ಭೂಮಿಯ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿರಲಿ

ಭೂಮಿಯ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿರಲಿ

ಇಂದು (ಎಪ್ರಿಲ್ ೨೨) ವಿಶ್ವ ಭೂಮಿ ದಿನ (World Earth Day). ಪ್ರತೀ ವರ್ಷ ಭೂಮಿಯ ಮೇಲೆ ಮಾನವರು ಮಾಡುವ ಆಕ್ರಮಣ ಹೆಚ್ಚುತ್ತಲೇ ಇದೆ. ಈ ಕಾರಣದಿಂದ ನಮ್ಮ ಜವಾಬ್ದಾರಿಯೂ ಅಧಿಕವಾಗುತ್ತಾ ಹೋಗುತ್ತದೆ. ಭೂಮಿಯ ಮೇಲೆ ಕೋಟ್ಯಾಂತರ ಜೀವಿಗಳು ವಾಸಿಸುತ್ತಿವೆ. ಆದರೆ ಭೂಮಿಯನ್ನು ಹಾಳು ಮಾಡುತ್ತಿರುವುದು ಅತ್ಯಂತ ಬುದ್ಧಿವಂತ ಜೀವಿ ಎಂದೇ ಹೆಸರು ಮಾಡಿರುವ ಮನುಷ್ಯನೇ. ತನ್ನ ಸ್ವಾರ್ಥಕ್ಕಾಗಿ ಭೂಮಿಯನ್ನು ಹಾಳುಗೆಡವುತ್ತಲೇ ಸಾಗಿದ್ದಾನೆ. ತನ್ನ ಮುಂದಿನ ತಲೆಮಾರಿಗೆ ಉಳಿಸಿ ಬೆಳೆಸಬೇಕಾದ ಭೂಮಿಯನ್ನು ಹಾಳುಗೆಡವುತ್ತಾ ಹೋಗಿದ್ದಾನೆ.

ಪ್ರತಿಯೊಬ್ಬರ ಜೀವಕ್ಕೆ ಅವಶ್ಯಕವಾದದ್ದು ನೀರು. ಜೀವ ಜಲವೆಂದೇ ಹೆಸರಾದ ನೀರು ಕಲುಷಿತಗೊಂಡಿದೆ. ನಮ್ಮ ಕೈಗಾರಿಕೆಗಳು, ತ್ಯಾಜ್ಯ ವಸ್ತುಗಳು ನೀರನ್ನು ನಿರಂತರವಾಗಿ ಕಲುಷಿತಗೊಳಿಸುತ್ತಿವೆ. ಕುಡಿಯಲು ಶುದ್ಧವಾದ ನೀರೇ ಇಲ್ಲವಾದರೆ ಪ್ರಾಣಿ ಪಕ್ಷಿಗಳು ಬದುಕುವುದಾದರೂ ಹೇಗೆ? ನಿರಂತರ ಅರಣ್ಯ ನಾಶದಿಂದಾಗಿ ಕಾಡುಗಳೂ ಬರಿದಾಗುತ್ತಿವೆ. ಮಳೆ ಸಕಾಲಕ್ಕೆ ಆಗುತ್ತಿಲ್ಲ. ಕಾಡು ಪ್ರಾಣಿಗಳು ಆಹಾರ ಅರಸಿ ನಗರದತ್ತ ಬರುತ್ತಿವೆ. ಮನುಷ್ಯರ ಮೇಲೆ ಆಗಾಗ ಚಿರತೆ, ಹುಲಿಯ ಆಕ್ರಮಣ ಎನ್ನುವ ಸುದ್ದಿಗಳನ್ನು ನಾವು ಆಗಾಗ ಕೇಳುತ್ತಲೇ ಇರುತ್ತವೆ. ಇದಕ್ಕೆಲ್ಲಾ ಕಾರಣ ನಮ್ಮ ದುರಾಸೆಯೇ. ಕಾಡಿನಲ್ಲಿ ಮರ ಕಡಿಯುವಾಗ ಪರ್ಯಾಯವಾಗಿ ಮತ್ತೊಂದು ಗಿಡ ನೆಡಲು ನಾವು ಹೋಗುವುದೇ ಇಲ್ಲ. ಇದರಿಂದಾಗಿ ಕಾಡು ಬರಿದಾಗುತ್ತಿದೆ. ಎಲ್ಲೆಡೆ ಕಾಂಕ್ರೀಟ್ ಕಾಡುಗಳು ಅಧಿಕವಾಗುತ್ತಿವೆ.

ಭೂಮಿಯು ನಮ್ಮ ಸೌರಮಂಡಲದ ಐದನೇ ದೊಡ್ಡ ಗ್ರಹ. ಲಭ್ಯ ಮಾಹಿತಿಯ ಪ್ರಕಾರ ಜೀವಿಗಳು ಬದುಕಿರಲು ಬೇಕಾದ ವಾತಾವರಣ ಇರುವುದು ಭೂಮಿಯ ಮೇಲೆ ಮಾತ್ರ. ಈ ಕಾರಣದಿಂದ ನಾವು ಭೂಮಿಯನ್ನು ಮಾತೆ ಎನ್ನುತ್ತೇವೆ. ಪೂಜನೀಯ ಸ್ಥಾನ ನೀಡುತ್ತೇವೆ. ಆದರೆ ನಮ್ಮ ಮಾತೆಯ ಮೇಲಿನ ಕರುಣೆ ಮತ್ತು ಪ್ರೀತಿ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಕೇವಲ ಲೇಖನ ಬರೆಯಲು ಹಾಗೂ ಭಾಷಣಕ್ಕೆ ನಮ್ಮ ಪರಿಸರ ಪ್ರೀತಿ ಸೀಮಿತವಾಗಿದೆ. ಭೂಮಿಯ ನೈಸರ್ಗಿಕ ಸಂಪತ್ತನ್ನು ನಿರಂತರ ಲೂಟಿ ಮಾಡಲಾಗುತ್ತಿದೆ. ಈ ಕಾರಣದಿಂದ ಸಂತುಲಿತ ಪರಿಸರವೂ ತಾಳತಪ್ಪುತ್ತಿದೆ. ನೀರು, ವಾಯು, ಓಝೋನ್ ಪದರ ಎಲ್ಲವೂ ಮಲಿನವಾಗುತ್ತಿದೆ. ಭೂಮಿಯ ಮೇಲೆ ನಡೆಯುವ ದೌರ್ಜನ್ಯದಿಂದಾಗಿ ನಮ್ಮ ಭೂಮಿಯನ್ನು ರಕ್ಷಿಸುವ ಓಝೋನ್ ಪದರ ಹಾಳಾಗುತ್ತಿದೆ. ಅತಿ ನೇರಳೆ (ಅಲ್ಟ್ರಾವೈಲೇಟ್) ಕಿರಣಗಳು ಭೂಮಿಯತ್ತ ಬರುತ್ತಿವೆ. ಮನುಷ್ಯ ರೋಗರುಜಿನಗಳಿಗೆ ತುತ್ತಾಗುತ್ತಿದ್ದಾನೆ. ಶ್ರೀಮಂತನಾಗುವ ಮನುಷ್ಯನ ಹುಚ್ಚು ಭೂಮಿಯ ನಾಶಕ್ಕೆ ಕಾರಣವಾಗುತ್ತಿದೆ.

ಭಾರತದಲ್ಲಿ ಅರ್ಥಿಕ ಕಾರಣಕ್ಕಾಗಿ ಭೂಮಿಯನ್ನು ದುರುಪಯೋಗ ಮಾಡಲಾಗುತ್ತಿದೆ. ನವೀಕರಿಸಲಾಗದ ಸಂಪನ್ಮೂಲಗಳಾದ ಕಬ್ಬಿಣದ ಅದಿರು, ಕಲ್ಲಿದ್ದಲು ಇತ್ಯಾದಿಗಳನ್ನು ಅಪಾರ ಪ್ರಮಾಣದಲ್ಲಿ ಭೂಮಿಯನ್ನು ಅಗೆದು ಹೊರತೆಗೆಯಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಗಣಿಗಾರಿಕೆಯ ಪ್ರಮಾಣ ಅಧಿಕಗೊಳ್ಳುತ್ತಲೇ ಇದೆ. ಭೂಮಿಗೆ ಸುರಿಯುವ ಕಿಲೋಗಟ್ಟಲೆ ರಾಸಾಯನಿಕ ಗೊಬ್ಬರಗಳು ತಾತ್ಕಾಲಿಕವಾಗಿ ಲಾಭ ಕೊಟ್ಟರೂ, ದೀರ್ಘಕಾಲಿಕ ಬಳಕೆಯಿಂದ ಭೂಮಿಯ ಸಾರ ಸರ್ವನಾಶವಾಗಲಿದೆ. ಕೀಟನಾಶಕಗಳ ವಿಪರೀತ ಬಳಕೆಯಿಂದ ಭವಿಷ್ಯದಲ್ಲಿ ತೊಂದರೆಕೊಡುವ ಕೀಟದ ಜೊತೆಗೆ ಉಪಕಾರೀ ಕೀಟಗಳೂ, ಎರೆಹುಳಗಳು ನಿರ್ನಾಮವಾಗಲಿವೆ. ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಫಲವತ್ತಾದ ಭೂಮಿ ನಿಧಾನವಾಗಿ ತನ್ನ ಸಾರವನ್ನು ಕಳೆದುಕೊಂಡು ಬಂಜರು ಭೂಮಿಯಾದೀತು. 

ಭೂಮಿಯ ದಿನದಂದು ನಾವು ಕೆಲವು ಪ್ರತಿಜ್ಞೆಗಳನ್ನು ತೆಗೆದುಕೊಳ್ಳಲೇಬೇಕಾಗಿದೆ. ನಮ್ಮ ವೈಯಕ್ತಿಕ ತೆವಲುಗಳಿಗಾಗಿ ಅರಣ್ಯ ನಾಶ, ಭೂಮಿಯ ಫಲವತ್ತತೆ ಹಾಳು ಇತ್ಯಾದಿ ಕಾರ್ಯ ಮಾಡದೇ ನಮ್ಮವರಿಗೆ ಭವಿಷ್ಯದಲ್ಲೂ ಉಪಕಾರವಾಗುವ ರೀತಿಯಲ್ಲಿ ನಡೆದುಕೊಳ್ಳಬೇಕು.  ಗಿಡಗಳನ್ನು ಬೆಳೆಸುವುದನ್ನು ಬೆಂಬಲಿಸಬೇಕು. ಭೂಮಿಗೆ ಕಂಟಕವಾಗಿ ಪೆಡಂಭೂತವಾದ ಪ್ಲಾಸ್ಟಿಕ್ ಬಳಕೆಯನ್ನು ಕಮ್ಮಿ ಮಾಡಬೇಕು. ಇದಕ್ಕೆ ಪರ್ಯಾಯ ಮಾರ್ಗೋಪಾಯಗಳನ್ನು ಹುಡುಕಬೇಕು. ಕೇವಲ ನಿಷೇಧದಂತಹ ಕಾರ್ಯಗಳಿಂದ ಪ್ಲಾಸ್ಟಿಕ್ ನಾಶವಾಗದು. ಅದು ಮತ್ತೊಂದು ರೂಪದಲ್ಲಿ ಹೊರಬರುತ್ತದೆ. ಒಮ್ಮೆ ಬಳಸಿ ಬಿಸಾಕುವ ವಸ್ತುಗಳ ಬಳಕೆಯನ್ನು ನಿಲ್ಲಿಸಬೇಕು. ತ್ಯಾಜ್ಯಗಳು ಜಾಸ್ತಿಯಾದರೆ ನಮ್ಮ ಭೂಮಿಗೇ ಅದು ಭಾರ. ಶುದ್ಧ ಪರಿಸರದ ನಿರ್ಮಾಣ ಮಾಡಬೇಕು. 

ಈ ವರ್ಷದ ಭೂಮಿ ದಿನದ ಘೋಷ ವಾಕ್ಯ ‘ನಮ್ಮ ಭೂಮಿಯನ್ನು ಮರುಸ್ಥಾಪಿಸಿ' (Restore our Earth). ನಾವು ಪ್ರತೀ ವರ್ಷ ಹೇಳುತ್ತೇವೆ ‘ಇರುವುದೊಂದೇ ಭೂಮಿ, ಅದನ್ನು ಉಳಿಸೋಣ’ ಎಂದು. ಆದರೆ ನಿಜವಾಗಿಯೂ ನಮ್ಮ ಕೆಲಸಗಳು ಭೂಮಿಯನ್ನು ಉಳಿಸಲು ಸಹಕಾರಿಯಾಗುತ್ತಿವೆಯೇ? ಅಥವಾ ನಾವು ಭೂಮಿಯನ್ನು ಉಳಿಸಲು ಪ್ತ್ರಯತ್ನ ಮಾಡುತ್ತಿದ್ದೇವೆಯೇ? ಯೋಚಿಸಬೇಕಾದ ಸಂಗತಿ ಅಲ್ಲವೇ?

      ಚಿತ್ರ ಕೃಪೆ: ಅಂತರ್ಜಾಲ ತಾಣ