ಭೂಮಿಯ ಮೇಲೆ ಜೇನು ನೊಣಗಳ ಪ್ರಾಮುಖ್ಯತೆ (ಭಾಗ 2)

ಭೂಮಿಯ ಮೇಲೆ ಜೇನು ನೊಣಗಳ ಪ್ರಾಮುಖ್ಯತೆ (ಭಾಗ 2)

ದಟ್ಟವಾದ ಪರ್ವತ ಕಾಡುಗಳಿಂದ ಸಂಗ್ರಹಿಸಲ್ಪಟ್ಟ ಜೇನುತುಪ್ಪವು - ಮಲೈಥೆನ್ (malaithen) ಅಥವಾ ಪರ್ವತ ಜೇನು ಎಂದು ಕರೆಯುಲ್ಪಡುವ ಇದು, ಅತ್ಯಧಿಕ ಔಷಧೀಯ ಮೌಲ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಈ ಬಗೆಯ ಜೇನುತುಪ್ಪವು, ಜೇನುನೊಣಗಳು ವೈವಿಧ್ಯಮಯ ಗಿಡಮರಗಳು, ಎಲ್ಲಾ ರೀತಿಯ ಹೂವುಗಳ ಮಕರಂದವನ್ನು ಸಂಗ್ರಹಿಸಿರುವುದರಿಂದ ಈ ಜೇನುತುಪ್ಪ ಹೆಚ್ಚು ಔಷಧೀಯ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಇಂದಿಗೂ ಬಳಕೆಯಲ್ಲಿರುವ ಇದರ ಬಳಕೆ ಎಲ್ಲಾ ಪ್ರದೇಶದಲ್ಲೂ ಸಿಕ್ಕುವ ಜೇನುತುಪ್ಪದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.

ಜೀವರಾಶಿಗಳ ಆಹಾರದ ಮೇಲೆ ಜೇನು ಹುಳುಗಳ ಸಂಬಂಧ : ನಿಮಗೆ ಗೊತ್ತಿರಬಹುದು. ಮೊದಲಿದ್ದಷ್ಟು ಜೇನುಗಳು ಈಗ ಇಲ್ಲ. ಜೇನುನೊಣಗಳಿಂದಲೇ ನೈಸರ್ಗಿಕವಾಗಿ ಹೂವಿನಿಂದ ಹೂವಿಗೆ ಮಕರಂದ ಹೀರಲು ಹೋಗುವ ಪ್ರಕ್ರಿಯೆಯೇ ಪರಾಗಸ್ಪರ್ಶ. ಈ ಪರಾಗಸ್ಪರ್ಶ ಕ್ರಿಯೆ ನೈಸರ್ಗಿಕವಾಗಿ ಆಗುವುದರಿಂದಲೇ ರೈತರ ಬೆಳೆಗಳ ಇಳುವರಿ ಹೆಚ್ಚಾಗುವುದು. ಇದನ್ನು ಜೇನು ಸಾಕಾಣಿಕೆ ಮಾಡಿರುವ ತೋಟಗಳ ಸುತ್ತಾಮುತ್ತಾ ಅಲ್ಲಿನ ತೆಂಗು, ಅಡಿಕೆ ಹುಣಸೇಮರಗಳೂ ಸೇರಿದಂತೆ ಹೆಚ್ಚು ಇಳುವರಿ ಕಂಡಿದ್ದಾರೆ. ಇದಕ್ಕೆ ಕಾರಣ ಜೇನು ಹುಳಗಳೇ ಎಂದು ಅನೇಕ ಪ್ರಯೋಗಗಳೂ ಸಾಬೀತು ಪಡಿಸಿವೆ ಕೂಡ. ಎಲ್ಲಾ ಸಸ್ಯಗಳಲ್ಲಿ ಬೀಜಕಟ್ಟಿ ಕಾಳು ಆಗುವ ಪ್ರಕ್ರಿಯೆಯಲ್ಲಿ ಜೇನಿನ ಪಾತ್ರ ಬಹು ಮುಖ್ಯವಾದುದು. ಮತ್ತು ಈ ಸ್ಥಾನವನ್ನು ಇತರ ಜನಗಳಾಗಲೀ ಯಂತ್ರಗಳಾಗಲಿ, ತಂತ್ರಜ್ಞಾನವಾಗಲೀ ತುಂಬಲು ಅಸಾಧ್ಯ.!! ಈ ಭೂಮಿಯ ಮೇಲೆ ಜೇನುಹುಳಗಳೆಂಬ ಕೀಟಗಳು ಇರುವುದರಿಂದಲೇ ಇಂದಿಗೂ ಸಕಲ ಜೀವರಾಶಿಗೆ ಆಹಾರ ಉತ್ಪಾದನೆ ಆಗುತ್ತಿದೆ. ಪ್ರಕೃತಿಯಲ್ಲಿ ಎಲ್ಲವೂ ಪೂರಕ ಸಂಬಂಧ ಹೊಂದಿವೆ. ಜಗತ್ತಿನಲ್ಲಿ ಸುಮಾರು 25,000 ಬಗೆಯ ಜೇನು ಹುಳುಗಳು ಅಸ್ತಿತ್ವದಲ್ಲಿವೆ ಎಂದು ತಿಳಿದುಬಂದಿದೆ. ದುರದೃಷ್ಟವಶಾತ್, ಮನುಷ್ಯನ ಅತೀ ಶೋಷಣೆ ಮತ್ತು ಕಾಡ್ಗಿಚ್ಚಿಗೆ ಬೆಂಕಿಯದಾಳಿಗೆ ಇವುಗಳಲ್ಲಿ ಅನೇಕ ಜಾತಿಯ ಹುಳುಗಳು ಅಪಾಯದ ಅಂಚಿನಲ್ಲಿದೆ. ಕೃಷಿಯಲ್ಲಿ ಉತ್ಪಾದನೆಯ ಸ್ಪರ್ಧೆಗೆ ಇಳಿದು ಅತಿಯಾಸೆಗೆ ಬಿದ್ದ ಮಾನವ ಯಾವು ಯಾವೋ ಅಪಾಯಕಾರೀ ಕೀಟನಾಶಕಗಳನ್ನು ಬೆಳೆಗಳ ಮೇಲೆ ಸಿಂಪರಣೆ ಮಾಡಿದ. ಸಹಜವಾಗಿ ಮಕರಂದಕ್ಕಾಗಿ ಬೆಳೆಗಳ ಹೂಗಳ ಮೇಲೆ ಕುಳಿತ ಜೇನುನೊಣಗಳು ಮಾನವನು ಸಿಂಪರಣೆ ಮಾಡಿದ ಕೀಟನಾಶಕಕ್ಕೆ ಗರಿಷ್ಠ ಪ್ರಮಾಣದಲ್ಲಿ ಎಲ್ಲಾ ಪ್ರಭೇದದ ಜೇನು ಸಂತತಿ ಬಲಿಯಾಗುತ್ತಿದ್ದಾವೆ. ಇನ್ನೂ ಜೇನುತುಪ್ಪ ತೆಗೆಯುವ ಸಂದರ್ಭದಲ್ಲಿ ಹುಳುಗಳ ಸುಟ್ಟು ಜೇನು ಕದ್ದುತರುತ್ತಿರುವುದೂ ಕೂಡ ಜೇನುಹುಳುಗಳ ಸಂತತಿ ಕಡಿಮೆಯಾಗಲೂ ಮತ್ತೊಂದು ಕಾರಣ. ಹಾಗೇ ಜೇನುಹುಳಗಳಿಗೆ ಕಾಡುವ ಕೆಲವು ವೈರಸ್ ಗಳ ಕಾರಣದಿಂದ ಸಂತಾನೋತ್ಪತ್ತಿ ಮಾಡಲು ಅಸಮರ್ಥವಾಗಿ ಜೇನಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಲು ಕಾರಣ.

ಮಾರುಕಟ್ಟೆಯಲ್ಲಿ ದೊರಕುವ ಶೇ. ೮೦% ಆಹಾರ ಪದಾರ್ಥಗಳು ಜೇನಿನಿಂದಾದ ಬೀಜ-ಪರಾಗಸ್ಪರ್ಶದ ಪರಿಣಾಮವಾಗಿ ದೊರಕುವುದು. ಮಾನವರು ಜೇನುತುಪ್ಪವನ್ನು ಕ್ರಿ.ಪೂ. ೬೦೦೦ರಿಂದ ಸಂಗ್ರಹಣೆ ಮಾಡುತ್ತಿದ್ದರೆಂಬುವುದು ಕೆಲವು ದಾಖಲೆಗಳಲ್ಲಿ ಓದಬಹುದು. ಸ್ಪೇನ್ ದೇಶದ ವೇಲೆನ್ಸಿಯಾದಲ್ಲಿನ (Valencia) Cave of the Spider ಎಂಬ ಗುಹೆಯಲ್ಲಿ ಇದನ್ನು ಚಿತ್ರಿಸಲಾಗಿದೆ. ಜೇನುಹುಳುಗಳು ೫೦೦ ಗ್ರಾಂ ಜೇನುತುಪ್ಪವನ್ನು ಉತ್ಪಾದಿಸಲು, ಮಕರಂದಕ್ಕಾಗಿ ಸುಮಾರು ೧೦ ದಶಲಕ್ಷ ಬಾರಿ ಹಾರಾಟವನ್ನು ಮಾಡುತ್ತವೆ. ಇದು ಪ್ರಪಂಚವನ್ನು ಒಂದು ಬಾರಿ ಸುತ್ತುವುದಕ್ಕೆ ಸಮನಾಗಿರುತ್ತದೆ. ಜೇನುಹುಳುಗಳು ಈ ಜಗತ್ತಿನಿಂದ ಮಾಯ ಆದರೆ ಇಡೀ ಜೀವ ಸಂಕುಲ ಗರಿಷ್ಠ ನಾಲ್ಕು ವರ್ಷಗಳವರೆಗೆ ಬದುಕಿರಬಹುದು. ಕೆಲವು ಸಸ್ಯಗಳಿಂದ ಲಕ್ಷ ಲಕ್ಷ ಬೀಜೋತ್ಪನ್ನವಾದರೂ, ಎಷ್ಟೇ ಮಳೆ ಬಂದರೂ 0.0001 % ರಷ್ಟೂ ಸಸ್ಯಗಳೂ ಹುಟ್ಟಿ ಬೆಳೆಯಲು ಸಾಧ್ಯವಿಲ್ಲ. ಇನ್ನೂ ಈ ಜೇನು ನೊಣಗಳು ಭೂಮಿಯಿಂದ ನಿಶೇಷವಾಗಿ ಮಾಯ ಆದರೆ ಕಾಲ ಕ್ರಮೇಣ ಆಹಾರ ಇಲ್ಲದೇ ಎಲ್ಲಾ ಜೀವ ಸಂಕುಲ ಸಾಯುತ್ತವೆ. ಹಾಗೇ ಭೂಮಿಯ ಶ್ವಾಸಗಳಾದ ಅರಣ್ಯಗಳಿಗೆ ಕುತ್ತು ಬಂದು ಸರ್ವನಾಶ ಆಗಿ ಭೂಮಿಯೂ ಇತರ ಗ್ರಹಗಳಂತೆ ಬರಡಾಗುವ ಅಪಾಯಕಾರಿಯೂ ಇದೆ.

ಲೇಖನ ಮುಗಿಸುವ ಮುನ್ನ ಈ ಜೇನುಹುಳುಗಳು ಸಂಗ್ರಹಿಸಿದ ಜೇನಿನ ಸಿಹಿ ಎಲ್ಲರಿಗೂ ಗೊತ್ತಿದೆ. ಆದರೆ ಜೇನುನೋಣಗಳು ಈ ಪರಿಸರ ಮತ್ತು ಭೂಮಿಗೆ ಯಾಕೆ ಬೇಕು ಇವುಗಳ ಮಹತ್ವ ಏನು ಎಂಬುದನ್ನು ಎಲ್ಲರಿಗೂ ಅರ್ಥಮಾಡಿಸುವ ಮತ್ತು ಅರ್ಥಮಾಡಿಕೊಳ್ಳುವ ಅನಿವಾರ್ಯತೆ ಅತೀ ತುರ್ತಾಗಿ ಆಗಬೇಕಿದೆ. ಗಿಡಮರಗಳ ಸಂರಕ್ಷಣೆಯಷ್ಟೇ ಮುಖ್ಯವಾಗಿ ಜೇನುನೊಣಗಳ ಪಾತ್ರವೂ ಬಹುಮುಖ್ಯ ಎಂಬುದನ್ನು ಸಾರಿ ಹೇಳಲು ಪ್ರಾಥಮಿಕ/ಮಾಧ್ಯಮಿಕ ಶಿಕ್ಷಣದಲ್ಲಿ ಪಠ್ಯ ಅಳವಡಿಸುವ ಅಗತ್ಯವೂ ಇದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳು, ಪರಿಸರ ತಜ್ಞರೂ ಮತ್ತು ರಾಜಕೀಯ ನೇತಾರರು ಪರಿಸರದಲ್ಲಿ ಜೇನುಹುಳಗಳ ಪ್ರಾಮುಖ್ಯತೆ ಅರಿತು ಅವುಗಳ ಸಂತತಿಗೆ ಧಕ್ಕೆ ಬರದಂತೆ ನಿಯಮ ರೂಪಿಸಲು ಕಾರ್ಯಪ್ರವೃತ್ತರಾಗುವ ಅವಸರವೂ ಇದೆ. ಸದಾ ಜೇನುಗಳನ್ನು ಶೋಷಿಸುತ್ತಿದ್ದ ನನಗೆ ಅವುಗಳು ಜಗತ್ತಿಗೆ ಯಾಕೆ ಬೇಕು ಎನ್ನುವುದರ ಪ್ರಾಮುಖ್ಯತೆಯ ಅರಿವು ನನಗಾದ ಮೇಲೆ ನಾನು ಜೇನಿನ ಮೇಲೆ ಮಾಡುತಿದ್ದ ಶೋಷಣೆ 99% ಕಡಿಮೆ ಮಾಡಿದ್ದೇನೆ. ನನ್ನೊಬ್ಬನ ಬಾಯಿ ಸಿಹಿಗೆ ನಾಳೆ ನಮ್ಮ ಮಕ್ಕಳು ಮೊಮ್ಮಕ್ಕಳ ಬಾಯಿಗೆ ಮಣ್ಣುಬೀಳಬಾರದು ಎಂಬ ಆಶಯ ನನ್ನದು. ಪ್ರಕೃತಿಯಲ್ಲಿ ಜೇನುನೊಣಗಳು ಮಾಡುವ ಕುಸುರಿ ಕೆಲಸವನ್ನು ಬೇರೆಯಾರೂ ಮಾಡಲು ಅಸಾಧ್ಯ ವಾಗಿರುವುದರಿಂದ ಜೇನುಹುಳುಗಳು ಬೇಕೇ ಬೇಕು. ಜೇನುಹುಳಗಳ ನಾಶಮಾಡೋದು ಬಂಗಾರದ ಮೊಟ್ಟೆ ಇಡುವ ಕೋಳಿಗೆ ಮಸಾಲೆ ಅರೆದಂತೆ.. ಅಪಾರ ಜನಸಂಖ್ಯೆಗೆ ಅಗತ್ಯವಾದಷ್ಟು ಆಹಾರ ಪೂರೈಕೆ ಆಗಬೇಕಾದರೇ ಜೇನುಹುಳುಗಳು ಉಳಿಯಬೇಕು. ಹಾಗಾದರೆ ಮಾತ್ರ ನಮ್ಮ ಮುಂದಿನ ತಲೆಮಾರಿಗೂ ತುತ್ತು ಅನ್ನ ಸಿಗುವಂತಾಗುತ್ತದೆ. ಅದರಿಂದ ಅವರ ನಾಲ್ಕು ದಿನದ ಸಿಹಿ ಜೀವನವೂ ಅವರದಾಗಲಿ…

(ಮುಗಿಯಿತು)

-ನಾಗೇಂದ್ರ ಬಂಜಗೆರೆ, ಬಳ್ಳಾರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ