಯವಾದುವುಗಳಿಗಾಗಿ ಭಿಕ್ಷೆ ಬೇಡುತ್ತಾನೆ. ನಾವು ಸಕಲಾಂಗ ಸುಂದರರಾಗಿದ್ದು ದೃಢಕಾಯರಾಗಿರುವಾಗ ಭಗವಂತನಲ್ಲಿ ನಾನಾ ಬೇಕುಗಳನ್ನು ಮಂಡಿಸಿ ಯಾಚಿಸುವುದು ಸಮರ್ಥನೀಯವಾಗದು. ಅನುಗ್ರಹ ಯಾಚನೆ ಭಿಕ್ಷಾಟನೆಯಲ್ಲ. ನನಗಿದನ್ನು ಕೊಡು ಎಂದು ಯಾಚಿಸುವುದು ಭಿಕ್ಷಾಟನೆ. ಭಿಕ್ಷೆ ನೀಡುವಾಗ ಎಲ್ಲರೂ ಪ್ರೀತಿಯಿಂದ ಕೊಡುತ್ತಾರೆ ಎನ್ನುವಂತಿಲ್ಲ. ಕೆಲವರು ಬೈಯುವುದಿದೆ, ನಾಯಿಯನ್ನು ಛೂ ಬಿಡುವುದಿದೆ, ಮುಂದೆ ಹೋಗು ಎನ್ನುವುದೂ ಇದೆ. ನಾವು ಭಗವಂತನ ಮುಂದೆ ಬೇಕುಗಳನ್ನು ಇಟ್ಟಾಗ ಅವನೂ  ಮುನಿದರೆ.....? ಈ ರೀತಿಯ ಕುಚೇಷ್ಟೆಗಳನ್ನು ಮಾಡಿದರೆ..?

ನಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿಗಳಿಗೆ ಚಾಲನೆ ನೀಡಿ ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದರಲ್ಲಿ ಶ್ರೇಷ್ಠತೆಯಿದೆ. ತಾನು ದುಡಿಯುವ ಶಕ್ತಿಯುಳ್ಳವನಾಗಿರುವಾಗ ಇತರರಿಂದ ಯಾಚಿಸುವುದು ತಪ್ಪಾಗುತ್ತದೆ. ನಮ್ಮ ಕೆಲಸಗಳಿಗೆ ನಾವು ಇತರರ ಸಹಕಾರ ಕೇಳುವುದು ತಪ್ಪಲ್ಲ. ಪರಸ್ಪರ ಸಹಕಾರವು ಬದುಕಿನ ಅನಿವಾರ್ಯ ಅಂಶ. ಸಹಕಾರವನ್ನು ಯಾಚನೆ ಎನ್ನಲಾಗದು. ಅದು ಮನೋಭಾವನೆಗೆ ಸಂಬಂಧಿಸಿದ ಜೀವನ ಮೌಲ್ಯ. ತೋಟದ ಮಾಲಿಕ ನಾನಾ ಕಾರ್ಮಿಕ ವರ್ಗದ ಸಹಕಾರ ಪಡೆಯುತ್ತಾನೆ. ಕಾರ್ಮಿಕರಿಗೆ ವೇತನ ಅಥವಾ ಪಗಾರ ನೀಡುತ್ತಾನೆ. ಕಾರ್ಮಿಕರ ದುಡಿಮೆಯು ಸಹಕಾರವೂ ಹೌದು, ಸೇವೆಯೂ ಹೌದು. ದುಡಿಸಿಕೊಂಡದ್ದಕ್ಕೆ ಪಗಾರ ನೀಡುವುದು ಕರ್ತವ್ಯ. ಸೇವೆ ಮಾಡದೆ, ದುಡಿಯದೆ ಮಾಲಿಕನಿಂದ ಪಗಾರದ ಹೆಸರಿನಲ್ಲಿ ಪಡೆದುದು ಭಿಕ್ಷೆಗೆ ಸಮಾನವಾದುದು. ಭಿಕ್ಷುಕರು ಹೊಲದಲ್ಲಿ ಯಾ ಉದ್ಯಮದಲ್ಲಿ ದುಡಿಮೆಯ ಮೂಲಕ ಗಳಿಸಿದರೆ ಅದು ಪಗಾರವೇ ವಿನಹ ಭಿಕ್ಷೆಯಲ್ಲ.

ವಿದ್ಯಾರ್ಥಿಯು ನಿತ್ಯ ಓದಿನಲ್ಲಿ ಶ್ರಮ ವಹಿಸದೆ ಪರೀಕ್ಷೆ ಹತ್ತಿರ ಬಂದಾಗ ಭಗವಂತನಲ್ಲಿ, “ದೇವರೆ, ನನ್ನನ್ನು ‘ಪಾಸು’ ಮಾಡು. ಹೆಚ್ಚು ‘ಅಂಕ’ ಬರುವಂತೆ ಮಾಡು.” ಎಂದು ಯಾಚಿಸಿದರೆ ಅದು ಭಿಕ್ಷೆಯೇ ಹೊರತು ಅನುಗ್ರಹ ಯಾಚನೆಯಾಗುವುದಿಲ್ಲ. ಶಾಲಾರಂಭದಿಂದ ಪ್ರತೀ ನಿತ್ಯ ಶ್ರಮವಹಿಸಿ ಅಧ್ಯಯನ ಮಾಡುತ್ತಾ, ದೇವರಲ್ಲಿ ಪಾಸು ಮಾಡಿಸು ಎಂದರೆ ಅದು ಭಿಕ್ಷೆಯಲ್ಲ; ಭಗವದನುಗ್ರಹದ ಪ್ರಾರ್ಥನೆ. ನಿತ್ಯವೂ ಓದು ಮತ್ತು ಕಲಿಕೆಗಳಲ್ಲಿ ಶ್ರಮ ಹಾಕುವವನಿಗೆ ದೇವರ ಪ್ರಾರ್ಥನೆ ಮಾಡದೇ ಇದ್ದರೂ ತಾನಾಗಿಯೇ ಭಗವದನುಗ್ರಹ ಬಂದೇ ಬರುತ್ತದೆ. ನಾವು ಭಿಕ್ಷೆಯನ್ನು ಆಶ್ರಯಿಸದೆ ದುಡಿಮೆಯ ಮೂಲಕ ದೇವರಿಂದ ಅನುಗ್ರಹೀತರಾಗೋಣ.....

-ರಮೇಶ  ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ