ಭೂಮಿಯ ಒಳಗೆ, 2000 ಅಡಿಗಳ ಕೆಳಗೆ..!

ಭೂಮಿಯ ಒಳಗೆ, 2000 ಅಡಿಗಳ ಕೆಳಗೆ..!

ನಾನು ಈಗಾಗಲೇ ಬಸ್ಸಿನಲ್ಲಿ, ವಿಮಾನದಲ್ಲಿ, ಹಡಗಿನಲ್ಲಿ, ಎತ್ತು ಕುದುರೆ ಗಾಡಿಯಲ್ಲಿ, ರೈಲಿನಲ್ಲಿ, ಕಾಲ್ನಡಿಗೆಯಲ್ಲಿ, ಸಮುದ್ರದ ಒಳಗಿನ ಯುರೋ ರೈಲಿನಲ್ಲಿ  ಪ್ರಯಾಣ ಮಾಡಿದ್ದೇನೆ. ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ಇದೇ ಮೊದಲ ಬಾರಿಗೆ ಭೂಮಿಯ ಒಳಗೆ 2000 ಅಡಿಗಳ ಕೆಳಕ್ಕೆ ಇಳಿದೆ. ಭಯ ಆತಂಕದ ನಡುವೆ ಒಂದು ರೋಚಕ ಅನುಭವ ದೊರೆಯಿತು.

ಒಂದು ಟನ್ ತೂಕದ ಕಲ್ಲಿನಿಂದ ಕೇವಲ 3 ಗ್ರಾಂ ಚಿನ್ನ ಪಡೆಯಲು ಮತ್ತು ತಿಂಗಳಿಗೆ ಸುಮಾರು 250 ಕೆಜಿ ಚಿನ್ನ ತೆಗೆಯಲು ನಡೆಯುತ್ತಿರುವ ಹಟ್ಟಿ ಗಣಿಯ ಒಂದು ಕುತೂಹಲಕಾರಿ ಅನುಭವವಿದು. ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಒಂದು ಕಾಲೇಜಿನ ಸಂವಾದದ ನಂತರ ಗೆಳೆಯರ ಮೂಲಕ ಅನುಮತಿ ಪಡೆದು ಚಿನ್ನದ ಗಣಿ ನೋಡಲು ಹೊರಟಿತು. 

ತಲೆಗೆ ಶಿರಸ್ತ್ರಾಣ, ಕತ್ತಿಗೆ ಒಂದು ಟಾರ್ಚ್ ಹಾಕಿಕೊಂಡು ಲಿಪ್ಟ್ ನಲ್ಲಿ ಅಲ್ಲಿನ ಸುಮಾರು 10 ಕಾರ್ಮಿಕರೊಂದಿಗೆ 2000 ಅಡಿಗಳ ಕೆಳಗೆ ಹೊರಟೆವು. ಮೊದಲ ವಿಮಾನ ಪ್ರಯಾಣದಲ್ಲಿ ಆದಂತೆ ಒಂದಷ್ಟು ಭಯ ಆಗಿದ್ದು ನಿಜ. ಏನೋನೋ ಹುಚ್ಚು ಕಲ್ಪನೆಗಳು. ಗಣಿ ದುರಂತದ ಸುದ್ದಿಯ ನೆನಪುಗಳು. ಆದರೆ ಜೊತೆಯಲ್ಲಿದ್ದ ಸಾಹಿತಿ ಮಿತ್ರ ಮಹೇಂದ್ರ ಕುರ್ಡಿ ಮತ್ತು ಎಚ್ಚರಿಕೆಯ ಮಾತನಾಡಿದ ಗೆಳೆಯ ಕರೇಗೌಡ ಅವರು ಹಟ್ಟಿ ಗಣಿ ಅತ್ಯಂತ ಸುರಕ್ಷಿತ ಗಣಿ ಎಂದು ರಾಷ್ಟ್ರಪತಿಗಳಿಂದ ಪ್ರಶಸ್ತಿ ಗಳಿಸಿದೆ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಧೈರ್ಯ ತುಂಬಿದರು. 

ಇದು ಸಹಜ ಸ್ವಾಭಾವಿಕ ಭಯ. ಯಾವುದೇ ಸಾಹಸ ಮಾಡಲು ಹಿಂಜರಿಯುವ ಭಯವಲ್ಲ. ಆಳಕ್ಕೆ ಈಗಾಗಲೇ 3000 ಅಡಿ ಒಳಕ್ಕೆ ಗಣಿ ಹೋಗಿದೆ. ಆದರೆ ಅಲ್ಲಿಯವರೆಗೂ ಹೋಗಲು ಅನುಮತಿ ಇರಲಿಲ್ಲ. ಇದಲ್ಲದೆ ಸಮಾನಾಂತರವಾಗಿ ಒಂದು ಕಿಲೋಮೀಟರ್ ಗೂ ಹೆಚ್ಚು ಉದ್ದ ಗಣಿ ಅಗೆಯಲಾಗಿದೆ. ಮೊದಲಿಗಿಂತ ಈಗ ಹೆಚ್ಚು ಸಂರಕ್ಷಣೆಗೆ ಮಹತ್ವ ನೀಡಲಾಗಿದೆ. ಒಳಗೆ ಉಕ್ಕುವ ನೀರನ್ನು ಕ್ರಮಬದ್ಧವಾಗಿ ಹೊರಹಾಕಲಾಗುತ್ತದೆ. ಮಣ್ಣು ಬಂಡೆಗಳು ಕುಸಿಯದಂತೆ ದೊಡ್ಡ ದೊಡ್ಡ ಬೋಲ್ಟ್ ಹಾಕಲಾಗಿದೆ. ಕಲ್ಲಿನ ರೂಪದ ಅದಿರು ಸಣ್ಣ ಪ್ರಮಾಣಕ್ಕೆ ಬಂದು ಅಲ್ಲಿಂದ ಕ್ರಶ್ ಮಾಡಿ ಪುಡಿ ಪುಡಿ ಮಾಡಿ ದ್ರವರೂಪದಲ್ಲಿ ಪರಿವರ್ತನೆಯಾಗಿ ಅಲ್ಲಿಯೂ ವಿವಿಧ ರೂಪದಲ್ಲಿ ಸಂಸ್ಕರಣೆ ಹೊಂದಿ ಚಿನ್ನದ ಗಟ್ಟಿಯ ರೂಪ ಪಡೆಯುತ್ತದೆ. ನಿನ್ನೆಯ ದಿನ ಸುಮಾರು 1000 ಕೆಜಿಯಷ್ಟು ಚಿನ್ನದ ಸಂಗ್ರಹ ಇತ್ತು.

ಹೆಮ್ಮೆಯ, ಪ್ರತಿಷ್ಠೆಯ, ಅತ್ಯಂತ ದುಬಾರಿಯಾದ, ಅಲಂಕಾರಿಯಾದ, ಕಷ್ಟದ ಸಮಯದ ಆಪಧ್ಭಾಂಧವಿಯಾದ ಹಳದಿ ಲೋಹ ಸೃಷ್ಟಿಯಾಗುವುದು ಮಾತ್ರ ಭೂಮಿಯ ಕೆಳಗೆ, ಕೆಸರಿನ ಒಳಗೆ, ಅನೇಕ ಕಾರ್ಮಿಕರ ಬೆವರಿನ ಶ್ರಮದಿಂದ ಜೊತೆಗೆ ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ. ವಿಶ್ವದ ಈ ರೀತಿಯ ಗಣಿಗಳಲ್ಲಿ ಭೂ ಕುಸಿತ ಸೇರಿ ಇನ್ನಿತರ ಕಾರಣಗಳಿಂದ ಸದಾ ಅನೇಕ ಅವಘಡಗಳು ಸಂಭವಿಸುವ ಸುದ್ದಿಗಳನ್ನು ಸದಾ ಕೇಳುತ್ತಲೇ ಇರುತ್ತೇವೆ. ಆಕ್ಸಿಜನ್ ಮಟ್ಟ ಕುಸಿಯುವ, ಉಷ್ಣಾಂಶ ಏರುಪೇರಾಗುವ, ಯಂತ್ರಗಳು ಅಪಘಾತಕ್ಕೆ ಈಡಾಗುವ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆಗಳು ಸಹ ಇರುತ್ತವೆ.

ಕಾರ್ಮಿಕರ ಬದುಕು, ಬವಣೆ, ಅವರ ಅವಲಂಬಿತರ ದಿನ ನಿತ್ಯದ ಆತಂಕ, ಕಾರ್ಮಿಕ ಸಂಘಟನೆಗಳ ಹೋರಾಟ, ಇಲ್ಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮುಂತಾದ ಅನೇಕ ವಿಷಯಗಳನ್ನು ಮುಂದೆ ಬರೆಯಲಾಗುವುದು.

ಒಟ್ಟಿನಲ್ಲಿ ಒಂದು ವಿಶೇಷ ಮತ್ತು ಹೊಸ ಅನುಭವ ದೊರೆಯಿತು. ಭೂಮಿಯ ಒಳಗಿನ ಯಾತ್ರೆ ಕೂಡ ನನ್ನ ಬದುಕಿನ ಪಯಣದಲ್ಲಿ ದಾಖಲಾಯಿತು ಎಂಬ ಹೆಮ್ಮೆಯೊಂದಿಗೆ...........

-ವಿವೇಕಾನಂದ. ಹೆಚ್.ಕೆ. ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ.