ಭೂಮಿಯ ಬೃಹತ್ ಕುಳಿಗಳು - ಭಾಗ ೨

ಭೂಮಿಯ ಬೃಹತ್ ಕುಳಿಗಳು - ಭಾಗ ೨

ಕೆನಡಾದ ಡೀಪ್ ಬೇ ಕುಳಿ: ಇದು ಕೆನಡಾದ ದಕ್ಷಿಣ ಪಶ್ಚಿಮ ಭಾಗದ ತುದಿಯಲ್ಲಿ ರಿಯಿಂಡರ್ ಸರೋವರದ ಬಳಿ ಕಂಡುಬಂದಿದೆ. ಈ ಕುಳಿ ವೃತ್ತಾಕಾರವಾಗಿದ್ದು ಸುಮಾರು ಎಂಟು ಮೈಲಿ (೧೩ ಕಿ.ಮೀ.) ವ್ಯಾಸವನ್ನು ಹೊಂದಿದೆ. ಕ್ಷುದ್ರಗ್ರಹವೊಂದು ಸುಮಾರು ೧೦೦ ದಶಲಕ್ಷ ವರ್ಷಗಳ ಹಿಂದೆ ಭೂಮಿಗೆ ಅಪ್ಪಳಿಸಿ ಉಂಟಾದ ಕುಳಿ ಎಂದು ಭಾವಿಸಲಾಗಿದೆ.

ಆಫ್ರಿಕಾದ ಚಡ್ ನ ಓರೌಂಗಾ ಕುಳಿ: ಇದು ಒಂದು ಉಲ್ಕಾಶಿಲೆಯ ಅಪ್ಪಳಿಸುವಿಕೆಯಿಂದಾದ ಬೃಹತ್ ಕುಳಿ. ಈ ಉಲ್ಕಾಶಿಲೆಯ ವ್ಯಾಸ ಸುಮಾರು ೧ ಮೈಲಿ (೧.೬ ಕಿ.ಮೀ) ಗಳಾಗಿದ್ದು ೩೦೦ ದಶಲಕ್ಷ ವರ್ಷಗಳ ಹಿಂದೆ ಭೂಮಿಗೆ ಅಪ್ಪಳಿಸಿರಬಹುದು ಎಂದು ತರ್ಕಿಸಲಾಗಿದೆ. ಈ ತರಹದ ಉಲ್ಕಾ ಶಿಲೆಗಳ ದಾಳಿ ಸುಮಾರು ಒಂದು ದಶಲಕ್ಷ ವರ್ಷಗಳಿಗೊಮ್ಮೆ ಪುನರಾವರ್ತನೆಗೊಳ್ಳಬಹುದು ಎನ್ನಲಾಗಿದೆ. ಈ ಉಲ್ಕಾಶಿಲೆಯ ಅಪ್ಪಳಿಸುವಿಕೆಯಿಂದ ಹನ್ನೊಂದು ಮೈಲಿ (೧೭ ಕಿ.ಮೀ.) ವ್ಯಾಸದ ಬೃಹತ್ ಕುಳಿ ಉಂಟಾಗಿದೆ. ಇದರ ಪಕ್ಕದಲ್ಲಿ ಸರಿಸುಮಾರು ಇಷ್ಟೇ ಅಗಲದ ಇನ್ನೊಂದು ಬೃಹತ್ ಕುಳಿ ಕಂಡುಬಂದಿದೆ. ಇದೊಂದು ಉಲ್ಕಾ ಶಿಲೆಗಳ ಸರಣಿ ಡಿಕ್ಕಿ ಎಂದು ಭಾವಿಸಲಾಗಿದೆ.

ಆಸ್ಟ್ರೇಲಿಯಾದ ಗಾಸೆಸ್ ಬ್ಲಫ್ ಕುಳಿ: ಸುಮಾರು ೧೪೨ ದಶಲಕ್ಷ ವರ್ಷಗಳ ಹಿಂದೆ ಸುಮಾರು ೨೨ ಕಿ.ಮೀ. ವ್ಯಾಸದ ಧೂಮಕೇತು ಅಥವಾ ಉಲ್ಕಾಶಿಲೆಯೊಂದು ಸೆಕೆಂಡಿಗೆ ೪೦ ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿ ಉಂಟಾದ ಕುಳಿಯೇ ಈ ಗಾಸೆಸ್ ಬ್ಲಫ್ ಕುಳಿ ! ಇದು ಮಧ್ಯ ಆಸ್ಟ್ರೇಲಿಯಾದ ಉತ್ತರ ಪ್ರಾಂತ್ರದಲ್ಲಿ ಕಂಡುಬಂದಿದೆ. ಈ ಕುಳಿಯ ವ್ಯಾಸ ೨೪ ಕಿ.ಮೀ. ಗಳಾಗಿದ್ದು ೫೦೦೦ ಮೀಟರ್ (೫ ಕಿ.ಮೀ) ಆಳವಾಗಿದೆ. ಇದು ಡಿಕ್ಕಿ ಹೊಡೆದಾಗ ಉಂಟಾದ ಶಕ್ತಿ ೨೨,೦೦೦ ಮೆಗಾ ಟನ್ ಟಿ ಎನ್ ಟಿ ಸ್ಪೋಟಿಸಿದಷ್ಟು. ! (ಚಿತ್ರ ೧)

ಆಫ್ರಿಕಾದ ರೆಡೆಫೋರ್ಟ್ ಬೃಹತ್ ಕುಳಿ: ಇದೊಂದು ದಕ್ಷಿಣ ಆಫ್ರಿಕಾದ ರೆಡೆಫೋರ್ಟ್ ಎಂಬ ನಗರದ ಬಳಿ ಕಂಡುಬಂದಿರುವ ಬೃಹತ್ ಕುಳಿ. ಇದು ಪ್ರಪಂಚದ ಅತಿ ದೊಡ್ಡ ಕುಳಿ. ಸುಮಾರು ೫ ರಿಂದ ೧೦ ಕಿ.ಮೀ. ವ್ಯಾಸದ ಕ್ಷುದ್ರಗ್ರಹವೊಂದು ೨೦೦ ದಶಲಕ್ಷ ವರ್ಷಗಳ ಹಿಂದೆ ಭೂಮಿಗೆ ಅಪ್ಪಳಿಸಿ ಈ ಬೃಹತ್ ಕುಳಿ ಉಂಟಾಗಿದೆ. ಈ ಕುಳಿಯ ವ್ಯಾಸ ೨೫೦ ರಿಂದ ೩೦೦ ಕಿ.ಮೀ ಗಳು ಎಂದು ಅಂದಾಜಿಸಲಾಗಿದೆ. ಈ ಬೃಹತ್ ಕುಳಿಯ ಮಧ್ಯಭಾಗದಿಂದ ಲಾವಾರಸ ಚಿಮ್ಮಿದ ಕುರುಹುಗಳು ಕಂಡುಬಂದಿದೆ.

ಕೆನಡಾದ ಮಿಸ್ಟಾಸ್ಟಿನ್ ಕುಳಿ: ಕೆನಡಾದ ಲ್ಯಾಬ್ರೆಡಾರ್ ಬಳಿ ಈ ಬೃಹತ್ ಕುಳಿ ಕಂಡುಬಂದಿದೆ. ಈ ಕುಳಿಯ ವ್ಯಾಸ ಸುಮಾರು ೧೭.೪ ಮೈಲಿಗಳು (೨೮ ಕಿ.ಮೀಗ಼ಳು) ಇದು ೩೮ ದಶಲಕ್ಷ ವರ್ಷಗಳ ಹಿಂದೆ ಆಕಾಶಕಾಯವೊಂದರ ದಾಳಿಯಿಂದ ಆಗಿರಬಹುದು ಎನ್ನಲಾಗಿದೆ. ಪಶ್ಚಿಮ ದಿಕ್ಕಿಗೆ ಸಾಗುವ ಬೃಹತ್ ಹಿಮ ಬಂಡೆಗಳು ಈ ಕುಳಿಯನ್ನು ಈಗಾಗಲೇ ಆವರಿಸತೊಡಗಿದೆ. ಈ ಕುಳಿಯ ಮಧ್ಯಭಾಗದಲ್ಲಿ ಒಂದು ಪುಟ್ಟ ದ್ವೀಪ ತೇಲುತ್ತಿರುವುದು ಒಂದು ವಿಶೇಷ.

ಕೆನಡಾದ ಕ್ಲಿಯರ್ ವಾಟರ್ ಲೇಕ್ ಕುಳಿ: ಕೆನಡಾದ ಕ್ಯುಬೆಕ್ ಪ್ರದೇಶದಲ್ಲಿ ಎರಡು ಬೃಹತ್ ಕುಳಿಗಳು ಕಂಡುಬಂದಿವೆ. ಈ ಎರಡೂ ಕುಳಿಗಳು ಎರಡು ಕ್ಷುದ್ರ ಗ್ರಹಗಳ ಡಿಕ್ಕಿಯಿಂದ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ಹಡ್ಸನ್ ಕೊಲ್ಲಿಯ ಬಳಿ ಉಂಟಾಗಿರುವ ಈ ಎರಡು ಕುಳಿಗಳು ಸುಮಾರು ೨೯೦ ದಶಲಕ್ಷ ವರ್ಷಗಳ ಹಿಂದೆ ಉಂಟಾಗಿರಬಹುದು ಎಂದು ತೀರ್ಮಾನಿಸಲಾಗಿದೆ. ಈ ಎರಡೂ ಕುಳಿಗಳಿಂದ ಎರಡು ಬೃಹತ್ ಸರೋವರಗಳು ಉಂಟಾಗಿದ್ದು ಒಂದನ್ನು ವೆಸ್ಟ್ ಕ್ಲಿಯರ್ ವಾಟರ್ ಲೇಕ್ ಎಂದು ಕರೆಯಲಾಗಿದೆ. ಇದು ೩೨ ಕಿ.ಮೀ.ವ್ಯಾಸ ಹೊಂದಿದೆ. ಇನ್ನೊಂದು ಈಸ್ಟ್ ಕ್ಲಿಯರ್ ವಾಟರ್ ಲೇಕ್. ಇದು ಸುಮಾರು ೨೨ ಕಿ. ಮೀ. ವ್ಯಾಸ ಹೊಂದಿದೆ.

ತಜಕಿಸ್ತಾನದ ಕಾರಾ-ಕುಲ್ ಸರೋವರದ ಕುಳಿ: ಸಮುದ್ರ ಮಟ್ಟದಿಂದ ಸುಮಾರು ೧೩ ಸಾವಿರ ಅಡಿಗಳಷ್ಟು ಎತ್ತರದಲ್ಲಿ ಈ ಕುಳಿ ಇದೆ. ಇದು ಸುಮಾರು ೨೫ ಕಿ.ಮೀ. ವ್ಯಾಸ ಹೊಂದಿದೆ. ಈಗ ಇದೊಂದು ಸುಂದರ ಸರೋವರವಾಗಿದ್ದು ಪಮೀರ್ ಪರ್ವತ ಶ್ರೇಣಿಗಳ ಪಕ್ಕದಲ್ಲಿ ಕಂಡುಬರುತ್ತದೆ. ಈ ಸರೋವರದ ಪಕ್ಕದಲ್ಲೇ ಚೀನಾದ ಗಡಿ ಹಾದು ಹೋಗುತ್ತದೆ. (ಚಿತ್ರ ೨)

(ಮುಗಿಯಿತು)

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ