ಭೀಮೇಶ್ವರದ ತುಪ್ಪದ ಕೊಡ

ಭೀಮೇಶ್ವರದ ತುಪ್ಪದ ಕೊಡ

ಭೀಮೇಶ್ವರದ ತುಪ್ಪದ ಕೊಡ :
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮರಗುಡಿ ಸೀಮಾ ವ್ಯಾಪ್ತಿಯ, ಕಾರ್ಗಲ್ - ಭಟ್ಕಳ ಮಾರ್ಗದ ಶರಾವತಿ ಅಭಯಾರಣ್ಯ ದಟ್ಟ ಕಾನನದ ನಡುವೆ ಅವಿತುಕೊಂಡಿದ್ದ ಭೀಮಲಿಂಗೇಶ್ವರ ದೇವಾಲಯ ಇತ್ತೀಚೆಗೆ ನಾಡಿನಾದ್ಯಂತ ತನ್ನನ್ನು ತೆರೆದುಕೊಳ್ಳುತ್ತಿದೆ.
ಒಂದು ಕಾಲದಲ್ಲಿ ಅಂದರೆ ಸುಮಾರು 15ವರ್ಷಗಳ ಹಿಂದಿನ ವರೆಗೂ ಈ ದೇವಾಲಯ ನಾಡಿಗೆ ಅಜ್ಷಾತವಾಗಿಯೆ ಇದ್ದು ಸುತ್ತ ಮುತ್ತಲಿನ ಜನರಿಗೆ ಮಾತ್ರಾ ಚಿರಪರಿಚಿತವಾಗಿತ್ತು. ಮರಗುಡಿ ಸೀಮೆಯ ಜನರೆಲ್ಲರ ಆರಾಧ್ಯ ದೈವವಾದ ಭೀಮಲಿಂಗೇಶ್ವರನಿಗೆ ವರ್ಷದಲ್ಲಿ ಶಿವರಾತ್ರಿ ಸಂದರ್ಭದಲ್ಲಿ ಮಾತ್ರಾ ಪೂಜೆ ನಡೆಯುತ್ತಿತ್ತು. ಶಿವರಾತ್ರಿ ಸಂದರ್ಭದಲ್ಲಿ ಪೂಜೆ, ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿದ್ದವು. ಈಗ ನಿತ್ಯವೂ ಪೂಜೆ ನಡೆಯುತ್ತದೆ. ಖಾಯಂ ಅರ್ಚಕರಿದ್ದಾರೆ, ಭಕ್ತಾದಿಗಳೂ ಇದ್ದಾರೆ.


ಇಲ್ಲಿ ಲಕ್ಷ್ಮಣನ ಬಾಣದಿಂದ ಉದ್ಭವಿಸಿದೆ ಎನ್ನಲಾದ ಸರಳ ಹೊಳೆ ಇದೆ. ತಾಟಕಾ ವನ ಇದೆ ಹೀಗೆ ರಾಮಾಯಣಕ್ಕೆ ತಳುಕು ಹಾಕುವ ಅನೇಕ ವೈಶಿಷ್ಟ್ಯಗಳೂ, ಮಹಾಭಾರತಕ್ಕೆ ತಳುಕು ಹಾಕುವ ಪಾಂಡವ ಸಂಬಂಧಿ ಕಥೆಗಳೂ ಇಲ್ಲಿ ಹರಿದಾಡುತ್ತವೆ. ಹಾಗೆಯೇ ಈ ಬಗ್ಗೆ ಅನೇಕ ಲೇಖನಗಳೂ ಬಂದಿವೆ.


ಆದರೆ ಇದೆಲ್ಲಕ್ಕೂ ಮಿಗಿಲಾಗಿ ನಾವು ಚಿಕ್ಕವರಿದ್ದಾಗಲೂ
(ಅಂದರೆ ಸುಮಾರು 50ವರ್ವಕ್ಕೂ ಹಿಂದಿನಿಂದ) ಕೇಳಿಸಿಕೊಂಡ ವೈಶಿಷ್ಯ್ಯವಿದೆ. ಅದೇ ಭೀಮೇಶ್ವರದ ತುಪ್ಪದ ಕೊಡ! ಈ ಹಿಂದೆ ಭೀಮೇಶ್ವರಕ್ಕೆ ಹೋಗಿದ್ದರೂ ಈ ಬಗ್ಗೆ ನನಗೆ ಜ್ಞಾಪಕವಿಲ್ಲದೇ ಗಮನ ಹರಿಸಿರಲಿಲ್ಲ. ಈ ಬಾರಿ (15-1-2011) ಅದೇಕೋ ದೇವಾಲಯದ ಒಳಗೆ ಪ್ರವೇಶಿಸಿದಾಗ ಅದು ನೆನಪಾಗಿ ಅದನ್ನು ಹುಡುಕಿದಾಗ ಅದು ತನ್ನಷ್ಟಕ್ಕೆ ತಾನು ಒಂದು ಮೂಲೆಯಲ್ಲಿ ಕಲ್ಲಿನ ಮೇಲೆ ಕುಳಿತಿತ್ತು. ಅದನ್ನು ನನ್ನ ಕ್ಯಾಮರಾದಲ್ಲಿ ಕ್ಲಿಕ್ಕಿಸಿ ಇದರೊಡನೆ ಇಟ್ಟಿದ್ದೇನೆ.


ಈ ತುಪ್ಪದ ಕೊಡ ನಾನು ಕೇಳಿದ್ದಕ್ಕಿಂತಲೂ ಹಿಂದಿನಿಂದಲೂ ಸಂರಕ್ಷಿಸಿಕೊಂಡು ಬರಲಾಗಿದೆ. ಅಷ್ಟು ಹಿಂದಿನಿಂದಲೂ (ಎಷ್ಟು ಎಂದು ನನಗೂ ಗೊತ್ತಿಲ್ಲ - ನನಗೆ ಹೇಳಿದವರಿಗೂ ಗೊತ್ತಿಲ್ಲ) ಇರುವ ಇದರಲ್ಲಿರುವ ತುಪ್ಪ ಜನ ಜಾನುವಾರುಗಳಿಗೆ ನೀಡುವ ನಾಟಿ ವೈದ್ಯದಲ್ಲಿ ಬಳಕೆಯಾಗುತ್ತಿದೆ. ಎನ್ನುವುದೇ ಇದರ ವೈಶಿಷ್ಟ್ಯ. ಸುತ್ತಮುತ್ತಲಿನ ಜನ - ಜಾನುವಾರುಗಳು ಕೈ - ಕಾಲುಗಳ ಮೂಳೆ ಮುರಿದುಕೊಂಡಾಗ ಅದರ ಚಿಕಿತ್ಸೆಗಾಗಿ ನೀಡುವ ನಾಟಿ ವೈದ್ಯದಲ್ಲಿ ಈ ತುಪ್ಪವೇ ಶ್ರೇಷ್ಟ ಎಂದು ಹೇಳುತ್ತಾರೆ.
ಔಷಧಕ್ಕಾಗಿ ಈ ತುಪ್ಪದ ಅವಶ್ಯಕತೆ ಇರುವವರು ತಮಗೆ ಬೇಕಾಗಬಹುದಾದಷ್ಟು ಪ್ರಮಾಣದ ಆಕಳ ಹಾಲಿನ ತುಪ್ಪವನ್ನು ಕೊಂಡೊಯ್ದು ಅದೇ ಪ್ರಮಾಣದ ತುಪ್ಪವನ್ನು ಕೊಡದಿಂದ ತೆಗೆದುಕೊಂಡು ತಾವು ತಂದಿರುವ ಆಕಳ ಹಾಲಿನ ತುಪ್ಪವನ್ನು ಆ ಕೊಡಕ್ಕೆ ಸುರಿದು ಬರುವುದು ವಾಡಿಕೆ. ಹೀಗೆ ಅನೇಕ ವರ್ಷಗಳ ಹಳೆಯ ತುಪ್ಪವಾಗಿ ಮಾರ್ಪಟ್ಟ ಈ ತುಪ್ಪವನ್ನು ವನಸ್ಪತಿಯಿಂದ ತಯಾರಿಸಿದ ಔಷಧಕ್ಕೆ ಸೇರಿಸಿ ಮಿಲಾಕತ್ ಮಾಡಿ ಮೂಳೆ ಮುರಿತಕ್ಕೊಳಗಾದ ಜನ-ಜಾನುವಾರುಗಳಿಗೆ ತಿನ್ನಿಸುವ ಪದ್ಧತಿ ಇಂದಿಗೂ ಈ ಪ್ರದೇಶದಲ್ಲಿ ಇದೆ.


ಜನರೂ ಸಹ ಇಂದಿನ ಆಸ್ಪತ್ರೆ ಔಷಧಕ್ಕೆ ಮೊರೆ ಹೋಗಿದ್ದರೂ ಸಹ ಅದಕ್ಕೆ ಸಮಾನಾಂತರವಾಗಿ ಈ ಔಷಧ ಮಾಡುವುದರಿಂದ ಶೀಘ್ರವಾಗಿ ಗುಣ ಹೊಂದಬಹುದೆಂದು ಹೇಳುತ್ತಾರೆ
ಈ ಬಾರಿ ಭೀಮೇಶ್ವರದಲ್ಲಿ ಸ್ಥಳೀಯ ಆಡಳಿತ ಮಂಡಳಿಯವರು 2011ರ ಮಾರ್ಚ್ ತಿಂಗಳ 2ನೇ ತಾರೀಖಿನಿಂದ 8ದಿನಗಳ ಕಾಲ ಸಾಂಗ ಅತಿರುದ್ರ ಮಹಾಯಾಗವನ್ನೂ ಹಮ್ಮಿಕೊಂಡಿರುತ್ತಾರೆ. ಆಸಕ್ತರೆಲ್ಲರಿಗೂ ಆಹ್ವಾನವಿತ್ತಿದ್ದಾರೆ. ತನು-ಮನ- ಧನದ ಸಹಕಾರ ಕೋರಿದ್ದಾರೆ.

Comments