ಭೂವಂಚನೆಗೆ ಬೇಕು ಕಡಿವಾಣ

ಕಂದಾಯ ಇಲಾಖೆಯ ಸಿಬ್ಬಂದಿಯೇ ನಕಲಿ ದಾಖಲೆ ಸೃಷ್ಟಿಸಿ ಭೂಗಳ್ಳರಿಗೆ ನೆರವಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಬೆಂಗಳೂರಿನ ಕೆ ಆರ್ ಪುರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣವೊಂದು ದಾಖಲಾಗಿದ್ದು, ಬೇಲಿಯೇ ಎದ್ದು ಹೊಲ ಮೇಯ್ದರೆ ರಕ್ಷಣೆ ಕೊಡುವವರಾರು ಎಂಬಂತಾಗಿದೆ. ಇದ್ದುದರಲ್ಲಿ ಸಮಾಧಾನದ ಸಂಗತಿ ಎಂದರೆ ತಹಸೀಲ್ದಾರರೇ ಇಲಾಖೆಯ ಸಿಬ್ಬಂದಿಯ ವಿರುದ್ಧ ದೂರು ದಾಖಲಿಸಿರುವುದು. ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರು ಕೂಡ ಇದರಲ್ಲಿ ಭಾಗಿಯಾಗಿರುವ ಆರೋಪವಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ೨೦೦ ಎಕರೆ ಸರ್ಕಾರಿ ಜಮೀನನ್ನು ನಕಲಿ ದಾಖಲೆ ಸೃಷ್ಟಿ ಮಾಡಿ ಕಬಳಿಸಿದ ಆರೋಪವು ಕೆಲ ತಿಂಗಳ ಹಿಂದೆ ವಿಧಾನ ಮಂಡಳದಲ್ಲಿ ಕೇಳಿ ಬಂದಿತ್ತು. ಹಾಲಿ ಶಾಸಕ ಹಾಗೂ ಮಾಜಿ ಸಚಿವರೊಬ್ಬರ ಕುಟುಂಬದ ವಿರುದ್ಧವೂ ಭೂಕಬಳಿಕೆ ದೂರು ಇತ್ತೀಚೆಗೆ ದಾಖಲಾಗಿದೆ. ಹೀಗೆ ಭೂಕಬಳಿಕೆ ಮಾಡಿ ವಂಚಿಸುವ ಪ್ರಕರಣಗಳ ಬಗ್ಗೆ ಆಗಾಗ ವರದಿಯಾಗುತ್ತಲೇ ಇರುತ್ತದೆ. ರಾಜ್ಯ ಇತರ ಭಾಗಗಳಲ್ಲಿಯೂ ಇಂಥ ಸಮಸ್ಯೆ ಇದೆ. ಸಂಬಂಧ ಪಟ್ಟ ಕಂದಾಯ ಇಲಾಖೆಯ ಸಿಬ್ಬಂದಿಯೇ ಕೈಜೋಡಿಸಿರುವುದು ವಂಚಕರಿಗೆ ವರವಾಗಿ ಪರಿಣಮಿಸುತ್ತಿದೆ. ಇದರಿಂದ ಅಮಾಯಕ ಭೂಮಾಲಿಕರು ಮೋಸ ಹೋಗಿ ಬೆಲೆ ಬಾಳುವ ಜಮೀನು, ನಿವೇಶನಗಳನ್ನು ಕಳೆದುಕೊಂಡು ಪರದಾಡುವ ಪ್ರಸಂಗಗಳು ತಲೆದೋರುತ್ತಿವೆ. ಅಲ್ಲದೆ, ತಂತ್ರಜ್ಞಾನವನ್ನು ಬಳಸಿಕೊಂಡು ಅಸಲಿ ಎನ್ನುವ ರೀತಿಯಲ್ಲಿ ಸೃಷ್ಟಿಸಿರುವ ನಕಲಿ ದಾಖಲೆಗಳನ್ನು ನೋಡಿ ಹೊಸದಾಗಿ ಭೂಮಿಯನ್ನು ಖರೀದಿಸುವವರು ಕೂಡ ಮೋಸದ ಜಾಲಕ್ಕೆ ಬಲಿಬೀಳುತ್ತಿದ್ದಾರೆ. ಅದರಲ್ಲೂ ನಗರ ಗ್ರಾಮೀಣ ಎಂಬ ಭೇದವಿಲ್ಲದೆ ಭೂಮಿಯ ಬೆಲೆ ಏರುತ್ತಲೇ ಇರುವುದರಿಂದ ಮೋಸದ ಜಾಲ ಸದಾ ಸಕ್ರಿಯವಾಗಿರುತ್ತದೆ.
ರಾಜ್ಯ ಸರ್ಕಾರವು ಇಂತಹ ಭೂ ವಂಚನೆಗೆ ಕಡಿವಾಣ ಹಾಕಲು ಮಹತ್ವದ ಪ್ರಸ್ತಾಪವೊಂದನ್ನು ಮುಂದಿಟ್ಟಿದೆ. ಜಮೀನು, ನಿವೇಶನ ಮಾರಾಟದಲ್ಲಿ ವಂಚನೆ ತಡೆಯುವ ನಿಟ್ಟಿನಲ್ಲಿ ಕಾನೂನು ಬದ್ಧವಾಗಿ ಭೂದಾಖಲೆಗಳನ್ನು ಪರಿಶೀಲಿಸಿ ಖರೀದಿದಾರರಿಗೆ ಅಧಿಕೃತ ಮಾಹಿತಿ ಒದಗಿಸಲು ಏಜೆನ್ಸಿಗಳನ್ನು ಸರ್ಕಾರವೇ ಸ್ಥಾಪಿಸುವುದು ಈ ಪ್ರಸ್ತಾಪದಲ್ಲಿದೆ. ಭೂದಾಖಲೆಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರ ರೂಪಿಸಲು ಉದ್ದೇಶಿಸಿರುವ ಏಜೆನ್ಸಿಗಳ ವ್ಯವಸ್ಥೆಯು ಜನರಿಗೆ ಹೆಚ್ಚು ವಿಶ್ವಾಸಾರ್ಹತೆ ಒದಗಿಸಬಹುದಾಗಿದೆ. ಉದ್ದೇಶಿತ ಏಜೆನ್ಸಿಗಳು ಮಾರಾಟ ಮಾಡುವವರು ಮತ್ತು ಕೊಳ್ಳುವವರ ಬಳಿ ದಾಖಲೆಗಳನ್ನು ತೆಗೆದುಕೊಂಡು ಅದರ ನೈಜತೆಯನ್ನು ಪರಿಶೀಲಿಸುತ್ತವೆ. ಅಲ್ಲದೆ, ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಸರ್ಕಾರಿ ಕಚೇರಿಗಳಿಂದ ಅಧಿಕೃತ ದಾಖಲೆಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಿ, ಭೂ ಒಡೆತನದ ಬಗೆಗೆ ಸ್ಪಷ್ಟತೆಯನ್ನು ಒದಗಿಸಬಹುದಾಗಿದೆ. ಹೀಗಾಗಿ, ಜಮೀನು ಖರೀದಿ ಮಾಡುವವರಿಗೆ ಯಾವುದೇ ರೀತಿಯ ಮೋಸ ಆಗುವುದಿಲ್ಲ ಎಂಬ ಖಾತರಿಯನ್ನು ಈ ಏಜೆನ್ಸಿಗಳ ಮೂಲಕ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ. ಕಂದಾಯ ಆಡಳಿತದಲ್ಲಿ ಇದೊಂದು ಕ್ರಾಂತಿಕಾರಕ ನಿರ್ಧಾರವಾಗಿದ್ದು, ಸೂಕ್ತ ರೀತಿಯಲ್ಲಿ ಅನುಷ್ಟಾನಕ್ಕೆ ತಂದರೆ ಇದೊಂದು ಜನಸ್ನೇಹಿ ವ್ಯವಸ್ಥೆಯಾಗಿ ರೂಪುಗೊಳ್ಳಲು ಸಾಧ್ಯವಿದೆ. ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡುವುದಕ್ಕೂ ಇದರಿಂದ ಕಡಿವಾಣ ಹಾಕಬಹುದಾಗಿದೆ. ಆದಷ್ಟು ಶೀಘ್ರ ಈ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರಲು ಕ್ರಮ ಕೈಗೊಳ್ಳಬೇಕಿದೆ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೦-೧೦-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ