ಭೂಮ್ತಾಯಿ - ಕಾದಂಬರಿ

ಭೂಮ್ತಾಯಿ - ಕಾದಂಬರಿ

ಪುಸ್ತಕದ ಲೇಖಕ/ಕವಿಯ ಹೆಸರು
ಜಾಣಗೆರೆ ವೆಂಕಟರಾಮಯ್ಯ
ಪ್ರಕಾಶಕರು
ಶಶಿ ಪಬ್ಲಿಕೇಷನ್ಸ್, ಜಾಲಮಂಗಲ, ರಾಮನಗರ. ಮೊ: ೯೪೪೮೭೪೭೨೮೧
ಪುಸ್ತಕದ ಬೆಲೆ
ರೂ. ೩೦೦.೦೦, ಮುದ್ರಣ: ೨೦೨೨

ಜಾಣಗೆರೆ ವೆಂಕಟರಾಮಯ್ಯ ಅವರ ಹೊಸ ಕಾದಂಬರಿ ‘ಭೂಮ್ತಾಯಿ' ಈ ಕಾದಂಬರಿಯ ಬಗ್ಗೆ ಪತ್ರಕರ್ತರಾದ ರಘುನಾಥ ಚ ಹ. ಇವರು ತಮ್ಮ ಅಭಿಪ್ರಾಯವನ್ನು ಪುಸ್ತಕದ ಬೆನ್ನುಡಿಯಲ್ಲಿ ಬರೆದಿದ್ದಾರೆ. ಅವರ ಪ್ರಕಾರ “ ಹೃದಯದಲ್ಲಿ ಪ್ರಾಮಾಣಿಕತೆ ತುಂಬಿದ್ದರೆ ನಿನ್ನ ಶತ್ರು ಮಾತ್ರವಲ್ಲ ಇಡೀ ಪ್ರಪಂಚ ನಿನ್ನೆದುರು ಆಯುಧವನ್ನು ಕೆಳಗಿಡುತ್ತದೆ ಎನ್ನುವ ಸ್ಮಾಮಿ ವಿವೇಕಾನಂದರ ಮಾತಿನೊಂದಿಗೆ ಆರಂಭಗೊಳ್ಳುವ ‘ಭೂಮ್ತಾಯಿ' ಕಾದಂಬರಿ, ಮನುಷ್ಯನ ಒಳ್ಳೆಯತನಕ್ಕೆ ಇರುವ ಶಕ್ತಿಯನ್ನು ನಿರೂಪಿಸುವಂತೆ ರೂಪುಗೊಂಡಿದೆ. ಮನುಷ್ಯನ ಅಂತರಂಗದಲ್ಲಿನ ಕೇಡು ಮತ್ತು ಸೌಂದರ್ಯ ಎರಡನ್ನೂ ಕೊರೊನಾ ಕಾಲಘಟ್ಟ ಅನಾವರಣಗೊಳಿಸಿತಷ್ಟೆ. ಈ ಕಾಲಸಾಕ್ಷಿಯನ್ನು ಜಾಣಗೆರೆ ಅವರು ತಮ್ಮ ಕಾದಂಬರಿ ಕಟ್ಟಲು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. 

ಮಣ್ಣನ್ನು ನೆಚ್ಚಿದ ಜಗದೀಶ ಭೂಮಿತಾಯಿಯ ತಾಳ್ಮೆಯ ಪ್ರತೀಕವೂ ಆಗಿದ್ದಾನೆ. ಇಲ್ಲಿನ ಭೂಮ್ತಾಯಿ ಜಗದೀಶ ಮಾತ್ರವಲ್ಲ, ಅಲ್ಲಾಭಕ್ಷನೂ ಹೌದು. ಅಲ್ಲಾಭಕ್ಷನ ಪಾತ್ರ ಜಾಣಗೆರೆಯವರ ಈ ಕಾದಂಬರಿಯ ವಿಶಿಷ್ಟ ಪಾತ್ರ ಮಾತ್ರವಲ್ಲ, ಕನ್ನಡ ಕಾದಂಬರಿ ಪರಂಪರೆಯಲ್ಲೇ ಒಂದು ವಿಶಿಷ್ಟ ಪಾತ್ರವಾಗಿ ಗಮನ ಸೆಳೆಯುತ್ತದೆ. ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾವನೆಯನ್ನು ಪ್ರಜ್ಞಾಪೂರ್ವಕವಾಗಿ ಸೃಷ್ಟಿಸುತ್ತಿರುವ ವರ್ತಮಾನದ ಸಂದರ್ಭದಲ್ಲಿ, ಅಲ್ಲಾಭಕ್ಷನ ಪಾತ್ರದ ಮೂಲಕ ಕಾದಂಬರಿಕಾರರು, ಗ್ರಾಮ ಭಾರತದ ಪರಿವೇಶದಲ್ಲಿ ಮುಸ್ಲಿಂ ಸಮುದಾಯ ಕರುಳು ಬಳ್ಳಿಯಂತೆ ಬೆಸೆದುಕೊಂಡಿರುವುದನ್ನು ಸೂಚಿಸುತ್ತಿದ್ದಾರೆ. 

ಸ್ವತಃ ಕೃಷಿಕರೂ ಆದ ಜಾಣಗೆರೆ ವೆಂಕಟರಾಮಯ್ಯನವರು ಕಟ್ಟಿಕೊಡುವ ಹಳ್ಳಿಯ ವಿವರಗಳು ಸೊಗಸಾಗಿವೆ. ಹಳ್ಳಿಯ ದೈನಿಕ ವಿವರಗಳನ್ನು ಚಿತ್ರಿಸುವಾಗ, ಸ್ವತಃ ತಮ್ಮ ಬದುಕನ್ನೇ ಕಾದಂಬರಿಕಾರರು ನಿರೂಪಿಸುತ್ತಿರುವಷ್ಟು ಜೀವಂತವಾಗಿ ಕೃಷಿ ವಿವರಗಳಿವೆ. ಆ ವಿವರಗಳು ಹಳ್ಳಿಯ ಜೀವಂತಿಕೆಯನ್ನು, ಅಂತಃಕರಣವನ್ನು , ಮಾತೃಶಕ್ತಿಯನ್ನು ಪೂಜಿಸುವುದರ ಜೊತೆಗೆ ಬಿರುಕುಗಳನ್ನೂ ಕಾಣಿಸುತ್ತವೆ. ಹಳ್ಳಿ ಮತ್ತು ನಗರಗಳ ನಡುವೆ ಗೆರೆ ಅಳಿಸಿ ಹೋಗಿರುವಷ್ಟು ತೆಳುವಾಗಿರುವ ಸಂದರ್ಭದಲ್ಲಿ, ಹಳ್ಳಿಗಳ ಉಳಿಯುವಿಕೆಗೆ ಅಗತ್ಯವಾದ ನೈತಿಕ ಜೀವನ ಪದ್ಧತಿಯನ್ನು ಜಾಣಗೆರೆಯವರು ‘ಭೂಮ್ತಾಯಿ' ಕಾದಂಬರಿಯ ಮೂಲಕ ಕಟ್ಟಿಕೊಟ್ಟಿದ್ದಾರೆ.

‘ಭೂಮ್ತಾಯಿ' ಕಾದಂಬರಿ ಕನ್ನಡದ ಯುವ ಮನಸ್ಸುಗಳು ಓದಬೇಕಾದ ಕಾದಂಬರಿ. ವರ್ತಮಾನದ ಬಿಕ್ಕಟ್ಟುಗಳಿಗೆ ಸೃಜನಶೀಲ ಬರಹಗಾರನೊಬ್ಬ ಸಂಯಮ, ಸಾವಧಾನದಿಂದ ಪ್ರತಿಕ್ರಿಯಿಸಿರುವುದು ಉದಾಹರಣೆ ರೂಪದಲ್ಲೂ ‘ಭೂಮ್ತಾಯಿ' ಕಾದಂಬರಿಯನ್ನು ಗಮನಿಸಬಹುದು. ಈ ವಿಶಿಷ್ಟ ಕೃತಿಗೆ ಸಹೃದಯರ ಮನ್ನಣೆ-ಪುರಸ್ಕಾರಗಳು ಒದಗಿ ಬರಲಿ ಎಂದು ಆಶಿಸುವೆ.” ಎಂದಿದ್ದಾರೆ.