ಭುವನೇಶ್ವರಿ ನಾಡೊಳು

ಭುವನೇಶ್ವರಿ ನಾಡೊಳು

ಸ್ವತಂತ್ರ ಮಾತೆಯ ನಲ್ಮೆಯ ಪುತ್ರರೆ

ಬನ್ನಿರಿ ತನ್ನಿರಿ ಸಿರಿಮಾಲೆ

ಭಾರತ ಮಾತೆಯ ಹೆಮ್ಮೆಯ ಕೊರಳಿಗೆ

ತೊಡಿಸಿರಿ ಇಂದು ಜಯಮಾಲೆ

 

ಕವಿಗಳ ಯತಿಗಳ ಶಿಲ್ಪಿಗಳೆಲ್ಲರು

ಉನ್ನತ ಸಂಸ್ಕೃತಿ ಮೆರೆದಿರುವ

ಕಾಳಿ ಕಾವೇರಿ ತುಂಗೆ ಶರಾವತಿ

ಜಲನಿಧಿ ಸಂಪದ ನೆಲೆಸಿರುವ

 

ದೇವರ ಸೃಷ್ಟಿಯ ಚೆಲುವಿನ ಸಾಗರ

ದೇಶದಲಿರುವುದೆ ಸಂತಸವು

ದೇಶದ ಮಣ್ಣಲಿ ಚಿನ್ನದ ಗೆರೆಗಳ 

ಕಾಣುವುದೆಮ್ಮಯ ಭಾಗ್ಯವು

 

ನಮ್ಮಯ ನಡೆಯಲಿ ನಮ್ಮಯ ನುಡಿಯಲಿ

ಹರಿಯಲಿ ಅನುದಿನ ಸಂಸ್ಕೃತಿಯು

ಭೂರಮೆ ಶ್ರೀ ಭುವನೇಶ್ವರಿ ಹರಸಿರೆ

ನಮ್ಮಯ ಏಳಿಗೆ ಖಂಡಿತವು

 

ಒಂದೇ ಮನದಲಿ ನಾವೆಲ್ಲರೊಂದೆ

ನಿರಂಜನ ಮಕ್ಕಳು ಎನ್ನೋಣ

ತಾಯಿಯ ಪ್ರೇಮದ ಕುವರರು ಎನ್ನುತ

ನಲಿಯುತ ದೇಶದಿ ಬಾಳೋಣ

(ನನ್ನ “ಸಾರಿದಂತೆ ಸಾಗುತಿರಲಿ” ಕವನ ಸಂಕಲನದಲ್ಲಿದೆ)

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ