ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
ವಿಚಿತ್ರವಾದ ಕನಸು..ಅದು ನಿಜವಾಗ್ಲೂ ಕನಸೋ ಅಲ್ಲವೋ ಅನ್ನೋ ಅನುಮಾನ ನನಗಿದ್ದೇ ಇದೆ.
ಎಂದಿನಂತೆ ಮಕ್ಕಳನ್ನ ಮಲಗಿಸಿ ಯಾವುದೋ ಪುಸ್ತಕದ ಎರಡು ಪುಟಗಳನ್ನ ಓದಿ ನಿದ್ದೆ ಮಾಡಿದ್ದೆ. ಯಾವುದೋ ಪುಸ್ತಕ ಅಂದ ಮಾತ್ರಕ್ಕೆ ಕೈಗೆ ಸಿಕ್ಕಿದ್ದು ಅಂತ ನೀವು ತಿಳ್ಕೋಬಾರದು.ಈ ವಿಷಯದಲ್ಲಿ ನಾನು ತುಂಬಾ ಕಟ್ಟುನಿಟ್ಟು. ಶುಭ ಯೋಚನೆ ಶುಭ ನಿರೀಕ್ಷೆಗಳನ್ನೇ ತಲೆದಿಂಬಾಗಿಸಿ;ಬೆಳಗ್ಗೆ ಉತ್ಸಹದಿಂದ ಏಳುವಿರಿ ಅನ್ನೋ ಮಾತಿನ ಮೇಲಿರೋ ವಿಶ್ವಾಸದಿಂದಲೋ ಅಥವಾ ಯಂಡಮೂರಿಯಿಂದ ಸ್ಟೀವನ್ ಕಿಂಗ್ ತನಕ ಪಬ್ಲಿಷ್ ಆಗಿರುವ ಭೂತದ ಕಥೆಗಳನ್ನೆಲ್ಲ ಅವ್ಯಾಹತವಾಗಿ ಓದಿ ನೈಟ್ಮೇರ್ ತಾಳಲಾಗದ ನನ್ನ ಸುಪ್ತ ಮನಸ್ಸು ಕೊಟ್ಟ ಗುಪ್ತ ಸೂಚನೆಯಿಂದಲೋ ಅಂತೂ ಈಗ.... ಮಲಗೊಕೆ ಮುಂಚೆ ನನ್ನ ಮಸ್ತಕಕ್ಕೆ ಹಿತವಾಗುವಂತಹ ಪುಸ್ತಕಗಳನ್ನೇ ಓದೋದು.
ಹಾಯಾಗಿ ನಿದ್ದೆ ಮಾಡ್ತಾ ಇರಬೇಕಾದ್ರೆ ಏನೋ ಸದ್ದಾಗಿ ಎಚ್ಚರವಾದಂತಾಯ್ತು. ನನ್ನ ಮಂಚದ ಕಾಲ ಹತ್ತಿರ ಚೌಕಳಿ ಶರಟು ಧರಿಸಿದ ಯಾವನೋ ಒಬ್ಬ ನಿಂತು ಚಪ್ಪಾಳೆ ತಟ್ಟಿ ನನ್ನನ್ನೆಬ್ಬಿಸುತ್ತಾ ಏನೋ ಹೇಳ್ತಾ ಇದಾನೆ. ನಮ್ಮ ಸೂಟ್ ಕೇಸು ಬಟ್ಟೆ ಬರೆ ಹರಡಿದ್ದ ಇನ್ನೊಂದು ರೂಮಿನ ಮಂಚದ ಕಡೆ ಕೈತೋರಿಸಿ ತಾನು ಮಲಗೋ ಜಾಗ ಅಂತ ಅಸಹನೆ ತೋರಿಸ್ತಾ ಕಂಪ್ಲೇಂಟ್ ಮಾಡ್ತಾ ಇದಾನೆ ಅಂತ ನನಗೆ ಗೊತ್ತಾಯಿತು ಅಥವ ಅನ್ನಿಸಿತು.ಆತ ಮಂಚದ ಪಕ್ಕದ ಗೋಡೆಗೆ ಆತುಕೊಂಡು ಬರೀ ಪುಸ್ತಕಗಳನ್ನ ಇಟ್ಟಿದ್ದ ಕಪಾಟಿನ ಪಕ್ಕ ಬಂದ ಹಾಗೆ ಏನೋ ಸರಪರ ಸದ್ದುಮಾಡಿ ನನ್ನ ಎಬ್ಬಿಸಲು ಪ್ರಯತ್ನಿಸಿದ ಅನ್ನೋದ್ರಲ್ಲಿ ನನ್ನ ಕನಸು ಮುಗಿದಿತ್ತು.
ಮರು ದಿನ ಎಲ್ಲೋ ಹೊರ ಹೊರಟಾಗ ನನ್ನ ಸುಪುತ್ರ ಪುಸ್ತಕದ ಕಪಾಟಿನ ಕೆಳಗಿನ ಶಲ್ಫಿಂದ ಅವನ jacketನ ತೆಗೆದು ಹಾಕಿಕೊಂಡ.ಕನಸಲ್ಲಿ ಕೇಳಿದ ಸರಪರ ಶಬ್ದಕ್ಕೂ ಪಾಲಿಸ್ಟರ್ ಜೇಕೆಟ್ ಉಜ್ಜಿದಾಗ ಮಾಡೋ ಸದ್ದಿಗೂ ತಾಳೆ ಹಾಕಿ ನನಗೆ ಅಚ್ಚರಿಯಾಯ್ತು.ಜೇಕೆಟ್ ಅಲ್ಲಿದೆ ಅಂತ್ಲೇ ನನಗೆ ಗೊತ್ತಿರಲಿಲ್ಲ.ನಿಜವಾಗ್ಲೂ ನಾ ಕಂಡಿದ್ದು ಕನಸೇನಾ ಅಥವಾ....ಇಲ್ಲ ಏನೋ ಲಾಜಿಕಲ್ ವಿವರಣೆ ಇದ್ದೇ ಇರತ್ತೆ ಅಂದ್ಕೊಂಡೆ. ಪತಿರಾಯರಿಗೆ ಹೇಳುವ ಚಪಲವಾದರೂ ...ಆಮೇಲೆ ನನಗೆಂದೇ ಅವರು ರಾತ್ರಿ ಹೊತ್ತು ಪ್ರೀತಿಯಿಂದ 'ಆಯೇಗ..ಆಯೇಗ' ಅಂತ ಹಾಡೇ ಹಾಡುವ ಜೋಗುಳದ ಕಲ್ಪನೆಯಿಂದ ಸುಮ್ಮನಾದೆ.
ಇನ್ನೊಂದೆರಡು ದಿನ ಅಯ್ತು. ಸರಿ ರಾತ್ರಿ ಹಸಿವಾದಂತಾಗಿ ಹಾಲು ಬಿಸಿ ಮಾಡಿ ಲಿವಿಂಗ್ ರೂಮಲ್ಲಿ ಕೂತ್ಕೊಂಡು ಒಬ್ಬಳೇ ಗುಟಕರಿಸ್ತಾ ಇದ್ದೆ.ಚೌಕಳಿ ಶರಟಿನ ತುದಿಯೊಂದು ಎದುರಿನ ಸೋಫ ಮೇಲೆ ಅರೆಘಳಿಗೆ ಸ್ಪಷ್ಟವಾಗಿ ಕಂಡೇಬಿಡುವುದೇ..! ನನ್ನ ಕಣ್ಣನ್ನೇ ನಾನು ನಂಬ್ಲಿಲ್ಲ.ಭೂತ ಕನ್ನಡಿ ಹಿಡ್ಕೊಂಡು ಪುಟ್ಟ ಲಿವಿಂಗ್ ರೂಮಿನ ಇಂಚಿಂಚು ಜಾಲಾಡಿದೆ ಚೌಕಳಿ ಡಿಸೈನಿಂದು ಏನಾದ್ರು ಕಾಣತ್ತಾ ಅಂತ.. ಏನೂ ಇಲ್ಲ! ಈಗ ನನಗೆ ನಿಜವಾಗ್ಲೂ ಗಾಭರಿಯಾಯ್ತು "ಇದೇನಪ್ಪ ಇದು ಶಿವನೇ ಹಾಲೂಸಿನೇಶನ್ ಶುರುವಾಯ್ತಲ್ಲಾ ಏನಾದ್ರೂ ಹುಚ್ಚು ಗಿಚ್ಚು ಹಿಡಿತಾ ಇದೆಯಾ?" 'ರಾಶಿ'ಯವರ 'ಮನ ಮಂಥನ'ದಲ್ಲಿ ಓದಿದ್ದ ಎಲ್ಲಾ ಮನೋ ರೋಗಗಳ ಸಿಂಟಂಸ್ ಬಂದಂತಾಗಿ ಮುಸುಕು ಹೊದ್ದು ದಿಂಬಿನಡಿಯಲ್ಲಿ ತಲೆ ತೂರಿಸಿ ಮಲಗಿದೆ.
ಯಾವ ಮುಜುಗರವಿಲ್ಲದೆ ಆಪ್ತವಾಗಿ ಮತಾಡಬಲ್ಲ ಗೆಳತಿಯರ ಹತ್ತಿರ ಈ ವಿಷಯ ಪ್ರಸ್ತಾಪಿಸಿದೆ. ಪಾಪಿಗಳು...ಅವಳು ಹಾಗೆ ಅಂದ್ಲೂ ಅಂತ ಇವಳು ಹೀಗೆ ಕೊರಳು ಕುಯ್ಯಬಹುದೇ ಅಂತೆಲ್ಲ ತರಳೆಯರ ಪಾಲಿಟಿಕ್ಸ್ನ ಹೆರಳು ಕಿತ್ಕೊಂಡು ಗಂಟೆಗಟ್ಲೇ ಚರ್ಚಿಸುವುದಕ್ಕಿಷ್ಟ ಪಡೋರು.. ನನ್ನ ಮಾತಿಂದ ಸ್ವಲ್ಪವೂ ಉತ್ತೇಜಿತರಾಗದೆ ಕಣ್ಣು ತೋರಿಸ್ಕೋ..ಸ್ಟ್ರೆಸ್ಸು ಅಂತ ಕಾಣತ್ತೆ...ಕ್ರಿಯೇಟಿವ್ ಆಗಿ ಏನಾದ್ರೂ ಮಾಡು ಅನ್ನೋ ಕೆಲಸಕ್ಕೆ ಬಾರದ ಸಲಹೆಗಳನ್ನ ಕೊಟ್ಟು ಸುಮ್ಮನಾದರು.ಒಬ್ಬಳೇ ಮಾಡಲು ಧೈರ್ಯವಿಲ್ಲದೆ ಸ್ನೇಹಿತರ ಜೊತೆಗೂಡಿ ಆ para normal ಡಿಟೆಕ್ಟಿವ್ಸ್ ಮಾಡೋ ತರ ಎಲೆಕ್ಟ್ರೊ ಮೇಗ್ನೆಟಿಕ್ ಫೀಲ್ಡ್ ಮೀಟರ್ರು ಪ್ಲಾಂಚೆಟ್ ಬೋರ್ಡ್ಗಳ್ನ ತಂದು "ಗೋಸ್ಟ್ ಬಸ್ಟ್" ಮಾಡಿ ಟೀವಿಲಿ ಇಂಟರ್ವ್ಯೂ ಕೊಡೋತನಕ ಕಟ್ಟಿದ್ದ ಕನಸುಗಳೆಲ್ಲಾ ಮಣ್ಣು ಪಾಲಾಯ್ತು!
ಹಂಸಲೇಖರ ಹಾಡೊಂದನ್ನ ನನ್ನದೇ ರೀತೀಲಿ ಹಾಡಲಾರಂಭಿಸಿದೆ."ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ ಇರಬಹುದೇ?
ದೆವ್ವ ಇಲ್ಲ...ಕಪಾಲಿ ಇಲ್ಲ..ಕಣ್ಣಿಗೆ ಕಾಣ್ತಲ್ವೇ? ಈ ದ್ವಂದ್ವದಿಂದ ಈಚೆ ಬರಲಾಗದಿದ್ದರೂ ಅಂಜಿಕೆ ಅನ್ನೋ ಬೇತಾಳದಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕಾಗಿತ್ತು.
ಹಾಗೆ ಎಸ್ಕೇಪ್ ಅಗಲು ನನಗೆ ಸಹಾಯ ಮಾಡಿದ್ದು ಹಿಂದೆ ಓದಿದ್ದ ದೆವ್ವದ ಕಥೆಯೇ! ಹಾಂಟೆಡ್ ಮನೆಯೊಂದರಲ್ಲಿ ವಾಸ್ತವ್ಯ ಹೂಡೋ ಕಥೆಗಾರ ಅಲ್ಲಿದೆ ಎನ್ನಲಾದ ದೆವ್ವಕ್ಕೆ ಹೆದರದೆ ಅದನ್ನು ಅನುಕಂಪದಿಂದ ನೋಡ್ತಾ ಅದರ ತೊಂದರೆಗಳನ್ನು ಅರ್ಥ ಮಾಡ್ಕೊತಾ ಅಪಾಯವಿಲ್ಲದೇ ಗೆದ್ದು ಬರ್ತಾನೆ.ಆ ಕಥೆಯಿಂದ ನನಗೂ ಸ್ಫೂರ್ತಿ ಬಂದು ಯೋಚಿಸಿದೆ.ನಾವು ಇಲ್ಲಿಗೆ ಬಂದು ಕೆಲವೇ ದಿನಗಳಾಗಿದೆ.ಸುಮಾರು ದಿನಗಳಿಂದ ಖಾಲಿ ಇದ್ದ ಫರ್ನಿಷ್ಡ್ ಅಪಾರ್ಟ್ಮೆಂಟ್ನ ಯಾವುದೋ ಅಲೆಮಾರಿ ದೆವ್ವ ಹೋಮ್ಲೆಸ್ ಶೆಲ್ಟರ್ ಅಂದುಕೊಂಡು ಟೆಂಪರರಿಯಾಗೋ ಇಲ್ಲ ಪರ್ಮನೆಂಟಾಗೋ ಇರೋಕೆ ಶುರು ಮಾಡಿದೆ.ದಿಢೀರನೆ ನಾವು ಬಂದು ಅದರ ಸ್ಪೇಸ್ ಆಕ್ಯುಪೈ ಮಾಡಿದ್ರೇ ಅದಕ್ಕೆ ಬೇಜಾರಾಗದೆ ಮತ್ತಿನ್ನೇನು?..ಅದನ್ನೇ ಅಲ್ವೇ ಅದು ಹೇಳಕ್ಕೋಗಿದ್ದು...ಪಾಪ ಎಂತ ಜಂಟಲ್ಮನ್ ದೆವ್ವ. ಇಂತಹ ಸಂದರ್ಭಗಳಲ್ಲಿ ಅದರ ಜಾತಿಯವರು ಮಾಡುವ ಯಾವ ಕುತಂತ್ರವೂ ಮಾಡದೆ ಮಲಗಲೂ ಜಾಗವಿಲ್ಲದೆ ಲಿವಿಂಗ್ ರೂಮಿನ ಸೋಫ ಮೇಲೆ ಮಲಗಿ ಅಡ್ಜಸ್ಟ್ ಮಾಡ್ಕೊತಲ್ಲ!! ಅದರ ಉದಾರ ಮನೋಭಾವ ಕಂಡು ಕಣ್ಣಿಂದ ಎರಡು ಹನಿ ತೊಟ್ಟಿಕ್ಕಿತು.
ತಕ್ಷಣ ನಾವು ಉಪಯೋಗಿಸದ ಹಾಸಿಗೆಯ ಮೇಲೆ ಹರಡಿದ್ದನ್ನೆಲ್ಲ ಸರಿಸಿ ನೀಟಾಗಿ ಬೆಡ್ ಶೀಟ್ ಹಾಸಿ ಅಣಿ ಮಾಡಿಟ್ಟೆ..ಹಾಗೆ ನಾವು ಅಲ್ಲಿದ್ದ ತನಕ ಮೇಂಟೇನ್ ಮಾಡ್ಕೊತಾ ಬಂದೆ. ಮತ್ತೇನು ಯಾರು ಕಂಪ್ಲೇಂಟೂ ಮಾಡ್ಲಿಲ್ಲ ದರ್ಶನಾನೂ ಕೊಡ್ಲಿಲ್ಲ!!