ಭೂಮಿಗೆ ಬಂದಿದೆ ಗ್ರಹಚಾರ (ಭಾಗ ೧)

ಭೂಮಿಗೆ ಬಂದಿದೆ ಗ್ರಹಚಾರ (ಭಾಗ ೧)

ಮಾನವ ತನ್ನ ಜೀವಿತಾವಧಿಯ ಕೇವಲ ೧೦೦ ವರ್ಷಗಳಲ್ಲಿ ತನ್ನ ಭವಿಷ್ಯದ ಬಗ್ಗೆಯೇ ಚಿಂತಿತಗೊಂಡಿರುತ್ತಾನೆ. ತನ್ನ ಭವಿಷ್ಯಕ್ಕಾಗಿ ಏನನ್ನಾದರೂ ತ್ಯಾಗಮಾಡಲು ಸಿದ್ಧನಾಗಿರುತ್ತಾನೆ. ಕೇವಲ ತನ್ನ ಜೀವನ, ಆರೋಗ್ಯ, ಸುಖ, ಸಂತೋಷ, ಮಕ್ಕಳು, ಮನೆ, ಆಸ್ತಿ, ಒಡವೆ, ಭೂಮಿ ಇವುಗಳ ಬಗ್ಗೆಯೇ ಯೋಚಿಸಿ ಹಣ್ಣಾಗುತ್ತಿದ್ದಾನೆ. ಇಡೀ ಮಾನವ ಕುಲವನ್ನೇ ಸಾಕಿ ಸಲಹುತ್ತಿರುವ ನಮ್ಮ ಈ ಭೂಮಾತೆಯ ಬಗ್ಗೆ ಮನುಷ್ಯ ಯಾವತ್ತಾದರೂ ಯೋಚಿಸಿದ್ದಾನೆಯೇ? ಇದಕ್ಕೆ ವ್ಯತಿರಿಕ್ತವಾಗಿ ತನ್ನ ಸ್ವಾರ್ಥಕ್ಕೆ ಭೂಮಂಡಲವನ್ನೇ ವಿನಾಶದ ಅಂಚಿಗೆ ತಳ್ಳುತ್ತಿದ್ದಾನೆ.

' ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ' ಎನ್ನುವ ಕವಿವಾಣಿಯಂತೆ ನಮ್ಮನ್ನು ಹೆತ್ತ ತಾಯಿ ಮತ್ತು ಜನ್ಮಭೂಮಿ ಸ್ವರ್ಗಕ್ಕೆ ಸಮಾನ. ಇಂತಹ ಸ್ವರ್ಗ ಸಮಾನವಾದ ನಮ್ಮ ಭೂತಾಯಿಯ ಮುಂದಿನ ಭವಿಷ್ಯ ಎಷ್ಟೊಂದು ಕರಾಳವಾಗಿದೆ ಗೊತ್ತೇ?

ಭೂಮಿಯ ಭವಿಷ್ಯವನ್ನು ನಿರ್ಧರಿಸುವ ಅಂಶಗಳು: ಭೂಮಿಯ ಭೌಗೋಳಿಕ ರಾಸಾಯನಿಕ ಸಂಯೋಜನೆ, ಭೂಮಿಯ ಒಳಭಾಗದ ಲಾವಾರಸ ತಂಪಾಗುವ ವೇಗ, ಸೌರವ್ಯೂಹದಲ್ಲಿ ಬೇರೆ ಆಕಾಶಕಾಯಗಳ ಗುರುತ್ವದ ಪರಿಣಾಮ. ನಿಧಾನವಾಗಿ ಏರುತ್ತಿರುವ ಸೂರ್ಯನ ಶಾಖದ ಪ್ರಮಾಣ (Luminosity), ಮಾನವನ ಅತಿ ತಾಂತ್ರಿಕತೆಯ ಬಳಕೆ.

ಜೀವಸಂಕುಲದ ಮೇಲೆ ಕಾರ್ಮೋಡ: ಇಡೀ ಸೌರವ್ಯೂಹದಲ್ಲಿ ಭೂಮಿಗೆ ವಿಶೇಷ ಸ್ಥಾನಮಾನಗಳಿವೆ. ಏಕೆಂದರೆ ಬೇರೆ ಯಾವುದೇ ಗ್ರಹದ ಮೇಲೆ ಕಂಡುಬರದ ಜೀವಸಂಕುಲ ಭೂಮಂಡಲದಲ್ಲಿದೆ. ಆದರೆ ಭೂಮಿಯು ಮಾನವನ ಅತಿ ಬುದ್ಧಿವಂತಿಕೆ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಇನ್ನು ಕೆಲವೇ ವರ್ಷಗಳಲ್ಲಿ ತನ್ನ ಸ್ವರೂಪವನ್ನೇ ಕಳೆದುಕೊಳ್ಳಲಿದೆ. ಮನುಷ್ಯ ನೇರವಾಗಿ ತನ್ನ ಜೀವಗೋಳವನ್ನೇ ಧ್ವಂಸ ಮಾಡಲು  ಹೊರಟಿದ್ದಾನೆ. ಮುಖ್ಯವಾಗಿ, ಮಾನವ ಸಂತತಿ ಇದೇ ವೇಗದಲ್ಲಿ ಹೆಚ್ಚುತ್ತಾ ಹೋದರೆ ಇತರೆ ಪಶು ಪ್ರಾಣಿ, ಜೀವಿಗಳ ಸಂತತಿ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಮಾನವನ ಅತಿ ನಾಗರಿಕತೆ ಮತ್ತು ತಂತ್ರಜ್ಞಾನದ ಪರಿಣಾಮವಾಗಿ ಕೇವಲ ೭೦ ವರ್ಷಗಳಲ್ಲಿ ಶೇಕಡಾ ೧೦ ರಷ್ಟು ಜೀವ ಸಂತತಿಗಳು ಈಗಾಗಲೇ ನಾಶವಾಗಿವೆ. ಜೊತೆಗೆ ಕಾಗೆ, ಗುಬ್ಬಚ್ಚಿ, ಹದ್ದು ಮುಂತಾದ  ಪಕ್ಷಿಗಳು ವಿನಾಶದ ಅಂಚಿಗೆ ಬಂದಿವೆ. ಇದೇ ವೇಗದಲ್ಲಿ ಮಾನವನ ನಡೆ ಸಾಗಿದರೆ ಇನ್ನು ಕೇವಲ ೧೦೦ ವರ್ಷಗಳಲ್ಲಿ ಶೇಕಡ ೩೦ ರಷ್ಟು ಜೀವಸಂಕುಲ ಕಣ್ಮರೆಯ ಹಂತಕ್ಕೆ ಬರಲಿದೆ.

ನಿರ್ಲಜ್ಜ ಮನುಷ್ಯ: ನಿಮಗೆ ಗೊತ್ತಿರಲಿ, ಮನುಷ್ಯ ಈಗಾಗಲೇ ತನ್ನ ಮಿತಿಮೀರಿದ ಚಟುವಟಿಕೆಗಳಿಗಾಗಿ ಭೂಭಾಗದ ಶೇಕಡ 30ರಷ್ಟು ಪ್ರದೇಶವನ್ನು ಬಳಸುತ್ತಿದ್ದಾನೆ. ಇನ್ನೂ ಆಶ್ಚರ್ಯದ ವಿಷಯವೆಂದರೆ, ಭೂಮಿಯ ಮೇಲೆ ಉತ್ಪತ್ತಿಯಾಗುವ ಒಟ್ಟು ಮೂಲಗಳಲ್ಲಿ ಈ ಮನುಷ್ಯನೊಬ್ಬನೇ ಶೇಕಡ ೩೦ ರಷ್ಟನ್ನು ಬಕಾಸುರನಂತೆ ಕಬಳಿಸುತ್ತಿದ್ದಾನೆ. ಕೈಗಾರಿಕಾ ಕ್ರಾಂತಿಯ ನಂತರ  ಭೂ ವಾತಾವರಣದಲ್ಲಿ ಇಂಗಾಲದ ಡೈಯಾಕ್ಸೈಡ್ ನ ಪ್ರಮಾಣ ಶೇಕಡ ೩೦ ರಷ್ಟು ಹೆಚ್ಚಾಗಿದೆ. ಇದರಿಂದಾಗಿ ಓಝೋನ್ ಪದರದ ನಾಶ, ಭೂಮಿಯ ತಾಪದ ಏರಿಕೆ, ಜೀವಸಂಕುಲಗಳ ವಿನಾಶ ಮುಂತಾದ ಸಮಸ್ಯೆಗಳು ಭೂಮಿಯನ್ನು ಭೀಕರವಾಗಿ ಕಾಡಲಿವೆ. ಮಾನವನ ಕೆಟ್ಟ ಕೆಲಸಗಳಿಂದಾಗಿ ಅನೇಕ ಜೀವ  ಪ್ರಭೇದಗಳು ಈಗಾಗಲೇ ವಿನಾಶದ ಅಂಚನ್ನು ತಲುಪಿವೆ. ಜೀವಿಗಳ ನಡುವೆ ಇರುವ ಆಹಾರ ಸರಪಳಿ ಈಗಾಗಲೇ ಸಡಿಲಗೊಂಡಿದೆ. ಭೂಮಿಯ ಮೇಲೆ ಕಳೆ ಮತ್ತು ವಿನಾಶಕಾರಿ ಕ್ರಿಮಿಕೀಟ ಹಾಗೂ ಸೂಕ್ಷ್ಮಾಣು ಜೀವಿಗಳ ಉಪಟಳ ಹೆಚ್ಚಾಗಿ ಸಮಸ್ಯೆಗಳನ್ನು ತಂದೊಡ್ಡಲಿದೆ.

(ಇನ್ನೂ ಇದೆ)

-ಕೆ. ನಟರಾಜ್, ಬೆಂಗಳೂರು

Comments

Submitted by addoor Tue, 11/15/2022 - 08:25

ನಿರ್ಲಜ್ಜ ಮಾತ್ರವಲ್ಲ ಉಡಾಫೆ ಮನುಷ್ಯ. ಒಂದೇ ಉದಾಹರಣೆ ಗಮನಿಸಿ: ಯಾವುದೇ ಹೋಟೆಲಿನಲ್ಲಿ ಟಿಶ್ಯೂ ಪೇಪರನ್ನು ನಾವೆಲ್ಲ ಹೇಗೆ ಎಸೀತಿದ್ದೇವೆ ಎಂಬುದನ್ನು. ನಮ್ಮಲ್ಲಿ ಯಾರಿಗಾದರು ಒಂದು ಕಿಲೋ ಟಿಶ್ಯೂ ಪೇಪರ್ ಉತ್ಪಾದಿಸಲು ಎಷ್ಟು ಮರಗಳನ್ನು ಕಡಿಯಬೇಕಂತ ಗೊತ್ತಿದೆಯೇ? ಹೀಗೆ ಕಾಡು ನಾಶ ಮಾಡುತ್ತಾ ಇದ್ದರೆ ನಮಗೆ ಉಳಿಗಾಲ ಇದೆಯೇ?