ಭೀಮರಾಜನೆಂಬ ರಾಕೆಟ್ ಬಾಲದ ಹಕ್ಕಿ
ನಾವು ನಮ್ಮ ಸುತ್ತಮುತ್ತಲಿನಲ್ಲಿ ಹಲವಾರು ಪ್ರಾಣಿ ಪಕ್ಷಿಗಳನ್ನು ಕಾಣುತ್ತೇವೆ. ಕೆಲವು ಸಲ ಅಪರೂಪದ ಪಕ್ಷಿಗಳೂ ಕಾಣ ಸಿಗುವುದುಂಟು. ಕೆಲವು ಪಕ್ಷಿಗಳು ತನ್ನ ಧ್ವನಿಯಿಂದಲೂ, ಕೆಲವು ಮೈ ಬಣ್ಣದಿಂದಲೂ ಗಮನ ಸೆಳೆದರೆ ಈ ಭೀಮರಾಜನೆಂಬ ಹಕ್ಕಿಯು ತನ್ನ ಉದ್ದದ ಬಾಲದಂತಹ ಗರಿಯಿಂದಲೇ ನಮ್ಮನ್ನು ಆಕರ್ಷಿಸುತ್ತದೆ. ಈ ಹಕ್ಕಿಯು ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಕಾಣ ಸಿಗುತ್ತದೆ.
ಭೀಮ ರಾಜ ಹಕ್ಕಿಯು ಡ್ರೋಂಗೋ (Drongo) ಎಂಬ ಪ್ರಭೇಧಕ್ಕೆ ಸೇರಿದ ಹಕ್ಕಿ. ಡ್ರೋಂಗೋ ತಳಿಯ ಬೇರೆ ಹಕ್ಕಿಗಳಲ್ಲಿ ಭೀಮರಾಜ ಹಕ್ಕಿಯಂತೆ ಉದ್ದದ ಬಾಲ ಕಂಡು ಬರುವುದಿಲ್ಲ. ಈ ಹಕ್ಕಿಯ ಬಾಲದ ಎರಡು ಗರಿಗಳು ಉದ್ದವಾಗಿದ್ದು, ವಿಶೇಷವಾದ ಆಕಾರವನ್ನು ಹೊಂದಿರುತ್ತದೆ. ಡಿಕ್ರುರಸ್ ಪ್ಯಾರಾಡೈಸಿಯಸ್ (Dicrurus Paradiseus) ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಭೀಮರಾಜ ಹಕ್ಕಿಯು ಡ್ರೋಂಗೋ ಕುಟುಂಬದ ಎಲ್ಲಾ ಹಕ್ಕಿಗಳಿಗಿಂತಲೂ ಆಕಾರದಲ್ಲಿ ದೊಡ್ಡದಾಗಿರುತ್ತದೆ. ಮಿರುಗುವ ಕಪ್ಪು ಬಣ್ಣ, ಉದ್ದದ ಬಾಲದ ಕಾರಣದಿಂದ ಈ ಹಕ್ಕಿಯು ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತದೆ. ಭೀಮರಾಜ ಹಕ್ಕಿಯು ತನ್ನ ಆಕ್ರಮಣಶೀಲ ಗುಣಕ್ಕೆ ಖ್ಯಾತಿಯನ್ನು ಹೊಂದಿದೆ. ತನಗಿಂತಲೂ ದೊಡ್ಡದಾದ ಹಕ್ಕಿಗಳನ್ನು ಇದು ಬೆದರಿಸುತ್ತದೆ. ವಿಶಿಷ್ಟವಾದ ದ್ವನಿಯನ್ನು ಹೊರಡಿಸುತ್ತದೆ ಹಾಗೂ ಇತರ ಹಕ್ಕಿಗಳ ಧ್ವನಿಯನ್ನೂ ನಕಲು ಮಾಡುತ್ತವೆ.
ಭೀಮರಾಜ ಹಕ್ಕಿಯು ಏಷ್ಯಾದ ಹಲವಾರು ಭಾಗಗಳಲ್ಲಿ ಕಂಡು ಬರುತ್ತದೆ. ಭಾರತದಲ್ಲಿ ಹಿಮಾಲಯದಲ್ಲಿ, ಪಶ್ಚಿಮ ಘಟ್ಟಗಳಲ್ಲಿ ಇವು ವಾಸಿಸುತ್ತವೆ. ಹಿಮಾಲಯದಲ್ಲಿ ಕಂಡು ಬರುವ ಹಕ್ಕಿಗಳಲ್ಲೂ, ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಹಕ್ಕಿಗಳಲ್ಲೂ ವಿವಿಧತೆಯನ್ನು ಗಮನಿಸಬಹುದು. ಹಕ್ಕಿಗಳ ಕೊಕ್ಕು, ತಲೆಭಾಗ, ಕಂಠದ ಸುತ್ತದ ಜಾಗ ಹಾಗೂ ಬಾಲದ ಗರಿಗಳಲ್ಲಿ ವಿಭಿನ್ನ ಸ್ವರೂಪವನ್ನು ಹೊಂದಿರುತ್ತವೆ. ಇವುಗಳು ತಮ್ಮ ಆಹಾರವಾಗಿ ಸಣ್ಣ ಸಣ್ಣ ಹುಳಗಳನ್ನು, ಕೀಟಗಳನ್ನು ತಿನ್ನುತ್ತವೆ. ಹಣ್ಣುಗಳನ್ನೂ ತಿನ್ನುವ ಇವುಗಳು ಕೆಲವೊಮ್ಮೆ ಹೂವುಗಳ ಮಧುವನ್ನೂ ಹೀರುವುದುಂಟು.
ಭೀಮರಾಜ ಹಕ್ಕಿಗಳ ವಿಭಿನ್ನ ಧ್ವನಿಯಿಂದ ಇದನ್ನು ಪೋಲೀಸ್ ಹಕ್ಕಿಯೆಂದೂ ಕರೆಯುತ್ತಾರೆ. ಪೋಲೀಸ್ ಸೀಟಿ ಊದಿದಂತೆಯೂ ಇದು ಧ್ವನಿಯನ್ನು ಹೊರಡಿಸುತ್ತದೆ. ಬೇರೆ ಹಕ್ಕಿಗಳನ್ನು ಜಾಗೃತಗೊಳಿಸಲು ಹಲವಾರು ಬಗೆಯ ಧ್ವನಿಯನ್ನು ಅನುಕರಣೆ ಮಾಡುತ್ತದೆ. ತನ್ನ ಬೇಟೆಯನ್ನು ಅರಸಲು ಹಾಗೂ ತನ್ನ ಸಂಗಡಿಗ ಹಕ್ಕಿಯನ್ನು ಜೊತೆಗೂಡಿಸಲು ಈ ಅನುಕರಣಾ(ಮಿಮಿಕ್ರಿ) ಧ್ವನಿಯು ಸಹಕಾರಿಯಾಗುತ್ತದೆ. ದಿನವಿಡೀ ಚಟುವಟಿಕೆಯಿಂದ ಇರುವ ಭೀಮರಾಜ ಹಕ್ಕಿಗಳು ಮಾನವ ವಾಸಸ್ಥಳದ ಬಳಿಯೇ ಇರುತ್ತದೆ.
ಭೀಮರಾಜ ಹಕ್ಕಿಗಳು ಎಪ್ರಿಲ್ ನಿಂದ ಆಗಸ್ಟ್ ತಿಂಗಳ ಸಮಯದಲ್ಲಿ ತಮ್ಮ ಸಂತಾನೋತ್ಪತ್ತಿಯನ್ನು ಮಾಡುತ್ತವೆ. ಸಂಗಾತಿಯನ್ನು ಆಕರ್ಷಿಸಲು ಗಂಡು ಹಕ್ಕಿಯು ಹಲವಾರು ಬಗೆಯ ಪ್ರಣಯದಾಟಗಳನ್ನು ಆಡುತ್ತದೆ. ಮರದ ಕೊಂಬೆಯ ಮೇಲೆ ತೆರೆದ ವೃತ್ತಾಕೃತಿಯ ಗೂಡುಗಳನ್ನು ನಿರ್ಮಿಸಿ ಮೂರರಿಂದ ನಾಲ್ಕು ಹಾಲಿನ ಕೆನೆಯ ಬಣ್ಣದ ಮೊಟ್ಟೆಗಳನ್ನು ಇರಿಸುತ್ತದೆ. ಮೊಟ್ಟೆಗೆ ಕಾವು ಕೊಟ್ಟು ಮರಿಗಳು ಹೊರ ಬಂದಾಗ ಅವುಗಳಿಗೆ ಗಾಢವಾದ ಬಣ್ಣ ಇರುವುದಿಲ್ಲ. ಮರಿ ಹಕ್ಕಿ ಬೆಳೆದು ಪ್ರೌಢಾವಸ್ತೆಗೆ ಬಂದಾಗ ಗಾಢವಾದ ಕಪ್ಪು ಬಣ್ಣ ಹೊಂದುತ್ತವೆ.
ಭೀಮರಾಜ ಹಕ್ಕಿಯನ್ನು ಭಾರತದ ಈಶಾನ್ಯ ರಾಜ್ಯವಾದ ಮಿಜೋರಾಂನ ಸ್ಥಳೀಯ ಭಾಷೆಯಾದ ಮಿಝೋದಲ್ಲಿ ‘ಭೃಂಗರಾಜ’, ‘ವಕುಲ' ಎಂದೂ ಕರೆಯುತ್ತಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಈ ಹಕ್ಕಿಗಳನ್ನು ಗಿಳಿಯಂತೆ ಮನೆಗಳಲ್ಲಿ ಸಾಕುತ್ತಿದ್ದರಂತೆ. ಆದರೆ ಇದು ಕಾಗೆಯಂತೆ ಧ್ವನಿಯನ್ನು ಅನುಕರಣೆ ಮಾಡುವುದರಿಂದ ಸಾಕುವವರ ಸಂಖ್ಯೆ ಕಮ್ಮಿ ಆಯಿತಂತೆ. ನಂತರದ ದಿನಗಳಲ್ಲಿ ಮಾನವ ಆಕ್ರಮಣದಿಂದಾಗಿ ಇದು ಅಳಿವಿನಂಚಿನಲ್ಲಿರುವ ಹಕ್ಕಿ ಪ್ರಭೇಧಕ್ಕೆ ಸೇರಿಸಲ್ಪಟ್ಟಿತು. ೨೦೦೮ರಲ್ಲಿ ಅಂತರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಸಮಿತಿ (IUCN) ಯವರು ಈ ಪ್ರಭೇಧದ ಹಕ್ಕಿಗಳನ್ನು ಕೆಂಪು ಪಟ್ಟಿ (ಅಪಾಯ)ಗೆ ಸೇರಿಸಿದ್ದಾರೆ. ಅಪರೂಪದ ಹಲವಾರು ಹಕ್ಕಿಗಳು ನಮ್ಮ ನಡುವಿನಿಂದ ಕಾಣೆಯಾಗುತ್ತಿವೆ. ಇವುಗಳನ್ನು ಇನ್ನಾದರೂ ಸಂರಕ್ಷಿಸೋಣ. ಆರೋಗ್ಯದಾಯಕ ಪರಿಸರವನ್ನು ನಿರ್ಮಿಸೋಣ.
ಚಿತ್ರ ಕೃಪೆ: ಅಂತರ್ಜಾಲ ತಾಣ
Comments
ಭೀಮರಾಜ ಹಕ್ಕಿ ಬಗ್ಗೆ ಒಂದಿಷ್ಟು ಮಾಹಿತಿ
ಇದರ ಇನ್ನೊಂದು ಹೆಸರು ಕಾಳಿಂಗ ಹಕ್ಕಿ ಅಂತ. ಇದು ಹುಲಿಯ ಸ್ವರವನ್ನು ಬಿಟ್ಟು ಬೇರೆ ಎಲ್ಲಾ ಪ್ರಾಣಿ ಪಕ್ಷಿಗಳ ಸ್ವರವನ್ನು ಅನುಕರಣೆ ಮಾಡುತ್ತದೆ.ಅಷ್ಟೇ ಆಲ್ಲದೇ ಇದು ಮೂರು ಮೂರು ಮೊಟ್ಟೆಗಳನ್ನು ಇಡುತ್ತದೆ. ಇದರಲ್ಲಿ ಒಂದು ಮೊಟ್ಟೆ ಕಾಳಿಂಗ ಹಾವು ಆಗಿರುತ್ತದೆ. ಈ ಹಾವು ತಲೆಯಿಂದ ಬಾಲದವರೆಗೂ ಹೆಡೆಯನ್ನು ಹೊಂದಿರುತ್ತದೆ ಮತ್ತು ಇದು ನೆತ್ತಿಯಲ್ಲಿ ಕೋಳಿ ಜುಟ್ಟಿನ ತರ ಜುಟ್ಟನ್ನು ಹೊಂದಿದೆ. ಇದು ದೊಡ್ಡ ದೊಡ್ಡ ಕಾಡುಗಳಲ್ಲಿ ಮಾತ್ರ ಕಾಣ ಸಿಗುತ್ತದೆ. ಇದು ಮರದಲ್ಲಿ ವಾಸಿಸುತ್ತದೆ ಮತ್ತು ಇದು ಮರದಿಂದ ಮರಕ್ಕೆ ಹಾರುವುದಿಲ್ಲ ಬದಲಾಗಿ ಒಂದು ಮರದಿಂದ ಇನ್ನೊಂದು ಮರದ ಬುಡಕ್ಕೆ ಹಾರಿ ಬಿದ್ದು ನಂತರ ಆ ಮರವನ್ನು ಏರುತ್ತದೆ ಎಂಬ ಮಾಹಿತಿಯನ್ನು ಕೇಳಲ್ಪಟ್ಟಿದ್ದೇನೆ ಸರ್. ಇದರ ಬಗ್ಗೆ ತಿಳಿದವರಿಂದ ಪೂರಕ ಮಾಹಿತಿ ಸಿಕ್ಕರೆ ಅನುಕೂಲ.
ಅರ್ಪಣ ಈಶ್ವರಮಂಗಲ
ಭೀಮರಾಜ ಹಕ್ಕಿ ಮತ್ತು ಕಾಳಿಂಗ ಹಾವಿನ ಮೊಟ್ಟೆ
ಸಂಪದ.ನೆಟ್ ನಲ್ಲಿ ಅಶ್ವಿನ್ ರಾವ್ ಅವರು ಭೀಮರಾಜ/ ಕಾಜಾಣ ಹಕ್ಕಿಯ ಬಗ್ಗೆ ಬರೆದ ಲೇಖನಕ್ಕೆ ಅರ್ಪಣಾರವರ ಪ್ರತಿಕ್ರಿಯೆಯನ್ನು ಓದಿದಾಗ ಈ ವಿಷಯಗಳ ಬಗ್ಗೆ ಸ್ವಲ್ಪ ಖಚಿತ ಮಾಹಿತಿಗಳನ್ನು ತಿಳಿದುಕೊಳ್ಳಬೇಕು ಮತ್ತು ಸ್ಪಷ್ಟವಾದ ಮಾಹಿತಿಯನ್ನು ನೀಡಬೇಕು ಅನಿಸಿತು. ಆತ್ಮೀಯರಾದ ಉರಗ ತಜ್ಞ ಶ್ರೀ ಗುರುರಾಜ್ ಸನಿಲ್ ಅವರನ್ನು ಸಂಪರ್ಕಿಸಿದೆ. ಅವರು ನಮ್ಮ ಬಳಗಕ್ಕಾಗಿಯೇ ಭೀಮರಾಜ ಹಕ್ಕಿ ಮತ್ತು ಕಾಳಿಂಗ ಹಾವಿನ ಮೊಟ್ಟೆಯ ಬಗ್ಗೆ ಬರೆದುಕೊಟ್ಟಿದ್ದಾರೆ. ಗುರುರಾಜ್ ಅವರಿಗೆ ಧನ್ಯವಾದಗಳು.
ಸರಿ ಇರಲಿ, ತಪ್ಪಿರಲಿ ಅಭಿಪ್ರಾಯ ನೀಡುವುದು, ಪ್ರತಿಕ್ರಿಯೆ, ಸಂವಾದ ಅತೀ ಅಗತ್ಯವಾಗಿ ಆಗಬೇಕಾಗಿರುವುದೇ. ಹೀಗಾದಾಗ ಮಾತ್ರ ಇನ್ನೊಂದಷ್ಟು ಉಪಯುಕ್ತ ಮಾಹಿತಿ ಎಲ್ಲರಿಗೂ ಗೊತ್ತಾಗಲು ಸಾಧ್ಯ, ಈ ನಿಟ್ಟಿನಲ್ಲಿ ಇಲ್ಲಿ ನಡೆದಿರುವುದು ಒಂದು ಸಕಾರಾತ್ಮಕ ಬೆಳವಣಿಗೆ. ಅರ್ಪಣಾ ಅವರಿಗೂ ಧನ್ಯವಾದಗಳು. ಒಬ್ಬರ ಒಂದು ಅಭಿಪ್ರಾಯದ ಕಾರಣಕ್ಕೆ ಇದೀಗ ಮತ್ತೊಂದಷ್ಟು ಮಾಹಿತಿಯನ್ನು ಎಲ್ಲರೂ ತಿಳಿದುಕೊಳ್ಳಲು ಕಾರಣವಾಯಿತು.
*ಉರಗ ತಜ್ಞ ಶ್ರೀ ಗುರುರಾಜ್ ಸನಿಲ್ ಬರೆಯುತ್ತಾರೆ...*
"ಜುರಾಸಿಕ್ ಯುಗದಲ್ಲಿ ಅಂದರೆ 16.5 ಕೋಟಿ ವರ್ಷಗಳ ಹಿಂದೆ ಸರೀಸೃಪಗಳಿಂದ ಪಕ್ಷಿಗಳು ವಿಕಾಸಗೊಂಡ ಜೀವಿಗಳು. ನವಿಲು, ಕೋಳಿಗಳಂಥ ಪಕ್ಷಿಗಳ ಕಾಲುಗಳಲ್ಲಿರುವ ಹಾವಿನ ಹುರುಪೆಗಳಂಥ ಚರ್ಮವು ಇದಕ್ಕೆ ಪುಷ್ಟಿ ನೀಡುತ್ತದೆ" ಎಂದು ವಿಜ್ಞಾನ ಹೇಳುತ್ತದೆ. ಇದು ಕೋಟ್ಯಾಂತರ ವರ್ಷಗಳ ನಿರಂತರ ವಿಕಾಸ ಪ್ರಕ್ರಿಯೆಯಲ್ಲಿ ನಡೆದಿರುವಂಥ ಸಂಗತಿ.
ಚಿತ್ರ ಮಾಹಿತಿಯಲ್ಲಿ ತೋರಿಸಿರುವುದು: ಕಾಜಾಣ ಹಕ್ಕಿ ಅಥವಾ ಭೀಮರಾಜ ಹಕ್ಕಿ-greater racket- tailed drongo.(dicrurus paradiseus) ಇವುಗಳಲ್ಲಿ ಕೆಲವು ಪ್ರಭೇದಗಳಿವೆ. ಈ ಪಕ್ಷಿಗಳು ವಿವಿಧ ಸ್ವರಗಳನ್ನು ಎಬ್ಬಿಸುವುದರೊಂದಿಗೆ ಅಪಾಯ ಸೂಚಕ ಧ್ವನಿಗಳನ್ನೂ ಹೊರಡಿ ಕಾಡಿನ ಜೀವಜಾಲಗಳನ್ನು ಶತ್ರುಗಳಿಂದ ರಕ್ಷಿಸುವ ಕಾರ್ಯ ಮಾಡುತ್ತವೆ. ಆದ್ದರಿಂದ ಇವನ್ನು "ಕಾಡಿನ ಕಾವಲುಗಾರ" ಪಕ್ಷಿಗಳೆಂದು ಕರೆಯಲಾಗುತ್ತದೆ.
ಆದರೆ ಈ ಪಕ್ಷಿಗಳ ಮೊಟ್ಟೆಗಳಿಂದ ಮರಿಪಕ್ಷಿಗಳೇ ಹುಟ್ಟುತ್ತವೆಯಲ್ಲದೇ ಹಾವುಗಳು ಜನಿಸುತ್ತವೆ ಎಂಬುದು ತಪ್ಪು ಮಾಹಿತಿ. ಕೆಲವೊಮ್ಮೆ ಈ ಪಕ್ಷಿಗಳ ಮೊಟ್ಟೆಗಳನ್ನು ಕಬಳಿಸಲು "ಹಾರುವ ಹಾವು"( golden tree snake or flying snake....chrysopelea ornata)ಗಳು ಗೂಡಿಗೆ ನುಸುಳುವುದಿದೆ.
ಈ ಹಾವುಗಳು ಪಕ್ಕನೆ ನೋಡುವಾಗ ಕಾಳಿಂಗ ಸರ್ಪದ ಮರಿಗಳನ್ನು ಹೋಲುವುದರಿಂದಲೂ ಮೇಲಿನ ನಂಬಿಕೆ ಹುಟ್ಟಿಕೊಂಡಿರಬಹುದು. ಹೆಡೆಯುಳ್ಳ ಹಾವುಗಳು ತಮ್ಮ ತಲೆಯಿಂದ ದೇಹದ ಮೂರನೆಯ ಒಂದು ಭಾಗದವರೆಗೆ ಮಾತ್ರ ಹೆಡೆಯನ್ನು ಹೊಂದಿರುತ್ತವೆ.
- ಶ್ರೀರಾಮ ದಿವಾಣ