ಭೂಮಿಯ ಬೃಹತ್ ಕುಳಿಗಳು (ಭಾಗ ೧)

ಭೂಮಿಯ ಬೃಹತ್ ಕುಳಿಗಳು (ಭಾಗ ೧)

ಸಣ್ಣ ಸಣ್ಣ ಆಕಾಶಕಾಯಗಳಾದ ಕ್ಷುದ್ರ ಗ್ರಹಗಳು ಕೆಲವೊಮ್ಮೆ ಭೂಮಿಗೆ ಬಂದು ಅಪ್ಪಳಿಸುವುದು ಉಂಟು. ಅಪ್ಪಳಿಸುವಿಕೆಯಿಂದ ಭೂಮಿಯ ಮೇಲೆ ದೊಡ್ಡ ದೊಡ್ಡ ಕುಳಿಗಳು ಉಂಟಾಗುತ್ತವೆ. ಕೆಲವೊಮ್ಮೆ ಧೂಮಕೇತುಗಳೂ ಅಪ್ಪಳಿಸುವುದು ಉಂಟು. ಆಗಲೂ ಈ ಕುಳಿಗಳು ಅಥವಾ ದೊಡ್ಡ ದೊಡ್ಡ ಗುಂಡಿಗಳು ಉಂಟಾಗುತ್ತವೆ. ಇಂತಹ ಕುಳಿಗಳಿಂದ ಕೆಲವೊಮ್ಮೆ ಲಾವಾರಸ ಚಿಮ್ಮಿರುವುದೂ ಉಂಟು. ಈ ರೀತಿಯ ಡಿಕ್ಕಿಗಳಿಂದ ಹೊಸ ಹೊಸ ಧಾತುಗಳು ಭೂಮಿಗೆ ಬಂದಿವೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಧೂಮಕೇತುಗಳ ಅಪ್ಪಳಿಸುವಿಕೆಯಿಂದ ಜೀವಿಗಳ ಉಗಮ ಆಗಿರಬಹುದು ಎನ್ನುವ ಊಹೆ ಕೂಡ ಇದೆ.

ಬನ್ನಿ, ಈ ರೀತಿ ಭೂಮಿಗೆ ಅಪ್ಪಳಿಸಿದ ಕೆಲವು ಆಕಾಶಕಾಯಗಳು ಹಾಗೂ ಅವುಗಳು ಉಂಟುಮಾಡಿದ ಕುಳಿಗಳನ್ನು ಒಮ್ಮೆ ಅವಲೋಕಿಸೋಣ.

೧. ಮೆಕ್ಸಿಕೋದ ಚಿಕ್ಸುಲಬ್ ಕುಳಿ (Chicxulub Crater): ಇದು ಮೆಕ್ಸಿಕೋ ರಾಷ್ಟ್ರದ ಕೆಳಭಾಗದ ಸಣ್ಣ ಹಳ್ಳಿ ಚಿಕ್ಸುಲಬ್ ಹತ್ತಿರ ಕಂಡುಬಂದಿದೆ. ಈ ಕುಳಿಯನ್ನು ಮಾಯನ್ ರ ಕಾಲದಿಂದಲೂ ' ದಿ ಟೈಲ್ ಆಫ್ ದಿ ಡೆವಿಲ್ಸ್' ಎಂದು ಕರೆಯಲಾಗುತ್ತಿದೆ. ಈ ಬೃಹತ್ ಕುಳಿ ೧೦೫ ಮೈಲಿ (೧೭೦ ಕಿ.ಮೀ) ವ್ಯಾಸವನ್ನು ಹೊಂದಿದೆ. ಒಂದು ಕ್ಷುದ್ರಗ್ರಹ ಅಥವಾ ಧೂಮಕೇತು ಸುಮಾರು ೬೫ ದಶಲಕ್ಷ ವರ್ಷಗಳ ಹಿಂದೆ ಭೂಮಿಗೆ ಅಪ್ಪಳಿಸಿರಬಹುದು ಎಂದು ಅಂದಾಜಿಸಲಾಗಿದೆ. ಇದರ ತೀವ್ರತೆ. ೧೦೧೨೦೦ ಟನ್ ಟಿ ಎನ್ ಟಿ ಸ್ಪೋಟಕವನ್ನು ಸಿಡಿಸಿದಾಗ ಉಂಟಾಗುವ ಭೀಕರತೆಯ ಪರಿಮಾಣದಷ್ಟಿತ್ತು! ಇದರಿಂದ ಭೂಮಿಯ ಮೇಲೆ ಸುನಾಮಿ, ಭೂಕಂಪ ಹಾಗೂ ಲಾವಾರಸದ ಚಿಮ್ಮುವಿಕೆಗಳು ಸಂಭವಿಸಿದ್ದವು. ಈ ದಾಳಿಯಿಂದ ಭೂಮಿಯ ಮೇಲಿನ ಡೈನೋಸಾರ್ ಗಳ ಸಂತತಿ ನಾಶವಾಗಿರಬಹುದು ಎಂದು ನಂಬಲಾಗಿದೆ.(ಚಿತ್ರ ೨)

೨. ಅಮೆರಿಕದ ಅರಿಜೋನ ಪ್ರಾಂತ್ಯದ ಬ್ಯಾರಿಂಗರ್ ಕುಳಿ (Barringer Crater): ಸುಮಾರು ೪೯ ಸಾವಿರ ವರ್ಷಗಳ ಹಿಂದೆ ನಿಕ್ಕಲ್ ಹಾಗೂ ಕಬ್ಬಿಣ ಧಾತುಗಳನ್ನು ಹೊಂದಿದ್ದ ಉಲ್ಕಾಶಿಲೆಯೊಂದು ಭೂಮಿಯನ್ನು ಅಪ್ಪಳಿಸಿತ್ತು. ಇದು ಗಂಟೆಗೆ. ೪೦ ಸಾವಿರ ಕಿಲೋಮೀಟರ್ ವೇಗದಲ್ಲಿ ಭೂಮಿಯನ್ನು ತಾಕಿದೆ. ಇದರ ತೂಕ ಸುಮಾರು ೩ ಲಕ್ಷ ಕಿಲೋಗ್ರಾಂಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಕುಳಿಯ ವ್ಯಾಸ ೧.೨ ಕಿಲೋಮೀಟರ್ ಗಳಾಗಿದ್ದು ೧೭೫ ಮೀಟರ್ ಆಳವಾಗಿದೆ. ಇದು ಉಂಟುಮಾಡಿದ ಸ್ಪೋಟ ೨೦ ದಶಲಕ್ಷ ಟನ್ ಟಿ ಎನ್ ಟಿ ಗೆ ಸಮನಾಗಿದೆ. ಖ್ಯಾತ ಗಣಿ ಇಂಜಿನಿಯರ್ ' ಡೇನಿಯಲ್ ಬ್ಯಾರಿಂಗರ್' ಈ ಕುಳಿಯನ್ನು ೧೯೦೨ ರಲ್ಲಿ ಗುರುತಿಸಿದ. ಆದ್ದರಿಂದಲೇ ಈ ಕುಳಿಯನ್ನು ಆತನ ಹೆಸರಿನಿಂದಲೇ ಕರೆಯಲಾಗುತ್ತಿದೆ. ಈ ಕುಳಿ ಇಂದಿಗೂ ಆತನ ಕುಟುಂಬದ ವರ್ಗದವರ ಸುಪರ್ದಿಯಲ್ಲಿದೆ. (ಚಿತ್ರ ೧)

೩. ಘಾನಾದ ಲೇಕ್ ಬೋಸುಮ್ ಟ್ವೇ ಕುಳಿ (Lake Bosomtwe Crater): ಪಶ್ಚಿಮ ಆಫ್ರಿಕಾ ಖಂಡದಲ್ಲಿರುವ ರಾಷ್ಟ್ರ ಘಾನಾ. ಈ ಘಾನದ ದಕ್ಷಿಣಪೂರ್ವಕ್ಕೆ ಸುಮಾರು ೩೦ ಕಿಲೋಮೀಟರ್ ದೂರದಲ್ಲಿರುವ ಕುಮಾಸಿ ಎಂಬ ಸ್ಥಳದಲ್ಲಿ ಈ ಕುಳಿ ಇದೆ. ಈ ಬೃಹತ್ ಕುಳಿ ಇಂದು ಘಾನಾ ದೇಶದ ಒಂದೇ ಒಂದು ಸ್ವಾಭಾವಿಕ ಸರೋವರ ಎನ್ನಿಸಿದೆ. ಕ್ಷುದ್ರಗ್ರಹ ಅಥವಾ ಉಲ್ಕಾ ಶಿಲೆಯ ದಾಳಿ ಸುಮಾರು ೧.೩ ದಶಲಕ್ಷ ವರ್ಷಗಳ ಹಿಂದೆ ನಡೆದಿರಬಹುದು ಎಂದು ಊಹಿಸಲಾಗಿದೆ. ಈ ಕುಳಿಯ ವ್ಯಾಸ ಸುಮಾರು.೬ ಮೈಲು (೧೦.೫ ಕಿ.ಮೀ) ಗಳಾಗಿದೆ. ಈ ಕುಳಿ ಕ್ರಮೇಣ ನೀರಿನಿಂದ ತುಂಬುತ್ತಿದೆ. ಸುತ್ತಲೂ ದಟ್ಟ ಕಾಡು ಆವರಿಸಿದ್ದು ಇದೊಂದು ಜನಪ್ರಿಯ ವಿಹಾರಧಾಮವಾಗಿದೆ. ಇದೊಂದು ವಿಕ್ಷಿಪ್ತ ಮನಸ್ಸಿಗೆ ಶಾಂತಿ ನೀಡುವ ಸ್ಥಳ ಎಂದು ಘಾನಿಯನ್ನರು ಭಾವಿಸಿದ್ದಾರೆ. ಅಲ್ಲದೆ ಸತ್ತ ದೇಹದ ಆತ್ಮಗಳು ಇಲ್ಲಿಗೆ ಬಂದು ಶುಭ ಹಾರೈಸುತ್ತೇವೆ ಎಂದು ನಂಬಿದ್ದಾರೆ. (ಚಿತ್ರ ೩)

(ಮುಂದುವರೆಯುವುದು)

-ಕೆ.ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ