ಭೀಕರ ಸುಂಟರಗಾಳಿಗಳು (ಭಾಗ 2)

ಭೀಕರ ಸುಂಟರಗಾಳಿಗಳು (ಭಾಗ 2)

ಪೌಲಿನ್ ಸುಂಟರಗಾಳಿ: ಮೆಕ್ಸಿಕೋ ಕಡಲತೀರದಲ್ಲಿ ಆಘಾತಕಾರಿ ಭೂ ಕುಸಿತವನ್ನು ಉಂಟುಮಾಡಿದ ಮಹಾಪಾತಕಿ ಈ ಫೆಸಿಫಿಕ್ ಸುಂಟರಗಾಳಿ- ಪೌಲಿನ್! ಇದು ಮೆಕ್ಸಿಕೋ ಇತಿಹಾಸದಲ್ಲಿ ಮಹಾ ಸುಂಟರಗಾಳಿ! ಅಕಾಪುಲ್ಕೊ ಕಡಲತೀರ ಒಂದರಲ್ಲೇ ಸುರಿದ ಸುಮಾರು 16 ಇಂಚಿನ ಮಹಾಮಳೆಗೆ ಭೂಮಿಯ ಪದರಗಳು ಇಡಿ ಇಡಿಯಾಗಿ ಕುಸಿದು ಹೋದವು. ಈ ದಾಳಿಯಿಂದ 250 ದಿಂದ 400 ಜನ ಸಾವನ್ನಪ್ಪಿ ಸುಮಾರು 3 ಲಕ್ಷ ಜನ ಮನೆ-ಮಠ ಕಳೆದುಕೊಂಡು ನಿರ್ಗತಿಕರಾದರು. ಪೌಲಿನ್ ಸುಂಟರಗಾಳಿ ಉಂಟುಮಾಡಿದ ನಷ್ಟ 750 ದಶಲಕ್ಷ ಡಾಲರ್ ಗಳು.!

ಗ್ಯಾಲ್ವೆಸ್ಟಾನ್ ಸುಂಟರಗಾಳಿ: 1900ರಲ್ಲಿ ಅಮೆರಿಕದ ಟೆಕ್ಸಸ್ ರಾಜ್ಯದ ಗ್ಯಾಲ್ವೆಸ್ಟಾಸ್ ಪ್ರದೇಶದಲ್ಲಿ ಬೀಸಿದ ಭೀಕರ ಸುಂಟರಗಾಳಿ ಅಮೆರಿಕದ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದಾಗ್ಯೂ ಮಣ್ಣಿನ ಧೂಳು ಸುತ್ತುತ್ತಾ ಮೇಲೆ ಎದ್ದಾಗಲೇ ಜನರಿಗೆ ಗೊತ್ತಾಗಿದ್ದು ಇದು ಸುಂಟರಗಾಳಿ ಎಂದು. ಗಂಟೆಗೆ 135 ಮೈಲಿ ವೇಗದಲ್ಲಿ 15 ಅಡಿಗಿಂತಲೂ ಹೆಚ್ಚು ಎತ್ತರದಲ್ಲಿ ಭೀಕರ ಸುಳಿಗಾಳಿ ಆಕಾಶಕ್ಕೆ ಏರಿತ್ತು. ಈ ಸುಂಟರಗಾಳಿ ಇಡೀ ತೀರ ಅವನ್ನು ಸಂಪೂರ್ಣವಾಗಿ ಜಾಲಾಡಿ ಬಿಟ್ಟಿತ್ತು. ಸುಮಾರು 3600 ಮನೆಗಳು ನೆಲಸಮವಾಗಿ ಆರು ಸಾವಿರ ಜನ ಪ್ರಾಣ ಕಳೆದುಕೊಂಡರು. ಅಂದಿನ ಹಾನಿ ಇಂದಿನ 500 ದಶಲಕ್ಷ ಡಾಲರ್ ಗೆ ಸಮ.

ಐಕೆ ಸುಂಟರಗಾಳಿ: ಮೇಲಿನ ಸುಂಟರಗಾಳಿಗಳು ಒಂದೊಂದೇ ಪ್ರದೇಶವನ್ನು ಸಾರಿಸಿ ಗುಡಿಸಿದರೆ, ಈ ಐಕೆ ಸುಂಟರಗಾಳಿ ಸರಣಿಯಲ್ಲಿ ಅಮೇರಿಕಾ, ಬಹಮಾಸ್, ಕ್ಯೂಬಾ, ಟರ್ಕ್ಸ್, ಕೈಕೋಸ್ ಹಾಗೂ ಹೈಟಿ ದ್ವೀಪಗಳ ಸರಮಾಲೆಯನ್ನೇ ಸಾರಾಸಗಟಾಗಿ ಗುಡಿಸಿ ಬಿಟ್ಟಿತ್ತು. ಇದು ಕೇವಲ 195 ಜನರನ್ನು ಆಹುತಿ ತೆಗೆದುಕೊಂಡರೂ ಮಾಡಿದ ನಷ್ಟ ಮಾತ್ರ ಅಪಾರ. ಅಮೇರಿಕಾ 2400 ದಶಲಕ್ಷ ಡಾಲರ್, ಕ್ಯೂಬಾ 730 ದಶಲಕ್ಷ ಡಾಲರ್, ಬಹಮಾಸ್ 200 ದಶಲಕ್ಷ ಡಾಲರ್, ಟರ್ಕ್ಸ್ ಮತ್ತು ಕೈಕೋಸ್ ಗಳು 3200 ದಶಲಕ್ಷ ಡಾಲರ್ ಗಳ ಅಪಾರ ನಷ್ಟವನ್ನು ಅನುಭವಿಸಿದವು.

ದಿ ಗ್ರೇಟ್ ಸುಂಟರಗಾಳಿ: ಇದೊಂದು ಅಟ್ಲಾಂಟಿಕ್ ಸಾಗರದಿಂದ ಹಾದುಬಂದ ಮಹಾ ಸುಂಟರಗಾಳಿ. ಇದರ ಕಾಲ 1780 ನೇ ಇಸವಿ. ಇದು ನಿರ್ನಾಮ ಮಾಡಿದ ಪ್ರದೇಶಗಳೆಂದರೆ ಪೋರ್ಟೊರಿಕೊ, ಡೊಮಿನಿಕ್ ಗಣರಾಜ್ಯ, ಲೆಸ್ಸರ್ ಆಂಟಿಲಿಸ್ಸ್, ಬರ್ಮುಡಾ ಮತ್ತು ಫ್ಲೋರಿಡಾದ ಕೆಲವು ಭಾಗಗಳು. ಇದರಿಂದ ಅಂದು ಆದ ಹಾನಿಯನ್ನು ಅಂದಾಜು ಮಾಡಲಾಗದಿದ್ದರೂ ಇದು ಬಲಿ ತೆಗೆದುಕೊಂಡದ್ದು ಸುಮಾರು 22 ಸಾವಿರ ಜನರನ್ನು.

ಆಂಡ್ರೂ ಸುಂಟರಗಾಳಿ: 1992 ರಲ್ಲಿ ಬಹಮಾಸ್ ಪ್ರದೇಶದಲ್ಲಿ ಬೀಸಿದ ಈ ಸುಂಟರಗಾಳಿಯನ್ನು ಪ್ರಥಮವಾಗಿ ಗುರುತಿಸಿದ್ದು ಒಬ್ಬ ಬಾಲಕ. ಆತನ ಹೆಸರು ಆಂಡ್ರೂ. ವಾಯುವ್ಯ ಬಹಮಾಸ್ ನಿಂದ ಪ್ರಾರಂಭವಾದ ಈ ಸುಂಟರಗಾಳಿ ದಕ್ಷಿಣ ಫ್ಲೋರಿಡಾ, ವಾಯುವ್ಯ ಲೂಸಿಯಾನ ಪ್ರದೇಶಗಳನ್ನು ಸಂಪೂರ್ಣ ನಿರ್ನಾಮ ಮಾಡಿತು. ಇದರ ದಾಳಿಯಿಂದ ತಕ್ಷಣ 26 ಜನ ಸತ್ತರು; ಕೊನೆಯಲ್ಲಿ 39 ಜನ ಪ್ರಾಣ ಕಳೆದುಕೊಂಡರು. ಇದರಿಂದ ಆದ ಹಾನಿ 3400 ದಶಲಕ್ಷ ಡಾಲರ್ ಗಳು!

ಕತ್ರಿನಾ ಸುಂಟರಗಾಳಿ: ಇದು ಅಮೆರಿಕದ ಮೇಲೆ ಎರಗಿದ ಭೀಕರ ಸುಂಟರಗಾಳಿ. ಇದು ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ನಷ್ಟವನ್ನು ಉಂಟುಮಾಡಿದ ಸುಂಟರಗಾಳಿ (ಚಿತ್ರ ನೋಡಿ). ಅಮೆರಿಕದ ಈಶಾನ್ಯ ಭಾಗದ ಲೂಸಿಯಾನ, ನ್ಯೂ ಓರ್ಲಿಯನ್ ಪ್ರದೇಶದಲ್ಲಿ ಜಲಪ್ರಳಯವನ್ನು ಉಂಟುಮಾಡಿದ ಬಿರುಗಾಳಿ ಇದು. ಈ ಭೀಕರ ದುರಂತದಲ್ಲಿ 1836 ಜನ ಪ್ರಾಣಕಳೆದುಕೊಂಡರಲ್ಲದೇ 705 ಜನ ಕಾಣೆಯಾದರು. ಇದರಿಂದ ಅಮೆರಿಕ ಅನುಭವಿಸಿದ ನಷ್ಟ 8000 ದಶಲಕ್ಷ ಡಾಲರ್ ಗಳು! ಇದಕ್ಕೆ ಪರಿಹಾರ ನೀಡುವಲ್ಲಿ ಅಮೆರಿಕದಂತಹ ಬೃಹತ್ ಮತ್ತು ಶ್ರೀಮಂತ ರಾಷ್ಟ್ರವೇ ಎಡವಿತೆಂದರೆ ಇದರ ಭೀಕರತೆಯನ್ನು ನೀವೇ ಅರ್ಥಮಾಡಿಕೊಳ್ಳಬಹುದು. ಈ ಸುಂಟರಗಾಳಿಯಿಂದ ಸಂತ್ರಸ್ತರಾದವರಿಗೆ ಇನ್ನೂ ನೆರವಿನ ಕೆಲಸ ನಡೆಯುತ್ತಲೇ ಇದೆ.

(ಮುಗಿಯಿತು)

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ