ಭೂಮಿಗೆ ಪ್ಲಾಸ್ಟಿಕ್ ಹೊದಿಸಿ, ತರಕಾರಿ ಬೆಳೆ ಉಳಿಸಿ
ತರಕಾರಿಯಂತಹ ಅಲ್ಪಾವಧಿ ಬೆಳೆಗಳಿಗೆ ಬರುವ ಕಳೆ, ರೋಗ- ಕೀಟಗಳು ತಕ್ಷಣ ಭಾರೀ ಹಾನಿಯನ್ನುಂಟುಮಾಡುವ ಕಾರಣ ಅದರಿಂದ ರಕ್ಷಣೆ ಪಡೆಯಲು ಪ್ಲಾಸ್ಟಿಕ್ ಶೀಟು ಅಥವಾ ಮಲ್ಚಿಂಗ್ ಶೀಟು ಸಹಕಾರಿ. ಪ್ರತೀ ವರ್ಷವೂ ತರಕಾರಿ ಬೆಳೆಯುವವರಿಗೆ ಒಂದಿಲ್ಲೊಂದು ತೊಂದರೆ. ಭಾರೀ ಪ್ರಮಾಣದಲ್ಲಿ ಮಳೆ ಹೊಡೆತಕ್ಕೆ ಸಿಕ್ಕಿ ಬೆಳೆ ಹಾಳಾಗುತ್ತದೆ. ಬೇಸಿಗೆಯಲ್ಲಿ ನೀರಿನ ಕೊರತೆಯಾಗುತ್ತದೆ. ಕಳೆ ಬರುತ್ತದೆ. ಹುಳ ಬರುತ್ತದೆ. ಇದಕ್ಕೆಲ್ಲಾ ಮಲ್ಚಿಂಗ್ ಶೀಟು ಹಾಕಿ ಬೆಳೆದರೆ ಅಷ್ಟೊಂದು ಹಾನಿ ಇಲ್ಲ. ಕಾರಣ ಇಷ್ಟೇ. ಅಧಿಕ ತೇವಾಂಶವಾಗುವುದನ್ನು ತಡೆಯುತ್ತದೆ. ಹೆಚ್ಚು ನೀರು ಆವಿಯಾಗದಂತೆ ತಡೆಯುತ್ತದೆ. ಮಣ್ಣು ಜನ್ಯ ಕಳೆ, ಹುಳಗಳನ್ನೂ ನಿಯಂತ್ರಿಸುತ್ತದೆ. ನಿರ್ವಹಣೆ ಕಡಿಮೆಯಾಗಿ ಉಳಿತಾಯವಾಗುತ್ತದೆ.
ಬಹುತೇಕ ರೋಗಕಾರಕಗಳ ಚಟುವಟಿಕೆಗೆ ಮೂಲ ಕಾರಣ ಅಧಿಕ ತೇವಾಂಶ. ಜೊತೆಗೆ ಮಣ್ಣು. ಮಣ್ಣಿನಲ್ಲಿ ರೋಗಕಾರಕಗಳ ( Soil born pathogens) ಚಟುವಟಿಕೆ ಹೆಚ್ಚಿದರೆ ಅದು ಬೆಳೆಗೆ ಭಾರೀ ಹಾನಿಯನ್ನು ಉಂಟುಮಾಡುತ್ತದೆ. ಗಿಡ ಕೊಳೆಯುತ್ತದೆ. ಎಲೆ ಉದುರುತ್ತದೆ. ಕಾಯಿ ಕೊಳೆಯುತ್ತದೆ. ಇಳುವರಿ ನಷ್ಟವಾಗುತ್ತದೆ. ಕೀಟಗಳೂ ಹೆಚ್ಚುತ್ತವೆ. ಅದನ್ನು ಹದ್ದುಬಸ್ತಿನಲ್ಲಿ ಇಡಲು ಮಣ್ಣನ್ನು ಬೆಚ್ಚಗೆ ಮತ್ತು ಅಧಿಕ ತೇವಾಂಶ ಉಂಟಾಗದಂತೆ ತಡೆಯಬೇಕು. ಇದಕ್ಕೆ ಹೊದಿಕೆ ಬೇಕು. ಅಗ್ಗದಲ್ಲಿ ದೊರೆಯುವ ಹೊದಿಕೆ ಎಂದರೆ ಮಲ್ಚಿಂಗ್ ಶೀಟು.
ಏನೇನು ಅನುಕೂಲಗಳಿವೆ?: ದೊಡ್ದ ಪ್ರಮಾಣದಲ್ಲಿ ತರಕಾರಿ ಬೆಳೆಯುವವರೆಲ್ಲಾ ಈ ಕ್ರಮವನ್ನೇ ಅನುಸರಿಸುತ್ತಾರೆ. ಇದರಲ್ಲಿ ಮಣ್ಣು ಯಾವಾಗಲೂ ಬೆಚ್ಚಗೆ ಇರುತ್ತದೆ. ಮಣ್ಣಿಗೆ ಸೋಲರೈಸೇಶನ್ (Solarization ) ಉಂಟಾಗಿ ಕೀಟ, ರೋಗ ಕಡಿಮೆಯಾಗುತ್ತದೆ. ಕಳೆ ಬರುವುದಿಲ್ಲ.
ಉತ್ತರ ಕರ್ನಾಟಕದ ಬೀದರ್, ಬಿಜಾಪುರದ ಕೆಲವು ಭಾಗಗಳಲ್ಲಿ ಶುಂಠಿಯನ್ನು ಮಲ್ಚಿಂಗ್ ಶೀಟು ಹಾಕಿ ಬೆಳೆಯುತ್ತಾರೆ.
ಬೇಸಿಗೆಯಲ್ಲಿ ನೀರು ಗಣನೀಯವಾಗಿ ಕಡಿಮೆ ಸಾಕಾಗುತ್ತದೆ. ಚಳಿಗಾಲದಲ್ಲಿ ಚಳಿಯ ಹೊಡೆತ ಕಡಿಮೆಯಾಗುತ್ತದೆ. ನೀರು ಹೆಚ್ಚಾಗಲೂ ಬಿಡುವುದಿಲ್ಲ. ಆವೀಕರಣ ಇಲ್ಲದ ಕಾರಣ ಕಡಿಮೆಯೂ ಆಗುವುದಿಲ್ಲ. ಎಲೆಗಳಿಗೆ ಅಗತ್ಯವಾದ ಬಿಸಿಯೂ ಲಭ್ಯವಾಗುತ್ತದೆ. ಒಂದು ಚದರ ಮೀಟರು ಪ್ಲಾಸ್ಟಿಕ್ ಹೊದಿಕೆ (Mulching)ಮಾಡಲು ಸುಮಾರು ೩ ರೂ. ವೆಚ್ಚ ತಗಲುತ್ತದೆ.
೩ ರೂ. ಖರ್ಚಿಗೆ ೨೦ ರೂ. ಗಳಿಗೂ ಹೆಚ್ಚು ಪ್ರಯೋಜನವಾಗುತ್ತದೆ. ಇಂದು ಟೊಮಾಟೋ, ಕಲ್ಲಂಗಡಿ, ಹಾಗೆಯೇ ಎಲ್ಲಾ ನಮೂನೆಯ ತರಕಾರಿ ಬೆಳೆಗಳು, ಮಾವು, ಪಪ್ಪಾಯ, ದಾಳಿಂಬೆ, ತೆಂಗು,ಅಡಿಕೆ, ಕರಿಮೆಣಸು ಮುಂತಾದ ಬೆಳೆಗಳಿಗೂ ಮಲ್ಚಿಂಗ್ ಶೀಟ್ ಬಳಸಲ್ಪಡುತ್ತಿದೆ.
ಸಸಿಗಳ ಬೇರು ಉತ್ತಮವಾಗಿ ಬೆಳೆಯಲು ಬೇರು ವಲಯಕ್ಕೆ ಬೆಚ್ಚಗೆ ಬೇಕು. ಅದು ಇದರಲ್ಲಿ ಲಭ್ಯವಾಗುತ್ತದೆ, ಸಸಿ ಸಧೃಢವಾಗುತ್ತದೆ. ಬೇಗ ಇಳುವರಿ ಬರುತ್ತದೆ, ಹೆಚ್ಚಿನ ಇಳುವರಿ ದೊರೆಯುತ್ತದೆ, ಫಸಲಿನ ಗುಣಮಟ್ಟವೂ ಉತ್ತಮವಾಗಿರುತ್ತದೆ.
ಮಲ್ಚಿಂಗ್ ಶೀಟು ಹೊದಿಕೆಯಿಂದ ಮಣ್ಣು ಕೊಚ್ಚಣೆ ಆಗುವುದಿಲ್ಲ, ನೀರು ಆವಿಯಾಗುವುದಿಲ್ಲ, ಗೊಬ್ಬರ ವ್ಯಯವಾಗುವುದಿಲ್ಲ. ಕಳೆ ಬರುವುದಿಲ್ಲ. ಯಾವುದೇ ಸಸಿ ಇರಲಿ, ಉತ್ತಮವಾಗಿ ಬೇರು ಬಿಟ್ಟು ಒಳ್ಳೆಯ ಫಸಲು ಕೊಡಬೇಕಿದ್ದರೆ ಮಣ್ಣು ಅದಕ್ಕೆ ಅನುಗುಣವಾಗಿ ಇರಬೇಕು. ಮಣ್ಣು ಬೆಚ್ಚಗಿದ್ದು, ಸದಾ ತೇವಾಂಶ ಇದ್ದರೆ ಸಸ್ಯ ಬೆಳವಣಿಗೆಗೆ ಅನುಕೂಲವಾಗುತ್ತದೆ.
ಹನಿ ನೀರಾವರಿ ಮಾಡುವಾಗ ಸುಮಾರು ೧೦೦೦ ರೂ ಖರ್ಚಿನಲ್ಲಿ ವೆಂಚುರಿ ಅಳವಡಿಸಿಕೊಂಡರೆ ಎಲ್ಲಾ ಗೊಬ್ಬರಗಳನ್ನು ನೀರಿನ ಜೊತೆಗೇ ಕೊಡಬಹುದು.
ಕಳೆ ನಿರ್ಮೂಲನೆ ಎಂಬ ಪ್ರಶ್ನೆಯೇ ಇಲ್ಲ. ಕಳೆ ಕೀಳುವ (Weed Control) ಖರ್ಚಿನಲ್ಲಿ ಮಲ್ಚಿಂಗ್ ಶೀಟು ದೊರೆಯುತ್ತದೆ. ಇನ್ ಲೈನ್ ಡ್ರಿಪ್ಪರಿಗೆ ಮೀಟರಿಗೆ ೨ ರೂ ನಿಂದ ೫ ರೂ ತನಕ ಇದೆ. ಯಾವ ತೊಂದರೆಯೂ ಇರುವುದಿಲ್ಲ:
ತರಕಾರಿ ಬೆಳೆಸುವವರು ಇದನ್ನು ಅಳವಡಿಸಿಕೊಂಡರೆ ತುಂಬಾ ಲಾಭವಿದೆ. ಇದನ್ನು ವಿಲೇವಾರಿ ಮಾಡುವುದು ಒಂದು ಸಮಸ್ಯೆ ಹೌದು. ಅದಕ್ಕೆ ಸ್ವಲ್ಪ ಉತ್ತಮ ಗುಣಮಟ್ಟದ ಹೆಚ್ಚು ಸಲ ಬಳಕೆ ಮಾಡಬಹುದಾದ ಶೀಟುಗಳನ್ನು ಖರೀದಿ ಮಾಡಬೇಕು.
ಬೆಂಗಳೂರಿನ ಹೇಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಈ ರೀತಿ ಪ್ಲಾಸ್ಟಿಕ್ ಹೊದಿಸಿ ಬೆಳೆ ಪ್ರಾತ್ಯಕ್ಷಿಕೆ ಮಾಡುತ್ತಾರೆ. ಇದನ್ನು ನೋಡಿ ನೂರಾರು ಜನ ಈ ರೀತಿ ತರಕಾರಿ ಬೆಳೆಯುತ್ತಿದ್ದಾರೆ ಎನುತ್ತಾರೆ ಇಲ್ಲಿಯ ವಿಜ್ಞಾನಿಗಳು. ಹೊಲವನ್ನು ಉಳುಮೆ ಮಾಡಿ ಸಾಲುಗಳನ್ನು ಮಾಡಿ ಅದರ ಮೇಲೆ ಹಾಕಿ ಬದಿಗಳನ್ನು ಹಾರದಂತೆ ಸ್ವಲ್ಪ ಮಣ್ಣು ಹಾಕಲಾಗುತ್ತದೆ. ಈಗ ಇದಕ್ಕೆ ಯಂತ್ರಗಳೂ ಬಂದಿವೆ.
ಸಾಲಿನ ಮಧ್ಯೆ ಹನಿ ನೀರಾವರಿಯ ಇನ್ ಲೈನ್ ಡ್ರಿಪ್ಪರ್ ಅನ್ನು ಕೊಳವೆಯನ್ನು ಹಾಕಿ ಬೆಳೆಸಬೇಕು ಅಥವಾ ಸೀಡ್ ಟ್ರೇಗಳಲ್ಲಿ ತಯಾರಿಸಲಾದ ಸಸಿಗಳನ್ನು ಅಲ್ಲಿ ನೆಡಲಾಗುತ್ತದೆ. ಅಗತ್ಯ ಬಿದ್ದಾಗ ಗೊಬ್ಬರಗಳನ್ನು (ದ್ರವರೂಪದಲ್ಲಿರುವ) ಇದೇ ತೂತಿನ ಮೂಲಕ ಎರೆಯಬಹುದು.
ಇಳುವರಿಯೂ ಅಧಿಕವಾಗುತ್ತದೆ. ಬಿತ್ತಿದ ಬೀಜಗಳೂ ಸಹ ಉತ್ತಮವಾಗಿ ಮೊಳೆಯುತ್ತವೆ. ಇವು ಯು ವಿ ಪ್ರತಿಭಂಧಕ ಶೀಟುಗಳಾಗಿದ್ದು ಬಿಸಿಲಿಗೆ ಹಾಳಾಗಲಾರವು. ಮಲ್ಚಿಂಗ್ ಶೀಟು ತರಿಸುವಾಗ ಅಳತೆಗೆ ಅನುಗುಣವಾಗಿ ತೂತು ಇದ್ದುದನ್ನೇ ತರಿಸಿದರೆ, ನಾವು ತೂತು ಮಾಡುವ ಕೆಲಸ ಇಲ್ಲ.
ಮಲ್ಚಿಂಗ್ ಶೀಟುಗಳ ಬಗ್ಗೆ: ಯಾವುದೇ ಒಂದು ತಂತ್ರಜ್ಞಾನ ಹೆಚ್ಚು ಜನಪ್ರಿಯವಾದಂತೆ ಅದರ ಅನುಕೂಲ ಪಡೆಯಲು ಕೆಲವರು ಬೇರೆ ಬೇರೆ ಮಾರ್ಗಗಳನ್ನು ಅನುಸರಿಸುತ್ತಾರೆ. ಮಲ್ಚಿಂಗ್ ಶೀಟು ವಿಚಾರದಲ್ಲೂ ಹಾಗೆಯೇ ಅಗಿದೆ. ನಮ್ಮ ರಾಜ್ಯದಲ್ಲೇ ನೂರಾರು ಜನ ಮಲ್ಚಿಂಗ್ ಶೀಟು ತಯಾರಕರಿದ್ದು, ಕೆಲವರು ಕಿಲೋ ಲೆಕ್ಕದಲ್ಲೂ ಮತ್ತೆ ಕೆಲವರು ಮೀಟರು ಲೆಕ್ಕದಲ್ಲೂ ಕೊಡುತ್ತಾರೆ.
ಇದು ೨ ಅಡಿ, ೨.೫ ಅಡಿ, ೧ ಮೀ. ೧.೨೫ ಮೀ ಹೀಗೆ ೨೦-೨೫ -೩೦ ಮೈಕ್ರಾನ್ ದಪ್ಪದಲ್ಲಿ ಲಭ್ಯವಿದೆ. ಬೇಡಿಕೆಯ ಮೇಲೆ ಬೇರೆ ದಪ್ಪದಲ್ಲೂ ಲಭ್ಯ. ಅದೇ ರೀತಿಯಲ್ಲಿ ಆಂಟೀ ವೀಡ್ ಮಾಟ್ ಎಂಬುದೂ ಇದೆ. ಕಿಲೋಗೆ ೧೦೦-೧೫೦ ರೂ ತನಕವೂ ಮೀಟರಿಗೆ ೩-೪ ರೂ ತನಕವೂ ಇರುತ್ತದೆ. ಕಿಲೋ ತೂಕದ್ದು ಸಾಮಾನ್ಯವಾಗಿ ರೀ- ಸೈಕಲ್ಡ್ ಆಗಿರುತ್ತದೆ. ತೂಕ ಹೆಚ್ಚು ಬರುತ್ತದೆ. ಬೆಲೆ ಕಡಿಮೆ ಇರುತ್ತದೆ. ಕಡಿಮೆ ಪ್ರದೇಶಕ್ಕೆ ಸಾಕಾಗುತ್ತದೆ. ಶುದ್ಧ ಸಾಮಾಗ್ರಿಯಲ್ಲಿ ತಯಾರಿಸಲ್ಪಟ್ಟ ಶೀಟುಗಳು ತೂಕ ಕಡಿಮೆ, ಉದ್ದ ಹೆಚ್ಚು. ಅಧಿಕ ಜಾಗಕ್ಕೆ ಬರುತ್ತದೆ. ಬೆಲೆ ಹೆಚ್ಚೆಂದು ಕಂಡರೂ ಲಾಭವಿದೆ. ಜನ ತಿಳುವಳಿಕೆ ಇಲ್ಲದೆ ಕಿಲೋ ಲೆಕ್ಕಾಚಾರದಲ್ಲಿ ದೊರೆಯುವುದನ್ನು ಅಗ್ಗ ಎಂದು ಖರೀದಿಸುತ್ತಾರೆ. ವಾಸ್ತವವಾಗಿ ೮೦೦ ಮೀಟರು ಉದ್ದದ ಬಂಡಲ್ ಸುಮಾರು ಮುಕ್ಕಾಲು ಎಕ್ರೆಗೆ ಕವರ್ ಮಾಡಿದರೆ, ೨೦ ಕಿಲೋ ತೂಗುವ ಒಂದು ಬಂಡಲ್ ಅರ್ಧ ಎಕರೆ ಕವರ್ ಮಾಡುವುದಿಲ್ಲ.
ತರಕಾರಿ, ಹಾಗೆಯೇ ಇನ್ನಿತರ ಬೆಳೆಗಳಿಗೆ ಮಲ್ಚಿಂಗ್ ಶೀಟು ಹಾಕಿದರೆ ಕೆಲಸ ಕಡಿಮೆಯಾಗಿ ಲಾಭವಾಗುತ್ತದೆ. ಮಲ್ಚಿಂಗ್ ಶೀಟು ಹಾಕುವವರು ಕೆಲವು ಸೂಕ್ಷ್ಮ ವಿಚಾರಗಳನ್ನು ಅರಿತು ತಮ್ಮ ಬೀಳೆಗಳಿಗೆ ಬಳಕೆ ಮಾಡಿ ಅದರ ಬಗ್ಗೆ ನಿಖರ ಮಾಹಿತಿಯನ್ನು ಅರಿಯಬೇಕು.
(ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹ)